ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

28 July, 2012

ಕನಸು!ಸಾಗರದ ದಂಡೆಯಲ್ಲಿ...
ಏನೋ ಧ್ಯಾನ ಮಾಡುತ್ತಾ..
ಆಗಾಗ ತೆರೆಗಳ ಎಣಿಸುತ್ತಾ...
ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದೆ
ಕೂದಲು ಅಂಕೆಗೆ ಸಿಗದೆ ಹಾರಾಡುತ್ತ, ಡೊಂಕಾಡುತ್ತ 
ಹಾದಿಯ ಮಸುಕು ಮಾಡಿದ್ದವು
ಕಡಲರಾಜ ಗಳಿಗೆಗೊಮ್ಮೆ ತನ್ನಿಯಳನ್ನು 
ಮುತ್ತಿಕ್ಕುವುದನ್ನು  ನೋಡಿ ಪುಳಕಿತಳಾಗುತ್ತ...
ತಣ್ಣನೆಯ ಮರಳಿನ ಸ್ಪರ್ಶವ ಆಸ್ವಾದಿಸುತ್ತಾ...
ಇಹದ  ಅರಿವೇ ಇಲ್ಲದೆ ರಾಗವ ಹೊರಹೊಮ್ಮಿಸುತ್ತಾ...
ನಾಟ್ಯದ ನಡಿಗೆಯಲ್ಲಿ
ಎಲ್ಲಿಗೆ  ಗಮನವೋ... 
ಏನನ್ನೂ... ಅರಿಯದೆ ಹೆಜ್ಜೆ ಹಾಕುತ್ತಿದ್ದೆ.
ಅಲೆಗಳು ಪಾದವನ್ನು ಸೋಂಕುವಷ್ಟು ಹತ್ತಿರ ಬಂದರೂ 
ಸ್ಪರ್ಶಿಸದೆ ಹಿಂದಕೆ ಸರಿಯುತಿದ್ದವು  
ಸನಿಹ ಸಾರಿದಷ್ಟು... ಮತ್ತಷ್ಟು ದೂರ....
ಅರೇ, ಮುನಿಸಿಗೆ ಕಾರಣವೇನಿರಬಹುದು?   
ಏನೋ ಪಿಸುಗುಟ್ಟಿದ ಮರುತ
ಸಾಗರದ ಶಂಖ ನಾದದಲ್ಲಿ ಅವನ ಮಾತು ಲೀನವಾಯಿತು...
ಮತ್ತೆಲ್ಲೋ ಪಯಣಿಸುತ್ತಿರುವ ಅವನ ಹಿಡಿಯಲೆಂದು ವೇಗ ಹೆಚ್ಚಿಸಿದೆ...
ಕೇಳಿಸಿತು ಆಗಲೇ ಮುರಳಿಯ ನಾದ.. 
ತಿರುಗಿ ನೋಡಿದೆ...
ದೂರದಲ್ಲಿ ಅಸ್ಪಷ್ಟವಾಗಿ ಕಾಣುತಿದೆ ನಿನ್ನ ಆಕೃತಿ! 
ಕೈ ಬೀಸಿ ಕರೆಯುತ್ತ ಧಾವಿಸುತ್ತಿರುವೆ ಇತ್ತ
ಬರುತ್ತಾ ಬರುತ್ತಾ..
ಚಾಚಿದ ಕೈಗಳ ಮೃದುವಾದ ಸ್ಪರ್ಶ,
ಅರೆ ಘಳಿಗೆ ಕಣ್ಮುಚ್ಚಿದೆನಷ್ಟೇ...
ರಭಸದಿಂದ ಒಂದರ ಹಿಂದೆ ಮತ್ತೊಂದು ತೆರೆಗಳು...
ಮುನ್ನುಗಿದವು ನಮ್ಮತ್ತ..
ನೋಡ ನೋಡುತ್ತಿದ್ದಂತೆಯೇ  ನಮ್ಮಿಬ್ಬರನ್ನು ಕಡಲು ತನ್ನ ತೆಕ್ಕೆಗೆ ಸೆಳೆಯಿತು
.......
.............................................!

26 July, 2012

ಕತ್ರಿನ್ ಬೈಂಡರ್ ......


           


           ನಿನ್ನೆ ಮತ್ತಿನ್ನೊಮ್ಮೆ ಕತ್ರಿನ್ ಬೈಂಡರ್ ನನ್ನನ್ನು ಕಾಡಿದಳು(ರು). ಸರಿಯಾಗಿ ನೆನಪಾಗುವುದಿಲ್ಲ ಯಾವಾಗ ಕತ್ರಿನ್( ಕಟ್ರಿನ್) ಅವರ‍ ಯಕ್ಷಗಾನದ ಲೇಖನ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಓದಿದ್ದು ಅಂತ..ಆ ಪ್ರತಿ ನನ್ನಲ್ಲಿ ಇದೆಯಾ ಇಲ್ಲವೋ ಗೊತ್ತಿಲ್ಲ..ನನ್ನ ಹತ್ತು ಹಲವು ವಿಷಯಗಳ ಸಂಗ್ರಹಗಳ ಮಧ್ಯೆ ಎಲ್ಲಿ ಇಟ್ಟಿದ್ದೇನಂತ ಹುಡುಕಲು ಹೋದರೆ ನಾನೇ ಕಳೆದು ಹೋಗುವೆನೋ ಅಂತ ಹೆದರಿಕೆಯಾಗುತ್ತೆ.  ಹೋಗಲಿ, ಅದನ್ನು ನಿಧಾನವಾಗಿ ಹುಡುಕಿ ಇಲ್ಲಿ ಹಾಕುತ್ತೇನೆ.  
                                              { ಛಾಯಾ ಚಿತ್ರ- ಅಂತರ್ಜಾಲ ಮೂಲಕ ಪಡೆದದ್ದು}


            ಎಂದಿನಂತೆ ಫೇಸ್ ಬುಕ್‍ನಲ್ಲಿ ಸ್ಟೇಟಸ್ ಓದುತ್ತಿರುವಾಗ ಕೆಂಡ ಸಂಪಿಗೆಯ ಅಬ್ದುಲ್ ರಶೀದ್ ಅವರು ಕತ್ರಿನ್ ಅವರ ಬ್ಲಾಗ್ ಲಿಂಕ್ ಹಾಕಿದ್ದರು..ಧಾವಿಸಿದೆ ಬ್ಲಾಗ್ ಕಡೆ..ಚೆಂದದ ಕನ್ನಡ ಕವನ..ಓದಿ ಹಿಂದೆ ಬಂದು ಲೈಕ್ ಒತ್ತಿ, ರಶೀದ್ ಅವರಿಗೆ ಕತ್ರಿನ್ ಅವರನ್ನು ಅಭಿನಂದಿಸುವಂತೆ ಕಮೆಂಟ್ ಹಾಕಿ ಮತ್ತೆ ನನ್ನ ಕೆಲಸಕ್ಕೆ ಹಿಂದಿರುಗಿದೆ...ಸಂಜೆ ನೋಡುವಾಗ ಕತ್ರಿನ್ ಅವರ ಕಮೆಂಟ್ ಅದರಲ್ಲಿ ಇತ್ತು. ಬಹಳ ಹಿಂದೆ ಅವರೆಡೆ ಸ್ನೇಹ ಹಸ್ತ ಚಾಚಿದ್ದೆ..ಆದರೆ ಅವರಿಂದ ಏನೂ ಪ್ರತಿಕ್ರಿಯೆಯಿರಲಿಲ್ಲ..ನಾನೂ ಮರೆತುಬಿಟ್ಟಿದ್ದೆ. ನಿನ್ನೆ ಅವರನ್ನು ಇಲ್ಲಿ ನೋಡಿದಾಗ ಮತ್ತೊಮ್ಮೆ ಆ ವಿಷಯ ನೆನಪಾಗಿ ಅಲ್ಲೇ ಅವರಿಗೆ ವಿಷಯ ಹೇಳಿದೆ...ಕೂಡಲೇ ಅವರು ನನ್ನನ್ನು ತಮ್ಮ ಸ್ನೇಹಿತೆಯಾಗಿ ಕೂಡಿಸಿಕೊಂಡರು.... ಅದು ಸರಿ,  ಆದರೆ ವಿಷಯ ಅಲ್ಲಿಗೆ ಮುಗಿಯಲಿಲ್ಲ.. ನಾನು ಬೆಳಿಗ್ಗೆನೇ ಅವರ ಬ್ಲಾಗನ್ನು ನನ್ನ ಗೋಡೆಯಲ್ಲಿ ಹಂಚಲು ಬಯಸಿದ್ದೆ..ಆದರೆ ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಅಲೆ ಎದ್ದಿದ್ದವು..ಅವುಗಳಿಗೆ ಪರಿಹಾರ ಹುಡುಕದೇ ನಾನು ಹಾಗೆ ಮಾಡುವಂತಿರಲಿಲ್ಲ..ಇದೇ ಪ್ರಶ್ನೆ ಬಹಳ ಹಿಂದೆ ಅವರ ಲೇಖನ ಓದಿಯಾದ ನಂತರ ಅವರ ಮೇಲೆ ನನಗೆ ಹುಟ್ಟಿದ ಅಭಿಮಾನದ ಮೇಲೂ ಕಾಡಿತ್ತು...ಆದರೆ ಈಗ ನನಗೆ ಅದರ ಉತ್ತರ ದೊರೆತಿದೆ..ಆಗ ಅಸ್ಪಷ್ಟವಾಗಿದ್ದ ಉತ್ತರ ಈಗ ಸ್ಪಷ್ಟವಾಗಿದೆ.. ಹಾಗಾಗಿ ಸಂಜೆ ಅವರ ಬ್ಲಾಗನ್ನು ನಾನು ಹಂಚಿಕೊಂಡೆ..ಮರುದಿನ ನನ್ನ ಆತ್ಮೀಯ ಮಿತ್ರರೊಬ್ಬರು ನನಗೆ ನನ್ನನ್ನು ಕಾಡಿದ ಪ್ರಶ್ನೆಯನ್ನೇ ಎಸೆದರು...ಅವರಿಗೇನೋ ಉತ್ತರ ಕೊಟ್ಟೆ...ಆದರೆ ನನ್ನ ಮನದಲ್ಲಿದ್ದುದ್ದನ್ನು ಅವರಿಗೆ ಹೇಳಲು ನನ್ನ ಮಾತುಗಳು  ಶಕ್ತವಾಗಿದ್ದವೋ ಇಲ್ಲವೋ ಎಂದು ತಿಳಿಯಲಿಲ್ಲ..  ಮನದಪುಟಗಳಲ್ಲಿ ಮೂಡಿದುದನ್ನು ಬರೆಯದೇ ಹೋದರೆ ಅವು ನನ್ನನ್ನು ಕಾಡುತ್ತವೆ.....ಒಮ್ಮೆ ಅದನ್ನು ಕಕ್ಕಿ ಬಿಟ್ಟರೆ ಒಂದು ಸಲ ಆರಾಮವಾಗುತ್ತೆ.

         ನಾವು ಮೊದಲಿಂದಲೂ ವಿದೇಶಿ ವ್ಯಾಮೋಹಿಗಳು..ನಮ್ಮ ಚರಿತ್ರೆ ಅದನ್ನೇ ಸಾರಿ ಸಾರಿ ಹೇಳುತ್ತದೆ..ನಮ್ಮ ಸನಾತನ ಸಂಸ್ಕೃತಿಯ ಮೇಲೆ ನಮಗೆ ಒಲವು ಅಷ್ಟಕಷ್ಟೇ...ಆದರೆ ವಿದೇಶಿಗಳಿಗೆ ನಮ್ಮ ಯೋಗ, ಧ್ಯಾನ, ಆಶ್ರಮಗಳಲ್ಲಿ ಏನೋ ಆಕರ್ಷಣೆ....ಅಂತೆಯೇ ನಾವು ನಮ್ಮ ಸ್ವಾಮಿಗಳ ಹಿಂದೆ ವಿದೇಶಿ ಅನುನಾಯಿಗಳ ದಂಡನ್ನೇ ಕಾಣುತ್ತೇವೆ.. ಸ್ವಾಮಿಗಳು ಏರ್ಪಡಿಸುವ ಸಮಾರಂಭಗಳಲ್ಲಿ ವಿದೇಶಿಗಳು ಪ್ರಮುಖ ಆಕರ್ಷಣೆ..ಈ ಹಿಪ್ಪಿಗಳ ಅಂಕೆ, ಸಂಖ್ಯೆ ಸ್ವಾಮಿಗಳ ಜನಪ್ರಿಯತೆಗೆ ಆಧಾರ! ಪ್ರಚಾರವೂ ಹೆಚ್ಚುತ್ತದೆ....ಇದೆಲ್ಲಾ ಗೊತ್ತಿದ್ದು ಒಬ್ಬ ವಿದೇಶಿ ಮಹಿಳೆಯ ಮೇಲೆ ನಾನು ಅಭಿಮಾನ ಪಡುವುದು ಅಸಹಜವೆಂದೆನಿಸಿತ್ತು.. ಆದರೆ ಆಕೆ ನಮ್ಮಲ್ಲಿ ಬಂದು ನಮ್ಮ ಗಂಡು ಕಲೆಯೆಂದೇ ಪ್ರಖ್ಯಾತವಾಗಿದ್ದ ಯಕ್ಷಗಾನವನ್ನು ಕನ್ನಡದಲ್ಲೇ ಕಲಿತು ಅದರ ಮೇಲೆ ತಮ್ಮ ಥೀಸಿಸ್ ಬರೆದರೆ ಅದು ಅಭಿಮಾನ ಪಡುವಂತಹ ವಿಷಯ ಸಹ ಹೌದು...ಹಾಗೆಯೇ ನಮ್ಮವರು ವಿದೇಶಕ್ಕೆ ಹೋಗಿ ಅಲ್ಲಿನ ಕಲೆಯನ್ನು ಕಲಿತರೆ ನಾವು ಅಷ್ಟೇ ಅಭಿಮಾನ ತೋರುತ್ತೇವೆಯೋ? ಇದು ನನ್ನ ಸ್ನೇಹಿತರ ಸಂದೇಹ..ನಾನು ಪಡುತ್ತೇನೆ...ಖಂಡಿತ ಪಡುತ್ತೇನೆ.  ಕಲಾಕಾರ ಎಲ್ಲಾ ರೀತಿಯ ಕಲೆಗೂ ಪ್ರಾಮುಖ್ಯತೆ ಕೊಡುತ್ತಾನೆ..ಅದಕ್ಕೆ ದೇಶ, ಭಾಷೆ, ಸಂಸ್ಕೃತಿಯ ಗಡಿಯಿರುವುದಿಲ್ಲ. ...ವಿಶ್ವವನ್ನೆಲ್ಲಾ ತನ್ನಲ್ಲಿ ಅಡಗಿಸಿಕೊಂಡಿದೆ.  ಎರಡನೆಯ ಪ್ರಶ್ನೆ...ಆಕೆ ತನ್ನ ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಕೊಟ್ಟಿದ್ದಾಳೆ...ನಾವು ನಮ್ಮವರು ಹಾಗೆ ವಿದೇಶಿ ಹೆಸರನ್ನು ತಮ್ಮ ಮಕ್ಕಳಿಗೆ ನೀಡಿದರೆ ಅದನ್ನೆ ಖಂಡಿಸುತ್ತೇವೆ ತಾನೆ?  ಈ ಸಂದೇಹಕ್ಕೆ ಅನೇಕ ಉತ್ತರಗಳಿವೆ. ಆಕೆ ಇಲ್ಲಿ ೨೦೦೦ಕ್ಕೆ ಬಂದವಳು..ತನ್ನ ಕಲಿಕೆಯನ್ನು ಮುಗಿಸಿ ಈಗ ಇಂಗ್ಲೆಂಡಿನ ವಿಶ್ವವಿದ್ಯಾಲವೊಂದರಲ್ಲಿ ಕನ್ನಡ ಕಲಿಸುತ್ತಿದ್ದಾರೆಂದು ಓದಿದ ನೆನಪು...

        ಯಕ್ಷಗಾನ ಕಲಿಯಬೇಕಾದರೆ ಅದರ ಮೂಲ ಭಾಷೆಯಾದ ಕನ್ನಡ ಕಲಿತರೆ ಮಾತ್ರ ಸಾಧ್ಯವೆಂದರಿತು ನಮ್ಮ ಭಾಷೆಯನ್ನು ಕಲಿತರು...ಇಲ್ಲಿಯವರೇ ನಮ್ಮ ಮಣ್ಣಿನ ಪರಿಮಳ ಸೂಸುವಂತಹ ಯಕ್ಷಗಾನವನ್ನು ಮೂಲೆಗೊತ್ತಿರಬೇಕಾದರೆ ಬರೇ ಪುರುಷರೇ ಅಭ್ಯಸಿಸುವ, ಸ್ವಲ್ಪ ಕಷ್ಟವಾದ ಅಂಗಾಗ ಚಲನೆಯುಳ್ಳ ಶೈಲಿಯನ್ನು ಕಲಿತು ಪ್ರದರ್ಶಿಸಿ ಪಂಡಿತರ ಮೆಚ್ಚುಗೆ ಗಳಿಸುವುದು ಕಷ್ಟ ಸಾಧ್ಯವೇ ಸರಿ. ಇಲ್ಲಿನ ಮಣ್ಣಿನ ನೆನಪು ದೂರಮಾಡಲು ಸಾಧ್ಯವಾಗದೇ ತನ್ನ ಮಕ್ಕಳಿಗೂ ಭಾರತೀಯ ಹೆಸರನ್ನು ಇತ್ತು ತನ್ನ ಸಂಬಂಧವನ್ನು ಮತ್ತಷ್ಟು ಗಟ್ಟಿ ಪಡಿಸಿಕೊಂಡದ್ದು ಮೆಚ್ಚುವಂತಹುದು.
      
          ನಮ್ಮಲ್ಲಿಯೂ ಅನೇಕರು ವಿದೇಶಗಳಿಗೆ ಹೋಗಿ, ಅಲ್ಲಿಯ ವಾದ್ಯ ಅಥವಾ ನೃತ್ಯ ಕಲೆಯಲ್ಲಿ ಪರಿಣತಿ ಗಳಿಸಿ ವಿಖ್ಯಾತರಾಗಿದ್ದಾರೆ...ಮತ್ತು ಅಂತವರನ್ನು ಮಾಧ್ಯಮಗಳು ಗುರುತಿಸಿ ಪ್ರಚಾರಕೊಡುತ್ತಿವೆ..ನಮ್ಮಂತವರು ಅದನ್ನು ನೋಡಿ ಮೆಚ್ಚುಗೆ ಕೊಡುತ್ತಿರುತ್ತೇವೆಯಷ್ಟೇ! ಹಾಂ, ನಾವು ನಮ್ಮ ಮಕ್ಕಳಿಗೆ ವಿದೇಶಿ ಹೆಸರು ಕೊಡುವುದನ್ನು ಮಾತ್ರ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ...ನಮ್ಮ ಭಾರತೀಯ ಹೆಸರುಗಳೇ ವಿಶಿಷ್ಟವಾದದ್ದು..ಪ್ರತಿಯೊಂದು ಹೆಸರಿನ ಹಿಂದೆ ಸುಂದರ ಅರ್ಥವೆದ್ದು ಕಾಣುತ್ತದೆ.  ಬಹುಶಃ ವಿದೇಶಿ ಹೆಸರುಗಳಿಗೂ ಅದರದೇ ಅರ್ಥವಿದ್ದರೂ ಭಾರತೀಯ ಹೆಸರುಗಳಷ್ಟು ಸುಂದರವೂ ಅಲ್ಲ..ವಿಶಿಷ್ಟವೂ ಅಲ್ಲವೆಂದು ನನಗೆ ತೋರುತ್ತದೆ...ಅಷ್ಟಿದ್ದರೂ ೨೨ವರ್ಷಗಳಿಂದ ವಿದೇಶದಲ್ಲಿ ನೆಲೆಸಿರುವ ನನ್ನ ತಮ್ಮ ತನ್ನ ಮಕ್ಕಳಿಗೆ ಅಲ್ಲಿಯ ಹೆಸರುಗಳನ್ನಿತ್ತಾಗ ನಮಗೆ ಬೇಸರವಾದದ್ದೂ ಸುಳಲ್ಲ...ಆದರೆ ಅವನಿಗೆ ತನ್ನದೇ ಆದ ಕಾರಣಗಳಿದ್ದವು...ಅದನ್ನು ಆತ ನನ್ನ ಬಳಿ ವಿವರಿಸಿದಾಗ ನನ್ನ ಬಾಯಿ ಕಟ್ಟಿತ್ತು...
ಮನುಷ್ಯನು ಸುಲಭವಾಗಿ ಮತ್ತೊಬ್ಬನನ್ನು ದೂರುತ್ತಾನೆ.....ಬೇರೊಬ್ಬರ ತಪ್ಪುಗಳನ್ನು ಎತ್ತಿ ಹಿಡಿಯುವಷ್ಟು ಸುಲಭ ಮತ್ತು ಪ್ರಿಯವಾದ ಕಾರ್ಯ ಮತ್ತೊಂದಿಲ್ಲ ನಮಗೆ...ಅದೇ ನಮ್ಮ ತಪ್ಪನ್ನು ತೋರಿಸಿದರೆ ನಮಗೆ ಕೆಂಡದಂತಹ ಕೋಪ...ಗೊತ್ತಾ..ನಿಮಗೆ ಹಾಗೆ ಮಾಡ್ಲಿಕ್ಕೆ ಹೀಗ್ ಹಾಗೆ ಕಾರಣಗಳಿವೆ..ಹೋಗ್ರಿ  ಹೋಗ್ರಿ...ವಿಷಯ ಗೊತ್ತಿಲ್ಲದೆ ನಂಗೆ ಬುದ್ಧಿ ಹೇಳ್ಲಿಕ್ಕೆ ಬರಬೇಡಿ..ಹುಂ ..ಇದು ನಮ್ಮ ಸಾಮಾನ್ಯ ಮನೋಧರ್ಮ...
  
          ಯಕ್ಷಗಾನವನ್ನು ನಾನು ಕಡೆಯ ಬಾರಿಗೆ ನೋಡಿದ್ದು ನನ್ನ ೧೩ನೇ ವಯಸ್ಸಿನಲ್ಲಿ...ನಂತರ ಬರೇ ಯು-ಟ್ಯೂಬ್ ನಲ್ಲೋ..ಅಥವಾ  ವಿಮರ್ಶೆಗಳನ್ನು, ಲೇಖನಗಳನ್ನು ನೋಡಿ ಸಮಾಧಾನ ಮಾಡಿಕೊಂಡಿದ್ದೇನಷ್ಟೇ...ನನಗೆ ಅಷ್ಟು ಆಸಕ್ತಿಯಿದ್ದರೂ ನನ್ನ ಮಕ್ಕಳಿಗಾಗಲಿ, ನನ್ನಲ್ಲಿ ಬರುವ ಮನೆಪಾಠದ ಮಕ್ಕಳಿಗಾಗಲಿ ಅದರಲ್ಲಿ ಆಸಕ್ತಿ ಹುಟ್ಟಿಸಲು ಯತ್ನಿಸಿ ವಿಫಲಳಾಗಿದ್ದೇನೆ...ಯಕ್ಷಗಾನವೂ ಮೊದಲಿನ ಸೊಗಡನ್ನು ಕಳೆದುಕೊಂಡಿದೆ..ಹೊಸ ಪ್ರಯೋಗ ಫ್ಯೂಜನ್..ಮೊದಲಾದ ವಿವಾದಗಳಲ್ಲಿ ಸಿಕ್ಕಿಕೊಂಡಿದೆ..ಏನಿದ್ದರೂ ಮತ್ತೆ ಹಳೆದಿನಗಳ ಸೊಗಸನ್ನು ತೋರಿಸುವುದರಲ್ಲಿ ಸೋತಿದೆ. ಇಂತಿರುವಾಗ ಆ ಜರ್ಮನ್ ಮಹಿಳೆ ನಮ್ಮ ಕಲೆಯಲ್ಲಿ ಆಸಕ್ತಿ ತೋರಿಸಿದು ಮಾತ್ರವಲ್ಲದೇ ನಮ್ಮ ಭಾಷೆ ಕಲಿತು, ಅದನ್ನೇ ಕಲಿಸುವ ಕಾಯಕ ಮಾಡಿದರೆ ಆಕೆ ಮೇಲೆ ಹೆಮ್ಮೆ ಮೂಡುವುದು ಸಹಜ ತಾನೆ!


ಕೆಂಡ ಸಂಪಿಗೆಯಲ್ಲಿ ಕತ್ರಿನ್!
 -http://kendasampige.com/article.php?id=228125 July, 2012

ಅದ್ಭುತ ಭಾವ- ಪ್ರೀತಿಯ ಬಗ್ಗೆ ರೂಪಾ ಅಯ್ಯರ್ ಏನ್ ಹೇಳ್ತಾರೆ ....ಅಂತ ಕೇಳಿ!


            ನಿನ್ನೆ ತಾನೆ ನಾನು ಪ್ರೀತಿ ಎಂಬ ಅದ್ಭುತ ಭಾವದ ಬಗ್ಗೆ ಬರೆದನಷ್ಟೇ...ನಿನ್ನೆಯ ಪೇಪರ್ ಓದಿರಲಿಲ್ಲ...ಇವತ್ತು ಬೆಳೆಗ್ಗೆ ನನ್ನ ತರಗತಿ ನಡೆಯುವಾಗ  ಓದಲಿಕ್ಕೆಂದು ಸೀದಾ ೪ನೇ ಪೇಜು ತೆಗೆದರೆ ಅದೇ ಪ್ರೀತಿಯ ಬಗ್ಗೆ ಬರೆದಿದ್ದಾರೆ ರೂಪಾ ಅಯ್ಯರ್!  ಖುಷಿಯಾಯಿತು ಓದಿ..ಒಂದು ವೇಳೆ ನಿಮ್ಮಲ್ಲಿ ಉದಯವಾಣಿ ತರದಿದ್ದರೆ, ಅಥವಾ ಈ ಆರ್ಟಿಕಲ್ ಓದುವ ಅಭ್ಯಾಸವಿಲ್ಲದರಿಗಾಗಿ ದಯವಿಟ್ಟು ಓದಿ..ಅಂತ ನನ್ನ ಕಳಕಳಿಯ ವಿನಂತಿ.  ನಿಮ್ಮ ಜೀವನದಲ್ಲಿ ಪಾಸಿಟಿವ್ ಬದಲಾವಣೆಯನ್ನು ತನ್ನಿ!

24 July, 2012

ಪ್ರೀತಿಯೆನ್ನುವುದು ಅದ್ಭುತ ಅಮೃತ..


            
                ಪ್ರೀತಿ, ಪ್ರೇಮ... ಹುಂ, ಕೇಳುವಾಗಲೇ ರೋಮಾಂಚನ ಕೊಡುವ ಶಬ್ದಗಳು! ದುರದೃಷ್ಟಾವತ್ ಕೆಲವೇ ಕೆಲವು ಮಂದಿಗೆ ಆಸ್ವಾದಿಸಲು ಸಿಗುವ ಅನುಭೂತಿ! ಅಂದ ಹಾಗೆ ಇದು ಕಣ್ಣಿಗೆ ಕಾಣದ ಕೇವಲ ಹೃದಯಕ್ಕೆ ಸಂಬಂಧಪಟ್ಟದಾಗಿದೆ.. ಹೇಗೆ ಗಾಳಿ, ಪರಮಾತ್ಮ ಮೊದಲಾದವುಗಳನ್ನು ಬರೇ ಅನುಭವಿಸಿ ಅರಿಯಬೇಕೋ ಹಾಗೆ ಪ್ರೀತಿಯನ್ನೂ ಯಾವುದೇ ಚೌಕಟ್ಟಿನಲ್ಲಿ ಕುಳ್ಳಿರಿಸಲಾಗದಂತಹುದು!  ಆದರೆ ಮಂದಿ ಮತ್ತೆ ಮತ್ತೆ ವಿಶ್ಲೇಷಣೆ ಮಾಡುತ್ತಲೇ ಇದ್ದಾರೆ... ಸರಿ, ಹಾಗಾದರೆ ಇವಳ್ಯಾಕಪ್ಪ ಚೌಕಟ್ಟಿನಲ್ಲಿ ಕಟ್ಟಲಾಗದ ಪ್ರೀತಿಯನ್ನು ಮನದ ಪುಟಗಳಲ್ಲಿ ನೇತಾಡಿಸಲು ನೋಡುತ್ತಿದ್ದಾಳೆ ಅಂತ ಮನದಲ್ಲಿ ಸಂದೇಹಮೂಡಿದ್ರೆ.. ಇರಿ, ಹೇಳ್ತೇನೆ!


    ಒಂದೆರೆಡು ದಿನಗಳ ಹಿಂದೆ ಪ್ರೇಮದ ಬಗ್ಗೆ ಇಬ್ಬರು ಗಣ್ಯ ವ್ಯಕ್ತಿಗಳ ಸ್ಟೇಟಸ್ ಫೇಸ್ ಬುಕ್‍ನಲ್ಲಿ ಓದಿದೆ. ಹೀಗಿತ್ತು,

     ೧.ಪ್ರೀತಿ ದೊಡ್ಡದೋ, ಆತ್ಮ ಗೌರವ ದೊಡ್ಡದೋ
     ೨.ನಿಜವಾಗಿ ಪ್ರೀತಿಸುವವರು ಎಂದೂ ಭೇಟಿಯಾಗಬಾರದು. ( ಅಂದರೆ ಅವರೆಂದೂ ಒಟ್ಟಿಗೆ ಒಂದೇ ಸೂರಿನಡಿ ಬದುಕಬಾರದು.)

      ಇದನ್ನು ಓದಿ ಒಂದಿಷ್ಟು ಗೊಂದಲೊಳಕ್ಕಾಯಿತು ಮನ! ಅರೇ, ಹೀಗೆ ಸಹ ಉಂಟೇ... ಆತ್ಮ ಗೌರವ! ಹುಂ, ಪ್ರೀತಿಸಿದ ಮೇಲೆ ಮತ್ತೆ ಅವೆರಡು ಬೇರೆ ಬೇರೆ ಜೀವ ಅಂತ ನೋಡಿದವರು ತಿಳಿದುಕೊಳ್ಳಬೇಕೆ ಹೊರತು  ಅವರಿಬ್ಬರಿಗೆ ತಾವಿಬ್ಬರು ಈಗ ಬೇರೆ ಬೇರೆಂದೆನಿಸುವುದಿಲ್ಲವಲ್ಲ.  ಅಂದ ಮೇಲೆ ಆತ್ಮಗೌರವದ ಪ್ರಶ್ನೆಯೇ ಏಳುವುದಿಲ್ಲ.

   ಪ್ರೀತಿಸುವುದೆಂದರೆ ಅಲ್ಲಿ ನಮ್ಮ ಹೃದಯಗಳ ಸ್ಥಾನ ಪಲ್ಲಟವಾಗುತ್ತವೆ! ಒಬ್ಬರ ಆತ್ಮದಲ್ಲಿ ಮತ್ತೊಬ್ಬರ ಆತ್ಮವು ನೆಲೆಗೊಳ್ಳುತ್ತದೆ.. ನಮ್ಮ ಪ್ರೇಮಿಯ ಗೌರವ ಕೆಡಿಸುವುದೆಂದರೆ ಅದು ನಮ್ಮ ಸ್ಥಾನ ನಾವೇ ಕೆಡಿಸಿದ ಹಾಗೆ ಅಲ್ಲವಾ? ಪ್ರೀತಿ, ಆತ್ಮ ಗೌರವ ಪ್ರತ್ಯೇಕಿಸಲಾಗದ ಭಾವಗಳು!

     ಇನ್ನೂ ಎರಡನೆಯದನ್ನು ಓದಿ ತಲೆ ಕೆಟ್ಟಿತು.. ಅಲ್ಲ ಪ್ರೀತಿಸುವವರು ಎಂದೂ ಒಟ್ಟಿಗಿರಬಾರದು! ಅಂದ ಮೇಲೆ ಆ ಪ್ರೀತಿಗೇನು ಅರ್ಥ... ಹಾಂ, ಸಂದರ್ಭಗಳು ಅನಾನುಕೂಲವಾಗಿರದಿದ್ದರೆ ಅದು ಬೇರೆ ವಿಷಯ... ಹಾಗೆ ನೋಡಿದರೆ ಅದೇ ನಮ್ಮ ಪ್ರೀತಿಗೆ ಒಂದು ದೊಡ್ಡ ಸವಾಲು ಅಂತಲೇ ಹೇಳಬಹುದು!

    ಪ್ರೀತಿಸಿಲಿಕ್ಕೆ ಏನು ಕೋಟಿಗಟ್ಟಲೆ ಜೀವಿಗಳು ಹೇಳ್ತಾನೆ ಇರ್ತವೆ.. ಆದರೆ ವಿವಾಹ ಬಂಧನಕ್ಕೆ ಒಳಗಾದವೋ, ಅಲ್ಲಿಂದ ಶುರು.. ನಿತ್ಯ ರಾಮಾಯಣ, ಮಹಾಭಾರತ... ಯೇತಿ ಅಂದ್ರೆ ಇನ್ನೊಬ್ಬ ಪ್ರೇತಿ ಅಂತಾನೆ!

     ಒಟ್ಟಾರೆ  ಸಂಸಾರದ ನೇಗಿಲು ಹೊತ್ತಾಗ ಪ್ರೀತಿ ಆ ಭಾರಕ್ಕೆ ಕುಸಿದು ಬಿದ್ರೆ ಅದನ್ನು ಪ್ರೀತಿ ಅಂತ ಗುರುತಿಸಿದ್ರೆ ಅದು ಪ್ರೀತಿಗೆ ಅವಮಾನ.. ಅದು ಬರೇ ಎರಡು ವಿಭಿನ್ನ ಲಿಂಗಗಳ ದೈಹಿಕ ಆಕರ್ಷಣೆ! ಸರಿಗಮದ ಮಧುರ ಸ್ವರ ಮಾಯವಾಗಿ ತಾರಕ ಸ್ವರ ಕೇಳಿ ಬಂದರೆ ಆಗ, ಪ್ರೀತಿ ಎಂಬ ಪರೀಕ್ಷೆಯಲ್ಲಿ ಸೊನ್ನೆ ಅಂಕ ಪಡೆದಿದ್ದೇವೆ ಅಂತನೇ ಅರ್ಥ. ಏನಂತಿರಿ ನೀವು? 

    ನಮ್ಮಲ್ಲಿ ಅನೇಕರು ಪ್ರೀತಿಸಿನೇ ಮನೆಯವರ ಒಪ್ಪಿಗೆ ಪಡೆದೇ ಮದುವೆಯಾಗಿದ್ದಾರೆ. ಅವರಿಗೂ ಮನೆಯವರು ನಿರ್ಧರಿಸಿ ಮದುವೆಯಾದವರಿಗೂ ಏನೂ ವ್ಯತ್ಯಾಸ ಕಾಣುವುದಿಲ್ಲ! ನಮ್ಮ ಹಾಗೆ ಸಂಸಾರ ಮಾಡುತ್ತಿರುತ್ತಾರೆ.. ಅಂದರೆ ಮೊದಲಿನ ಸಾರವನ್ನು ಸಂಸಾರ ಸಾಗರದ ಅಲೆಗಳು ದೂರ ಅಟ್ಟಿವೆ! 

     ದೂರದ ಬೆಟ್ಟ ನುಣ್ಣಗೆ ಅಂತಾರಲ್ಲ ಹಾಗೆ ಒಂದು ವೇಳೆ ಬಂಧನಕ್ಕೆ ಬಿದ್ದರೆ ಮತ್ತೆ ಅದೇ ರೀತಿಯ ಪುನರಾವರ್ತನೆ.. ಗಂಡು, ಹೆಣ್ಣುಗಳ ಮಧ್ಯೆ ಇರುವ ಸಹಜ ಆಕರ್ಷಣೆಯನ್ನು ಪ್ರೀತಿ ಎಂಬ ತಪ್ಪು ತಿಳುವಳಿಕೆ ಅನೇಕರಿಗೆ. ಪ್ರೀತಿಯೆನ್ನುವುದು ರಾಗ-ಅನುರಾಗಗಳ ಸಂಗಮ; ಎಂದೂ ಬೇರ್ಪಡಿಸಲಾಗದ ಬೆಸುಗೆಯನ್ನು ಹಾಕುತ್ತದೆ ಹೃದಯಗಳಿಗೆ! 

     ಇಲ್ಲಿ ಜಾತಿ, ದೈಹಿಕ ಸೌಂದರ್ಯ, ಭಾಷೆ, ಆಚಾರ, ವಿಚಾರ, ಆಸಕ್ತಿ... ಯಾವುದೂ ಅಡ್ಡಬರುವುದಿಲ್ಲ. ಒಬ್ಬರಿಗೆ ಮತ್ತೊಬ್ಬರು ಬೆಂಬಲ.. ಮೇಲಿಲ್ಲ, ಕೀಳಿಲ್ಲ... ಒಬ್ಬರನ್ನೊಬ್ಬರು ಅರ್ಥಮಾಡಿ, ನೋವು ಮಾಡದೇ ಬದುಕುವರು. ಮನವನ್ನೂ ಓದಿಕೊಳ್ಳಬಲ್ಲರು! ದಾಸ್ಯಭಾವ, ಸಮರ್ಪಣಾಭಾವ ತೋರುವರು.. ಒಬ್ಬರಿಗೊಬ್ಬರು ತಂದೆ, ತಾಯಿ, ಮಗು, ಅಣ್ಣ, ತಮ್ಮ.. ಹೀಗೆ ವಿವಿಧ ಪಾತ್ರಗಳನ್ನು ಮಾಡಿ ಕೊರತೆಗಳನ್ನು ತುಂಬುತ್ತಾರೆ!

     ಪ್ರೀತಿಯೆನ್ನುವುದು ಅದ್ಭುತ ಅಮೃತ! ಕೇವಲ ಅದೃಷ್ಟವಂತವರಿಗೆ ಸೇವಿಸಲು ಪ್ರಾಪ್ತವಾಗುವುದು. ನಿಜವಾದ ಪ್ರೀತಿಯ ವಿಶ್ಲೇಷಣೆ ಮಾಡಲು ಶಕ್ತರು ಆ ಅಮೃತ ಪಡೆದವರು ಮಾತ್ರ... ಆದರೆ ಅವರೋ ಮೌನಿಗಳು! ಸಂವೇದನೆಯನ್ನು ಮೌನವಾಗಿಯೇ ಮಾಡುವವರು.. ಈ ಭಾಷೆಯನ್ನು ಬಲ್ಲವರು ಮಾತ್ರ ಅವರನ್ನು ಅರ್ಥಮಾಡಿಕೊಳ್ಳಬಲ್ಲರು! ನೀರು ತುಂಬುವ ತನಕ ಗಡಿಗೆ ಬುಳು ಬುಳು ಅಂತ ಶಬ್ದ ಮಾಡುತ್ತೆ... ತುಂಬಿದ ನಂತರ ಶಬ್ದವಿಲ್ಲ... ಸುಂದರ ಅಲೌಕಿಕ ಮೌನ....

******************************************************


ಕಿರಣ್ ನನಗೆ ಈ ಪ್ರಶ್ನೆ ಹಾಕಿದ್ದಾನೆ...

ಮೊದಮೊದಲು ಸಂಗಾತಿಯನ್ನು ವಿಪರೀತ ಅನ್ನೋ ಮಟ್ಟಿಗೆ ಪ್ರೀತ್ಸೋ ನಾವು ನಂತರದ ದಿನಗಳಲ್ಲಿ ಕಮ್ಮಿ ಆಗುತ್ತಲ್ಲ ಅದು 

ಯಾಕೋ ಗೊತ್ತಿಲ್ಲ...

ಅದು ನಿರಂತರವಾಗಿ ಇರೋ ಬಗೆಯಾದರೂ ಹೇಗೆ ?

ನಾವೆಷ್ಟೇ ಪ್ರೀತ್ಸಿದ್ರು ಕೂಡ, ಅದು ಎರಡು ಬೇರೆಯೇ ಮನಸ್ಸುಗಳು, ಬೇರೆಯೇ ಭಾವನೆಗಳು

24/7 ಆಕೇನ impress ಮಾಡೋದಾಗ್ಲಿ, ಖುಷಿಯಾಗಿ ಇರಿಸಿಲಿಕ್ಕೆ ಆಗ್ಲಿ ತುಂಬಾ ಕಷ್ಟ ಅಲ್ವ ಅಕ್ಕ!

ನಮ್ಮಂತಹ ಎಳಸುಗಳಿಗೆ "ನಿರಂತರ ಪ್ರೇಮದ ಬಗೆ ಹೇಗೆ " ಅಂತ ನಿಮ್ಮ ಅನುಭವದ ಮೂಸಯಿಂದ ತಿಳಿಸಿಕೊಡಿ ಅಕ್ಕ! 

   ಕಿರಣ್, ನಂಗೊತ್ತಿಲ್ಲ ಇದು ಸರಿಯಾ ತಪ್ಪಾ ಅಂತ.. ನಿನಗೆ ಮಾರ್ಗದರ್ಶನ ಮಾಡುವಷ್ಟು ಜ್ಞಾನಿನೂ ಅಲ್ಲ.. ಆದರೂ,      -ನಾನು ಹೇಳಿದ ಹಾಗೆ ಪ್ರೀತಿ ಬಗ್ಗೆ ವಿಶ್ಲೇಷಣೆ ಯಾರಿಂದಲೂ ಸಾಧ್ಯವಿಲ್ಲ ಕಣೋ..  ಆದರೂ ನನಗೆ ಗೊತ್ತಿದಷ್ಟು ಬರೀತೇನೆ!

     ನೀನು ಹೇಳಿದ ಹಾಗೆ ಮೊದ ಮೊದಲು ಎಲ್ಲವೂ ಸುಂದರ! ಅಹಾ!   ಅದ್ಭುತವಾಗಿರುತ್ತೆ! ನಿಧಾನವಾಗಿ ಹಳಸಲು ಪ್ರಾರಂಭವಾಗುತ್ತೆ... ತಪ್ಪುಗಳು ಎದ್ದು ಕಾಣತೊಡಗುತ್ತವೆ! ಮೊದಲು ಹೇಳದೇ ಅರ್ಥವಾದದ್ದು ಈಗ ಹೇಳಿದರೂ ಅರ್ಥವಾಗುವುದಿಲ್ಲ...  ಅಸಹನೆ, ಅಸಮಧಾನ, ಅಹಂಗಳು ಕಾಡತೊಡಗುತ್ತದೆ. 

     ತನ್ನದೇ ಸರಿ... ತಾನು ಹೇಳಿದ ಹಾಗೆ ಇರಬೇಕು, ತನ್ನಿಷ್ಟದಂತೇ ಎಲ್ಲರೂ ಕುಣಿಬೇಕು, ಎಲ್ಲ ತನ್ನ ಕೇಳಿಯೇ ನಿರ್ಧರಿಸಬೇಕು... ಅಹಂಮಿಕೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬಿರುಕು ಏಳುತ್ತದೆ..  

      ಹೆಚ್ಚಾಗಿ ಪುರುಷರೇ ಸಂಬಂಧಗಳ ಬಿರುಕಿಗೆ ಕಾರಣವಾಗುತ್ತಾರಾದರೂ ಮಹಿಳೆಯರೂ ಕೆಲವೊಮ್ಮೆ ಚಂಡಿಯಂತೆ ಹಟ ಮಾಡಿ ಸಂಸಾರ ಸುಖ ಕೆಡಿಸುತ್ತಾರೆ.


     ಮತ್ತಿನ್ನೊಮ್ಮೆ ಅದೇ ಹೇಳುತ್ತೇನೆ,  ಕೇಳು.  

   ಸ್ನೇಹಿತರು ಹೇಗಿರುತ್ತಾರೆ? ಹಲವು ಸಲ ನಮಗೆ ನಮ್ಮ ಸ್ವಭಾವದಂತಹುದೇ ಸ್ನೇಹಿತರಿರುವುದಿಲ್ಲವಲ್ಲ.. ಆವಾಗ ಹೇಗಿರುತ್ತೇವೆ ನಾವು? ನಮ್ಮನ್ನು ಅವರ ಮೇಲೆ ಹೇರುತ್ತೇವೆಯಾ? ಗಂಡ ಹೆಂಡತಿ ಇಬ್ಬರೂ ಮೊದಲು ಸ್ನೇಹಿತರಾಗಬೇಕು.

      ಒಬ್ಬರು ಮತ್ತೊಬ್ಬರ ಸ್ವಭಾವವನ್ನು ಚೆನ್ನಾಗಿ ಸ್ಟಡಿಮಾಡಬೇಕು, ಅರ್ಥಮಾಡಿಕೊಳ್ಳಬೇಕು, ಇಷ್ಟಗಳನ್ನು ಅರಿತಿರಬೇಕು.
ನಮಗೆ ಇಷ್ಟವಾದದ್ದೇ ಅವರಿಗೂ ಆಗಿರಬೇಕೆಂಬ ಒತ್ತಾಯ ಸಲ್ಲದು.
ಒಂದು ವೇಳೆ ಯಾವುದೇ ಕೆಟ್ಟ ಅಭ್ಯಾಸವಿದ್ದರೂ ಅದನ್ನು ಬಿಡಿಸಲು ಸಹ ಮೃದು ಮಾತು, ಸಹನೆ ತೋರಬೇಕು..
ಇಬ್ಬರು ಸಮಾನವೆಂಬ ಭಾವನೆ ಇಬ್ಬರಲ್ಲೂ ಇರಬೇಕು.
ಯಾವುದೇ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು.
ದೈಹಿಕವಾಗಿ ಹೆಣ್ಣು ಬಲಹೀನಳು ಹೌದಾದರೂ ಪುರುಷನೆಂದೂ ಇದರ ದುರುಪಯೋಗಮಾಡಿಕೊಳ್ಳಬಾರದು.

     ಈ ಇಂಪ್ರೆಸ್ಸ್ ಮಾಡೋದು, ಖುಶಿ ಪಡಿಸೋದು ಬರೀ ಕೆಲ ಸಮಯ ನಡೆಯುತ್ತೆ... ಮತ್ತೆ ಬೇಜಾರು ತರುತ್ತೆ..  ಎಲ್ಲವೂ ನಿಧಾನವೇ ಆಗಲಿ ಎಲ್ಲಿಯೂ ಅವಸರ ಸಲ್ಲದು! ಮೊದಮೊದಲು ಪ್ರೀತಿಯಲ್ಲಿ ಬೀಳುವಾಗ ಮೇಲೆ ಮೇಲೆ ಮೆಸೇಜ್! ಕಾಲ್ಸ್ ಗಳು!  ನಿಧಾನವಾಗಿ ಕಮ್ಮಿಯಾಗುತ್ತಾ ಬರುವುದು... ಕೊನೆಗೊಂದು ದಿನ ಕಾದು ಕಾದು ಕಣ್ಣಿರಿನ ಕೋಡಿ! ಉಹುಂ, ಖಂಡಿತ ಹಾಗೆ ಮಾಡಬಾರದು!

   ಮದುವೆಯಾದ ೩,೪ ತಿಂಗಳು ಬೇರೆ ಯಾರೂ ಬೇಡ..  ಹೆಂಡತಿಯ ಸೆರಗು ಹಿಡಿದು ತಿರುಗುತ್ತಾ ಇರೋದು..  ಕೊನೆಗೆ ಅವಳು ಬೋರ್ ಆಗುತ್ತಾಳೆ! ಎಲ್ಲಕ್ಕೂ ಒಂದು ಮಿತಿ ಅಂತ ಇರುತ್ತೆ... ಸಿನೆಮಾ ನೋಡಿ, ಕಥೆ ಪುಸ್ತಕ ಓದಿ ನಾವೆಲ್ಲಾ ನಮ್ಮ ಜೀವನ ಹಾಗೆ ಇರುವುದು ಎಂದು ಅಂದುಕೊಳ್ತೀವಿ..  ನಂಗೆ ಅರ್ಥ ವಾಗೊಲ್ಲ! ಯಾಕೆ ಜನರು ಅಂತಹ ಕನಸುಗಳನ್ನು ಕಟ್ಟೊದು ಅಂತ. ನಮ್ಮೆದುರಿಗೆ ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ, ಚಿಕ್ಕಪ್ಪ- ಚಿಕ್ಕಮ್ಮ, ಮಾಮ-ಮಾಮಿ.. ಹೀಗೆ ಅನೇಕ ಜೋಡಿಗಳ ಉದಾಹರಣೆಗಳನ್ನು ನೋಡುತ್ತಲೇ ಇರುತ್ತೇವೆ... ಹಾಗಿದ್ದರೂ!!! 

23 July, 2012

ಆತ್ಮ ಆತ್ಮದ ಸೆಳೆತಕ್ಕೆ ಯಾರು ತಾನೆ ತಡೆಯೊಡ್ಡಲು ಸಾಧ್ಯ.....


         ಅಲ್ಲೊಂದು ನದಿಯ ಜನನ..ಅಂಕು ಡೊಂಕಾಗಿ ಹರಿಯುತ್ತಿದ್ದಳು...ಪ್ರಕೃತಿಯ ಜೊತೆ ನಲಿದಾಡುತ್ತ ಬೆಳೆಯುತ್ತಿದ್ದಳು...ಬೇಸಿಗೆಯಲ್ಲಿ ನಿಧಾನವಾಗಿ ಹರಿದರೆ ಅವಳು ಹುಟ್ಟಿದ ಶ್ರಾವಣ ಮಾಸದಲ್ಲಿ ಒಂದಿಷ್ಟು ಮದದಲ್ಲಿ ಮತ್ತೇರಿ ಮೆರೆದಾಡುತ್ತಿದ್ದಳು....ವರುಷಗಳು ಕಳೆದು ಹೋಗುತ್ತಿದ್ದವು....ಸೆಳೆಯುತ್ತಿದ್ದಳು, ಕುಕ್ಕುವಂತಿದ್ದಳು..ಹರಿದಾಡುತ್ತಿದ್ದವು ಅನೇಕ ಕಣ್ಣುಗಳು.......ಇವಳನ್ನು ಹಿಡಿದು ಕಟ್ಟಲೇಬೇಕು ಅಂದರು...ಅವಳ ಮೌನ ರೋಧನ ಯಾರ ಕಿವಿಯನ್ನು ತಲುಪಲೇ ಇಲ್ಲ...ಕಟ್ಟೇಬಿಟ್ಟರು ವೈಭವದ ಸಮಾರಂಭ ಮಾಡಿ...ಒಳಗೊಳಗೆ ಬಿಕ್ಕುತ್ತಾ...ಮೊದಮೊದಲು ಪ್ರತಿಭಟಿಸಿ ಕೊನೆಗೆ ಕಾಲನ ಬಲದ ವಿರುದ್ಧ ಓಡಲಾಗದೆ ಸೋತು ಸೆರೆಯಾಗುತ್ತಾಳೆ. ನಿಂತಲ್ಲೇ, ಕುಳಿತಲ್ಲೇ ಹರಿಯುತ್ತಾ, ಚೌಕಟ್ಟಿನೊಳಗೆ ಗುದ್ದಾಡುತ್ತಾ ಅಲ್ಲೇ ಒಮ್ಮೊಮ್ಮೆ ಉಕ್ಕುತ್ತಾ...ಕೆಲವೊಮ್ಮೆ ಶಾಂತವಾಗುತ್ತಾ....ಮಂದಹಾಸದ, ನೆಮ್ಮದಿಯ ಮುಖವಾಡ ಹೊತ್ತು ತನ್ನೆಲ್ಲಾ ಕನಸುಗಳನ್ನು ಗಂಟು ಹಾಕಿ ತನ್ನಲ್ಲೇ ಹುಗಿದು ಬಿಡುವಳು.  ಜೀವನದಿಯಾಗಿ ಹರಿಯಲಿಚ್ಛಿಸಿದವಳು ಅವಳು....ಮರೆಯುವುದಿಲ್ಲ.....ಮಿಕ್ಕುಳಿದ ಕಸುವನ್ನು ವ್ಯರ್ಥಮಾಡದೆ ತನ್ನಿಂದುಕ್ಕಿದ ಹೊಳೆಗಳ ಲಾಲನೆ....ಮಾಡುವುದರಲ್ಲಿ ಕಳೆಯುತ್ತಾಳೆ...ಕಾಲವೂ ಓಡುತ್ತದೆ....ತನ್ನಸ್ತಿತ್ವವನ್ನೂ ಮರೆಯುತ್ತಾಳಾ ಮಹಾನದಿ.....

ಹೊಳೆಗಳು ಈಗ ಮತ್ತಷ್ಟು ತುಂಬಿವೆ.... ಅತ್ತಿತ್ತ ಹರಿದಾಡುತ್ತವೆ..ಮದದಿಂದ ಓಡುತ್ತವೆ...ಇವಳಿಗೆ ಹೆದರಿಕೆ..ಅಣೆಕಟ್ಟಿನ ಭಯ...ಅದೊಂದು ದಿನ ಧೋ ಮಳೆ...ಅಣೆಕಟ್ಟು ಒಡೆದೇ ಹೋಯಿತು..ಹರಿದಳು ಇವಳು, ಮತ್ತೆ ಪಯಣ ಆರಂಭವಾಯಿತು..ಮತ್ತಷ್ಟು ಉಕ್ಕಿ, ಗುರಿಯಿರಲಿಲ್ಲ...ಆದರೂ ಏನೋ ಯಾವುದೂ ಮಂದ ನಿನಾದದ ಸೆಳೆತ....ಅದೇ ಕಾರಣವಿರಬೇಕು..ಹರಿವಿನಲ್ಲಿ ಲಯ ಲಾವಣ್ಯವೆತ್ತಿ ಕಾಣುತ್ತಿದೆ.. ಕಳೆದ ಯೌವನ ದಿನಗಳ ನೆನಪೇ...ಹೊರಹೊಮ್ಮುತ್ತಿವೆ… ಮೌನ ಭಾವದ ರಾಗ ತರಂಗ....ಹರಿಯುತ್ತಳೇ ಇದ್ದಳವಳು.. ಮತ್ತಷ್ಟು ಮೆರುಗು...ಇನ್ನಷ್ಟು ಸೊಂಪಾಗಿ…..ಇವಳೆದೆಯ ನಾದದ ತರಂಗ ಕೇಳಿತು ಸಾಗರ...ಉಲಿಯಿತು, ಕರೆಯಿತು....ಅದರ ಭೋರ್ಗೆರೆತ ಇವಳಿಗೆ ಮುರಳಿಯ ನಾದದಂತೆ ಸೆಳೆಯಿತು..ಓಗೊಟ್ಟಳು...ಪಯಣದ ಲಕ್ಷವೆತ್ತವೆಂದರಿತಳು...ಅತ್ತಲೇ ಗಮನವಿತ್ತಳು...ಈಗಿನ್ನು ಇವಳನ್ನು ತಡೆಯುವ ಬಲ ಯಾರಿಗಿಲ್ಲ...

     ಆಗಲೇ ಪ್ರತ್ಯಕ್ಷನಾದನವನು...ಕೇಳಿದಳು ಎಲ್ಲಿದ್ದೆ ಇಷ್ಟು ದಿನ? ವ್ಯಸ್ಥವಾಗಿದ್ದೆ..ಕೇಳಲಿಲ್ಲವಾ ನನ್ನ ಮೊರೆ ಎಂದಳು..ಏನು ಮಾಡುವುದು...ಸಮಯ ಕೂಡಿ ಬಂದಿರಲಿಲ್ಲ...ಅವನ ಉತ್ತರ.....ಮತ್ತೆ ಈಗೇಕೆ ಬಂದೆ..ನಿನ್ನನ್ನು ಕರೆದೊಯ್ಯಲು, ಮುಕ್ತಿ ಕೊಡಲು....ಯಾರಿಗೆ ನಿನ್ನ ಮುಕ್ತಿ ಬೇಕು! ನನ್ನ ಗುರಿಯೀಗ ಆ  ಕಡಲು..... ಅಗೋ, ನೋಡು ಇನ್ನೂ ಎಷ್ಟೊಂದು ದೂರವಿದೆ ನನ್ನ ಪಯಣ..ನನಗಿಲ್ಲ ಮುಕ್ತಿಯ ತವಕ..ಕಾದಿರು, ಒಮ್ಮೆ ಕಡಲನ್ನು ಸೇರಿದ ಮೇಲೆ ಮತ್ತೆ ಅದರ ಜೊತೆ ನಿನ್ನ ಕಡೆಯೇ ನನ್ನ ಕೊನೆಯ ಪಯಣ.. ಹೇಳುತ್ತಾ ಮತ್ತೆ ಅವನೆಡೆ ನೋಡದೆ ರಭಸವಾಗಿ ಮುನ್ನಡೆದಳು. ಈಗಿನ್ನು ಆರಂಭವಾಗಿದೆಯಷ್ಟೇ ಅವಳ ಪಯಣ....ಕಣ್ಣಿಗೆ ಕಾಣದ ಕಡಲಿನ ಕಡೆಗೆ..ಕೇವಲ ಕೇಳುತ್ತಿದೆ ಅದರ ಭೋರ್ಗೆರೆತ ಮಾತ್ರ...
ಅವಳ ಬದುಕಿನ ಗುರಿ ಕಡಲು...ಅದೆಷ್ಟೊ ನದಿಗಳಿಗೆ ಆಶ್ರಯ ಕೊಟ್ಟಿರುವ ಆ ವಿಶಾಲವಾದ ಸಾಗರದತ್ತ ಅವಳ ಹರಿವು...ತನ್ನ ಸಿಹಿನೀರಿನ ಒಡಲು ಸಾಗರದ ಉಪ್ಪು ನೀರಿನೊಂದಿಗೆ ಸೇರಿ ಒಂದಾಗಲಿ...ಅದೇ ಅವಳಿಗೆ ಮುಕ್ತಿ...ಆತ್ಮ ಆತ್ಮದ ಸೆಳೆತಕ್ಕೆ ಯಾರು ತಾನೆ ತಡೆಯೊಡ್ಡಲು ಸಾಧ್ಯ? ಸೃಷ್ಟಿಸಿದ ಅವನಿಗೇ ಅಸಾಧ್ಯವಂತೆ!!!
********************************************************************************

ಈ ನನ್ನ ಬರಹಕ್ಕೆ ನೇತ್ರಾವತಿಯ ಹರಿವು ಬದಲಾಯಿಸುವ ಯೋಜನೆಯೇ ಪ್ರೇರಣೆ...ಹಾಗೂ ನನ್ನ ಮೆಚ್ಚಿನ ಗೆಳತಿ... ಇಪ್ಪತ್ತೆರಡು ವರುಷಗಳ ಹಿಂದೆ ಯಾರನ್ನು ನಾನು ಮುಂದೊಂದು ದಿನ ಬಹಳ ದೊಡ್ಡ ಕಲಾವಿದೆ ಆಗುವಳು ಎಂದು ನಂಬಿದ್ದೆನೋ ಅವಳು ಅಚಾನಕ್ ಆಗಿ ಮೊನ್ನೆ ಭೇಟಿಯಾದಾಗ ಬರೀ ಹೋಮ್ ಮೇಕರ್ ಆಗಿ ಉಳಿದುದನ್ನು ನೋಡಿ ಬೇಸರವಾಯಿತು..ಒಂದಿಷ್ಟು ಕೂಡಿಸಿ , ಕಳೆದು ಬರೆದೆ...

ವಿರಾಮದ ವೇಳೆಗಾಗಿ: ಪತ್ರಿಕೆಗೆ- ಒಮ್ಮೆ ಭೇಟಿ ಕೊಡಿ!
http://viramatime.blogspot.in/p/blog-page_8507.html

ಲೇಖನ ಸ್ವಲ್ಪ ಗಂಭೀರವಾಗಿದೆ...ನಿಮ್ಮ ವದನದಲ್ಲಿ ಮಂದಹಾಸ ಮೂಡಲಿ ಅಂತ ಇಲ್ಲೊಂದು ಫೋಟೊ ಹಾಕಿದ್ದೇನೆ..ಓದಿ...ತುಟಿ ಬಿರಿಯುತ್ತೆ ಖಂಡಿತಾ :-) ಚಿದಂಬರ ಕಾಕತ್ಕರರ ಈ ಲೇಖನ ಉದಯವಾಣಿಯಲ್ಲಿ ಪ್ರಕಟವಾಗಿತ್ತು...ಓದಿ ಖಂಡಿತ...

22 July, 2012

ನಿಗೂಢತೆಯ ಬಂಧಿಸುವಾಟ....


ತೋಟದಲ್ಲಿ ನಡೆದಾಟ....
ಕಣ್ಮನಗಳ ಸರಸದಾಟ...
ನಿಗೂಢತೆಯ ಬಂಧಿಸುವಾಟ....


    

15 July, 2012

ಶಿಷ್ಯೆಯರ ಕಲೆ!!!


      ೫ವರ್ಷಗಳ ಹಿಂದೆ ಕುಂಚ ಕೈಗೆತ್ತಿಕೊಳ್ಳುವೆ ಎಂದೆಣಿಸಿರಲಿಲ್ಲ...ಒಂದು ವೇಳೆ ಚಿತ್ರ ಮಾಡಿದರೂ ಬೇರೆಯವರಿಗೆ ಕಲಿಸಿಕೊಡುವಷ್ಟು ಸಮರ್ಥಳಾಗುವೆ ಎಂದೂ ತಿಳಿದಿರಲಿಲ್ಲ....ಬರೇ ಚಿಕ್ಕಮಕ್ಕಳಿಗೆ ಮೊನ್ನೆ ತನಕ ಪಾಠ ಮಾಡುತ್ತಿದ್ದ ನಾನು ಇಂದು ನನ್ನ  ಪ್ರೀತಿಯ ತೈಲ ವರ್ಣಗಳನ್ನು ಮಾಡುತ್ತಾ ಅದನ್ನು ಕಲಿಸಲೂ ಪ್ರಯತ್ನಿಸುತ್ತಿದ್ದೇನೆ.  ವಿಚಿತ್ರವೆಂದರೆ ನಾನೆಂದೂ ಚಿತ್ರ ಕಲಿಸುವ ಬಗ್ಗೆ ಪ್ರಚಾರವನ್ನು ಮಾಡಿರಲಿಲ್ಲ....ಅಂದಮೇಲೆ ಇದೂ ನನ್ನೊಡೆಯನ ಇಚ್ಛೆಯೇ ಇರಬೇಕೆಂದು ಅನಿಸುತ್ತಿದೆ..ಅದನ್ನು ಶಿರಸಾ ವಹಿಸಿ ಪಾಲಿಸಲು ಪ್ರಯತ್ನ ಪಡುತ್ತಿದ್ದೇನೆ!

 ಒಂದಂತೂ ಬೇಸರವಿದೆ..ಈಗ ನಾನು ಕಲಿಸುತ್ತಿರುವ ಮಹಿಳೆಯರು ಇನ್ನೂ ಚಿತ್ರ ಬಿಡಿಸಲು ಕಲಿತಿಲ್ಲ..ಆಗಲೇ ಆಕಾಶಕ್ಕೆ ಏಣಿ ಇಡುತ್ತಿದ್ದಾರೆ.....ನೀವಿದ್ದಿರಲ್ಲ  ಅಂತ ಅನ್ನುತ್ತಿದ್ದಾರೆ..ಒಟ್ಟಾರೆ ನನ್ನ ಕೈ ಚಳಕ..ಅವರ ಹೆಸರು ಚಿತ್ರದಲ್ಲಿ..ಇರಲಿ ಇದೂ ನಿನ್ನ ಲೀಲೆಯ ಭಾಗ ಅಲ್ಲವೇ ಗೋಪಾಲಾ!!!
 ಅದೇ ಈ ಐದನೇ ತರಗತಿಯ ಹುಡುಗ ನಿಜವಾದ ಕಲಾಸಕ್ತ...ಪೆನ್ಸಿಲ್ ಕೆಲಸ ಮೊದಲು ಅಂತ ಹೇಳಿದಕ್ಕೆ ಒಪ್ಪಿ ಅದನೇ ಮಾಡುತ್ತಿದ್ದಾನೆ..ಇಂತವರಿಗೆ ಕಲಿಸಲು ಬಹಳ ಖುಶಿಯಾಗುತ್ತೆ...ಹೆಸರು ಶ್ರೀಧರ್ ಶೆಣೈ...

ಮತ್ತೇನಿದೆ ಈ ಜಗದಲಿ, ನಿನ್ನ ಆ ಚೆಲುವಾದ ಕಣ್ಗಳ ಹೊರತು!ಮತ್ತೇನಿದೆ ಈ ಜಗದಲಿ, ನಿನ್ನ 
ಆ ಚೆಲುವಾದ  ಕಣ್ಗಳ ಹೊರತು!
ಬೆಳಕು ಬೆಳಗುವುದು, ನೀ ಕಣ್ತೆರೆಯಲು!
ಕತ್ತಲು ಕವಿಯುವುದು, ನೀ ಕಣ್ಮುಚ್ಚಲು!

ನಿನ್ನೀ ಕಣ್ಣೆವೆಗಳನ್ನೇ ಆಶ್ರಯಿಸಿವೆ
ನನ್ನೀ ಜೀವನ್ಮರಣ ಅನ್ನುವೆ

ಮತ್ತೇನಿದೆ ಈ ಜಗದಲಿ, ನಿನ್ನ 
ಆ ಚೆಲುವಾದ  ಕಣ್ಗಳ ಹೊರತು||

 ಕಣ್ಣೆವೆಗಳ ಹಾದಿಯಲಿ ತೋರಣವಿರಲಿ
ನಗೆಮೊಗ ತೋರುವ ವಸಂತನಿರಲಿ!
ಕಾಣುತಿರುವೆ ನಿನ್ನೀ ಕಣ್ಣೊಳು,
ಕನಸುಗಳ ನಗರಿಯ ನೆಲೆಯನು!
ಬೆಳಕು ಬೆಳಗುವುದು, ನೀ ಕಣ್ತೆರೆಯಲು!
ಕತ್ತಲು ಕವಿಯುವುದು, ನೀ ಕಣ್ಮುಚ್ಚಲು!

ನಿನ್ನೀ ಕಣ್ಣೆವೆಗಳನ್ನೇ ಆಶ್ರಯಿಸಿವೆ
ನನ್ನೀ ಜೀವನ್ಮರಣ ಅನ್ನುವೆ

ಮತ್ತೇನಿದೆ ಈ ಜಗದಲಿ, ನಿನ್ನ 
ಆ ಚೆಲುವಾದ  ಕಣ್ಗಳ ಹೊರತು||


ತೋರುತಿವೆ  ನಿನ್ನೀ ಕಣ್ಗಳು,
ಮುಂಬರುವ ದಿನಗಳ ಛಾಯೆಯನು!
ಬರೆದಿದೆ  ಈ ಪ್ರೇಮದ ಕಾಡಿಗೆಯು,
ನನ್ನ  ಮುಂದಿನ ದಿನಗಳ ನಡೆಯನು!
ಬೆಳಕು ಬೆಳಗುವುದು, ನೀ ಕಣ್ತೆರೆಯಲು!
ಕತ್ತಲು ಕವಿಯುವುದು, ನೀ ಕಣ್ಮುಚ್ಚಲು!

ನಿನ್ನೀ ಕಣ್ಣೆವೆಗಳನ್ನೇ ಆಶ್ರಯಿಸಿವೆ
ನನ್ನೀ ಜೀವನ್ಮರಣ ಅನ್ನುವೆ

ಮತ್ತೇನಿದೆ ಈ ಜಗದಲಿ, ನಿನ್ನ 
ಆ ಚೆಲುವಾದ  ಕಣ್ಗಳ ಹೊರತು||

ಹೇಗೋ, ಏನೋ ಇವುಗಳ ಛಾಯೆಯು 
ನನ್ನೆದೆಯಿಂದ ಇನ್ನೆಂದೂ ದೂರವಾಗಲಾರವು!
ಇವುಗಳ ಹೊರತು  ನಾನೆನನ್ನು ಕಾಣಲಾರೆ
ಮತ್ತೇನನ್ನು ನೋಡಲು ಬಯಸಲಾರೆ!
ಬೆಳಕು ಬೆಳಗುವುದು, ನೀ ಕಣ್ತೆರೆಯಲು!
ಕತ್ತಲು ಕವಿಯುವುದು, ನೀ ಕಣ್ಮುಚ್ಚಲು!

ನಿನ್ನೀ ಕಣ್ಣೆವೆಗಳನ್ನೇ ಆಶ್ರಯಿಸಿವೆ
ನನ್ನೀ ಜೀವನ್ಮರಣ ಅನ್ನುವೆ

ಮತ್ತೇನಿದೆ ಈ ಜಗದಲಿ, ನಿನ್ನ 
ಆ ಚೆಲುವಾದ  ಕಣ್ಗಳ ಹೊರತು||

ಭಾವಾನುವಾದ- ಚಿರಾಗ್ ಚಿತ್ರದ ಮೊಹಮ್ಮದ್ ರಫಿ ಮತ್ತು ಲತಾ ಮಂಗೇಶ್ಕರ ಹಾಡಿದ ತೆರಿ ಆಂಖೋಕೆ ಸಿವಾ ಇಸ್ ದುನಿಯಾ ಮೈ ರಖ್ಖಾ ಕ್ಯಾ ಹೈ....

09 July, 2012

ಹಂಬಲಿಸುತಿದೆ ನಿನ್ನ ದರುಶನಕ್ಕಾಗಿ ಎನ್ನಾತ್ಮವು ಹಗಲೂ ರಾತ್ರಿ!


ಹಂಬಲಿಸುತಿದೆ ನಿನ್ನ ದರುಶನಕ್ಕಾಗಿ
ಎನ್ನಾತ್ಮವು ಹಗಲೂ ರಾತ್ರಿ!  

ಹುಣ್ಣಿಮೆಯ ಚಂದ್ರ ಮೂಡುವುದನ್ನೇ
ಕಾಯುವುದು  ಚಕೋರ ಪಕ್ಷಿಯು!
ಅಂತೆಯೇ, ಸದಾ ನಿನ್ನಾಗಮನವನ್ನೇ
ಕಾಯುವುದು ಎನ್ನ ಮನವು!ದೀಪಾವಳಿಯ ಸಮಯದಲಿ
ಚಿಗುರುವ ದೇವದಾರು ಗಿಡಗಳು
ಪಂಢರಾಪುರಕೆ ಬರುವ ಯಾತ್ರಿಕರ 
ಆಗಮನವ ಕಾಯುವ ಹಾಗೆ!ಹಸಿವೆಯಿಂದ ಬಳಲಿದ ಮರಿ
ಅವ್ವನ ಬರುವಿಕೆಗಾಗಿ 
ಚಡಪಡಿಸುವುದು. ಎನ್ನಾತ್ಮವೂ
ಅಂತೆಯೇ, ಎನ್ನೊಡೆಯನೇ!

ನಿನ್ನ ಶ್ರೀಮುಖದ ದರುಶನಕಾಗಿ
ಹಂಬಲಿಸಿದೆನ್ನುವೆನು ತುಕಾರಾಮನು!
ಇನ್ನಾದರೂ ಕೃಪೆ 
ತೋರಯ್ಯಾ ಎನ್ನೊಡೆಯ!


ನನ್ನ ಮೆಚ್ಚಿನ ಅಭಂಗದ ಭಾವನುವಾದದ ಪ್ರಯತ್ನ!
  
bhetilagi  jeeva  lagalise aas
pahe ratrandiwas wat tuzi

purnimecha chandrama chakora jeevan
taise maze man wat pahe

diwalichya mula leki aasawali
pahatse watuli pandharichi

bhukeliya bal ati shok kari
wat pahe pari maulichi

tuka mahne maz laglise bhuk
dhauni shrimukh dawi dewa 


 


08 July, 2012

ಇಲ್ಲಿದೆ, ಶೀತಕ್ಕನನ್ನು ಓಡಿಸಲು ಸುಲಭದ ಉಪಾಯ!


        


        ಮಳೆಗಾಲ ಆರಂಭವಾಗಿ ತಿಂಗಳಾಗುತ್ತಾ ಬಂತು. ಶೀತಕ್ಕ ತನ್ನ ಸಂಬಂಧಿಗಳೊಡನೆ ನೆಂಟಳಾಗಿ ಬರಲು ಹವಣಿಸುತ್ತಿದ್ದಾಳೆ....ಕೆಲವರ ಮನೆಯಲ್ಲಂತೂ  ಈಗಾಗಲೇ ಡೇರೆ ಹಾಕಿರಬಹುದು.  ಹುಂ, ವೈದ್ಯರಿಗೂ, ಮೆಡಿಕಲ್ ಶಾಪಿನವರಿಗೂ ಇದು ಸುಗ್ಗಿಯ ಸಮಯ. ಈ ಮಾತ್ರೆ ತಾಗಿಲ್ವಾ... ಇನ್ನೊಂದು ಹೊಸತು ಬಂದಿದೆ..ಅದರಿಂದ ಖಂಡಿತ ಗುಣವಾಗುತ್ತೆ..ಈ ಸಿರಪ್, ಆ ಸಿರಪ್ ಅಂತಾ ಹೆಚ್ಚಿನವರು ಬಕ್ರಾಗಳಾಗುತ್ತಾರೆ. ಇಲ್ ನೋಡಿ, ನಾನೊಂದು ಗುಟ್ಟಿನ ವಿಷಯ ಹೇಳುತ್ತೇನೆ..ಯಾವ ಡಾಕ್ಟರಿಗೂ ನಾನು ಹೇಳ್ದೆಂತ   ಹೇಳ್ಬೇಡಿ..ಈಗಾಗಲೇ ನನ್ನ ಮೇಲೆ ವಿನಾ ಶಸ್ತ್ರ ಯುದ್ಧ ಘೋಷಿಸಿದ್ದಾರೆ..ನಾನು ಅವರ ಗಿರಾಕಿಗಳನ್ನು ಡೈವರ್ಟ್ ಮಾಡ್ತೇನಂತ..ಹಾಗಾಗಿ  ನಾನು ಸೂಚಿಸಿದ ಮದ್ದು ತೆಗೆದುಕೊಂಡು ಬೇಗ ಶೀತಕ್ಕನನ್ನು ಓಡಿಸಿದೇನಂತ ಯಾರಿಗೂ ಹೇಳ್ಬೇಡಿ ದಯವಿಟ್ಟು. 
  ನಿಮಗೆಲ್ಲ ಗೊತ್ತಿದ್ದ ಹಾಗೆ ಮೊದಲು ಬರೋದೇ ಶೀತಕ್ಕ..ಅವಳನ್ನು ನೀವು ಪಾಪ ಇರಲಿ ಅಂತ ಬಿಟ್ರೆ ನಿಧಾನವಾಗಿ ಎಲ್ಲ ಸಂಬಂಧಿಕರನ್ನು ಅವಳೇ ಕರೆದುಕೊಂಡು ಬರ್ತಾಳೆ..ನಿಮ್ಮ ಮನೆಯಲ್ಲಿ ಎಲ್ಲರನ್ನೂ ದೆವ್ವ ಹಿಡ್ಕೊಂಡ ಹಾಗೆ ಹಿಡ್ದು ಕಾಡಿಸ್ತಾಳೆ..ಒಟ್ಟಾರೆ ನಿಮ್ಮ ವಾಲೆಟಿನ ಭಾರ ಕಡಿಮೆ ಮಾಡಿಯೇ ತನ್ನ ಡೇರೆ ಕಳಚುತ್ತಾಳೆ.  ನನ್ನದು ಬಿಟ್ಟಿ ಸಲಹೆ ಅಂತ ಕೇರ್ ಲೆಸ್ ಮಾಡ್ಬೇಡಿ...ಟ್ರ‍ೈ ಮಾಡಿ..ನಾನಂತು ಚಿಕ್ಕವಳಿಂದಾಗ ಮಾಡ್ಕೊಂಡು ಬಂದಿದ್ದೇನೆ..ನನ್ನ ಮಕ್ಕಳಿಗೂ ಅದನ್ನೇ ಕೊಡ್ತಾ ಇದ್ದೇನೆ..ಯಾಕೆಂದರೆ ನನಗೂ ಈ ಎಮ್ ಬಿ ಬಿಎಸ್ ವೈದ್ಯರಿಗೂ ಎಣ್ಣೆ ಸೀಗೇಕಾಯಿ  ಸಂಬಂಧ..ನನಗೆ ವೈದ್ಯಳಾಗಬೇಕಂತ ಆಸೆಯಿತ್ತು..ವಿಧಿ ಬಿಡ್ಲಿಲ್ಲ...ಹಾಗಾಗಿ ನಂಗೆ ವೈದ್ಯರೆಲ್ಲ ಮೇಲೆ ಅದೇನೋ ಅಸೂಯೆ... ಹೋಗ್ಲಿ ಬಿಡಿ ನಿಮಗೆ ಅದನೆಲ್ಲ ಕಟ್ಟಿಕೊಂಡು ಏನಾಗ್ಬೇಕು...ನೇರವಾಗಿ ಮದ್ದು ತಯಾರಿಸುವುದು ಹೇಗಂತ ಬರೀತೀನಿ..
   ಬಹಳ ಸಿಂಪಲ್. ನಮಗೆ ಬೇಕಾದುದು,
೧. ಒಂದೆರಡು ನೀರುಳ್ಳಿ
೨. ಶುಂಠಿ
೩. ೩ಟೀ ಸ್ಪೂನ್‍ಗಳಷ್ಟು ಹಳದಿ ಹುಡಿ (ಅರಸಿನ ಹುಡಿ)
೪. ಮಜ್ಜಿಗೆ ಹುಲ್ಲು
೫. ಕರಂಬಲ್ (ಸ್ಟಾರ್ ಫ್ರುಟ್) ನಾಲ್ಕೈದು
೬. ಕಲ್ಲು ಸಕ್ಕರೆ ರುಚಿಗೆ ತಕ್ಕಷ್ಟು.
೭. ಕಪ್ಪು ಮೆಣಸು ೧ ಟೀ ಸ್ಪೂನ್
೭. ಕೊತ್ತಂಬರಿ ಹುಡಿ ೨,೩ ಟೀ ಸ್ಪೂನ್
೮. ದೊಡ್ಡ ಪತ್ರೆ ಎಲೆಗಳು ೧೦
೯. ತುಳಸಿ ಎಲೆಗಳು


        

 ಇವೆಲ್ಲವನ್ನೂ ದೊಡ್ಡ ಪಾತ್ರೆಯಲ್ಲಿ ಹಾಕಿ. ೫,೬ ಗ್ಲಾಸುಗಳಷ್ಟು ನೀರು ಹಾಕಿ. ಚೆನ್ನಾಗಿ ಕುದಿಸಿ..ಕುದಿಯುತ್ತಿರುವಾಗ ಇದರ ಪರಿಮಳವೆಲ್ಲಾ ಮನೆಯಲ್ಲಿ ಹರಡಿಕೊಂಡು ಎಲ್ಲರೂ ಅಡಿಗೆ ಮನೆಗೆ ಬರುವಂತೆ ಮಾಡುತ್ತದೆ...ಹಾಂ ಮರತೇ ಬಿಟ್ಟಿದ್ದೆ.. ಬೇರು ಸಮೇತ ಒಂದಿಷ್ಟು ಗರಿಕೆ ಹುಲ್ಲನ್ನು ಹಾಕಿ.....ಸಣ್ಣದಾಗಿ ಕಾಡುವ ಜ್ವರ ನಿಲ್ಲಿಸುತ್ತದೆ..ಮಕ್ಕಳಿಗೆ ಜ್ವರ ಬಂದಾಗೆಲ್ಲ ನಾನು ಗರಿಕೆ ಹುಲ್ಲಿನ ಕಷಾಯನೇ ಕೊಡೋದು.  ಈ ಕಷಾಯವನ್ನು ಒಂದು ಕಾಲು ಗ್ಲಾಸ್ ದಿನಕ್ಕೆ ೫ ಸಲ ತೆಗೆದುಕೊಂಡ್ರೆ  ಮೂರು ದಿನದೊಳಗೆ ನಿಮ್ಮ ಜ್ವರ, ಶೀತ, ಕೆಮ್ಮು ಎಲ್ಲಾ ಹಿತ್ತಲು ಬಾಗಿಲ್ನಿಂದ ಓಡದಿದ್ರೆ ಕೇಳಿ!!! ಅಂದ ಹಾಗೆ ಈ ಕಷಾಯ ಸೇವನೆ ಉಪಯೋಗಕ್ಕೆ ಬರೋದು ನೀವು ಶೀತಕ್ಕ ಬರುವ ಸೂಚನೆ ಕೊಟ್ಟ ಕೂಡಲೆ ಮಾಡಿದ್ರೆ ಮಾತ್ರ..ಝಂಡಾ ಊರಿದ ಶೀತಕ್ಕನನ್ನು ಈ ಕಷಾಯದಿಂದ ಓಡಿಸಲಿಕ್ಕೆ ಸ್ವಲ್ಪ ಕಷ್ಟ ಸಾಧ್ಯ!   ಈ ಮದ್ದಿನ ಸೇವನೆಯ ಜೊತೆಗೆ ಶೀತಕ್ಕನನ್ನು ಬೀಳ್ಕೊಡುವ ತನಕ ದಿನಕ್ಕೆ ೭,೮ ಸಲ ಬಿಸಿ ನೀರಿನ ಸೇವನೆ ಮಾಡಬೇಕು..ಜೊತೆಗೆ ಕರಿದ ಪದಾರ್ಥಗಳ, ಅತೀ ತಣ್ಣನೆಯ ಪದಾರ್ಥಗಳ ಸೇವನೆ ವ್ಯರ್ಜ!

 ಮತ್ತೆ  ಮೇಲೆ ಸೂಚಿಸಿದ ಇನ್‍ಗ್ರಿಯೆಂಟ್ಸ್ ಎಲ್ಲಾ ಅದೇ ಅಳತೆಯಲ್ಲಿ ಹಾಕ್ಬೇಕಂತ ಇಲ್ಲ... ಹಾಗೂ ಎಲ್ಲವನ್ನೂ ಹಾಕಬೇಕಂತಿಲ್ಲ... ಮಕ್ಕಳಿಗೆ ಕೊಡುವಾಗ ಕಲ್ಲು ಸಕ್ಕರೆ ಜಾಸ್ತಿಯಿರಲಿ..ಚಪ್ಪರಿಸಿ ಕುಡಿಯುತ್ತಾರೆ.  ನೀರುಳ್ಳಿ, ಮಜ್ಜಿಗೆ ಹುಲ್ಲು ಮತ್ತು ಶುಂಠಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಸಣ್ಣ ಮಕ್ಕಳಿಗೆ ಎದೆಯಲ್ಲಿ ಕಫಗಟ್ಟಿದರೆ ದೊಡ್ಡ ಪತ್ರೆ ಎಲೆಯನ್ನು ಒಂಚೂರು ಕಾವಲಿಯಲ್ಲಿ ಬಿಸಿ ಮಾಡಿ ಎದೆಗೆ ಪಕ್ಕೆಗಳಿಗೆ ತಿಕ್ಕಿ...೨ ವರ್ಷದವನಿರುವಾಗ ನನ್ನ ಮಗ ಕಫ ಬಾದೆಯಿಂದ ಬಳಲುತಿದ್ದ...ವೈದ್ಯರು ಆಸ್ಪತ್ರೆಗೆ ಸೇರಿಸಲು ಸೂಚಿಸಿದರು. ನಾನು ಒಪ್ಪಲಿಲ್ಲ..ನನ ಅಮ್ಮನ ಸೂಚನೆಯಂತೆ ಈ ಕಷಾಯ ಮತ್ತು ದೊಡ್ಡ ಪತ್ರೆ ಎಲೆಯ ಶಾಖ  ಕೊಟ್ಟೆ... ೨ ದಿನದ ನಂತರ ವೈದ್ಯರಿಗೆ ಅಚ್ಚರಿ...ಕಫವೆಲ್ಲ ಹೇಗೆ ಮಾಯವಾಯ್ತು ಅಂತ.

05 July, 2012

ಪೂರೈಸುವೆಯಾ, ಶೈಲೇಶ!


ಅಂತರಂಗದ ತುಂಬಾ ನೀನೇ
ವ್ಯಾಪಿಸಿದೆಯಲ್ಲೋ ನನ್ನೀಶ!

ನಿನ್ನ ಪಾಡಿ ನಲಿಯುವ ಸುಖವ
ಮತ್ಯಾವುದರಲ್ಲೂ ನಾ ಕಾಣೆ, ಸರ್ವೇಶ!

ನಿನ್ನೊಡನೆ ಅಷ್ಟಿಷ್ಟು, ಇಷ್ಟಿಷ್ಟು 
ಆಡಿದರೂ  ಉಳಿಯುವುದಿಷ್ಟೋ ಶೇಷ!

ತಪ್ಪು ಒಪ್ಪುಗಳ ಹಂಗಿಲ್ಲೆನಗೆ
ಪಾಲಿಸುತ್ತಿರುವೆ ನಿನ್ನದೇ ಆದೇಶ!

ಆ ದಿವ್ಯ ಚರಣ ಸ್ಪರ್ಶಿಸುವಾಸೆ
ಪೂರೈಸುವೆಯಾ, ಶೈಲೇಶ!

04 July, 2012

ಗೆಳತಿ, ಕುಹಕವಾಡದಿರು!


ಗೆಳತಿ, ಕುಹಕವಾಡದಿರು!
ಒಂಟಿ ಎಂದು ಅಣಕಿಸದಿರು!
ನಿನಗೇನು ಗೊತ್ತು
ಅಂತರಂಗದ ಬಲದ ಮರ್ಮ? 
  

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...