ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 May, 2012

ದೀಪಾ ಮತ್ತವಳ ಪ್ರೀತಿ!-೧



            ಇದು ಎಷ್ಟನೆಯ ಬಾರಿ ಮಾಡಿದ ಯತ್ನವಂತಲೂ ನೆನಪಿಲ್ಲ...ಆದರೆ ಈ ಬಾರಿಯ ಯತ್ನ ಹಾಳಾಗಲು ಬಿಡುವುದಿಲ್ಲ..ಧೈರ್ಯದಿಂದ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೇನೆ. ಒಂದಂತೂ ನಿಜ, ಈ ಸಲ ಒಂದು ಡಿಫರೆಂಟ್ ಆಂಗಲಿನಲ್ಲಿ ಊಹಿಸಿ, ಕತೆಯನ್ನು ನಿರೂಪಿಸಲು ಯತ್ನಿಸಿದ್ದೇನೆ..ನನ್ನ, ನನ್ನ  ಸ್ನೇಹಿತರ, ಹತ್ತಿರದ ನೆಂಟರ ಅನುಭವಗಳನ್ನೂ ಉಪಯೋಗಿಸಿದ್ದೇನೆ.  ದಯವಿಟ್ಟು ಯಾರೂ ಇದನ್ನು ತಮ್ಮ ತಮ್ಮ ನಿಜಜೀವನದೊಂದಿಗೆ ಹೋಲಿಸಲು ನೋಡಬೇಡಿ...:-)))




         ಒಮ್ಮೆಲೇ ಬೀಸಿದ ಗಾಳಿಗೆ ಕಾಗದಗಳೆಲ್ಲಾ ಚದುರಿ ಹೋಗಿ ದೀಪಾಳನ್ನು ಎಚ್ಚರಿಸಿದಂತಾಯಿತು. ಬೆಳಿಗ್ಗೆ ೯ಕ್ಕೆ ಹೋದ ವಿದ್ಯುತ್ ಬಂದು ಫ್ಯಾನು ತಿರುಗಿದಾಗಲೇ ಅವಳು ವಾಸ್ತವಕ್ಕೆ ಹಿಂದಿರುಗಿದಳು. ಕಾಗದಗಳನೆಲ್ಲಾ ಫೈಲಿಗೆ ಹಾಕಿದಳು. ಉದಯೋನ್ಮುಖ ಲೇಖಕಿ ಎಂದು ತನ್ನ ಬಗ್ಗೆ ಬರೆದ, ೨ ವಾರಗಳ ಹಿಂದೆ  ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ನೋಡಲು ಫೈಲು ತೆಗೆದಿದ್ದಳು. ಅದನ್ನು ನೋಡಿಯಾದ ಮೇಲೆ, ಈ ೩ ವರುಷಗಳಿಂದ ತಾನು ಬರೆದ ಕತೆ, ಕವನಗಳತ್ತಲೂ ಗಮನ ಹೋಗಿ, ಅದನ್ನು ಹರಡಿಕೊಂಡು ಕುಳಿತ್ತಿದ್ದಳು.  ವಾಸ್ತವಕ್ಕೆ ಬಂದ ಅವಳ ಗಮನ ಅಡಿಗೆ ಕೋಣೆಯತ್ತ, ಇನ್ನೂ ಒಪ್ಪ ಮಾಡದ ಹಾಸಿಗೆಗಳತ್ತ  ಹರಿಯಿತು. ನಿಟ್ಟುಸಿರು ಬಿಡುತ್ತಲೇ ಸೋಫಾದ ಮೇಲಿಂದ ಎದ್ದು ಅಡಿಗೆ ಮನೆಗೆ ಹೋಗಬೇಕಿಂದಿದ್ದವಳು ಆ ಕಡೆ ಹೋಗದೆ ಮಲಗುವ ಕೋಣೆಯಲ್ಲಿರುವ ನಿಲುವುಗನ್ನಡಿಯ ಎದುರು ನಿಂತಳು. ಮುಖವನ್ನು ಕನ್ನಡಿಯ ಸಮೀಪಕ್ಕೆ ತಂದಳು..ಅಲ್ಲಲ್ಲಿ ಇಣುಕುತ್ತಿದ್ದ ಬಿಳಿ ಕೂದಲುಗಳು ಅವಳಿಗೆ ಅವಳ ವಯಸ್ಸನ್ನು ಮತ್ತೆ ನೆನಪಿಸಿದವು. ಹುಂ, ತಲೆಗೆ ಮದರಂಗಿ ಹಾಕದೇ ತುಂಬಾ ದಿನವಾಯ್ತು.... ನಾಳೆ ನೆನಪಿನಿಂದ ಹಾಕಬೇಕು ಅಂದುಕೊಂಡಳು. ಕಣ್ಣಿಗೇರಿಸಿದ ಕನ್ನಡಕವು ಕನ್ನಡಿಯಲ್ಲಿನ ಮುಖವನ್ನು ಮಸುಕು ಮಾಡಿತ್ತು. ಸಮೀಪದೃಷ್ಟಿ ದೋಷಕ್ಕಾಗಿ ಧರಿಸುವ ಕನ್ನಡಕದಿಂದ ತನಗೀಗ ಸಮೀಪವಿರುವ ವಸ್ತುಗಳು ಸಮರ್ಪಕವಾಗಿ ಕಾಣುತಿಲ್ವೇ...ಬಾಹ್ಯ ನೋಟಕ್ಕೆ ವಯಸ್ಸಿನ ಪರಿಣಾಮ ಅಷ್ಟಾಗಿ ಗಮನಕ್ಕೆ ಬರುವುದಿಲ್ಲವಾದರೂ ವಯಸ್ಸಿನ ಪರಿಣಾಮ ಅಂಗಾಗಗಳ ಮೇಲೆ ಆಗದಿರುತ್ತದೆಯೇ? ಅಲ್ಲದೆ ೨೦ವರ್ಷಗಳ ಸತತ ದುಡಿತದಿಂದಾಗಿ ತನಗೆ ಈಗ ಕೈ ನಡುಗುವುದೂ ಪ್ರಾರಂಭವಾಗಿದೆ. ಈ ಎಲ್ಲಾ ಹುಳುಕನ್ನು ತಾನು ಅವನಿಂದ ಮುಚ್ಚಲಾದಿತೇ! ಕನ್ನಡಕವನ್ನು ತೆಗೆದು ಮತ್ತೊಮ್ಮೆ ಮುಖದ ಮೇಲೆ ದೃಷ್ಟಿ ಹರಿಸಿದಳು. ಹುಂ, ಮುಖವೇನು ಅಷ್ಟು ಬದಲಾಗಿಲ್ಲ...ಹಾಗಾಗಿಯೇ ತನ್ನ ಶಾಲಾ ಕಾಲೇಜು ಮಿತ್ರರು ತನ್ನನ್ನು ಸುಲಭವಾಗಿ ಗುರುತಿಸುವರು. ಆದರೂ ಉಳಿದ ಹುಳುಕುಗಳು..ಅವನ್ನೇನು ಮುಚ್ಚಲಾಗುವುದಿಲ್ಲವಲ್ಲ...ತಲೆ ಕೊಡವಿದಳು..ತಾನು ಯಾರು, ಏನು ಎಂದು ಮರೆತೇ ಬಿಟ್ಟು ¸ÀªÀĸÉåAiÉÄà ಅಲ್ಲದ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡಿರುವುದನ್ನು ನೋಡಿ ಆ ಸ್ಥಿತಿಯಲ್ಲೂ ನಗು ಬಂತು ದೀಪಾಳಿಗೆ. ರಾಶಿ ಬಿದ್ದಿವೆ ಕೆಲಸಗಳೆಲ್ಲಾ...ನೋಟ ಮೊಬೈಲ್‍ನತ್ತ ಹೋಯಿತು..ಹುಂ ಏನೂ ಸಂದೇಶವಿರಲಿಲ್ಲ. ಗಂಡ ಬರುವಷ್ಟರಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸದಿದ್ದರೆ ಸುಮ್ಮನೆ ಸಹಸ್ರನಾಮಾರ್ಚನೆ ಕೇಳುವ ಶಿಕ್ಷೆ ಅನುಭವಿಸಬೇಕಾದಿತು ಎಂದು ಓಟದ ನಡಿಗೆಯಲ್ಲಿ ಅಡುಗೆ ಮನೆಗೆ ನುಗ್ಗಿದಳು. ಬೆಳಿಗ್ಗೆ ಕಾಪಿ ಕುಡಿದ ಗ್ಲಾಸು, ತಟ್ಟೆಗಳೆಲ್ಲಾ ಒಣಗಿ ಅವಳನ್ನು ಅಣಕಿಸುತ್ತಿದ್ದವು. ಹೀಗೆಲ್ಲಾ ಒಂದು ದಿನವೂ ಮಾಡಿದ್ದಿಲ್ಲ...ಪ್ರತಿಯೊಂದು ಕೆಲಸವೂ ಒಪ್ಪವಾಗಿ ಮಾಡಿ ಅಭ್ಯಾಸವಿದ್ದ ಆಕೆಗೆ ತನ್ನ ಈ ನಡವಳಿಕೆ ಬೇಸರ ತಂದಿತು. ೪೦ರ ಆಸುಪಾಸಿನಲ್ಲಿರುವ ತಾನು ಅದೇ ತಾನೆ ೧೬ ತುಂಬಿರುವ ಹಾಗೆ ಆಡುತ್ತೇನಲ್ಲಾ..ಅಬ್ಬಾ ಏನೂ ಮಾಯಾ ಜಾಲವಿದು...ಈ ಪ್ರೀತಿ, ಪ್ರೇಮ..ಇದರಲ್ಲಿ ಬಿದ್ದವರೆಲ್ಲಾ ಹೀಗೆ ಆಡುವರೇನು? ಅಲ್ಲ ಹದಿಹರೆಯದವರು ಹಾಗೆ ಆಡಿದರೆ ಅದರಲ್ಲೇನು ತಪ್ಪಿಲ್ಲ..ಆದರೆ ತಾನು? ಅದರಲ್ಲೂ ಇಬ್ಬರು ಹರೆಯದ ಹೆಣ್ಣು ಮಕ್ಕಳ ತಾಯಿಯಾಗಿ ಲವ್ವಲ್ಲಿ ಬಿದ್ದಿದ್ದೇನೆ..ಇದೇನು ಪರಮಾತ್ಮನ ಹೊಸ ಆಟ..ಇನ್ನು ಯಾವ ಯಾವ ಪರೀಕ್ಷೆಯನ್ನು ಎದುರಿಸಬೇಕೋ..ಆಲೋಚಿಸಿ ತಲೆ ಚಿಟ್ಟು ಹಿಡಿದಂತಾಯಿತು. ಸರಿ, ಬಂದದನ್ನು ಎದುರಿಸಬೇಕು..ಹೊರತು ಬೇರೆ ದಾರಿಯಿಲ್ಲ ಎಂದೆಣಿಸಿ ಮೊದಲು ತನ್ನ ನಿತ್ಯ ಕರ್ಮ ಮುಗಿಸಿ, ಮತ್ತೆ ಕುಳಿತು ಸಾವಕಾಶವಾಗಿ ಸಮಸ್ಯೆಯನ್ನು ಪರಿಶೀಲಿಸುವ ನಿರ್ಧಾರ ಮಾಡಿ, ಚಟಪಟನೆ ಅಡಿಗೆ ಕಾರ್ಯ ಮುಗಿಸಿ, ಬಟ್ಟೆಯತ್ತ ಗಮನ ಹರಿಸಿದಳು ದೀಪ. ಒಗೆಯುತ್ತಿದ್ದ ಅವಳಿಗೆ ಅವಳ ಹಿಂದಿನಿಂದ ಬಂದ ಕೈಯೊಂದು  ತನ್ನ ಸೊಂಟ ಬಳಸಿ, ಕಿವಿಯತ್ತ ಏನೋ ಉಸುರಿದ ಹಾಗೆ ಅನಿಸಿತು. ಮೈಯಲ್ಲೆಲ್ಲಾ ವಿದ್ಯುತ್ ಸಂಚಾರ! ಈ ಅನುಭವವನ್ನು ಮೆಲುಕು ಹಾಕುತ್ತಿರುವಾಗಲೇ ಜಂಗಮವಾಣಿ ಮೊಳಗಿತು..ಅತ್ತ ಕಣ್ಣು ಹರಿಸಿದವಳ ಎದೆ ಬಡಿತದ ತಾಳ ತಪ್ಪಿತು...ಹಲೋ ಎಂದುಸುರಿದವಳ ಕಿವಿಯಲ್ಲಿ ಇನಿಯನ ನಮಸ್ಕಾರ...ಅದೇ ಸಾಮಾನ್ಯ ಸಂಬೋಧನೆ, ಒಂದಿಷ್ಟು ನಿರಾಸೆಯಾದರೂ ಮಾತು ಮುಂದುವರಿಸಲು ಅದೇನೋ ಹಿಂಜರಿಕೆ. ಅತ್ತ ಅವನಿಗಾದರೂ ಅದೇ ರೀತಿಯ ತಳಮಳ...ಕೊನೆಗೂ ಅರ್ಥವಿಲ್ಲದ ಏನೋ ಮಾತಾಡಿ ಇಬ್ಬರೂ ಫೋನಿಟ್ಟರು. ಇನ್ನೂ ಏನೇನೋ ಆಡುವ, ಕೇಳುವ ಆಸೆ ಇಬ್ಬರಲ್ಲೂ ಇತ್ತು..ಆದರೆ ತಮ್ಮ ಸುತ್ತಲಿರುವ ಗೋಡೆಗಳ, ಕಿವಿಗಳ ಭಯ. ಹೇಗೋ ಒಗೆಯುವ ಕೆಲಸ ಮಾಡಿ ಬಂದವಳನ್ನು ಮನೆಯ ಕಸ ಕರೆಯುತ್ತಿತ್ತು. ೨೨ ವರುಷಗಳಿಂದ ರೂಢಿಯಾಗಿದ್ದ ಕೆಲಸ, ಕೈ ತನ್ನ ಕೆಲಸ ಮಾಡುತಿತ್ತು..ಆದರೆ ಮನಸ್ಸು ಮಾತ್ರ ಅದೇನೋ ಲೆಕ್ಕಾಚಾರ ಹಾಕುತಿತ್ತು. ಎಲ್ಲಾ ಕೆಲಸ ಮುಗಿದಾಗ ಗಂಟೆ ೧೨.೩೦ ಕಳೆಯಿತು. ಮೈಯೆಲ್ಲಾ ಬೆವರಿನಿಂದ ಒದ್ದೆಯಾಗಿತ್ತು...ಸ್ನಾನ ಮಾಡಲು ಹೊರಟ ಅವಳ ಕಣ್ಣು ಅಪ್ರಯತ್ನವಾಗಿ ಬೆಳಗಿದ ಮೊಬೈಲ್‍ನತ್ತ ಹೋಯಿತು. ಅವನ ಸಂದೇಶ...ಪ್ರೇಮ ಸಂದೇಶ! ದೇಹ ಬಿಸಿಯೇರಿತು, ಕಪೋಲ ರಂಗಾಯಿತು..ಪೈಪೋಟಿಯಿಂದಲೇ ತಾನೂ ಅಂತಹುದೇ ಸಂದೇಶ ಕಳುಹಿಸಿ, ಉತ್ತರಕ್ಕಾಗಿ ಕಾದು ಕುಳಿತಳು. ಅವಳಿಣಿಕೆ ತಪ್ಪಲಿಲ್ಲ...ನಿರೀಕ್ಷಿಸಿದ ಉತ್ತರ ಬಂದು ಅವಳೆದೆಯಲ್ಲಿ ಉತ್ಸವ! ಈ ಪರಿಯ ಅನುಭವ, ನೆತ್ತಿಯಿಂದ ಅಂಗುಷ್ಟದವರೆಗೂ ಹರಿಯುತ್ತಿರುವ ಝೇಂಕಾರ, ಎದೆಯ ತಂತಿಯ ಮೀಟಿದ ಸಂದೇಶಗಳು  ಅವಳನ್ನು ಸ್ವರ್ಗದ ಬಾಗಿಲಲ್ಲೇ ನಿಲ್ಲಿಸಿದ್ದವು. ಈ ಸುಖದ ಮುಂದೆ ಮುಂಬರುವ ಸಮಸ್ಯೆಗಳೆಲ್ಲ ಗೌಣವಾಗಿ ಬಿಟ್ಟಿದ್ದವು.


                       ಊಟದ  ಶಾಸ್ತ್ರ ಮಾಡಿ, ಹಾಸಿಗೆಯಲ್ಲಿ ಅಡ್ಡಾದವಳು ಫ್ಲಾಶ್ ಬ್ಯಾಕ್‍ಗೆ ಹೋದಳು. ತನ್ನೆಲ್ಲಾ ಹದಿಹರೆಯದ, ಯೌವನದ ದಿನಗಳನ್ನೂ, ಗೃಹಸ್ಥ ದಿನಗಳನೆಲ್ಲವ ಒಂದು ಸುತ್ತು ತಿರುಗಿ ಬಂದಳು ದೀಪ. ಊಹುಂ, ತಾನು ಮೂರು, ನಾಲ್ಕು ದಿನಗಳಿಂದ ಪಡೆದ ಅನುಭವದ ಸೋಂಕು ಇರಲಿಲ್ಲ ಆ ಹಳೆಯ ದಿನಗಳಿಗೆ. ಲೇಖಕಿ ತಾನೆ ಅವಳು..ತುಂಬಾ ಬೋಲ್ಡ್ ಅಲ್ಲದಿದ್ದರೂ ಈ ರೀತಿಯ ನವಿರಾದ ರೋಮಾಂಚನದ ಪ್ರೇಮದ ಅನುಭೂತಿಯನ್ನು ಅವಳ ಬರಹಗಳಲ್ಲಿ ವರ್ಣಿಸಿದ್ದಾಳೆ, ಹೊರತು ಅನುಭವಿಸಿರಲಿಲ್ಲ. ಗೊತ್ತು ಅವಳಿಗೆ ತನ್ನ ಮತ್ತು ತನ್ನ ಮಕ್ಕಳ ಅಪ್ಪನೆನಿಸಿಕೊಂಡವನ ಮಧ್ಯೆ ಇರುವ ಅಂತರ, ವೈಮನಸ್ಯ ಎಲ್ಲಕ್ಕೂ ಕಾರಣವೆಂದು. ದೀಪ ಏನೂ ಹೆಡ್ಡಿಯಲ್ಲ. ಅವಳಿಗೆ ಈ ಅಂತರ್ಜಾಲದಲ್ಲಿ ನಡೆಯುತ್ತಿರುವ ದುರ್ವ್ಯವಹಾರಗಳು ಚೆನ್ನಾಗಿ ಗೊತ್ತಿದ್ದವು. ಅಂತೆಯೇ ಅತೀ ಹೆಚ್ಚಿನ ಜಾಗರೂಕತೆ ಮಾಡಿಕೊಂಡಿದ್ದಳೂ ಸಹ. ಆದರೂ ಈ ಜನಪ್ರಿಯ ಕಲಾವಿದನಿಗೆ ತನ್ನ ಹೃದಯವನ್ನೇ ಕೊಟ್ಟುಬಿಟ್ಟಳು. ಸಹಸ್ರಾರು ಅಭಿಮಾನಿಗಳಿದ್ದರು ಅವಿನಾಶನಿಗೆ. ಅವರಲ್ಲಿ ಈ ದೀಪಳೂ ಒಂದಾಗಿದ್ದಳು. ದಿನೇ ದಿನೇ ದೀಪಾಳಿಗೆ ಗೊತ್ತಾಗದ ಹಾಗೆ ಅವಿಯ ಮೋಡಿಗೆ ಸಿಲುಕುತ್ತಾ ಹೋಗುತ್ತಿದ್ದಳು. ಅವನ ಚಿತ್ರಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಆರಿಸಿ ಜೋಪಾನವಾಗಿ ತೆಗೆದಿರಿಸಿಕೊಂಡಿದ್ದಳು. ಇದೆಲ್ಲಾ ಅಭಿಮಾನದಿಂದ ಮಾಡುವುದು ಅಂತಲೇ ಅವಳ ಅನಿಸಿಕೆಯಾಗಿತ್ತು...ಇಷ್ಟೇ ಅದರೆ ಪರವಾಗಿರಲಿಲ್ಲ..ಅವಿಯ ವೈಯ್ಯುಕ್ತಿಕ ಜೀವನದ ಬಗ್ಗೆಯೂ ಕುತೂಹಲವಿತ್ತವಳಿಗೆ. ಇದರ ಬಗ್ಗೆ ಪತ್ತೆದಾರಿ ಮಾಡಿದ ಅವಳು ಹೆಚ್ಚೇನು ಕಂಡು ಹಿಡಿಯಲಾಗಲಿಲ್ಲ. ಬರಹಗಾರ್ತಿಯಲ್ಲವೇ ಅವಳು..ಅವಿನಾಶನ ಗೃಹಸ್ಥ ಜೀವನದಲ್ಲಿ ಒಡಕಿದೆ ಎಂಬುದನ್ನು ಅವನು ಬಿಡಿಸುವ ಪೈಂಟಿಂಗ್‍ಗಳಿಂದಲೇ ಅಂದಾಜುಮಾಡಿಕೊಂಡಳು. ಅವಿನಾಶನ ಬ್ಲಾಗ್‍ಗೆ ಭೇಟಿ ನಿತ್ಯದ ಕೆಲಸಗಳಲ್ಲಿ ಒಂದಾಗಿತ್ತು. ಫೇಸ್ ಬುಕ್‍ನಲ್ಲಿ ಅನಿನಾಶನ ಪ್ರೊಫೈಲನ್ನು ಹುಡುಕಿ ಅವನ ಗೆಳತಿಯಾದಳು..ಶಾಲೆಯ ದಿನಗಳಲ್ಲಿ ಅಪರೂಪಕ್ಕೆ ಬಿಡಿಸುತ್ತಿದ್ದ ದೀಪ ಈಗ ಸಿರಿಯಸ್‍ ಆಗಿ ಚಿತ್ರ ಬಿಡಿಸಲು ಶುರು ಮಾಡಿದಾಗ ಮನೆಯಲ್ಲಿ ಮಕ್ಕಳ ಹುಬ್ಬೇರಿತು. ಎರಡನೆಯ ಮಗಳಿಗಂತೂ ಅಮ್ಮನ ಈ ಹೊಸ ಪರಿ ನೋಡಿ ಖುಶಿಯಾಗಿ ಅಮ್ಮ ತಮಾಶೆಯ ವಸ್ತುವಾದಳು.  ಪತಿಯೆನಿಸಿಕೊಂಡವನಿಗೆ ಮನೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆಯ ಪರಿವೇ ಇರಲಿಲ್ಲ. ಬಹುಶಃ ದೀಪಾಳಿಗೆ ಇದು ವರದಂತೆ ಆಯಿತು. ಬಿಡಿಸಿದ ಚಿತ್ರಗಳನ್ನು ಅವಿನಾಶನಿಗೆ ತೋರಿಸುವ ಹುಮ್ಮಸು. ಅವಿನಾಶನೂ ಭಾವುಕ ಹೃದಯದ ಕಲಾವಿದ...ದೀಪಾಳ ಉತ್ಸಾಹಕ್ಕೆ ಕುಂದು ತರದೇ ಉತ್ತೇಜಿಸಿದ. ನಿಧಾನವಾಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಕ್ರಮೇಣ ಒಳ್ಳೆಯ ಮಿತ್ರರಾದರು. ಅಂದ ಮೇಲೆ ಮೊಬೈಲ್ ನಂಬ್ರ ಅದಲು ಬದಲು ಆಗುತ್ತೆ ಅಲ್ಲವೆ. ಇಂತಹುದೇ ದಿನಗಳಲ್ಲಿ ದೀಪಾಳು ಅದ್ಯಾವುದರಿಂದಲೋ ಉತ್ತೇಜನ ಪಡೆದು ರಾಧಾಕೃಷ್ಣರ ಚಿತ್ರ ಬಿಡಿಸಿದಳು. ಈ ಚಿತ್ರದಲ್ಲಿ ತನ್ನೆಲ್ಲಾ ಮನದ ಭಾವನೆಗಳನ್ನು ಎರಕ ಹೊಯ್ದಿದ್ದಳು.  ಅವಿನಾಶನ ಹೃದಯವನ್ನು ಮೀಟಿತು ಈ ಚಿತ್ರ. ಎಬ್ಬಿಸಿತು ಒಳಗಿನ ಸುಪ್ತ ಭಾವನೆಗಳನ್ನು! ಅವನೂ ಸೋತ...ಅದೇನೊ ಅದೃಷ್ಟ...ಆ ದಿನ ಇಬ್ಬರೂ ನಿಧಾನವಾಗಿ ತಮ್ಮಿಬ್ಬರ ಹೃದಯಗಳನ್ನು ಬದಲಾಯಿಸಿ ಬಿಟ್ಟರು. ಆ ದಿನದಿಂದ ಇಬ್ಬರ ನಡುವೆ ಸತತವಾಗಿ ಸಂದೇಶಗಳು ಹೋಗುತ್ತಲೇ ಇವೆ. ರಾತ್ರಿಗಳಲೆಲ್ಲಾ ಮಧುರ ಸಂಭಾಷಣೆ ಇಬ್ಬರ ನಡುವೆ, ಸ್ವಪ್ನ ಲೋಕದಲ್ಲಿ. ಇಬ್ಬರೂ ನಲ್ವತ್ತು ದಾಟಿದವರಾದರೂ ಹದಿಹರೆಯರಂತೆ ಆಡತೊಡಗಿದ್ದರು. ಇಂದು ಬೆಳಿಗ್ಗೆಯಿಂದ ದೀಪಾಳಿಗೆ ಅವಿಯ ನೆನಪು ಜೋರಾಗಿ ಕಾಡತೊಡಗಿದ್ದು ಅವಳ ಮತ್ತು ಅವಳ ಪತಿಯ ನಡುವಿನ ಬಿಸಿ ಬಿಸಿ ಮಾತುಕತೆಯಿಂದ. ಪ್ರತಿಯೊಂದು ವಿಷಯದಲ್ಲಿ ತಪ್ಪು ಹುಡುಕುವುದು ಅವನಿಗೆ ಅಭ್ಯಾಸವಾಗಿತ್ತು ಅವನಿಗೆ. ಹೆಸರಿಗೆ ಮಾತ್ರ ಗಂಡಸು,  ಜವಾಬ್ದಾರಿಯೆಲ್ಲ ದೀಪಾಳ ತಲೆಯ ಮೇಲೆ. ಈ ಮೂರು ವರ್ಷಗಳಿಂದ ಮನೆ, ಮಕ್ಕಳಿಗೋಸ್ಕರ ದುಡಿಯುತ್ತಿದ್ದಾಳೆ. ಇತ್ತ ಮನೆಯ ಕೆಲಸವೂ ಮಾಡಿ ಅತ್ತ ಪಾರ್ಟ್ ಟೈಮ್ ಆಫೀಸ್ ಕೆಲಸ ಮಾಡಿ ಸೋತಿದ್ದಾಳೆ. ಅವನಾದರೋ ತನ್ನ ಆರಾಮವನ್ನೇ ಮೊದಲು ನೋಡಿಕೊಳ್ಳುವುದು. ಎಂದೂ ಮಕ್ಕಳ ಶಿಕ್ಷಣದ ಬಗ್ಗೆ, ಅವರ ಮುಂದಿನ ಜೀವನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅವನು. ಮೊದಮೊದಲು ಅವನನ್ನು ತಿದ್ದಿ ದಾರಿಗೆ ತರಲು ದೀಪ ಹೆಣಗಾಡಿ ಸೋತು ಈಗ ಬರೇ ಮೌನದಲ್ಲೇ ಇದ್ದಾಳೆ. ಮನೆಗೊಂದು ಗಂಡಸರಂತ ಬೇಕಲ್ಲವೇ ಅಂತ ಅಂದುಕೊಂಡು ಅವನನ್ನು ತನ್ನ ಲೆಕ್ಕದಿಂದ ಬಿಟ್ಟು ಬಿಟ್ಟಿದ್ದಾಳೆ.   ದೇಹ ದಣಿದಿದ್ದರೂ ನಿದ್ದೆಯ ಸುಳಿವಿಲ್ಲ..ಆಲೋಚನೆಗಳು ಕಿತ್ತು ತಿನ್ನುತ್ತಿವೆ, ಸಮಸ್ಯೆಗಳು ಭೂತಗಳಂತೆ ಕಾಣಿಸುತ್ತಿವೆ. ಗಂಟೆ ೩ರಾದುದನ್ನು ನೋಡಿ ಗಡಬಡಿಸಿ ಎದ್ದಳು. ಹೊರಗೆ ಬಂದವಳು ಊಟ ಮಾಡುತ್ತಾ ಟಿವಿ ನೋಡುತ್ತಿರುವ ಗಂಡನನ್ನು ನೋಡಿದಳು. ಶೇರು ವ್ಯವಹಾರಗಳಲ್ಲಿ ಮುಳುಗಿ ಏನೋ ಒಂದು ರೀತಿಯಲ್ಲಿ ನಡೆಯುತ್ತಿರುವ ಅಂಗಡಿಯ ವ್ಯಾಪಾರವನ್ನು ಕಡೆಗಣಿಸಿ ಬಿಟ್ಟಿದ್ದಾನೆ ಎಂದೆಣಿಸಿ ಖೇದವಾಯಿತು. ಏನಾದರೂ ಹೇಳಿದರೆ ಮೈಮೇಲೆಯೇ ಬೀಳುತ್ತಾನೆ..ಇವನೊಂದಿಗೆ ಮಾತೇ ಬೇಡವಾಗಿದೆ. ಯಾವ ಜನ್ಮದ ಕರ್ಮದ ಫಲವಿದೋ...ಮಾಡಿದುಣ್ಣೋ ಮಹಾರಾಯವೆನ್ನುತ್ತಾರಲ್ಲವೆ..ಅದು ಸರಿನೇ..ಎಲ್ಲವೂ ಈ ಜನುಮಕ್ಕೆ ಮುಗಿಯಲಿ ಅಂದುಕೊಂಡು ತನ್ನ ಆಫೀಸಿಗೆ ಹೋಗಲು ತಯಾರಾದಳು.  ಅಲ್ಲಿ ಎಲ್ಲವನ್ನೂ ಮರೆತು ಶೃದ್ಧೆಯಿಂದ ತನ್ನ ಪಾಲಿಗೆ ಬಂದ ಕೆಲಸ ಮಾಡಿ ಮುಗಿಸಿದಾಗ ಗಂಟೆ ೬.೩೦. ಮಕ್ಕಳ ನೆನಪಾಯಿತು. ಅಮ್ಮನ ಮನೆ ಹತ್ತಿರವಿದ್ದುದರಿಂದ ಒಂದಿಷ್ಟು ಸಮಾಧಾನ. ಅದರಲ್ಲೂ ಮೃದುಲಳಿಗೆ ಪ್ರತಿಯೊಂದಕ್ಕೂ ಅಮ್ಮನೇ ಬೇಕು. ಎರಡನೆಯವಳು ಒಂದಿಷ್ಟು ಬೋಲ್ಡ್..ಅವಳಿಗೆ ಸ್ವಲ್ಪ ಗಂಡನ ಮನೆಯವರ ಸ್ವಭಾವ ಬಂದಿದೆ. ಮನ್ವಿತಾ, ತಾನು ಇಷ್ಟಪಟ್ಟು ಹೆಸರಿಟ್ಟದು...ಆದರೆ ಅವಳು ಅದನ್ನು ಮೊಟಕು ಮಾಡಿಬಿಟ್ಟಿದ್ದಾಳೆ. ದೇವರ ದಯದಿಂದ ಇಬ್ಬರೂ ಪ್ರತಿಭಾನ್ವಿತರು..ಹಾಗಾಗಿ ಇಲ್ಲಿಯ ತನಕ ಅವರ ವಿದ್ಯಾಭ್ಯಾಸಕ್ಕೆ ಏನೂ ತೊಂದರೆಯಾಗಲಿಲ್ಲ. ಮುಂದೆಯೂ ಆಗದಿರಲಿ ಅಂದುಕೊಳ್ಳುತ್ತಾ ಮನೆಯ ಹಾದಿ ಹಿಡಿದಳು ದೀಪ. ಹೋಗುತ್ತಾ ಮೊಬೈಲ್ ತೆಗೆದು ನೋಡಿದಾಗ ಎರಡು ಸಂದೇಶಗಳಿದ್ದವು..ತೆಗೆದು ನೋಡಿದರೆ ಅವಿಯದಲ್ಲ. ಫೋನ್ ಮಾಡುವ ಅಂದುಕೊಂಡಳು..ಹಿಂಜರಿಕೆಯಿಂದಲೇ ಗುಂಡಿ ಒತ್ತಿದಾಗ, ಬಿಜಿ ವಿದ್ ಅನದೆರ್ ಕಾಲ್..ಕೇಳಿಸಿತು. ನಿರಾಸೆ ಮುತ್ತಿತು ಮನಸನ್ನು. ಇದೆಲ್ಲಾ ಇರುವುದೇ ನನ್ನ ಪಾಲಿಗೆ..ಅನುಭವವಿತ್ತು ಅವಳಿಗೆ, ಎಷ್ಟೊ ಸಲ ಅದೃಷ್ಟ ಮನೆಯ ಬಾಗಿಲ ತನಕ ಬಂದು ಹಿಂದಿರುಗಿದನ್ನು ಕಂಡಿದ್ದಾಳೆ. "ಪಾಲಿಗೆ ಬಂದದ್ದು ಪಂಚಾಮೃತ" ಎಂಬ ಅವಳ ನಿತ್ಯದ ನುಡಿಯನ್ನು ನೆನಪಿಸಿಕೊಳ್ಳುತ್ತಾ ಓಟದ ನಡಿಗೆಯಲ್ಲಿ ಮನೆ ಮುಟ್ಟಿದಾಗ ಸೂರ್ಯನು ಪಡುವಲ ದಿಕ್ಕಿನಿಂದ ಮರೆಯಾಗಿ ಹೋಗಿದ್ದನು.


             
               ’ಅಮ್ಮಾಮನ್ವಿತಳ ಗೌಜಿ...’ಎಷ್ಟು ಹೊತ್ತು?  ’ಯಾಕೆ ಮನ್ವಿ, ಅಜ್ಜಿ ಮನೆಯಲಿ ಚಾ ಕುಡಿಲಿಲ್ವಾ....ದೀಪ ಪ್ರಶ್ನೆ ಪೂರ್ಣಗೊಳಿಸುವ ಮೊದಲೇ ಮೃದುಲಳ ಆಕ್ಷೇಪ..’ನಿನಗೊತ್ತಲ್ವ ಅಮ್ಮ, ನಮಗೆ ನೀನೇ ಮಾಡಿದ್ದು ಚಾ ಹಿಡಿಸುವುದಂತ. ಅಜ್ಜಿ ಮಾಡೋದು ತುಂಬಾ ಸಿಹಿ ಇರುತ್ತೆ.’ ಇಬ್ಬರದೂ ಯಾವಾಗಲೂ ಇದೇ ಕಮ್ಪ್ಲೈಂಟ್. ಏನ್ ಮಾಡೋದು, ನಿಮಗೋಸ್ಕರ ತಾನೆ ಕೆಲಸಕ್ಕೆ ಹೋಗೋದು ಅಂತ ದೀಪ ಅವರನ್ನು ಸಮಜಾಯಿಸೋದು, ಇದು ದೀಪಾಳ ಮನೆಯಲ್ಲಿ ನಿತ್ಯ ನಡೆಯುತಿತ್ತು. ಮನ್ವಿತಾ ಅಮ್ಮನ ಕೊರಳನ್ನು ಬಳಸಿ, ತನ್ನ ಕಾಲೇಜಿನಲ್ಲಿ ನಡೆದುದನ್ನು ಹೇಳಲು ಶುರುಮಾಡಿದಾಗ, ಅಮೃತಾ ಅವಳನ್ನು ತಡೆದು ಅಮ್ಮನನ್ನು ಕೈಕಾಲು ತೊಳೆಯಲು ಕಳುಹಿಸಿದಳು. ಮನದೊಳಗಿನ ತಳಮಳಕ್ಕೊಂದು ತೆರೆ ಎಳೆದು ದೀಪ ತನ್ನ ಕರ್ತವ್ಯ ನಿರ್ವಹಿಸಲು ಸನ್ನದ್ಧಳಾದಳು. ದೇವರಿಗೆ , ತುಳಸಿಗೆ ದೀಪ ಹಚ್ಚಿ, ಅಡುಗೆ ಮನೆಯಲ್ಲಿ ರಾತ್ರಿ ಊಟದ ತಯಾರಿಯಲ್ಲಿ ತೊಡಗಿದವಳನ್ನು ಗಣಕ ಯಂತ್ರ ಸೆಳೆಯುತಿತ್ತು. ಮೂರು ದಿನಗಳಿಂದ ಅವಿನಾಶನ ಜೊತೆ ಚಾಟ್ ಮಾಡಿದ್ದಳು. ನಾಳೆಗೆ ಚಪಾತಿ ಹಿಟ್ಟು ಕಲೆಸಬೇಕಿತ್ತು, ಇತ್ತ ಕರ್ತವ್ಯ, ಅತ್ತ ಪ್ರೀತಿ ಎರಡರ ಮಧ್ಯೆ ದೀಪ ಹೈರಾಣಾಗಿದ್ದಳು. ಅದರಲ್ಲೂ ಸಮಾಜದ ಮುಂದೆ ಅವಳ, ಅವಿನಾಶನ ಪ್ರೀತಿ ತೋರ್ಪಡಿಸುವ ಹಾಗಿರಲಿಲ್ಲ. ಇಬ್ಬರೂ ಈಗಾಗಲೇ ವಿವಾಹ ಬಂಧನದಲ್ಲಿ ಸಿಲುಕಿದವರು, ಹರೆಯದ ಮಕ್ಕಳ ಪೋಷಕರು. ಅಂದ ಮೇಲೆ ಇವರ ದಾಂಪತ್ಯ ಜೀವನದ ಏರು ಪೇರು ಹೇಗೆ ಇರಲಿ, ಜನರು ಎಂದೂ ವಿವಾಹೇತರ ಸಂಬಂಧವನ್ನು ಗೌರವ ದೃಷ್ಟಿಯಿಂದ ನೋಡಲಾರರು..ಹಾಗಂತ ದೀಪಾಳು, ಅವಿನಾಶನೂ ತಮ್ಮ ಹದಗೆಟ್ಟ ಸಂಬಂಧದಿಂದ ಸುಲಭವಾಗಿ ಹೊರಬರುವುದೂ ಸಾಧ್ಯವಿಲ್ಲವಾಗಿತ್ತುಚಿಕ್ಕಂದಿನಿಂದಲೂ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಅವರಿಬ್ಬರಿಗೂ ತಪ್ಪು ಹಾದಿ ಹಿಡಿದು ನಡೆಯುವುದು ಬೇಡವಾಗಿತ್ತು. ಅಲ್ಲದೇ ಅವಿನಾಶನ ಮಗ, ದೀಪಾಳ ಇಬ್ಬರು ಹೆಣ್ಣು ಮಕ್ಕಳು ಇವರ ಸಂಬಂಧ ಒಪ್ಪುವುದೂ ಕನಸಿನ ಮಾತಾಗಿತ್ತು. ಮಕ್ಕಳೇನೋ ಆಧುನಿಕ ಮನಸಿನವರು..ಆದರೂ ಅವಿನಾಶನ ಮಗ ಶ್ರೀನಿಧಿ, ಅವನ ತಾಯಿಯಿಂದ ತಂದೆ ಬೇರ್ಪಡುವುದನ್ನು ಒಪ್ಪುವುದಿಲ್ಲವೆಂದು ನಿನ್ನೆ ತಾನೆ ಅವಳಿಗೆ ಅವಿನಾಶನು ತಿಳಿಸಿದ್ದನು. ಮೃದುಲ ಮತ್ತು ಮನ್ವಿತ ಇಬ್ಬರೂ ತಮ್ಮ ಅಪ್ಪನನ್ನು ಅಷ್ಟೊಂದು ಹಚ್ಚಿಕೊಳ್ಳದಿದ್ದರೂ ಅಮ್ಮ ಮತ್ತೊಂದು ಗಂಡಸಿನ ಜೊತೆ ಸ್ನೇಹದಿಂದಿರುವುದನ್ನೂ ಸಹಿಸಲಿಕ್ಕಿಲ್ಲ. ಇನ್ನು ದೀಪಳ ಗಂಡನೂ ಅವಿನಾಶನ ಹೆಂಡತಿಯೂ ತಮ್ಮ ತಮ್ಮ ಸಂಗಾತಿಗಳಿಗೆ ಡೈವೋರ್ಸ್ ಕೊಡುವುದೂ ಕೂಡ ಕಷ್ಟದ ಮಾತೇ ಆಗಿತ್ತು.... ಇದೆಲ್ಲ ಅವರಿಬ್ಬರು ನಿನ್ನೆ ತಾನೆ ಮಾತಾಡಿಕೊಂಡಿದ್ದರು. ಹಾಗಂತ ಇಬ್ಬರೂ ಪರಸ್ಪರ ದೂರವಾಗಲೂ ತಯಾರಿರಲಿಲ್ಲ. ಕೊನೆಗೆ ಇಬ್ಬರೂ ಎಲ್ಲವನ್ನೂ ಪರಮಾತ್ಮನ ಇಚ್ಛೆಗೆ ಬಿಡಲು ನಿರ್ಧರಿಸಿಕೊಂಡಿದ್ದರು. ದೀಪಾಳಿಗೆ ತನ್ನಿಯನ ಜೊತೆ ಮಾತಾಡಲು ತುಂಬಾನೆ ಆಸೆಯಾಗುತಿತ್ತು..ಆದರೇನು ಮಾಡುವುದು..ಮೊದಲು ಗಣಕ ಯಂತ್ರದ ಎದುರು ಕುಳಿತರೆ ಮಕ್ಕಳಿಗೂ, ಗಂಡನಿಗೂ ಸಂಶಯ ಬರುತ್ತದೆ..ಅಲ್ಲದೆ ನಿನ್ನೆ ತಾನೆ ಅವಿನೂ ಹೇಳಿದ್ದನು ತನ್ನ ಹೆಂಡತಿಗೆ ಅವನ ಮೇಲೆ ಸಂಶಯ ಬಂದಿದೆ ಹಾಗಾಗಿ ಇನ್ನು ಮುಂದೆ ಚಾಟ್ ಮಾಡುವುದೂ ಕಷ್ಟಾಂತ. ತನ್ನೆಲ್ಲಾ ತಳಮಳಗಳನ್ನು ಪಾತ್ರೆಗಳ ಮೇಲೆ ತೋರಿಸಿದಳು ದೀಪ..ಡಬ ಡಬ ಶಬ್ದ ಕೇಳಿ ಇಬ್ಬರೂ ಮಕ್ಕಳು, ಗಂಡ ಬಂದು ಅಡುಗೆ ಕೋಣೆಗೆ ಬಂದು ಇಣುಕಿ ಹೋದರು. ಇವಳ ಮಾತು ಇಲ್ಲ. ಮನ್ವಿತ ಹತ್ತಿರ ಬಂದು ಅಮ್ಮನ ಮುಖವನ್ನು ಪರೀಕ್ಷಾರ್ಥವಾಗಿ ನೋಡಿದಳು. ನಿರ್ಲಿಪ್ತವಾಗಿದೆ. ಕಣ್ಣಿನಿಂದಲೇ ಪ್ರಶ್ನಿಸಿದಳು..ಇವಳೂ ಮುಖವನ್ನು ಅತ್ತಿತ್ತ ತಿರುಗಿಸಿದಳು. ತಟ್ಟೆ ಹಾಕಿ ಗಂಜಿ ಬಡಿಸಿ, ಹಾಲಿಟ್ಟು ಈಗಾಲೇ ಉಪ್ಪು ನೀರಿನಲ್ಲಿ ಹಾಕಿದ ದ್ರಾಕ್ಷಿ ಹಣ್ಣುಗಳನ್ನು ತೊಳೆದಿಟ್ಟಳು. ಪಪ್ಪಾಯಿ ಹಣ್ಣನ್ನು ತೊಳೆದು ಸಿಪ್ಪೆ ತೆಗೆಯಲು ಕುಳಿತಳು. ಸಣ್ಣ ಸಣ್ಣ ತುಂಡು ಮಾಡಿ ಎರಡು ಬಟ್ಟಲಿನಲ್ಲಿ ವಿಂಗಡಿಸಿ ಇಟ್ಟಳು...ಮತ್ತೊಮ್ಮೆ ಸರಿಯಾಗಿ ನೋಡಿದಳು ಇಲ್ಲದಿದ್ದರೆ ದುರ್ವಾಸನಿಗೆ ಭಯಂಕರ ಸಿಟ್ಟು ಬರುತ್ತದೆ..ತನಗೆ ಕಡಿಮೆ ಇಟ್ಟು ಮಕ್ಕಳಿಗೆ ಹೆಚ್ಚು ಇಟ್ಟಿದಿ ಅಂತ. ಉಳಿದ ಅನ್ನ ಬಸೆದು ಗಂಡನಿಗೆ ತೆಗೆದಿಟ್ಟಳು. ಒಂದೇ ಕೂಗಿಗೆ ಮಕ್ಕಳಿಬ್ಬರು ಅಡಿಗೆ ಕೋಣೆಯಲ್ಲಿ ಪ್ರತ್ಯಕ್ಷರಾದರು. ಅಮ್ಮನ ಮೂಡು ಸರಿ ಹೋಗಲು ಇಬ್ಬರೂ ಪೈಪೋಟಿಯಿಂದ ತಮ್ಮ ಕಾಲೇಜಿನ ಸ್ನೇಹಿತರ  ಬಗ್ಗೆ ಹೇಳಿ ದೀಪಾಳನ್ನು ನಗಿಸಿದರು. ಪ್ರಸನ್ನಳಾದಳು ಅಮ್ಮ, ಮಕ್ಕಳ ಬುದ್ಧಿವಂತಿಕೆಗೆ ಹಿಗ್ಗಿದಳು. ಹೊರಗೆ ಟಿವಿಯೆದುರು  ಊಟ ಮಾಡುತ್ತಿದ್ದ ಗಂಡನಿಗೆ ಇವರ ಮಾತು ಕಿರಿಕಿರಿ ಅನಿಸಿ, ಬಂದು ಬೆದರಿಸಿ ಹೋದ. ಮಕ್ಕಳಿಬ್ಬರಿಗೂ ಇದು ನಿತ್ಯದ ಅಭ್ಯಾಸ, ಹಾಗಾಗಿ ಏನೂ ಅನಿಸದೇ ಧ್ವನಿ ಕಮ್ಮಿ ಮಾಡಿ ಅಮ್ಮನನ್ನು ನಗಿಸುವ ಕೆಲಸ ಮುಂದುವರಿಸಿದರು. ಊಟ ಮಾಡಿದ ಮೇಲೆ ಇಬ್ಬರೂ ಅಮ್ಮನಿಗೆ ಪಾತ್ರೆ ತೊಳೆಯಲು ಸಹಾಯ ಮಾಡಿದರು. ಎಲ್ಲಾ ಕೆಲಸ ಮುಗಿಸಿ ಹಣ್ಣಿನ ತಟ್ಟೆ ಹಿಡಿದು ಹಾಲಿಗೆ ಬಂದವಳಿಗೆ ಬೆದರಿಕೆ. ಅದೇನು ನಿಮ್ಮ ಮಾತುಕತೆ? ನನಗಿಲ್ಲಿ ತೊಂದರೆಯಾಗುತ್ತಿದೆ ಅಂತ. ಅದೇನು ಮೋಡಿ ಮಾಡಿದೆಯೋ ಇಡಿಯೆಟ್ ಬಾಕ್ಸ್ ಇವನನ್ನು, ಮದುವೆಯಾಗಾಯ್ತಿನಿಂದಲೂ ಇದೇ ಕತೆ, ಮೌನವೇ ಲೇಸು ಅಂತ ಸುಮ್ಮನೆ ತನ್ನ ತಿನ್ನುವ ಕಾಯಕ ಮಾಡಿ ಗಂಟೆ ಕಡೆ ನೋಡಿದಾಗ .೩೦. ಒಂದರ್ಧ ಗಂಟೆ ಗಣಕದೆದುರು ಕುಳಿತುಕೊಳ್ಳಲು ಹೋದಳು ದೀಪ. ಮನದುಂಬಾ ಅವಿಯ ಜೊತೆ ನಾಲ್ಕು ಮಾತು ಆಡುವ ಆಸೆ. ಫೇಸ್ ಬುಕ್ನಲ್ಲಿ ಅವಿಯ ಸ್ಟೇಟಸ್ ಕಾಣಿಸಿತು ಮೊದಲಿಗೆ....ಹಾಯ್ ಮೆಸೇಜು ಹೋಯ್ತು..ಉತ್ತರವೇ ಇಲ್ಲ...ಸರಿ, ಏನೋ ತೊಂದರೆ ಇರಬೇಕು ಎಂದೆಣಿಸಿ ಬ್ಲಾಗ್ನತ್ತ  ಮನ ತಿರುಗಿಸಿದಳು. ಓದಬೇಕೆಂದು ಬುಕ್ ಮಾರ್ಕ್ಹಾಕಿಕೊಂಡ ಬ್ಲಾಗ್ನ್ನು ತೆರೆದು ಓದಲು ಕುಳಿತವಳಿಗೆ ೧೦.೩೦ ಕಳೆದದು ತಿಳಿಯಲೇ ಇಲ್ಲಮತ್ತಷ್ಟು  ಬ್ಲಾಗುಗಳನ್ನು ಗುರುತು ಮಾಡಿಟ್ಟಳು ದೀಪ. ಅವಳ ಒಂಟಿ ಜೀವನಕ್ಕೆ ದಾರಿದೀಪವಾದದ್ದು ಅಂತರ್ಜಾಲದ ಜಾಲಾಟ...ಹೀಗೆಯೇ ಅವಳು ತನ್ನ ಬರವಣಿಗೆಯನ್ನು ಸುಧಾರಿಸಿಕೊಂಡದ್ದು..ಅಲ್ಲದೆ ತಂತ್ರಜ್ಞಾನದ ಬಗ್ಗೆಯೂ ಅವಳಿಗೆ ಮಾಹಿತಿಯಿತ್ತು, ಅವಳ ಜ್ಞಾನದ ಮಟ್ಟ ಸುಧಾರಿಸಲು ಸಹಾಯ ಮಾಡಿತ್ತು ಕಿಂಡಿಮಲಗಲು ಹೋದವಳಿಗೆ ಮೊಬೈಲು ಬೆಳಗುವುದು ಕಂಡಿತು...ಅವಿಯ ಮೆಸೇಜು..ಹಿರಿಹಿರಿ ಹಿಗ್ಗಿ ತೆಗೆದು ನೋಡಿದವಳಿಗೆ ಗೆಳೆಯನ  ನಲ್ಮೆಯ ಸಂದೇಶ. ಇನ್ನು ರಾತ್ರಿಯೆಲ್ಲಾ ಸಿಹಿ ನಿದ್ರೆ, ಸಂದೇಹವೇ ಇಲ್ಲ ಅಂದು ಸುಖವಾಗಿ ನಿಶೆಯ ಮಡಿಲಿಗೆ ಜಾರಿ ಹೋದಳು ದೀಪ!


ಮುಂದುವರಿಯುವುದು......ತಮ್ಮ ಪ್ರೋತ್ಸಾಹವಿದ್ದರೆ...
ಸಹ ಬ್ಲಾಗಿಗರ ಅಭಿಪ್ರಾಯದ ನಿರೀಕ್ಷೆಯಲ್ಲಿರುವ

-ಶೀಲಾ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...