ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 May, 2012

ಮತ್ತಿಷ್ಟು ನನ್ನ ಪಿಕಾಸುವಿನ ಪುಟ್ಟ ಕತೆಗಳು!
            "ಅಮ್ಮ ನಂಗೆ ಇನ್ನು ಊಟ ಮಾಡ್ಲಿಕ್ಕೆ ಆಗೊಲ್ಲ." ಅಂದ ನನ್ನ ಪಿಕಾಸು. ಅವನ ತಂಗಿ ನಿತ್ಯವೂ ಮಾಡುವ ಅಭ್ಯಾಸ ಇವನಿಗ್ಯಾವಾಗ ಅಂಟಿತು ಅಂತ ಪ್ರಶ್ನಾರ್ಥಕವಾಗಿ ಅವನ ಕಡೆ ನೋಡಿದೆ.."ಇವತ್ತು ಕಾಲೇಜಿನಲ್ಲಿ ಸ್ನೇಹಿತನ ಲೆಕ್ಕದಲ್ಲಿ ಟ್ರೀಟ್ ಇತ್ತು..ಹೊಟ್ಟೆ ತುಂಬಿದೆ"....ರಾಗ ಎಳೆದ. ನಾನಂದೆ "ಸರಿ.. ಬಿಡು.. ಆದ್ರೆ ರೆಡಿಯಾಗು ಮುಂದಿನ ಜನ್ಮದಲ್ಲಿ ಮನ್ನುವಿನ ತಮ್ಮನಾಗಿ ಆಫ್ರಿಕಾದ ಅತೀ ಬಡ ದೇಶದಲ್ಲಿ ಜನಿಸಲು... " ಮಾತೇ ಇಲ್ಲ. ಸುಮ್ಮನೆ ಎಲ್ಲಾ ಊಟ ಮಾಡಿ ಹೊರಟ. ಮರುದಿನ ಒಂದಿಷ್ಟು ಅನ್ನದ ಅಗುಳು ತಟ್ಟೆಯಲ್ಲಿ ಬಿಟ್ಟು, ನನಗಿದು ಬೇಡ.. ಅಂದ. ಕಣ್ಣಲ್ಲಿ ತುಂಟತನ ಎದ್ದು ತೋರುತಿತ್ತು. "ಆಫ್ರಿಕಾದಲ್ಲೇ ಅವಳ ತಮ್ಮನಾಗಿ ಹುಟ್ಲಿಕ್ಕೆ ಅಡ್ಡಿಯಿಲ್ಲ.. ಆದರೆ ಮತ್ತೆ ನಾನು ಅಲ್ಲಿಂದ  ಸೌತ್ ಆಫ್ರಿಕಾಗೆ ಓಡಿ ಹೋಗ್ತೇನೆ ಅಂತ ಡಿಸಿಜನ್ ಮಾಡಿದ್ದೀನಿ.. "ಏನ್ ಹೇಳ್ಲಿ ಇದಕ್ಕೆ.. ಅವಳ ಮುಖ ನೋಡ್ಬೇಕಿತ್ತು.. ಇಂಗು ತಿಂದ ಮಂಗನ ಹಾಗೆ ಮಾಡ್ಕೊಂಡಿದ್ಳು!!!
                                  *************************************

            ನನ್ನ ಪಿಕಾಸು ದಪ್ಪ ದಪ್ಪ ಪುಸ್ತಕ ಹರಡಿಕೊಂಡು ಕೂತಿದ್ದ...ಒಮ್ಮೆ ಆ ಪುಸ್ತಕ, ಮತ್ತೊಮ್ಮೆ ಈ ಪುಸ್ತಕ ರೆಫೆರ್ ಮಾಡಿ ಮಧ್ಯ ಮಧ್ಯದಲ್ಲಿ ಏನೋ ನೋಟ್ಸು ಬರ್ಕೊಳ್ತಿದ್ದ.. ಹೆಮ್ಮೆಯಿಂದ ಅವನ ಬೆನ್ನು ತಟ್ಟಿ ಹಿಂದಕ್ಕೆ ಹೋಗುವವಳನ್ನು ನಮ್ಮ ಮಿಸ್ ಇಂಡಿಯಾಳ ವ್ಯಂಗನಗೆ ತಡೆಯಿತು.. "ಏನಾಯ್ತೇ.. ನೀನೂ ಚೆನ್ನಾಗಿ ಅಣ್ಣನ ಹಾಗೆ ಓದು.. ನಿನ್ನ ಬೆನ್ನನ್ನೂ ತಟ್ತೀನಿ.. " ಅಂದೆ. ಅವಳೋ ಬಿದ್ದು ಬಿದ್ದು ನಕ್ಕಳು.. ಪಿಕಾಸೂ ಅವಳಿಗೆ ಜೊತೆ ಕೊಟ್ಟ... ಏನಾಯ್ತೇ ಅಂದ್ರೆ.. ನೀನೊಂದು ಪೆದ್ದಿ. ಅವನು ಅವನ ಬುಕ್ ಓದೋದಲ್ಲ.. ಬೇರೆ ಸಿ ಎಸ್‍ ದು ಅಂದ್ಲು. ನಿಜವೇನೋ ಅಂದದಕ್ಕೆ ಹೌದು ನಾನು ನೆಟ್‍ವರ್ಕ್, ಮೊಡೆಮ್ ಹ್ಯಾಕಿಂಗ್.. ಅದೂ ಇದೂ ಅಂತ ನನ್ನ ತಲೆಯೊಳಗೆ ಹೋಗದ ಹತ್ತಾರು ಶಬ್ದಗಳನ್ನು ಹೇಳಿದ.. ಅಲ್ವೋ ನಾಡದ್ದು ಎಕ್ಸಾಮ್ ಅಲ್ವೇನೋ.. ನಿನ್ನ ಸಬ್ಜೆಕ್ಟ್ ಯಾವಾಗ ಓದೋದು ಅಂದ್ರೆ ನಾಳೆ ಇದೆಯಲ್ವಾ ಓದ್ಲಿಕೆ ಅದನ್ನು ಅಂದ. ನನ್ನ ಬಾಯಿ ಮುಚ್ಚಿಸಿಬಿಟ್ಟ!
                           ***********************************************.

     ಪಠ್ಯ ಪುಸ್ತಕಗಳನ್ನು ತರುವಾಗಲೇ ಅವನು ಅವನ ಸಬ್ಜೆಕ್ಟ್ ಜೊತೆಗೆ ಸಿ ಎಸ್ ನವರದೂ ಹಾಗೂ ಇ ಅಂಡ್ ಸಿಯವರದೂ ತರುತ್ತಾನೆ. ಒಟ್ಟಿಗೊಟ್ಟಿಗೆ ಎಲ್ಲವನ್ನೂ ಹೇಗೆ ಅರಗಿಸಿಕೊಳ್ಳುತ್ತಾನೆ ಅಂತ ನಾನು ಹೆಮ್ಮೆಯಿಂದ ಗಾಬರಿಯಿಂದ ನೋಡ್ತೀನಿ ನನ್ನ ಪಿಕಾಸುನ! ಎಷ್ಟೊ ಸಲ ಐಐಟಿಗೆ ಹೋಗುದು ಬೇಡ ಅಂತ ಹೇಳಿ ತಪ್ಪು ಮಾಡಿದೆನಾ ಅಂತ ಅನಿಸುತ್ತೆ.. ಏನ್ ಮಾಡ್ಲಿ.. ಅವನನ್ನು ಬಿಟ್ಟು ನಂಗೆ ಬದುಕ್ಲಿಕ್ಕೆ ಆಗತಿರ್ಲಿಲ್ಲ.. ಆವಾಗ.. ಇನ್ನು ೧ ವರ್ಷ..ಮತ್ತೆ ಅವನನ್ನು ಕಳುಹಿಸಲೇಬೇಕು.. ಅದಕ್ಕಾಗಿ ಐದು ವರ್ಷಗಳಿಂದ ನನ್ನ ಮನಸ್ಸನ್ನು ತಯಾರಿಸುತ್ತಾ ಇದ್ದೇನೆ.....:-(((

30 May, 2012

ಮಿತ್ರ ಬಾಂಧವರೇ, ನಿಮ್ಮ ಶುಭಮಸ್ತೂ ಇರಲಿ ನನ್ನ ಕುಡಿಯ ಮೇಲೆ!


ತನ್ನ ಕನಸುಗಳ ನನಸು ಮಾಡಲು 
ಹೊರಟು ನಿಂತಿದೆ ನನ್ನ ಕುಡಿ, ದೂರದೂರಿಗೆ!
  ಕಂದನ ಬೆಳವಣಿಗೆ ಅಮ್ಮನಿಗೆ ಹೆಮ್ಮೆಯೇನೋ ಸರಿ,
      ಆದರೆ, ಅಗಲಿಕೆಯ ಅಳಲು
  ಸಹಿಸಿತೇ ನನ್ನ ಕರುಳು!
ನನ್ನ ಜಗವಾಗುವುದಿನ್ನು ಇರುಳು!
ರಕ್ಷೆಯಾಗುದೆನ್ನ ವಾತ್ಸಲ್ಯದ ನೆರಳು!
 ಮುಖವಾಡಗಳ ಧರಿಸಿ ಮೆರೆಯುತ್ತಿರುವ ಜಗದ
ನಕಲಿಗಳಿಗೆ ಮರುಳಾಗದಿರಲೆ ಎಂದೆನ್ನಳಲು!
ಮಿತ್ರ ಬಾಂಧವರೇ,  ನಿಮ್ಮ ಶುಭಮಸ್ತೂ ಇರಲಿ ನನ್ನ ಕುಡಿಯ ಮೇಲೆ!

29 May, 2012

ನಮಗೆಲ್ಲಾ ಮೈಗಳ್ಳತನ-ಹಾಗಾಗಿ ಬೆಲೆ ಏರುತ್ತಲೇ ಹೋಗೋದು ಸಹ ಗ್ಯಾರಂಟಿ!!


               ಎಲ್ಲೆಲ್ಲೂ ಹಾಹಾಕಾರ!!! ಪೆಟ್ರೋಲ್ ಬೆಲೆ ಹೆಚ್ಚಿದೆ...ಸೃಜನಶೀಲರಿಗೆ ಒಂದು ನೆವನ..ಹೊಸ ಹೊಸ ಫಾರ್ವರ್ಡ್ ಮೆಸೇಜ್‍ಗಳು, ಜೋಕುಗಳು ಹುಟ್ಟಿಕೊಂಡವು. ಮತ್ತೆ ಕೆಲವ್ರು ಜಪಾತ್ರ,  ಗಿಪಾತ್ರ..ಹೀಗೆ ಹಾಗೆ ಅಂತ ನಮ್ಮ ವಿಜ್ಞಾನಿಗಳನ್ನು, ಶೋಧಕರನ್ನು ಹಂಗಿಸಲು, ಪ್ರಶ್ನಿಸಲು ಶುರುಮಾಡಿದರು..ಅಂತೂ ಇಂತೂ ಎರಡು ದಿನ ಎಲ್ಲರೂ ಬೆಲೆ ಏರಿಕೆ ಬಗ್ಗೆ ಮಾತಾಡಿಕೊಂಡರು. ಸರಿ, ಈಗ ಎಲ್ಲರೂ ತಣ್ಣಗೆ ಅವರವರ ವಾಹನದಲ್ಲಿ ಹಿಂದಿನ ಹಾಗೆಯೇ ಪೆಟ್ರೋಲ್ ಹಾಕಿಕೊಂಡು ತಿರುಗುತ್ತಿದ್ದಾರೆ.  ಅಲ್ಲ, ಒಂದಿಷ್ಟು ಆಲೋಚನೆ ಮಾಡಿ ನೋಡಿರಂತೆ..ಪೆಟ್ರೋಲ್ ಬೆಲೆ ಹೆಚ್ಚಾಗುತ್ತಲೇ ಹೋಗುತ್ತಿದೆ..ಹಾಗಂತ ಜನರು ವಾಹನ ತೆಗೆದುಕೊಳ್ಳುವುದು ಕಡಿಮೆಯಾಗಿದೆಯೇನು?  ನಾವು ಕಾಲೇಜಿಗೆ ಹೋಗುತ್ತಿರುವಾಗ ನನಗೆ ನೆನಪಿದ್ದ ಹಾಗೆ ಕೆಲವು ಅತೀ ಶ್ರೀಮಂತರ ಮಕ್ಕಳಿಗೆ ಮಾತ್ರ ಸ್ಕೂಟರ್ ಚಲಾಯಿಸಿಕೊಂಡು ಹುಡುಗಿಯರನ್ನು ಇಂಪ್ರೆಸ್ ಮಾಡಲು ಸಾಧ್ಯವಿತ್ತು..ಆದರೆ ಈಗ ಹೆಚ್ಚಿನ ಮಕ್ಕಳ ಬಳಿ ಅವರದ್ದೇ ಸ್ವಂತ ವಾಹನವಿದೆ..ಹೇಳಿ, ಇನ್ನೂ ಸಂಪಾದಿಸಲು ಪ್ರಾರಂಭಿಸದವರಿಗೆ ವಾಹನ ಅಗತ್ಯವಿದೆಯೇ...ಧಾರಾಳವಾಗಿ ಬಸ್ಸುಗಳಲ್ಲಿ ಓಡಾಟ ಮಾಡಬಹುದಲ್ಲಾ!!!..ಅಪ್ಪಾಪ್ಪಾ  ಏನೂ ಪ್ರೀತಿ ಈಗಿನ ಅಪ್ಪ ಅಮ್ಮಂದಿರಿಗೆ, ಇನ್ನೂ ಲೈಸೆನ್ಸ್ ಸಿಗದ ಎಳೆ ಹುಡುಗ ಹುಡುಗಿಯರೂ  ತಮ್ಮ ತಮ್ಮ ಕೋಚಿಂಗ್ ಕ್ಲಾಸಿಗೆ ಸ್ಕೂಟಿಯಲ್ಲೇ ಬರೋದು...ಅಷ್ಟು ಮಾತ್ರ ಅಲ್ಲ..ಅವರು ಸುಮ್ಮನೆ ಮನೆಗೆ ಹೋಗ್ತಾರ‍ಾ...ಇಲ್ಲ ಹಿಂದೆ ತಮ್ಮ ತಮ್ಮ ಗರ್ಲ್ ಫೆಂಡುಗಳನ್ನು ಕೂರಿಸಿ ಸಮ್ಮನೆ ರೈಡೂ ಮಾಡ್ಲಿಕ್ಕುಂಟು! ಅಂದಮೇಲೆ ಸುಮ್ಮನೆ ಯಾಕ್ರೀ ಈ ಹಾರ‍ಾಟ ಗೀರಾಟ!!! ನಿಜವಾಗಿ ಈ ಬೆಲೆ ಏರಿಕೆಯಿಂದ ಪೆಟ್ಟು ತಿನ್ನೋದು ಬಡತನದ ರೇಖೆಗಿಂತ ಕೆಳಗಿರೋರು....ಅಂದರೆ ದಿನಗೂಲಿಯವರು...ನಾನು ನೋಡಿದ್ದೇನೆರೀ..ಪಾಪ ಬಡಕೊಳ್ಳುತ್ತಾರ‍ೆ ರೇಶನ್ ಬೆಲೆ ಹೆಚ್ಚಿದೆಯಂತ..ತರಕಾರಿ, ಅಕ್ಕಿ, ಎಣ್ಣೆ, ಕಾಳುಗಳ ಬೆಲೆ ಹೆಚ್ಚಿ ಇವರಿಗೆ ತೊಂದರೆಯಾಗಿದೆ..ಅವರಲ್ಲೂ ಕೆಲವರಿದ್ದಾರೆ...ಸಿಕ್ಕ ಹಣವನ್ನು ಸಹ ಶೇಂದಿ, ಮೊಬೈಲ್ ಮೇಲೆ ಉಡಾಯಿಸುತ್ತಾರೆ. ಅಮ್ಮನ ಹಿತ್ತಲಲ್ಲಿರುವ ರೂಮುಗಳಲ್ಲಿ ಈ ಬಳ್ಳಾರಿ ಕಡೆಯವರು ವಾಸವಾಗಿದ್ದಾರೆ..ಅಮ್ಮನಿಗೆ ಈ ಹುಡುಗರ ಮೇಲೆ ಕೋಪ...ಮೊಬೈಲ್ ಮೇಲೆ ಹಣ ಹಾಕೋದು ಹೆಚ್ಚಾಗಿದೆಯಂತ. ಸಿಕ್ಕಿದಾಗಲೆಲ್ಲ ಉಪದೇಶ ಕೊಡ್ತಾ ಇರ್ತಾರೆ...ಅವರೂ ಅಮ್ಮನ ಕಣ್ಣು ತಪ್ಪಿಸಿ ತಿರುಗ್ತಾರೆ!               ಬಿಡಿ, ನಾನು ಯಾಕಪ್ಪಾ ಸುಮ್ಮನೆ ತಲೆಕೆಡಿಸಿಕೊಳ್ಳೊದು. ಅಂದ ಹಾಗೆ ನಾನು ಬರಿಯಲಿಕ್ಕೆ ಹೊರಟದ್ದು ಬೇರೆ.. ತರಕಾರಿ ಬೆಲೆಗಳೆಲ್ಲಾ ಹೆಚ್ಚಿದೆ ಅಂತ ಜನರು ಪಿರಿ ಪಿರಿ ಮಾಡ್ತಾ ಇರ್ತಾರಲ್ಲವಾ..ನನಗೂ ಕೋಪ ಬರುತ್ತೇರೀ ಮಾರ್ಕೆಟಿಗೆ ಹೋದಾಗ ಆ ಬಾಯಮ್ಮ ಒಂದಿಷ್ಟು ಕೊತ್ತಂಬರಿ ಸೊಪ್ಪಿಗೂ ಹೇಳಿದ ರೇಟ್ ನೋಡಿ...ನಾನು ಆಕ್ಷೇಪಿಸಿದಕ್ಕೆ ನನಗೇ ರೋಪು ಹಾಕೋದಾ ಅವಳು..ನೋಡಿ ಅಮ್ಮ, ನಿಮಗೆ ಬೇಕಿದ್ರೆ ತಕೊಳ್ಳಿ..ನಮಗೆ ಬೇರೆ ಗಿರಾಕಿ ಇದ್ದಾರೆ...ಯಪ್ಪಾ ಇವಳ ಸೊಕ್ಕೇ..ಆದರೆ ಅವಳೆಂದದು ಸುಳ್ಳಲ್ಲ..ನಾನು ನೋಡುತ್ತಿದ್ದಂತೇ ಅವಳು ಹೇಳಿದ ಕ್ರಯಕ್ಕೆ ಮಾರಾಟ  ಆಯಿತು..ನಾನು ಬೆಪ್ಪು ತಕ್ಕಡಿಯಂತೆ ಮನೆಗೆ ಬಂದೆ. ಏನಿದ್ದರೂ ಅವಳ ಮಾತು ನನಗೆ ಸವಾಲಿನಂತೆ ತೋರಿತು..ಬುದ್ಧಿ ಕಲಿಸ್ತೀನಿ, ಇರು ನಿಂಗೆ ಅಂತ ಸುಮಾರು ದಿನದಿಂದ ಕೀಲಿ ಹಾಕಿದ್ದ ನನ್ನ ಮಂಡೆಗೆ ಸ್ವಲ್ಪ ಎಣ್ಣೆ ಹಾಕಿ ಮಾಲಿಶ್ ಮಾಡಿದೆ..ಹುರ‍್ರ‍ೇ...ಅರೇ ನಾನ್ಯಾಕೆ ಬಡವನಯ್ಯಾ... ಫಲ ಭರಿತ ಅಮ್ಮನ ಹಿತ್ತಲಿನ ಬಳಿ ನನ್ನ ವಾಸವಿರಲು!!! ನುಗ್ಗೆ ಸೊಪ್ಪು ಮತ್ತು ಹಲಸಿನ ಬೀಜದ ಉಪ್ಕರಿ...ಜೀವಕ್ಕೂ ಒಳ್ಳೆಯದು..ಹಣದ ಉಳಿತಾಯವೂ ಆಯಿತು...ಡಬ್ಬಲ್ ಧಮಾಕಾ!!! ಬೆಲ್ಲ ಖಾರ ಚೆನ್ನಾಗಿ ಹಾಕಿ ಮಾಡಿಬಿಟ್ಟೆ ಉಪ್ಕರಿ. ಮಕ್ಕಳಿಗೂ ಹಿಡಿಸಿತು. ನುಗ್ಗೆ ಸೊಪ್ಪು ಬಹಳ ಒಳ್ಳೆಯದು. ಅಲ್ಲದೆ ಒಂದಿಷ್ಟು ಹಲಸನ್ನು ಉಪ್ಪು ನೀರಿನಲ್ಲಿ ಹಾಕಿಟ್ಟೆ...ನಮ್ಮ ಕೊಂಕಣಿಯಲ್ಲಿ ಸಾಲ ಅಂತ ಕರೆಯುತ್ತಾರೆ...ಇವತ್ತು ಅದರ ಉಪ್ಕರಿ..ಸುವರ್ಣಗಡ್ಡೆ  ಹಾಕುವ ಬದಲು ಹಲಸಿನ ಬೀಜ ಹಾಕಿ ಬೇಳೆ ಸಾಗು ಮಾಡೋದು.  ಬಸಳೆ, ಹಸಿ ಮೆಣಸಿನ ಕಾಯಿ ಬೆಳೆದಿದೆ. ಉಪ್ಪಿಗೆ ಹಾಕಿದ ಮಾವಿನ ಕಾಯಿಯ ಗೊಜ್ಜು ನಾಳೆ...ಹೀಗೆ ಹಿತ್ತಲು ಇದ್ದರೆ ನಮಗೆ ಬೇಕಾದುದನ್ನು ಬೆಳೆಯಬಹುದು. ಪ್ರತಿಯೊಬ್ಬರು ಹೀಗೆ ಮಾಡಿದರೆ ಬೆಲೆ ಏರಿಕೆ ಒಂದು ಹಿಡಿತಕ್ಕೆ ಬರುವುದರಲ್ಲಿ ಸಂಶಯವಿಲ್ಲ..ಆದರೆ ನಮಗೆಲ್ಲಾ ಮೈಗಳ್ಳತನ..ಬಗ್ಗಿ ಕೆಲಸ ಮಾಡಲು ಕಷ್ಟ..ಹಾಗಾಗಿ ಬೆಲೆ ಏರುತ್ತಲೇ ಹೋಗೋದು ಸಹ ಗ್ಯಾರಂಟಿ!!

ಹೊಟ್ಟೆ ರಿಪೇರಿ ಮಾಡ್ಲಿಕ್ಕೆ ಮನೆ ಮದ್ದು!!!
     
                 


             ಹಲಸಿನ ಕಾಯಿ ತಿನ್ನಲು ಬಹಳ ರುಚಿ ನಿಜ, ಆದರೆ ಅಪರೂಪಕ್ಕೆ ಸಿಗೋದು ಅಂತ ಮಿತಿ ಮೀರಿ ತಿಂದರೆ ಅದರ ಪರಿಣಾಮ ತಿಳಿಯಲು ಬಹಳ ಹೊತ್ತು ಬೇಕಿಲ್ಲ..ಹೊಟ್ಟೆಯೊಳಗಿಂದ ಬರುವ ಗುರು ಗುರು ಶಬ್ದ ಮುಜುಗರ ಜೊತೆಗೆ ನೋವು ಕೊಡುತ್ತೆ...ಹಲಸಿನ ಹಣ್ಣು, ಮಾವಿನ ಹಣ್ಣು, ಜೊತೆಗೆ ಜೀವು ಗುಜ್ಜೆ ಎಲ್ಲವೂ ಬೆಳೆಯುವುದರಿಂದ ನಮ್ಮ ಮನೆಯಲ್ಲಿ ಈ ಬೇಸಿಗೆ ಹಣ್ಣುಗಳ ಕಾರುಬಾರು ಎಷ್ಟಿರಬಹುದೆಂದು ನಿಮಗೀಗಾಲೇ ಊಹೆಗೆ ಬಂದಿರಬಹುದು. ಅದೃಷ್ಟವಶಾತ್, ನಮ್ಮ ಅಮ್ಮ ಮನೆ ಮದ್ದು ತಯಾರಿಸುವುದರಲ್ಲಿ ಬಹಳ ನಿಪುಣೆ..ನಮ್ಮಲ್ಲಿ ನನ್ನ ಪತಿ ಬಿಟ್ಟರೆ, ನಾವೂ ಯಾರು ಅಲೋಪತಿ ವೈದ್ಯರ ಬಳಿಗೆ ಹೋಗುವುದು ವಿರಳ...ನನಗೆ ನೆನಪಿದ್ದ ಹಾಗೆ ಬಹುಶಃ ೬ರೋ, ಏಳೋ ವರ್ಷಗಳ ಹಿಂದೆ ಈ ಬುದ್ಧಿವಂತ ಹಲ್ಲಿನ {ವಿಸ್ಡಮ್ ಟೀತ್:-)} ಮೇಲೆ ಮಾಂಸ ಬೆಳೆದು ತೊಂದರೆ ಕೊಟ್ಟಿದಾಗ ಅದನ್ನು ತೆಗೆಸಲು ಹೋಗಿದ್ದೆ..ಮತ್ತು ೫ ವರ್ಷಗಳ ಹಿಂದೆ ನನ್ನ ಮಗನಿಗೆ ಮಲೇರಿಯಾ ಆದಾಗ ವೈದ್ಯರ ಸಹಾಯ ಅನಿವಾರ್ಯವಾಗಿತ್ತು. ನಿಮಗೊಂದು ಚಿಕ್ಕ ಕತೆನೂ ಹೇಳ್ತೇನೆ. ನನ್ನ ಮಗಳು ಫಿಸಿಯೋತೆರಪಿ ಕಾಲೇಜಿಗೆ ಹೊಸದಾಗಿ ಸೇರಿದಾಗಿನ ಸಂಗತಿ..... ಮೊದಲ ದಿನ  ಲೆಕ್ಚರ್‌ರ ಪ್ರಶ್ನೆ ಅವಳಿಗೆ...ನೀವು ವೈದ್ಯರ ಬಳಿ ಹೋದಾಗ ಅವರು ನಿಮ್ಮನ್ನು ಮೊದಲು ಹೇಗೆ ಪರೀಕ್ಷಿಸುತ್ತಾರೆ......ನನ್ನ ಮಗಳು ಕಕ್ಕಾಬಿಕ್ಕಿ..ಅವಳು ವೈದ್ಯರ ಬಳಿಗೆ ಹೋದರೆ ತಾನೆ! ಸುಮ್ಮನೆ ಬೆಪ್ಪುತಕ್ಕಡಿಯ ಹಾಗೆ ನಿಂತಳಂತೆ..ಮನೆಗೆ ಬಂದವಳು ನನ್ನ ಮೈಮೇಲೆ ತನ್ನ ಮಾತಿನ ಮಳೆ ಸುರಿಸಿದಳು...ನನಗೆ ಇವಳ ವಾಗ್ಝರಿಯ ಕಾರಣ ಗೊತ್ತೇ ಆಗಲಿಲ್ಲ..ಕೇಳಿಸಿದ್ದು ಒಂದೇ, ಎಲ್ಲ ನಿನ್ನಿಂದ ಮತ್ತು ಅಜ್ಜಿಯಿಂದ ..ಅಷ್ಟೇ! ಕೊನೆಗೆ ಅವಳೇ ಸಮಾಧಾನ ತಂದುಕೊಂಡು ನಡೆದ ಸಂಗತಿ ತಿಳಿಸಿದಳು..ನನಗೋ ತಡಿಯಲಾರದ ನಗು, ಜೊತೆಗೆ ಹೆಮ್ಮೆನೂ..ಈ ಕಾಲದಲ್ಲಿ ನಿಮಗೆ ಇಂತಹ ಜನರು ಎಲ್ಲಿಯಾದರೂ ನೋಡಲು ಕಾಣ್ತಾರಾ? ಸಣ್ಣ ಸಣ್ಣ ತೊಂದರೆಗಳಿಗೂ ವೈದ್ಯರ ಬಳಿ ಅಥವಾ ಮೆಡಿಕಲ್ ಶಾಪ್ ( ಈಗೀಗ ಮೆಡಿಕಲ್ ಶಾಪಿನಲ್ಲಿ ಕೆಲಸ ಮಾಡುವವರೂ ಅರ್ಧ ವೈದ್ಯರಾಗಿರುತ್ತಾರೆ..ಚಿಕ್ಕ ಪುಟ್ಟ ತೊಂದರೆಗಳಿಗೆ ಅವರೇ ಮದ್ದನ್ನು ಕೊಟ್ಟು ವೈದ್ಯರ ಖರ್ಚು ಉಳಿಸುತ್ತಾರೆ.)ಹೋಗದೇ ಜನರಿಗೆ ಸಮಾಧಾನ ಇರೋದಿಲ್ಲ.

      ಸರಿ, ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ಈ ಮನೆ ವೈದ್ಯ ನಮಗೆ ಬರುವ ಸಣ್ಣ ಪುಟ್ಟ ತೊಂದರೆಗಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ  ಅಂತ ಹೇಳಲು..ಸಾಧಾರಣವಾಗಿ ನನಗೆ ಆರೋಗ್ಯ ಕೈಕೊಡುವುದು ತುಂಬಾ ಕಡಿಮೆ. ನಮ್ಮಮ್ಮ ತಯಾರಿಸುವ ಗಿಡ ಮೂಲಿಕೆಯ ಕಷಾಯ ಸೇವನೆಯಿಂದಲೇ ನಮ್ಮ ರೋಗ ನಿರೋಧಕ ಶಕ್ತಿ ಚೆನ್ನಾಗಿ ಕೆಲಸ ಮಾಡುತ್ತಿದೆ ಅಂತ ನನ್ನ ನಂಬಿಕೆ.  ಅಲ್ಲದೆ ೭೦ ದಾಟಿದ ನನ್ನ ಅಪ್ಪ, ೬೦ ದಾಟಿದ ಅಮ್ಮ ಇಬ್ಬರೂ ಯಾವ ಗುಳಿಗೆಯ ಸೇವನೆಯಿಲ್ಲದೆ ಸುಖೀ, ಆರೋಗ್ಯಮಯ ಜೀವನ ನಡೆಸುತ್ತಿದ್ದಾರೆ.

      ಆದರೂ ನಾನು ಮೊನ್ನೆ ತಿಂದ ಹಲಸಿನ ಹಣ್ಣು ತನ್ನ ಕಾರಬಾರು ತೋರಿಸಲು ಹಿಮ್ಮೆಟ್ಟಲಿಲ್ಲ..ಅಮ್ಮನ ಬಳಿ ಓಡಿದೆ. ಅವರು ಹೇಳಿದ ಹಾಗೆ ಮದ್ದು ತಯಾರಿಸಿದೆ...ಅರ್ಧ ಗಂಟೆಯೊಳಗೆ ನಾನು ನಾರ್ಮಲ್!!!  ನಿಮಗೂ ಹೇಳೋಣ ಆ ಮದ್ದಿನ ಗುಟ್ಟು ಅಂತ ಅನಿಸಿತು.. ನನಗೊತ್ತುರೀ..ಇಂತಹ ಮದ್ದುಗಳ ಬಗ್ಗೆ ಅಂತರ್ಜಾಲದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತೆ ಅಂತ...ನೋಡಿದವರು ಓದುತ್ತಾರೆ..ಹಾಗೇ ಮರೆಯುತ್ತಾರೆ..ಯಾರಪ್ಪಾ ಇಂತಹುದೆಲ್ಲ ಮಾಡುತ್ತಾರಪ್ಪಾ..ಸುಮ್ಮನೆ ಗುಳಿಗೆ ನುಂಗುವುದು ಬಹಳ ಇಜ್ಜಿ ತಾನೆ! ಅದೆಲ್ಲಾ ಇರಲಿ, ನಾನಂತೂ ಬರೆಯುತ್ತೇನೆ..ಮಾಡೋದು ಬಿಡೋದು ನಿಮ್ಮಿಷ್ಟ..

       ಪ್ಯಾರಲೆ ಮರದ ಚಿಗುರೆಲೆ ಒಂದಿಷ್ಟು, ಒಂದು ಚಮಚ ಜೀರಿಗೆ, ೨,೩ ಎಸಳು ಬೆಳ್ಳುಳ್ಳಿ, ೨,೩ ಕಪ್ಪುಮೆಣಸು ಎಲ್ಲವನ್ನೂ ಸೇರಿಸಿ ಚೆನ್ನಾಗಿ ಜಜ್ಜಿ..ಮಿಕ್ಸಿಯಲ್ಲೂ ಹಾಕಬಹುದು. ಆ ಹುಡಿಯನ್ನು ತೆಳ್ಳಗೆ ಮಾಡಿದ ಮಜ್ಜಿಗೆಗೆ ಸೇರಿಸಿ. ರುಚಿಗೆ ತಕ್ಕ ಹಾಗೆ ಕಲ್ಲುಪ್ಪು ಸೇರಿಸಿ. ಮಜ್ಜಿಗೆ ಹುಳಿಯಾಗಿರಬಾರದು..ನೀರು ಸೇರಿಸಿದರೆ  ಹುಳಿ ಕಮ್ಮಿಯಾಗುತ್ತೆ.  ಎಷ್ಟು ರುಚಿಯಾಗಿರುತ್ತೆ ಗೊತ್ತಾ!   ಮದ್ದಿಗೆ ಮದ್ದು ಹಾಗೆ ನಾಲಗೆಗೂ ರುಚಿಯಾಗಿರುತ್ತೆ. ಹೊಟ್ಟೆ ಸರಿ ಇದ್ದರೂ ಮಾಡಿ ಕುಡಿಲಿಕ್ಕೆ ಅಡ್ಡಿ ಇಲ್ಲ..ಮಾಡಿ ನೋಡಿ ನಂಗೆ ತಿಳಿಸಿಬಿಡಿ ನಿಮ್ಮ ಅಭಿಪ್ರಾಯ...:-)

26 May, 2012

ಮಿನಿ ಕತೆಗಳು!      ಬೆಳಿಗ್ಗೆ ಬೆಳಿಗ್ಗೆ ಅವನ ಪಿರಿಪಿರಿ ಕೇಳಿ ಹೊರಬಂದು ನೋಡಿದರೆ ಸ್ಕೂಟರ್ ಮೇಲೆ ಇರುವ ನಾಲ್ಕು ಗೆರೆಗಳಿಗಾಗಿ ಬೊಬ್ಬೆ... ನನ್ನನ್ನು ನೋಡಿ, "ಎಲ್ಲಾ ನಿನ್ನಿಂದಲೇ... ಅವುಗಳನ್ನು ಅಟ್ಟಕ್ಕೇರಿಸಿ ಇಟ್ಟಿದಿಯಾ. ನೋಡು, ನಿನ್ನ ಬೆಕ್ಕು ಹೇಗೆ ಸೀಟ್  ಹರಿದಿದೆ." ಅಂದ. ಅದರ ದಿನ ಸರಿಯಿಲ್ಲ ಕಾಣುತ್ತೆ.. ಬಂತು ನನ್ನ ಕಾಳು ಅಲ್ಲಿಗೆ ಆಗಲೇ. ದೊಡ್ಡ ಕಲ್ಲೊಂದನ್ನು ತೆಗೆದು ಗುರಿಯಿಟ್ಟು ಬೀಸಿದ. ಕಾಳು ಈ ಮೊದಲೇ ಒಂದೆರಡು ಸಲ ಪೆಟ್ಟಿನ ರುಚಿ ನೋಡಿತ್ತು. ಅದು ಓಡಿ ಹೋಗುವಷ್ಟರಲ್ಲಿ ಕಲ್ಲು ಗುರಿ ತಲುಪಿತ್ತು... ನನ್ನ ಕಣ್ಣಲ್ಲಿ ನೀರು ಚಿಮ್ಮಿತ್ತು!

 ಮರುದಿನ ಬೆಳಿಗ್ಗೆ ಇನ್ನೂ ದೊಡ್ಡ ದೊಂಡೆ... ಇಡೀ ಸೀಟೇ ಹರಿದು ಹೋಗಿಬಿಟ್ಟಿದೆ. ಇನ್ನು ೩೦೦ ರೂಪಾಯಿ ಖೋತಾ... ಅಂತ ಕೇಳಿತು! ನಾನು ಹೊರಗೆ ಹೋಗ್ಲೇ ಇಲ್ಲ.. ನನ್ನ ಮುಖದಲ್ಲಿ ಸುಂದರ ಮಂದಹಾಸ!

                      ***********************

       ಆ ನಟಿ ನಮ್ಮವಳಲ್ಲ. ಅಂದರೆ ನಮ್ಮ ದೇಶದವಳಲ್ಲ. ಆದರೂ ನಮ್ಮವರಿಗೆ ಅವಳೆಂದರೆ ತುಂಬಾ ಅಭಿಮಾನ. ಯಾಕೆಂದರೆ ಅವಳ ಖರ್ಚು ತುಂಬಾ ಕಮ್ಮಿ. (ಬಟ್ಟೆಯ ಖರ್ಚು ಇಲ್ಲವೆಂದೇ ಹೇಳಬಹುದು) ಅಲ್ಲದೆ ನಿರ್ದೇಶಕ ಮತ್ತು ನಿರ್ಮಾಕಪರಿಗೆ ಬೇಕಾದ ಹಾಗೆ ನಟಿಸುತ್ತಾಳೆ. ತುಂಬಾ ಟೇಕ್ ಕೂಡ ತಕ್ಕೊಳಲ್ಲ. ಅಂದ ಮೇಲೆ ರೀಲು ಕಮ್ಮಿನೇ ಉಪಯೋಗಿಸಬಹುದಲ್ಲವಾ.  ಮತ್ತೆ ನಮ್ಮ ಜನರಿಗೂ ಆಕೆಯೆಂದರೆ ತುಂಬಾ ಅಭಿಮಾನ. ಇಷ್ಟು ಸಹಕಾರ ಕೊಡುವ  ನಟೀಮಣಿಯರು ನಮ್ಮಲ್ಲಿ ಇದ್ದಾರ? 
       ಅಸಲು ಕತೆ ಈಗ ಪ್ರಾರಂಭ. ಅಂತ್ಯ ಮಾತ್ರ ಇಲ್ಲ ಇದಕ್ಕೆ..ನೀವೇ ಕಲ್ಪಿಸಿಕೊಳ್ಳಿ. ಇಲ್ಲ ಬರೀರಿ! ಆ ನಟೀಮಣಿ ನಮ್ಮ ಗಾಂಧಿನಗರಕ್ಕೂ ಪ್ರವೇಶಿದ್ದಾಳೆ.  ಅಲ್ಲಿ ಅವಳಿಗೆ ಸೀರೆ, ತಾಂಬೂಲ ಕೊಟ್ಟು ಸ್ವಾಗತಿಸಲಾಗಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭ!........ಮುಂದುವರಿಯುವುದು ..
ಯಾರು ಬೇಕಾದರೂ ಕತೆಯನ್ನು ಮುಂದುವರಿಸಬಹುದು...

ನನ್ನ ತಮ್ಮ ಕಿರಣ್ ಮುಂದುವರಿಸಿದ್ದಾನೆ ಕತೆ ...ಓದಿ ನೋಡಿ...

 ........ಹೀಗೆ ನಾಲ್ಕು ದಿನಗಳು ಕಳೆದವು...ನಟಿಮಣಿ ಅಲ್ಪಸ್ವಲ್ಪ ಕನ್ನಡವನ್ನೂ ಕಲಿತಳು, ಬೇಡದೆ ಇರೋ wrong reasons ಗೆಲ್ಲ ಸುದ್ದಿಯಾದಳು, ಸುದ್ದಿಯೇ ಅವಳಾದಳು. ಕನ್ನಡವನ್ನ ಗುತ್ತಿಗೆ ತೆಗೆದು ಕೊಂಡಿರೋ ಕೆಲವು ಸಂಘಗಳಿಂದ ರಾಜ್ಯೋಸ್ಥವ (?) ಕ್ಕೆ ಭಾಷಣ ಮಾಡಲು ಆಹ್ವಾನ ಕೂಡ ಬಂತು, ಅಲ್ಪ ಕಾಲದಲ್ಲೇ ಕನ್ನಡ ಕಲಿತಿರುವ ಇವರು ಗ್ರೇಟ್, ಮುಂದಿನ ಜನ್ಮದಲ್ಲಿ ಈ ಮಣ್ಣಿನಲ್ಲೇ ಹುಟ್ಟಲಿ ಎಂದು ಯಾರೋ ರಿಯಲ್ ಎಸ್ಟೇಟ್ ಧಣಿಯೊಬ್ಬ ಉಲಿದ, ಆಕೆ, ಕನ್ನಡ ಕಲಿತದ್ದು work out ಆಯಿತೆಂದು ತುಟಿಯಂಚಿನಲ್ಲಿ ನಗುತ್ತಿದ್ದದ್ದನ್ನು ಯಾರೂ ಗಮನಿಸಲೇ ಇಲ್ಲ.

’ಶ್ರೀರಾಮಕೃಷ್ಣ ಪರಮಹಂಸ ವಚನವೇದ’- ನನ್ನ ಭಗವದ್ಗೀತೆ!-2


ಭಕ್ತ: "ಭಗವಂತ ದುಷ್ಟರನ್ನೇಕೆ ಸೃಷ್ಟಿಸಿದ?"

ಶ್ರೀರಾಮಕೃಷ್ಣರು: "ಆತನ ಇಚ್ಛೆ , ಆತನ ಲೀಲೆ, ಆತನ ಮಾಯೆಯಲ್ಲಿ ವಿದ್ಯೆಯೂ ಇದೆ. ಅಂಧಕಾರದ ಅವಶ್ಯಕತೆಯೂ ಇದೆ. ಅದು ಬೆಳಕಿನ ಮಹತ್ತನ್ನು ಇನ್ನೂ ಹೆಚ್ಚಾಗಿ ಪ್ರಕಾಶಗೊಳಿಸುತ್ತದೆ. ಕಾಮ, ಕ್ರೋಧ, ಲೋಭ ಇವು ಕೆಟ್ಟವೇನೂ ನಿಜ. ಹಾಗಾದರೇಕೆ ಅವನ್ನು ಸೃಷ್ಟಿಸಿದ್ದಾನೆ ಅಂತೀಯೋ? ಮಹಾಪುರುಷರನ್ನು ತಯಾರುಮಾಡಲು. ಇಂದ್ರಿಯಗಳನ್ನು ಗೆದ್ದರೆ ಮನುಷ್ಯ ಮಹಾಪುರುಷನಾಗುತ್ತಾನೆ. ಜಿತೇಂದ್ರಿಯನ ಕೈಯಲ್ಲಿ ಏನು ತಾನೆ ಸಾಧ್ಯವಿಲ್ಲ? ಭಗವಂತನ ಸಾಕ್ಷಾತ್ಕಾರವೂ ಆತನ ಕೃಪೆಯಿಂದ ದೊರೆತುಬಿಡುತ್ತದೆ. ಮತ್ತೆ, ಬೇರೆ ದೃಷ್ಟಿಯಿಂದ ನೋಡು. ಕಾಮದಿಂದಲೇ ಆತನ ಸೃಷ್ಟಿ-ಲೀಲೆ ಮುಂದುವರಿಯುತ್ತದೆ."
    
 "ದುಷ್ಟರ ಅವಶ್ಯಕತೆಯೂ ಇದೆ. ಒಮ್ಮೆ ಒಂದು ಎಸ್ಟೇಟಿನ ಜನರು ಪುಂಡೆದ್ದರು. ಜಮೀನುದಾರ ಗೋಲೋಕಚೌಧುರಿಯನ್ನು ಅಲ್ಲಿಗೆ ಕಳುಹಿಸಬೇಕಾಯಿತು. ಆತ ಅಂಥಾ ನಿರ್ದಯಿ, ಆತನ ಹೆಸರನ್ನು ಕೇಳಿಯೇ ಜನರು "ತರತರ" ನಡುಗಲಾರಂಭಿಸಿದರು."
     
"ಪ್ರತಿಯೊಂದರ ಅವಶ್ಯಕತೆಯೂ ಇದೆ. ಒಮ್ಮೆ ಸೀತೆ ರಾಮನಿಗೆ ಹೇಳಿದಳು.: ’ರಾಮ, ಅಯೋಧ್ಯೆಯಲ್ಲಿ ಪ್ರತಿಯೊಂದು ಮನೆಯೂ ಅರಮನೆಯಂತಿದ್ದರೆ ಬಹಳ ಚೆನ್ನಾಗಿರುತ್ತದೆ! ಅನೇಕ ಮನೆ ನೋಡುತ್ತೇನೆ, ಹರಕಲು-ಮುರುಕಲು, ಬಹಳ ಹಳೆಯವು.’ ರಾಮ ಹೇಳಿದ: ’ಸೀತೆ, ಎಲ್ಲಾ ಮನೆಗಳೂ ಒಳ್ಳೆ ಸುಂದರವಾದುದೇ ಆಗಿಬಿಟ್ಟರೆ, ಮೇಸ್ತ್ರಿಗಳಿಗೆ ಗತಿ?(ನಗು.) ಭಗವಂತ ಎಲ್ಲಾ ರಕಮುವಾರಿ ಸೃಷ್ಟಿಸಿದ್ದಾನೆ-ಒಳ್ಳೆ ಮರ, ವಿಷದ ಗಿಡ, ಜೊತೆಗೆ ಜೊಂಡು ಕೂಡ. ಪ್ರಾಣಿಗಳಲ್ಲಿಯೂ ಒಳ್ಳೇದು ಕೆಟ್ಟದ್ದು ಎಲ್ಲಾ ಇವೆ- ಹುಲಿ, ಸಿಂಹ, ಹಾವು ಎಲ್ಲಾ."
   - ಶ್ರೀರಾಮಕೃಷ್ಣ ವಚನವೇದ 

ದೀಪಾ ಮತ್ತವಳ ಪ್ರೀತಿ!-೧            ಇದು ಎಷ್ಟನೆಯ ಬಾರಿ ಮಾಡಿದ ಯತ್ನವಂತಲೂ ನೆನಪಿಲ್ಲ...ಆದರೆ ಈ ಬಾರಿಯ ಯತ್ನ ಹಾಳಾಗಲು ಬಿಡುವುದಿಲ್ಲ..ಧೈರ್ಯದಿಂದ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೇನೆ. ಒಂದಂತೂ ನಿಜ, ಈ ಸಲ ಒಂದು ಡಿಫರೆಂಟ್ ಆಂಗಲಿನಲ್ಲಿ ಊಹಿಸಿ, ಕತೆಯನ್ನು ನಿರೂಪಿಸಲು ಯತ್ನಿಸಿದ್ದೇನೆ..ನನ್ನ, ನನ್ನ  ಸ್ನೇಹಿತರ, ಹತ್ತಿರದ ನೆಂಟರ ಅನುಭವಗಳನ್ನೂ ಉಪಯೋಗಿಸಿದ್ದೇನೆ.  ದಯವಿಟ್ಟು ಯಾರೂ ಇದನ್ನು ತಮ್ಮ ತಮ್ಮ ನಿಜಜೀವನದೊಂದಿಗೆ ಹೋಲಿಸಲು ನೋಡಬೇಡಿ...:-)))
         ಒಮ್ಮೆಲೇ ಬೀಸಿದ ಗಾಳಿಗೆ ಕಾಗದಗಳೆಲ್ಲಾ ಚದುರಿ ಹೋಗಿ ದೀಪಾಳನ್ನು ಎಚ್ಚರಿಸಿದಂತಾಯಿತು. ಬೆಳಿಗ್ಗೆ ೯ಕ್ಕೆ ಹೋದ ವಿದ್ಯುತ್ ಬಂದು ಫ್ಯಾನು ತಿರುಗಿದಾಗಲೇ ಅವಳು ವಾಸ್ತವಕ್ಕೆ ಹಿಂದಿರುಗಿದಳು. ಕಾಗದಗಳನೆಲ್ಲಾ ಫೈಲಿಗೆ ಹಾಕಿದಳು. ಉದಯೋನ್ಮುಖ ಲೇಖಕಿ ಎಂದು ತನ್ನ ಬಗ್ಗೆ ಬರೆದ, ೨ ವಾರಗಳ ಹಿಂದೆ  ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ನೋಡಲು ಫೈಲು ತೆಗೆದಿದ್ದಳು. ಅದನ್ನು ನೋಡಿಯಾದ ಮೇಲೆ, ಈ ೩ ವರುಷಗಳಿಂದ ತಾನು ಬರೆದ ಕತೆ, ಕವನಗಳತ್ತಲೂ ಗಮನ ಹೋಗಿ, ಅದನ್ನು ಹರಡಿಕೊಂಡು ಕುಳಿತ್ತಿದ್ದಳು.  ವಾಸ್ತವಕ್ಕೆ ಬಂದ ಅವಳ ಗಮನ ಅಡಿಗೆ ಕೋಣೆಯತ್ತ, ಇನ್ನೂ ಒಪ್ಪ ಮಾಡದ ಹಾಸಿಗೆಗಳತ್ತ  ಹರಿಯಿತು. ನಿಟ್ಟುಸಿರು ಬಿಡುತ್ತಲೇ ಸೋಫಾದ ಮೇಲಿಂದ ಎದ್ದು ಅಡಿಗೆ ಮನೆಗೆ ಹೋಗಬೇಕಿಂದಿದ್ದವಳು ಆ ಕಡೆ ಹೋಗದೆ ಮಲಗುವ ಕೋಣೆಯಲ್ಲಿರುವ ನಿಲುವುಗನ್ನಡಿಯ ಎದುರು ನಿಂತಳು. ಮುಖವನ್ನು ಕನ್ನಡಿಯ ಸಮೀಪಕ್ಕೆ ತಂದಳು..ಅಲ್ಲಲ್ಲಿ ಇಣುಕುತ್ತಿದ್ದ ಬಿಳಿ ಕೂದಲುಗಳು ಅವಳಿಗೆ ಅವಳ ವಯಸ್ಸನ್ನು ಮತ್ತೆ ನೆನಪಿಸಿದವು. ಹುಂ, ತಲೆಗೆ ಮದರಂಗಿ ಹಾಕದೇ ತುಂಬಾ ದಿನವಾಯ್ತು.... ನಾಳೆ ನೆನಪಿನಿಂದ ಹಾಕಬೇಕು ಅಂದುಕೊಂಡಳು. ಕಣ್ಣಿಗೇರಿಸಿದ ಕನ್ನಡಕವು ಕನ್ನಡಿಯಲ್ಲಿನ ಮುಖವನ್ನು ಮಸುಕು ಮಾಡಿತ್ತು. ಸಮೀಪದೃಷ್ಟಿ ದೋಷಕ್ಕಾಗಿ ಧರಿಸುವ ಕನ್ನಡಕದಿಂದ ತನಗೀಗ ಸಮೀಪವಿರುವ ವಸ್ತುಗಳು ಸಮರ್ಪಕವಾಗಿ ಕಾಣುತಿಲ್ವೇ...ಬಾಹ್ಯ ನೋಟಕ್ಕೆ ವಯಸ್ಸಿನ ಪರಿಣಾಮ ಅಷ್ಟಾಗಿ ಗಮನಕ್ಕೆ ಬರುವುದಿಲ್ಲವಾದರೂ ವಯಸ್ಸಿನ ಪರಿಣಾಮ ಅಂಗಾಗಗಳ ಮೇಲೆ ಆಗದಿರುತ್ತದೆಯೇ? ಅಲ್ಲದೆ ೨೦ವರ್ಷಗಳ ಸತತ ದುಡಿತದಿಂದಾಗಿ ತನಗೆ ಈಗ ಕೈ ನಡುಗುವುದೂ ಪ್ರಾರಂಭವಾಗಿದೆ. ಈ ಎಲ್ಲಾ ಹುಳುಕನ್ನು ತಾನು ಅವನಿಂದ ಮುಚ್ಚಲಾದಿತೇ! ಕನ್ನಡಕವನ್ನು ತೆಗೆದು ಮತ್ತೊಮ್ಮೆ ಮುಖದ ಮೇಲೆ ದೃಷ್ಟಿ ಹರಿಸಿದಳು. ಹುಂ, ಮುಖವೇನು ಅಷ್ಟು ಬದಲಾಗಿಲ್ಲ...ಹಾಗಾಗಿಯೇ ತನ್ನ ಶಾಲಾ ಕಾಲೇಜು ಮಿತ್ರರು ತನ್ನನ್ನು ಸುಲಭವಾಗಿ ಗುರುತಿಸುವರು. ಆದರೂ ಉಳಿದ ಹುಳುಕುಗಳು..ಅವನ್ನೇನು ಮುಚ್ಚಲಾಗುವುದಿಲ್ಲವಲ್ಲ...ತಲೆ ಕೊಡವಿದಳು..ತಾನು ಯಾರು, ಏನು ಎಂದು ಮರೆತೇ ಬಿಟ್ಟು ¸ÀªÀĸÉåAiÉÄà ಅಲ್ಲದ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡಿರುವುದನ್ನು ನೋಡಿ ಆ ಸ್ಥಿತಿಯಲ್ಲೂ ನಗು ಬಂತು ದೀಪಾಳಿಗೆ. ರಾಶಿ ಬಿದ್ದಿವೆ ಕೆಲಸಗಳೆಲ್ಲಾ...ನೋಟ ಮೊಬೈಲ್‍ನತ್ತ ಹೋಯಿತು..ಹುಂ ಏನೂ ಸಂದೇಶವಿರಲಿಲ್ಲ. ಗಂಡ ಬರುವಷ್ಟರಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸದಿದ್ದರೆ ಸುಮ್ಮನೆ ಸಹಸ್ರನಾಮಾರ್ಚನೆ ಕೇಳುವ ಶಿಕ್ಷೆ ಅನುಭವಿಸಬೇಕಾದಿತು ಎಂದು ಓಟದ ನಡಿಗೆಯಲ್ಲಿ ಅಡುಗೆ ಮನೆಗೆ ನುಗ್ಗಿದಳು. ಬೆಳಿಗ್ಗೆ ಕಾಪಿ ಕುಡಿದ ಗ್ಲಾಸು, ತಟ್ಟೆಗಳೆಲ್ಲಾ ಒಣಗಿ ಅವಳನ್ನು ಅಣಕಿಸುತ್ತಿದ್ದವು. ಹೀಗೆಲ್ಲಾ ಒಂದು ದಿನವೂ ಮಾಡಿದ್ದಿಲ್ಲ...ಪ್ರತಿಯೊಂದು ಕೆಲಸವೂ ಒಪ್ಪವಾಗಿ ಮಾಡಿ ಅಭ್ಯಾಸವಿದ್ದ ಆಕೆಗೆ ತನ್ನ ಈ ನಡವಳಿಕೆ ಬೇಸರ ತಂದಿತು. ೪೦ರ ಆಸುಪಾಸಿನಲ್ಲಿರುವ ತಾನು ಅದೇ ತಾನೆ ೧೬ ತುಂಬಿರುವ ಹಾಗೆ ಆಡುತ್ತೇನಲ್ಲಾ..ಅಬ್ಬಾ ಏನೂ ಮಾಯಾ ಜಾಲವಿದು...ಈ ಪ್ರೀತಿ, ಪ್ರೇಮ..ಇದರಲ್ಲಿ ಬಿದ್ದವರೆಲ್ಲಾ ಹೀಗೆ ಆಡುವರೇನು? ಅಲ್ಲ ಹದಿಹರೆಯದವರು ಹಾಗೆ ಆಡಿದರೆ ಅದರಲ್ಲೇನು ತಪ್ಪಿಲ್ಲ..ಆದರೆ ತಾನು? ಅದರಲ್ಲೂ ಇಬ್ಬರು ಹರೆಯದ ಹೆಣ್ಣು ಮಕ್ಕಳ ತಾಯಿಯಾಗಿ ಲವ್ವಲ್ಲಿ ಬಿದ್ದಿದ್ದೇನೆ..ಇದೇನು ಪರಮಾತ್ಮನ ಹೊಸ ಆಟ..ಇನ್ನು ಯಾವ ಯಾವ ಪರೀಕ್ಷೆಯನ್ನು ಎದುರಿಸಬೇಕೋ..ಆಲೋಚಿಸಿ ತಲೆ ಚಿಟ್ಟು ಹಿಡಿದಂತಾಯಿತು. ಸರಿ, ಬಂದದನ್ನು ಎದುರಿಸಬೇಕು..ಹೊರತು ಬೇರೆ ದಾರಿಯಿಲ್ಲ ಎಂದೆಣಿಸಿ ಮೊದಲು ತನ್ನ ನಿತ್ಯ ಕರ್ಮ ಮುಗಿಸಿ, ಮತ್ತೆ ಕುಳಿತು ಸಾವಕಾಶವಾಗಿ ಸಮಸ್ಯೆಯನ್ನು ಪರಿಶೀಲಿಸುವ ನಿರ್ಧಾರ ಮಾಡಿ, ಚಟಪಟನೆ ಅಡಿಗೆ ಕಾರ್ಯ ಮುಗಿಸಿ, ಬಟ್ಟೆಯತ್ತ ಗಮನ ಹರಿಸಿದಳು ದೀಪ. ಒಗೆಯುತ್ತಿದ್ದ ಅವಳಿಗೆ ಅವಳ ಹಿಂದಿನಿಂದ ಬಂದ ಕೈಯೊಂದು  ತನ್ನ ಸೊಂಟ ಬಳಸಿ, ಕಿವಿಯತ್ತ ಏನೋ ಉಸುರಿದ ಹಾಗೆ ಅನಿಸಿತು. ಮೈಯಲ್ಲೆಲ್ಲಾ ವಿದ್ಯುತ್ ಸಂಚಾರ! ಈ ಅನುಭವವನ್ನು ಮೆಲುಕು ಹಾಕುತ್ತಿರುವಾಗಲೇ ಜಂಗಮವಾಣಿ ಮೊಳಗಿತು..ಅತ್ತ ಕಣ್ಣು ಹರಿಸಿದವಳ ಎದೆ ಬಡಿತದ ತಾಳ ತಪ್ಪಿತು...ಹಲೋ ಎಂದುಸುರಿದವಳ ಕಿವಿಯಲ್ಲಿ ಇನಿಯನ ನಮಸ್ಕಾರ...ಅದೇ ಸಾಮಾನ್ಯ ಸಂಬೋಧನೆ, ಒಂದಿಷ್ಟು ನಿರಾಸೆಯಾದರೂ ಮಾತು ಮುಂದುವರಿಸಲು ಅದೇನೋ ಹಿಂಜರಿಕೆ. ಅತ್ತ ಅವನಿಗಾದರೂ ಅದೇ ರೀತಿಯ ತಳಮಳ...ಕೊನೆಗೂ ಅರ್ಥವಿಲ್ಲದ ಏನೋ ಮಾತಾಡಿ ಇಬ್ಬರೂ ಫೋನಿಟ್ಟರು. ಇನ್ನೂ ಏನೇನೋ ಆಡುವ, ಕೇಳುವ ಆಸೆ ಇಬ್ಬರಲ್ಲೂ ಇತ್ತು..ಆದರೆ ತಮ್ಮ ಸುತ್ತಲಿರುವ ಗೋಡೆಗಳ, ಕಿವಿಗಳ ಭಯ. ಹೇಗೋ ಒಗೆಯುವ ಕೆಲಸ ಮಾಡಿ ಬಂದವಳನ್ನು ಮನೆಯ ಕಸ ಕರೆಯುತ್ತಿತ್ತು. ೨೨ ವರುಷಗಳಿಂದ ರೂಢಿಯಾಗಿದ್ದ ಕೆಲಸ, ಕೈ ತನ್ನ ಕೆಲಸ ಮಾಡುತಿತ್ತು..ಆದರೆ ಮನಸ್ಸು ಮಾತ್ರ ಅದೇನೋ ಲೆಕ್ಕಾಚಾರ ಹಾಕುತಿತ್ತು. ಎಲ್ಲಾ ಕೆಲಸ ಮುಗಿದಾಗ ಗಂಟೆ ೧೨.೩೦ ಕಳೆಯಿತು. ಮೈಯೆಲ್ಲಾ ಬೆವರಿನಿಂದ ಒದ್ದೆಯಾಗಿತ್ತು...ಸ್ನಾನ ಮಾಡಲು ಹೊರಟ ಅವಳ ಕಣ್ಣು ಅಪ್ರಯತ್ನವಾಗಿ ಬೆಳಗಿದ ಮೊಬೈಲ್‍ನತ್ತ ಹೋಯಿತು. ಅವನ ಸಂದೇಶ...ಪ್ರೇಮ ಸಂದೇಶ! ದೇಹ ಬಿಸಿಯೇರಿತು, ಕಪೋಲ ರಂಗಾಯಿತು..ಪೈಪೋಟಿಯಿಂದಲೇ ತಾನೂ ಅಂತಹುದೇ ಸಂದೇಶ ಕಳುಹಿಸಿ, ಉತ್ತರಕ್ಕಾಗಿ ಕಾದು ಕುಳಿತಳು. ಅವಳಿಣಿಕೆ ತಪ್ಪಲಿಲ್ಲ...ನಿರೀಕ್ಷಿಸಿದ ಉತ್ತರ ಬಂದು ಅವಳೆದೆಯಲ್ಲಿ ಉತ್ಸವ! ಈ ಪರಿಯ ಅನುಭವ, ನೆತ್ತಿಯಿಂದ ಅಂಗುಷ್ಟದವರೆಗೂ ಹರಿಯುತ್ತಿರುವ ಝೇಂಕಾರ, ಎದೆಯ ತಂತಿಯ ಮೀಟಿದ ಸಂದೇಶಗಳು  ಅವಳನ್ನು ಸ್ವರ್ಗದ ಬಾಗಿಲಲ್ಲೇ ನಿಲ್ಲಿಸಿದ್ದವು. ಈ ಸುಖದ ಮುಂದೆ ಮುಂಬರುವ ಸಮಸ್ಯೆಗಳೆಲ್ಲ ಗೌಣವಾಗಿ ಬಿಟ್ಟಿದ್ದವು.


                       ಊಟದ  ಶಾಸ್ತ್ರ ಮಾಡಿ, ಹಾಸಿಗೆಯಲ್ಲಿ ಅಡ್ಡಾದವಳು ಫ್ಲಾಶ್ ಬ್ಯಾಕ್‍ಗೆ ಹೋದಳು. ತನ್ನೆಲ್ಲಾ ಹದಿಹರೆಯದ, ಯೌವನದ ದಿನಗಳನ್ನೂ, ಗೃಹಸ್ಥ ದಿನಗಳನೆಲ್ಲವ ಒಂದು ಸುತ್ತು ತಿರುಗಿ ಬಂದಳು ದೀಪ. ಊಹುಂ, ತಾನು ಮೂರು, ನಾಲ್ಕು ದಿನಗಳಿಂದ ಪಡೆದ ಅನುಭವದ ಸೋಂಕು ಇರಲಿಲ್ಲ ಆ ಹಳೆಯ ದಿನಗಳಿಗೆ. ಲೇಖಕಿ ತಾನೆ ಅವಳು..ತುಂಬಾ ಬೋಲ್ಡ್ ಅಲ್ಲದಿದ್ದರೂ ಈ ರೀತಿಯ ನವಿರಾದ ರೋಮಾಂಚನದ ಪ್ರೇಮದ ಅನುಭೂತಿಯನ್ನು ಅವಳ ಬರಹಗಳಲ್ಲಿ ವರ್ಣಿಸಿದ್ದಾಳೆ, ಹೊರತು ಅನುಭವಿಸಿರಲಿಲ್ಲ. ಗೊತ್ತು ಅವಳಿಗೆ ತನ್ನ ಮತ್ತು ತನ್ನ ಮಕ್ಕಳ ಅಪ್ಪನೆನಿಸಿಕೊಂಡವನ ಮಧ್ಯೆ ಇರುವ ಅಂತರ, ವೈಮನಸ್ಯ ಎಲ್ಲಕ್ಕೂ ಕಾರಣವೆಂದು. ದೀಪ ಏನೂ ಹೆಡ್ಡಿಯಲ್ಲ. ಅವಳಿಗೆ ಈ ಅಂತರ್ಜಾಲದಲ್ಲಿ ನಡೆಯುತ್ತಿರುವ ದುರ್ವ್ಯವಹಾರಗಳು ಚೆನ್ನಾಗಿ ಗೊತ್ತಿದ್ದವು. ಅಂತೆಯೇ ಅತೀ ಹೆಚ್ಚಿನ ಜಾಗರೂಕತೆ ಮಾಡಿಕೊಂಡಿದ್ದಳೂ ಸಹ. ಆದರೂ ಈ ಜನಪ್ರಿಯ ಕಲಾವಿದನಿಗೆ ತನ್ನ ಹೃದಯವನ್ನೇ ಕೊಟ್ಟುಬಿಟ್ಟಳು. ಸಹಸ್ರಾರು ಅಭಿಮಾನಿಗಳಿದ್ದರು ಅವಿನಾಶನಿಗೆ. ಅವರಲ್ಲಿ ಈ ದೀಪಳೂ ಒಂದಾಗಿದ್ದಳು. ದಿನೇ ದಿನೇ ದೀಪಾಳಿಗೆ ಗೊತ್ತಾಗದ ಹಾಗೆ ಅವಿಯ ಮೋಡಿಗೆ ಸಿಲುಕುತ್ತಾ ಹೋಗುತ್ತಿದ್ದಳು. ಅವನ ಚಿತ್ರಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಆರಿಸಿ ಜೋಪಾನವಾಗಿ ತೆಗೆದಿರಿಸಿಕೊಂಡಿದ್ದಳು. ಇದೆಲ್ಲಾ ಅಭಿಮಾನದಿಂದ ಮಾಡುವುದು ಅಂತಲೇ ಅವಳ ಅನಿಸಿಕೆಯಾಗಿತ್ತು...ಇಷ್ಟೇ ಅದರೆ ಪರವಾಗಿರಲಿಲ್ಲ..ಅವಿಯ ವೈಯ್ಯುಕ್ತಿಕ ಜೀವನದ ಬಗ್ಗೆಯೂ ಕುತೂಹಲವಿತ್ತವಳಿಗೆ. ಇದರ ಬಗ್ಗೆ ಪತ್ತೆದಾರಿ ಮಾಡಿದ ಅವಳು ಹೆಚ್ಚೇನು ಕಂಡು ಹಿಡಿಯಲಾಗಲಿಲ್ಲ. ಬರಹಗಾರ್ತಿಯಲ್ಲವೇ ಅವಳು..ಅವಿನಾಶನ ಗೃಹಸ್ಥ ಜೀವನದಲ್ಲಿ ಒಡಕಿದೆ ಎಂಬುದನ್ನು ಅವನು ಬಿಡಿಸುವ ಪೈಂಟಿಂಗ್‍ಗಳಿಂದಲೇ ಅಂದಾಜುಮಾಡಿಕೊಂಡಳು. ಅವಿನಾಶನ ಬ್ಲಾಗ್‍ಗೆ ಭೇಟಿ ನಿತ್ಯದ ಕೆಲಸಗಳಲ್ಲಿ ಒಂದಾಗಿತ್ತು. ಫೇಸ್ ಬುಕ್‍ನಲ್ಲಿ ಅನಿನಾಶನ ಪ್ರೊಫೈಲನ್ನು ಹುಡುಕಿ ಅವನ ಗೆಳತಿಯಾದಳು..ಶಾಲೆಯ ದಿನಗಳಲ್ಲಿ ಅಪರೂಪಕ್ಕೆ ಬಿಡಿಸುತ್ತಿದ್ದ ದೀಪ ಈಗ ಸಿರಿಯಸ್‍ ಆಗಿ ಚಿತ್ರ ಬಿಡಿಸಲು ಶುರು ಮಾಡಿದಾಗ ಮನೆಯಲ್ಲಿ ಮಕ್ಕಳ ಹುಬ್ಬೇರಿತು. ಎರಡನೆಯ ಮಗಳಿಗಂತೂ ಅಮ್ಮನ ಈ ಹೊಸ ಪರಿ ನೋಡಿ ಖುಶಿಯಾಗಿ ಅಮ್ಮ ತಮಾಶೆಯ ವಸ್ತುವಾದಳು.  ಪತಿಯೆನಿಸಿಕೊಂಡವನಿಗೆ ಮನೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆಯ ಪರಿವೇ ಇರಲಿಲ್ಲ. ಬಹುಶಃ ದೀಪಾಳಿಗೆ ಇದು ವರದಂತೆ ಆಯಿತು. ಬಿಡಿಸಿದ ಚಿತ್ರಗಳನ್ನು ಅವಿನಾಶನಿಗೆ ತೋರಿಸುವ ಹುಮ್ಮಸು. ಅವಿನಾಶನೂ ಭಾವುಕ ಹೃದಯದ ಕಲಾವಿದ...ದೀಪಾಳ ಉತ್ಸಾಹಕ್ಕೆ ಕುಂದು ತರದೇ ಉತ್ತೇಜಿಸಿದ. ನಿಧಾನವಾಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಕ್ರಮೇಣ ಒಳ್ಳೆಯ ಮಿತ್ರರಾದರು. ಅಂದ ಮೇಲೆ ಮೊಬೈಲ್ ನಂಬ್ರ ಅದಲು ಬದಲು ಆಗುತ್ತೆ ಅಲ್ಲವೆ. ಇಂತಹುದೇ ದಿನಗಳಲ್ಲಿ ದೀಪಾಳು ಅದ್ಯಾವುದರಿಂದಲೋ ಉತ್ತೇಜನ ಪಡೆದು ರಾಧಾಕೃಷ್ಣರ ಚಿತ್ರ ಬಿಡಿಸಿದಳು. ಈ ಚಿತ್ರದಲ್ಲಿ ತನ್ನೆಲ್ಲಾ ಮನದ ಭಾವನೆಗಳನ್ನು ಎರಕ ಹೊಯ್ದಿದ್ದಳು.  ಅವಿನಾಶನ ಹೃದಯವನ್ನು ಮೀಟಿತು ಈ ಚಿತ್ರ. ಎಬ್ಬಿಸಿತು ಒಳಗಿನ ಸುಪ್ತ ಭಾವನೆಗಳನ್ನು! ಅವನೂ ಸೋತ...ಅದೇನೊ ಅದೃಷ್ಟ...ಆ ದಿನ ಇಬ್ಬರೂ ನಿಧಾನವಾಗಿ ತಮ್ಮಿಬ್ಬರ ಹೃದಯಗಳನ್ನು ಬದಲಾಯಿಸಿ ಬಿಟ್ಟರು. ಆ ದಿನದಿಂದ ಇಬ್ಬರ ನಡುವೆ ಸತತವಾಗಿ ಸಂದೇಶಗಳು ಹೋಗುತ್ತಲೇ ಇವೆ. ರಾತ್ರಿಗಳಲೆಲ್ಲಾ ಮಧುರ ಸಂಭಾಷಣೆ ಇಬ್ಬರ ನಡುವೆ, ಸ್ವಪ್ನ ಲೋಕದಲ್ಲಿ. ಇಬ್ಬರೂ ನಲ್ವತ್ತು ದಾಟಿದವರಾದರೂ ಹದಿಹರೆಯರಂತೆ ಆಡತೊಡಗಿದ್ದರು. ಇಂದು ಬೆಳಿಗ್ಗೆಯಿಂದ ದೀಪಾಳಿಗೆ ಅವಿಯ ನೆನಪು ಜೋರಾಗಿ ಕಾಡತೊಡಗಿದ್ದು ಅವಳ ಮತ್ತು ಅವಳ ಪತಿಯ ನಡುವಿನ ಬಿಸಿ ಬಿಸಿ ಮಾತುಕತೆಯಿಂದ. ಪ್ರತಿಯೊಂದು ವಿಷಯದಲ್ಲಿ ತಪ್ಪು ಹುಡುಕುವುದು ಅವನಿಗೆ ಅಭ್ಯಾಸವಾಗಿತ್ತು ಅವನಿಗೆ. ಹೆಸರಿಗೆ ಮಾತ್ರ ಗಂಡಸು,  ಜವಾಬ್ದಾರಿಯೆಲ್ಲ ದೀಪಾಳ ತಲೆಯ ಮೇಲೆ. ಈ ಮೂರು ವರ್ಷಗಳಿಂದ ಮನೆ, ಮಕ್ಕಳಿಗೋಸ್ಕರ ದುಡಿಯುತ್ತಿದ್ದಾಳೆ. ಇತ್ತ ಮನೆಯ ಕೆಲಸವೂ ಮಾಡಿ ಅತ್ತ ಪಾರ್ಟ್ ಟೈಮ್ ಆಫೀಸ್ ಕೆಲಸ ಮಾಡಿ ಸೋತಿದ್ದಾಳೆ. ಅವನಾದರೋ ತನ್ನ ಆರಾಮವನ್ನೇ ಮೊದಲು ನೋಡಿಕೊಳ್ಳುವುದು. ಎಂದೂ ಮಕ್ಕಳ ಶಿಕ್ಷಣದ ಬಗ್ಗೆ, ಅವರ ಮುಂದಿನ ಜೀವನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅವನು. ಮೊದಮೊದಲು ಅವನನ್ನು ತಿದ್ದಿ ದಾರಿಗೆ ತರಲು ದೀಪ ಹೆಣಗಾಡಿ ಸೋತು ಈಗ ಬರೇ ಮೌನದಲ್ಲೇ ಇದ್ದಾಳೆ. ಮನೆಗೊಂದು ಗಂಡಸರಂತ ಬೇಕಲ್ಲವೇ ಅಂತ ಅಂದುಕೊಂಡು ಅವನನ್ನು ತನ್ನ ಲೆಕ್ಕದಿಂದ ಬಿಟ್ಟು ಬಿಟ್ಟಿದ್ದಾಳೆ.   ದೇಹ ದಣಿದಿದ್ದರೂ ನಿದ್ದೆಯ ಸುಳಿವಿಲ್ಲ..ಆಲೋಚನೆಗಳು ಕಿತ್ತು ತಿನ್ನುತ್ತಿವೆ, ಸಮಸ್ಯೆಗಳು ಭೂತಗಳಂತೆ ಕಾಣಿಸುತ್ತಿವೆ. ಗಂಟೆ ೩ರಾದುದನ್ನು ನೋಡಿ ಗಡಬಡಿಸಿ ಎದ್ದಳು. ಹೊರಗೆ ಬಂದವಳು ಊಟ ಮಾಡುತ್ತಾ ಟಿವಿ ನೋಡುತ್ತಿರುವ ಗಂಡನನ್ನು ನೋಡಿದಳು. ಶೇರು ವ್ಯವಹಾರಗಳಲ್ಲಿ ಮುಳುಗಿ ಏನೋ ಒಂದು ರೀತಿಯಲ್ಲಿ ನಡೆಯುತ್ತಿರುವ ಅಂಗಡಿಯ ವ್ಯಾಪಾರವನ್ನು ಕಡೆಗಣಿಸಿ ಬಿಟ್ಟಿದ್ದಾನೆ ಎಂದೆಣಿಸಿ ಖೇದವಾಯಿತು. ಏನಾದರೂ ಹೇಳಿದರೆ ಮೈಮೇಲೆಯೇ ಬೀಳುತ್ತಾನೆ..ಇವನೊಂದಿಗೆ ಮಾತೇ ಬೇಡವಾಗಿದೆ. ಯಾವ ಜನ್ಮದ ಕರ್ಮದ ಫಲವಿದೋ...ಮಾಡಿದುಣ್ಣೋ ಮಹಾರಾಯವೆನ್ನುತ್ತಾರಲ್ಲವೆ..ಅದು ಸರಿನೇ..ಎಲ್ಲವೂ ಈ ಜನುಮಕ್ಕೆ ಮುಗಿಯಲಿ ಅಂದುಕೊಂಡು ತನ್ನ ಆಫೀಸಿಗೆ ಹೋಗಲು ತಯಾರಾದಳು.  ಅಲ್ಲಿ ಎಲ್ಲವನ್ನೂ ಮರೆತು ಶೃದ್ಧೆಯಿಂದ ತನ್ನ ಪಾಲಿಗೆ ಬಂದ ಕೆಲಸ ಮಾಡಿ ಮುಗಿಸಿದಾಗ ಗಂಟೆ ೬.೩೦. ಮಕ್ಕಳ ನೆನಪಾಯಿತು. ಅಮ್ಮನ ಮನೆ ಹತ್ತಿರವಿದ್ದುದರಿಂದ ಒಂದಿಷ್ಟು ಸಮಾಧಾನ. ಅದರಲ್ಲೂ ಮೃದುಲಳಿಗೆ ಪ್ರತಿಯೊಂದಕ್ಕೂ ಅಮ್ಮನೇ ಬೇಕು. ಎರಡನೆಯವಳು ಒಂದಿಷ್ಟು ಬೋಲ್ಡ್..ಅವಳಿಗೆ ಸ್ವಲ್ಪ ಗಂಡನ ಮನೆಯವರ ಸ್ವಭಾವ ಬಂದಿದೆ. ಮನ್ವಿತಾ, ತಾನು ಇಷ್ಟಪಟ್ಟು ಹೆಸರಿಟ್ಟದು...ಆದರೆ ಅವಳು ಅದನ್ನು ಮೊಟಕು ಮಾಡಿಬಿಟ್ಟಿದ್ದಾಳೆ. ದೇವರ ದಯದಿಂದ ಇಬ್ಬರೂ ಪ್ರತಿಭಾನ್ವಿತರು..ಹಾಗಾಗಿ ಇಲ್ಲಿಯ ತನಕ ಅವರ ವಿದ್ಯಾಭ್ಯಾಸಕ್ಕೆ ಏನೂ ತೊಂದರೆಯಾಗಲಿಲ್ಲ. ಮುಂದೆಯೂ ಆಗದಿರಲಿ ಅಂದುಕೊಳ್ಳುತ್ತಾ ಮನೆಯ ಹಾದಿ ಹಿಡಿದಳು ದೀಪ. ಹೋಗುತ್ತಾ ಮೊಬೈಲ್ ತೆಗೆದು ನೋಡಿದಾಗ ಎರಡು ಸಂದೇಶಗಳಿದ್ದವು..ತೆಗೆದು ನೋಡಿದರೆ ಅವಿಯದಲ್ಲ. ಫೋನ್ ಮಾಡುವ ಅಂದುಕೊಂಡಳು..ಹಿಂಜರಿಕೆಯಿಂದಲೇ ಗುಂಡಿ ಒತ್ತಿದಾಗ, ಬಿಜಿ ವಿದ್ ಅನದೆರ್ ಕಾಲ್..ಕೇಳಿಸಿತು. ನಿರಾಸೆ ಮುತ್ತಿತು ಮನಸನ್ನು. ಇದೆಲ್ಲಾ ಇರುವುದೇ ನನ್ನ ಪಾಲಿಗೆ..ಅನುಭವವಿತ್ತು ಅವಳಿಗೆ, ಎಷ್ಟೊ ಸಲ ಅದೃಷ್ಟ ಮನೆಯ ಬಾಗಿಲ ತನಕ ಬಂದು ಹಿಂದಿರುಗಿದನ್ನು ಕಂಡಿದ್ದಾಳೆ. "ಪಾಲಿಗೆ ಬಂದದ್ದು ಪಂಚಾಮೃತ" ಎಂಬ ಅವಳ ನಿತ್ಯದ ನುಡಿಯನ್ನು ನೆನಪಿಸಿಕೊಳ್ಳುತ್ತಾ ಓಟದ ನಡಿಗೆಯಲ್ಲಿ ಮನೆ ಮುಟ್ಟಿದಾಗ ಸೂರ್ಯನು ಪಡುವಲ ದಿಕ್ಕಿನಿಂದ ಮರೆಯಾಗಿ ಹೋಗಿದ್ದನು.


             
               ’ಅಮ್ಮಾಮನ್ವಿತಳ ಗೌಜಿ...’ಎಷ್ಟು ಹೊತ್ತು?  ’ಯಾಕೆ ಮನ್ವಿ, ಅಜ್ಜಿ ಮನೆಯಲಿ ಚಾ ಕುಡಿಲಿಲ್ವಾ....ದೀಪ ಪ್ರಶ್ನೆ ಪೂರ್ಣಗೊಳಿಸುವ ಮೊದಲೇ ಮೃದುಲಳ ಆಕ್ಷೇಪ..’ನಿನಗೊತ್ತಲ್ವ ಅಮ್ಮ, ನಮಗೆ ನೀನೇ ಮಾಡಿದ್ದು ಚಾ ಹಿಡಿಸುವುದಂತ. ಅಜ್ಜಿ ಮಾಡೋದು ತುಂಬಾ ಸಿಹಿ ಇರುತ್ತೆ.’ ಇಬ್ಬರದೂ ಯಾವಾಗಲೂ ಇದೇ ಕಮ್ಪ್ಲೈಂಟ್. ಏನ್ ಮಾಡೋದು, ನಿಮಗೋಸ್ಕರ ತಾನೆ ಕೆಲಸಕ್ಕೆ ಹೋಗೋದು ಅಂತ ದೀಪ ಅವರನ್ನು ಸಮಜಾಯಿಸೋದು, ಇದು ದೀಪಾಳ ಮನೆಯಲ್ಲಿ ನಿತ್ಯ ನಡೆಯುತಿತ್ತು. ಮನ್ವಿತಾ ಅಮ್ಮನ ಕೊರಳನ್ನು ಬಳಸಿ, ತನ್ನ ಕಾಲೇಜಿನಲ್ಲಿ ನಡೆದುದನ್ನು ಹೇಳಲು ಶುರುಮಾಡಿದಾಗ, ಅಮೃತಾ ಅವಳನ್ನು ತಡೆದು ಅಮ್ಮನನ್ನು ಕೈಕಾಲು ತೊಳೆಯಲು ಕಳುಹಿಸಿದಳು. ಮನದೊಳಗಿನ ತಳಮಳಕ್ಕೊಂದು ತೆರೆ ಎಳೆದು ದೀಪ ತನ್ನ ಕರ್ತವ್ಯ ನಿರ್ವಹಿಸಲು ಸನ್ನದ್ಧಳಾದಳು. ದೇವರಿಗೆ , ತುಳಸಿಗೆ ದೀಪ ಹಚ್ಚಿ, ಅಡುಗೆ ಮನೆಯಲ್ಲಿ ರಾತ್ರಿ ಊಟದ ತಯಾರಿಯಲ್ಲಿ ತೊಡಗಿದವಳನ್ನು ಗಣಕ ಯಂತ್ರ ಸೆಳೆಯುತಿತ್ತು. ಮೂರು ದಿನಗಳಿಂದ ಅವಿನಾಶನ ಜೊತೆ ಚಾಟ್ ಮಾಡಿದ್ದಳು. ನಾಳೆಗೆ ಚಪಾತಿ ಹಿಟ್ಟು ಕಲೆಸಬೇಕಿತ್ತು, ಇತ್ತ ಕರ್ತವ್ಯ, ಅತ್ತ ಪ್ರೀತಿ ಎರಡರ ಮಧ್ಯೆ ದೀಪ ಹೈರಾಣಾಗಿದ್ದಳು. ಅದರಲ್ಲೂ ಸಮಾಜದ ಮುಂದೆ ಅವಳ, ಅವಿನಾಶನ ಪ್ರೀತಿ ತೋರ್ಪಡಿಸುವ ಹಾಗಿರಲಿಲ್ಲ. ಇಬ್ಬರೂ ಈಗಾಗಲೇ ವಿವಾಹ ಬಂಧನದಲ್ಲಿ ಸಿಲುಕಿದವರು, ಹರೆಯದ ಮಕ್ಕಳ ಪೋಷಕರು. ಅಂದ ಮೇಲೆ ಇವರ ದಾಂಪತ್ಯ ಜೀವನದ ಏರು ಪೇರು ಹೇಗೆ ಇರಲಿ, ಜನರು ಎಂದೂ ವಿವಾಹೇತರ ಸಂಬಂಧವನ್ನು ಗೌರವ ದೃಷ್ಟಿಯಿಂದ ನೋಡಲಾರರು..ಹಾಗಂತ ದೀಪಾಳು, ಅವಿನಾಶನೂ ತಮ್ಮ ಹದಗೆಟ್ಟ ಸಂಬಂಧದಿಂದ ಸುಲಭವಾಗಿ ಹೊರಬರುವುದೂ ಸಾಧ್ಯವಿಲ್ಲವಾಗಿತ್ತುಚಿಕ್ಕಂದಿನಿಂದಲೂ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಅವರಿಬ್ಬರಿಗೂ ತಪ್ಪು ಹಾದಿ ಹಿಡಿದು ನಡೆಯುವುದು ಬೇಡವಾಗಿತ್ತು. ಅಲ್ಲದೇ ಅವಿನಾಶನ ಮಗ, ದೀಪಾಳ ಇಬ್ಬರು ಹೆಣ್ಣು ಮಕ್ಕಳು ಇವರ ಸಂಬಂಧ ಒಪ್ಪುವುದೂ ಕನಸಿನ ಮಾತಾಗಿತ್ತು. ಮಕ್ಕಳೇನೋ ಆಧುನಿಕ ಮನಸಿನವರು..ಆದರೂ ಅವಿನಾಶನ ಮಗ ಶ್ರೀನಿಧಿ, ಅವನ ತಾಯಿಯಿಂದ ತಂದೆ ಬೇರ್ಪಡುವುದನ್ನು ಒಪ್ಪುವುದಿಲ್ಲವೆಂದು ನಿನ್ನೆ ತಾನೆ ಅವಳಿಗೆ ಅವಿನಾಶನು ತಿಳಿಸಿದ್ದನು. ಮೃದುಲ ಮತ್ತು ಮನ್ವಿತ ಇಬ್ಬರೂ ತಮ್ಮ ಅಪ್ಪನನ್ನು ಅಷ್ಟೊಂದು ಹಚ್ಚಿಕೊಳ್ಳದಿದ್ದರೂ ಅಮ್ಮ ಮತ್ತೊಂದು ಗಂಡಸಿನ ಜೊತೆ ಸ್ನೇಹದಿಂದಿರುವುದನ್ನೂ ಸಹಿಸಲಿಕ್ಕಿಲ್ಲ. ಇನ್ನು ದೀಪಳ ಗಂಡನೂ ಅವಿನಾಶನ ಹೆಂಡತಿಯೂ ತಮ್ಮ ತಮ್ಮ ಸಂಗಾತಿಗಳಿಗೆ ಡೈವೋರ್ಸ್ ಕೊಡುವುದೂ ಕೂಡ ಕಷ್ಟದ ಮಾತೇ ಆಗಿತ್ತು.... ಇದೆಲ್ಲ ಅವರಿಬ್ಬರು ನಿನ್ನೆ ತಾನೆ ಮಾತಾಡಿಕೊಂಡಿದ್ದರು. ಹಾಗಂತ ಇಬ್ಬರೂ ಪರಸ್ಪರ ದೂರವಾಗಲೂ ತಯಾರಿರಲಿಲ್ಲ. ಕೊನೆಗೆ ಇಬ್ಬರೂ ಎಲ್ಲವನ್ನೂ ಪರಮಾತ್ಮನ ಇಚ್ಛೆಗೆ ಬಿಡಲು ನಿರ್ಧರಿಸಿಕೊಂಡಿದ್ದರು. ದೀಪಾಳಿಗೆ ತನ್ನಿಯನ ಜೊತೆ ಮಾತಾಡಲು ತುಂಬಾನೆ ಆಸೆಯಾಗುತಿತ್ತು..ಆದರೇನು ಮಾಡುವುದು..ಮೊದಲು ಗಣಕ ಯಂತ್ರದ ಎದುರು ಕುಳಿತರೆ ಮಕ್ಕಳಿಗೂ, ಗಂಡನಿಗೂ ಸಂಶಯ ಬರುತ್ತದೆ..ಅಲ್ಲದೆ ನಿನ್ನೆ ತಾನೆ ಅವಿನೂ ಹೇಳಿದ್ದನು ತನ್ನ ಹೆಂಡತಿಗೆ ಅವನ ಮೇಲೆ ಸಂಶಯ ಬಂದಿದೆ ಹಾಗಾಗಿ ಇನ್ನು ಮುಂದೆ ಚಾಟ್ ಮಾಡುವುದೂ ಕಷ್ಟಾಂತ. ತನ್ನೆಲ್ಲಾ ತಳಮಳಗಳನ್ನು ಪಾತ್ರೆಗಳ ಮೇಲೆ ತೋರಿಸಿದಳು ದೀಪ..ಡಬ ಡಬ ಶಬ್ದ ಕೇಳಿ ಇಬ್ಬರೂ ಮಕ್ಕಳು, ಗಂಡ ಬಂದು ಅಡುಗೆ ಕೋಣೆಗೆ ಬಂದು ಇಣುಕಿ ಹೋದರು. ಇವಳ ಮಾತು ಇಲ್ಲ. ಮನ್ವಿತ ಹತ್ತಿರ ಬಂದು ಅಮ್ಮನ ಮುಖವನ್ನು ಪರೀಕ್ಷಾರ್ಥವಾಗಿ ನೋಡಿದಳು. ನಿರ್ಲಿಪ್ತವಾಗಿದೆ. ಕಣ್ಣಿನಿಂದಲೇ ಪ್ರಶ್ನಿಸಿದಳು..ಇವಳೂ ಮುಖವನ್ನು ಅತ್ತಿತ್ತ ತಿರುಗಿಸಿದಳು. ತಟ್ಟೆ ಹಾಕಿ ಗಂಜಿ ಬಡಿಸಿ, ಹಾಲಿಟ್ಟು ಈಗಾಲೇ ಉಪ್ಪು ನೀರಿನಲ್ಲಿ ಹಾಕಿದ ದ್ರಾಕ್ಷಿ ಹಣ್ಣುಗಳನ್ನು ತೊಳೆದಿಟ್ಟಳು. ಪಪ್ಪಾಯಿ ಹಣ್ಣನ್ನು ತೊಳೆದು ಸಿಪ್ಪೆ ತೆಗೆಯಲು ಕುಳಿತಳು. ಸಣ್ಣ ಸಣ್ಣ ತುಂಡು ಮಾಡಿ ಎರಡು ಬಟ್ಟಲಿನಲ್ಲಿ ವಿಂಗಡಿಸಿ ಇಟ್ಟಳು...ಮತ್ತೊಮ್ಮೆ ಸರಿಯಾಗಿ ನೋಡಿದಳು ಇಲ್ಲದಿದ್ದರೆ ದುರ್ವಾಸನಿಗೆ ಭಯಂಕರ ಸಿಟ್ಟು ಬರುತ್ತದೆ..ತನಗೆ ಕಡಿಮೆ ಇಟ್ಟು ಮಕ್ಕಳಿಗೆ ಹೆಚ್ಚು ಇಟ್ಟಿದಿ ಅಂತ. ಉಳಿದ ಅನ್ನ ಬಸೆದು ಗಂಡನಿಗೆ ತೆಗೆದಿಟ್ಟಳು. ಒಂದೇ ಕೂಗಿಗೆ ಮಕ್ಕಳಿಬ್ಬರು ಅಡಿಗೆ ಕೋಣೆಯಲ್ಲಿ ಪ್ರತ್ಯಕ್ಷರಾದರು. ಅಮ್ಮನ ಮೂಡು ಸರಿ ಹೋಗಲು ಇಬ್ಬರೂ ಪೈಪೋಟಿಯಿಂದ ತಮ್ಮ ಕಾಲೇಜಿನ ಸ್ನೇಹಿತರ  ಬಗ್ಗೆ ಹೇಳಿ ದೀಪಾಳನ್ನು ನಗಿಸಿದರು. ಪ್ರಸನ್ನಳಾದಳು ಅಮ್ಮ, ಮಕ್ಕಳ ಬುದ್ಧಿವಂತಿಕೆಗೆ ಹಿಗ್ಗಿದಳು. ಹೊರಗೆ ಟಿವಿಯೆದುರು  ಊಟ ಮಾಡುತ್ತಿದ್ದ ಗಂಡನಿಗೆ ಇವರ ಮಾತು ಕಿರಿಕಿರಿ ಅನಿಸಿ, ಬಂದು ಬೆದರಿಸಿ ಹೋದ. ಮಕ್ಕಳಿಬ್ಬರಿಗೂ ಇದು ನಿತ್ಯದ ಅಭ್ಯಾಸ, ಹಾಗಾಗಿ ಏನೂ ಅನಿಸದೇ ಧ್ವನಿ ಕಮ್ಮಿ ಮಾಡಿ ಅಮ್ಮನನ್ನು ನಗಿಸುವ ಕೆಲಸ ಮುಂದುವರಿಸಿದರು. ಊಟ ಮಾಡಿದ ಮೇಲೆ ಇಬ್ಬರೂ ಅಮ್ಮನಿಗೆ ಪಾತ್ರೆ ತೊಳೆಯಲು ಸಹಾಯ ಮಾಡಿದರು. ಎಲ್ಲಾ ಕೆಲಸ ಮುಗಿಸಿ ಹಣ್ಣಿನ ತಟ್ಟೆ ಹಿಡಿದು ಹಾಲಿಗೆ ಬಂದವಳಿಗೆ ಬೆದರಿಕೆ. ಅದೇನು ನಿಮ್ಮ ಮಾತುಕತೆ? ನನಗಿಲ್ಲಿ ತೊಂದರೆಯಾಗುತ್ತಿದೆ ಅಂತ. ಅದೇನು ಮೋಡಿ ಮಾಡಿದೆಯೋ ಇಡಿಯೆಟ್ ಬಾಕ್ಸ್ ಇವನನ್ನು, ಮದುವೆಯಾಗಾಯ್ತಿನಿಂದಲೂ ಇದೇ ಕತೆ, ಮೌನವೇ ಲೇಸು ಅಂತ ಸುಮ್ಮನೆ ತನ್ನ ತಿನ್ನುವ ಕಾಯಕ ಮಾಡಿ ಗಂಟೆ ಕಡೆ ನೋಡಿದಾಗ .೩೦. ಒಂದರ್ಧ ಗಂಟೆ ಗಣಕದೆದುರು ಕುಳಿತುಕೊಳ್ಳಲು ಹೋದಳು ದೀಪ. ಮನದುಂಬಾ ಅವಿಯ ಜೊತೆ ನಾಲ್ಕು ಮಾತು ಆಡುವ ಆಸೆ. ಫೇಸ್ ಬುಕ್ನಲ್ಲಿ ಅವಿಯ ಸ್ಟೇಟಸ್ ಕಾಣಿಸಿತು ಮೊದಲಿಗೆ....ಹಾಯ್ ಮೆಸೇಜು ಹೋಯ್ತು..ಉತ್ತರವೇ ಇಲ್ಲ...ಸರಿ, ಏನೋ ತೊಂದರೆ ಇರಬೇಕು ಎಂದೆಣಿಸಿ ಬ್ಲಾಗ್ನತ್ತ  ಮನ ತಿರುಗಿಸಿದಳು. ಓದಬೇಕೆಂದು ಬುಕ್ ಮಾರ್ಕ್ಹಾಕಿಕೊಂಡ ಬ್ಲಾಗ್ನ್ನು ತೆರೆದು ಓದಲು ಕುಳಿತವಳಿಗೆ ೧೦.೩೦ ಕಳೆದದು ತಿಳಿಯಲೇ ಇಲ್ಲಮತ್ತಷ್ಟು  ಬ್ಲಾಗುಗಳನ್ನು ಗುರುತು ಮಾಡಿಟ್ಟಳು ದೀಪ. ಅವಳ ಒಂಟಿ ಜೀವನಕ್ಕೆ ದಾರಿದೀಪವಾದದ್ದು ಅಂತರ್ಜಾಲದ ಜಾಲಾಟ...ಹೀಗೆಯೇ ಅವಳು ತನ್ನ ಬರವಣಿಗೆಯನ್ನು ಸುಧಾರಿಸಿಕೊಂಡದ್ದು..ಅಲ್ಲದೆ ತಂತ್ರಜ್ಞಾನದ ಬಗ್ಗೆಯೂ ಅವಳಿಗೆ ಮಾಹಿತಿಯಿತ್ತು, ಅವಳ ಜ್ಞಾನದ ಮಟ್ಟ ಸುಧಾರಿಸಲು ಸಹಾಯ ಮಾಡಿತ್ತು ಕಿಂಡಿಮಲಗಲು ಹೋದವಳಿಗೆ ಮೊಬೈಲು ಬೆಳಗುವುದು ಕಂಡಿತು...ಅವಿಯ ಮೆಸೇಜು..ಹಿರಿಹಿರಿ ಹಿಗ್ಗಿ ತೆಗೆದು ನೋಡಿದವಳಿಗೆ ಗೆಳೆಯನ  ನಲ್ಮೆಯ ಸಂದೇಶ. ಇನ್ನು ರಾತ್ರಿಯೆಲ್ಲಾ ಸಿಹಿ ನಿದ್ರೆ, ಸಂದೇಹವೇ ಇಲ್ಲ ಅಂದು ಸುಖವಾಗಿ ನಿಶೆಯ ಮಡಿಲಿಗೆ ಜಾರಿ ಹೋದಳು ದೀಪ!


ಮುಂದುವರಿಯುವುದು......ತಮ್ಮ ಪ್ರೋತ್ಸಾಹವಿದ್ದರೆ...
ಸಹ ಬ್ಲಾಗಿಗರ ಅಭಿಪ್ರಾಯದ ನಿರೀಕ್ಷೆಯಲ್ಲಿರುವ

-ಶೀಲಾ

25 May, 2012

’ಶ್ರೀರಾಮಕೃಷ್ಣ ಪರಮಹಂಸ ವಚನವೇದ’- ನನ್ನ ಭಗವದ್ಗೀತೆ!-1

                          "ಶ್ರೀರಾಮಕೃಷ್ಣ ಪರಮಹಂಸ ವಚನವೇದ"- ಈ ಪುಸ್ತಕ ನನ್ನ ಕೈಗೆ ಸಿಕ್ಕಿದ್ದು ನನಗೆ ನೆನಪಿರುವಂತೆ ನನ್ನ ಹತ್ತನೆಯ ವಯಸ್ಸಿನಲ್ಲಿ. ನನ್ನ ಮೇಲೆ ಬಹಳ ಪ್ರಭಾವ ಬೀರಿದ ಪುಸ್ತಕವಿದು. ನಂತರ ಮತ್ತೊಮ್ಮೆ, ಮಗದೊಮ್ಮೆ ಎಂದು ಸುಮಾರು ಸಲ ಓದಿದ್ದೆ. ಆದರೆ ಹತ್ತನೆಯ ತರಗತಿಯ ನಂತರ ನಾನು ಪೌರಾಣಿಕ ಅಥವಾ ಬೇರೆ ಕಥೆ ಪುಸ್ತಕ ಓದಿದ್ದು ಕಮ್ಮಿನೇ.. ಕಾರಣ ಬಹಳ ಇವೆ. ಒಂದತ್ತೂ ಹೇಳಬಹುದು.. ಅದು ನನ್ನ ದುರಾದೃಷ್ಟ. ಆಗಲೇ ಚಿತ್ರ ಬಿಡಿಸುವುದಕ್ಕೆ ಹೆಚ್ಚು ಪ್ರಾಶಸ್ಯಕೊಟ್ಟೆ ಅಂತ ಕಾಣುತ್ತದೆ. ಹೀಗಾಗಿ ಓದು ಬಡವಾಯಿತು. 
      
                         ಈ ಪುಸ್ತಕದ ಸಾರ ನನ್ನ ಮುಂದಿನ ಬದುಕಿನಲ್ಲಿ ಮಹತ್ತರ ಪಾತ್ರವಹಿಸುವುದೆಂದು ನನಗೆ ತಿಳಿದಿರಲಿಲ್ಲ... ಸಂಸಾರಸಾಗರದಲ್ಲಿ ಕಂಠಮಟ್ಟ ಮುಳುಗಿಹೋಗಿದ್ದ   ನನಗೆ  ತೆಪ್ಪದಂತೆ ದಡ ತಲುಪಿಸುವಲ್ಲಿ ಬಹಳ ಸಹಾಯ ಮಾಡಿತು.  ಇದರಲ್ಲಿ ರಾಮಕೃಷ್ಣರು ದೃಷ್ಟಾಂತ ರೂಪದಲ್ಲಿ ಹೇಳುವ ಕತೆಗಳು ನನಗೆ ಬದುಕನ್ನು ಸರಿಯಾದ ನಿಟ್ಟಿನಲ್ಲಿ ಸಾಗಿಸುವಂತೆ ಮಾರ್ಗದರ್ಶನ ಮಾಡಿತು. ಆಗಾಗ ಓದುವ ಆಸೆಯಾಗುತ್ತಿದ್ದರೂ ಸಮಯವೇ ಕೂಡಿಬಂದಿರಲಿಲ್ಲವೋ ಏನೋ. ಇಲ್ಲೇ ಅಮ್ಮನ ಬಳಿಯಲ್ಲಿಯೇ ಇದ್ದ ಪುಸ್ತಕ ಆಗಾಗ ನನ್ನನ್ನು ಕರೆಯುತ್ತಲೇ ಇತ್ತು. ಬೇಸಿಗೆ ಶಿಬಿರಗಳ ಕೆಲಸವೆಲ್ಲಾ ಮುಗಿಯಿತು...ಇನ್ನು ಮನೆಪಾಠ ಪ್ರಾರಂಭವಾಗಲು ಜೂನ್ ೧ ಬರಬೇಕು.. ಅಲ್ಲಿಯ ತನಕ ನನ್ನ ಬಳಿ ೧೦ದಿನಗಳ ಸಮಯವಿದೆಯಲ್ಲಾ,  ಯಾಕೆ ವಚನವೇದ ಓದಬಾರದು ಅಂದುಕೊಂಡು ನಿನ್ನೆ ಪುಸ್ತಕ ತಂದು ಓದಲು ಪ್ರಾರಂಭ ಮಾಡಿದೆ. ಅರೇ, ಆವಾಗ ಇದು ನನ್ನ ಗಮನಕ್ಕೆ ಬಂದಿಲ್ವೇ! ಮುನ್ನುಡಿ ಬರೆದವರು ಕುವೆಂಪು. ಈ ಮುನ್ನುಡಿಯಲ್ಲಿ ಬಹಳಷ್ಟು ಮಾತುಗಳು ನನ್ನ ಗಮನವನ್ನು ಸೆಳೆದವು. ಅದನ್ನು ಸಹ ಬ್ಲಾಗಿಗರ ಜೊತೆ ಹಂಚಕೊಳ್ಳಬೇಕೆಂದೆನಿದೆ.                  ಮೂಲ ಬಂಗಾಲಿ ಭಾಷೆಯಲ್ಲಿ " ಕಥಾಮೃತ ಕರ್ತೃ" ಬರೆದವರು ’ಮ’ಎಂದೇ ಗುರುತಿಸಲ್ಪಡುವ ಮಹೇಂದ್ರನಾಥ ಗುಪ್ತ. ಇವರು ಮಾಸ್ಟರ್ ಮಹಾಶಯರೆಂದೇ ಪ್ರಸಿದ್ಧರು. ಇದನ್ನು ಕನ್ನಡಕ್ಕೆ ಅನುವಾದಿಸಲು ರಾಮಕೃಷ್ಣ ಮಠದವರ ಜೊತೆ ರಾಮಕೃಷ್ಣರ ಅಭಿಮಾನಿಗಳಾಗಿದ್ದ ನಮ್ಮ ಕವಿ ಋಷಿ ಪುಟ್ಟಪ್ಪನವರೂ ಕೈಗೂಡಿಸಿದ್ದಾರೆ. ಅಲ್ಲದೆ ಅವರು ರಾಮಕೃಷ್ಣರ ಮೇಲೆ ಬರೆದ ಕವಿತೆಯನ್ನು ಮೂಲ ಲೇಖಕರಾದ ಮಾಸ್ಟರಿಗೂ ತೋರಿಸಿ ಅವರಿಂದ ಮೆಚ್ಚುಗೆ ಪಡೆದಿದ್ದಾರೆ. ಆ ಪದ್ಯವನ್ನೂ ಬರೆಯುತ್ತೇನೆ. ಆದರೆ ಮೊದಲು ಕುವೆಂಪು ಅವರೇ ಈ ಪುಸ್ತಕಕ್ಕೆ ಶ್ರೀರಾಮಕೃಷ್ಣ ಪರಹಂಸ ವಚನವೇದ ಎಂದು ಹೆಸರಿಡಲು ಕುತೂಹಲಕಾರಿಯಾದ ಕಾರಣ ಕೊಟ್ಟಿದ್ದಾರೆ. ಅದನ್ನು ಮೊದಲು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ.

ಅವರದೇ ಮಾತಿನಲ್ಲಿ ಪ್ರಸ್ತುತ ಪಡಿಸುತ್ತೇನೆ-
      ಸ್ವತಂತ್ರ ಭಾರತವನ್ನು ಸೆಕ್ಯುಲರ್ ರಾಜ್ಯ ಎಂದು ಕರೆಯುತ್ತಾರೆ. ಅಂದರೆ ನಮ್ಮ ರಾಷ್ಟ್ರದ ಆಡಳಿತದ ಈ ಲಕ್ಷಣವನ್ನು ಸರಿಯಾದ ಮಾತಿನಲ್ಲಿ ವರ್ಣಿಸುವುದಾದರೆ ’ಸಮನ್ವಯ ರಾಷ್ಟ್ರ’ ಎಂದು ಕರೆಯಬೇಕಾಗುತ್ತದೆ. ಅಂತಹ ಸಮನ್ವಯ ರಾಷ್ಟ್ರಕ್ಕೆ ಅತ್ಯಂತ ಅವಶ್ಯಕವಾಗಿರುವ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಈ ಯುಗದಲ್ಲಿ ಸ್ವಾತಂತ್ರೋದಯಕ್ಕೆ ಬಹುಪೂರ್ವದಲ್ಲಿಯೇ ಸ್ಪಷ್ಟವಾಗಿ, ಅನುಭವಪೂರ್ವಕವಾಗಿ, ಸರ್ವಜನಸುಲಭಗ್ರಾಹ್ಯವಾಗಿ, ಪ್ರಭಾವಯುತವಾಗಿ, ಕ್ರಾಂತಿಪೂರ್ಣವಾದರೂ ಸಂಪ್ರದಾಯ ಅವಿರುದ್ಧವೆಂಬಂತೆ ಲೋಕ ಸಮಸ್ತಕ್ಕೂ ತೋರಿ ಸಾರಿದವರೆಂದರೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು. ಅವರ ಈ ’ವಚನವೇದ’ ನಿಜವಾಗಿಯೂ ಸಮನ್ವಯ ದೃಷ್ಟಿಯನ್ನು ಸರ್ವ ಪ್ರಜೆಗಳಿಗೂ ಸುಲಭವಾಗಿ ಹೃದಯಸ್ಪರ್ಶಿಯಾಗುವಂತೆ ಬೋಧಿಸುವ ನವೀನ ವೇದ. ಮತಾಂತರಗೊಳಿಸುವುದು, ಪರಮತ ನಿಂದೆಯಿಂದ ಸ್ವಮತ ಶ್ಲಾಘನೆ ಮಾಡುವುದು, ರಾಜಕೀಯ ಪ್ರಯೋಜನಕ್ಕಾಗಿ ಸ್ವಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಕುತಂತ್ರಕ್ಕೆ ಕೈಹಾಕುವುದು ಮೊದಲಾದ ಕಾಡುಭಾವನೆಗಳನೆಲ್ಲ ಬೇರು ಸಹಿತ ಸುಟ್ಟುಹಾಕುವ ಕಾಳ್ಗಿಚ್ಚಾಗುತ್ತದೆ ಈ ’ವಚನವೇದ’. ನಮ್ಮ ರಾಜ್ಯಾಂಗದ ರಾಜಕೀಯದ ಸುರತರು ಸುಫಲಸುಮಭರಿತವಾಗಬೇಕಾದರೆ ಜನಹೃದಯಮೂಲವಾಗಿರುವ ಅದರ ತಾಯಿಬೇರು ಈ ’ವಚನವೇದ’ ಸಾರವನ್ನು ಹೀರಿಕೊಂಡಲ್ಲದೆ ಸಾಧ್ಯವಿಲ್ಲ. ನಮ್ಮ ರಾಜಕೀಯ ರಾಜ್ಯಾಂಗಕ್ಕೆ ಪೂರಕವಾಗಿರುವ ಧಾರ್ಮಿಕ ರಾಜ್ಯಾಂಗವಾಗುತ್ತದೆ ಈ ’ರಾಮಕೃಷ್ಣ ವಚನವೇದ’!

ನನ್ನ ಪುಟ್ಟ ಪಿಕಾಸುವಿನ ಮಿನಿ ಕಥೆಗಳು!

         
         ಸುರತ್ಕಲ್‍ನಲ್ಲಿ ಸಂಜೆ ಸಮಾರಂಭವೊಂದಿತ್ತು. ಅದೇ ನೆವನ ಮಾಡಿ ನಾನು ಅಪರಾಹ್ನವೇ ಮಂಗಳೂರಿನ ಅಮ್ಮನ ಮನೆಗೆ ಮಗನ ಜೊತೆ ಬಂದೆ. ಅದು ದೀಪಾವಳಿಯ ಸಮಯ. ಮೊಮ್ಮಗ ಮತ್ತು ಅಜ್ಜನಿಗೆ ಪಟಾಕಿಯ ಸಂಭ್ರಮ, ನಾನು ಅಡಿಗೆ ಕೋಣೆಯಲ್ಲಿ ಅಮ್ಮನ ಜೊತೆ ನನ್ನ ಬೇಗುಧಿಗಳನ್ನು ಹಂಚಿಕೊಳ್ಳುವುದಲ್ಲಿ ಮಗ್ನಳಾಗಿದ್ದೆ. ಸಮಾರಂಭದ ಸಮಯ ೨ ವರ್ಷದ ನನ್ನ ಪಾಪು ಕುಂಟುತ್ತಿದ್ದ... ರಾತ್ರಿ  ಆಗುವಾಗ ಮೈಬೆಚ್ಚಗಾಯಿತು. ನೋಡಿದರೆ ಹಿಮ್ಮಡಿಯಲ್ಲಿ ಬೊಕ್ಕೆ ಎದ್ದಿದೆ.        ಮಲಗಲೇ ಇಲ್ಲ ಮಗು ನೋವಿನಿಂದ. ಆದರೂ ಕಣ್ಣಲ್ಲಿ ನೀರಿಲ್ಲ. ಅಜ್ಜ ಉತ್ಸಾಹದಲ್ಲಿ ತಮಗರಿವೇ ಇಲ್ಲದೆ ಮೊಮ್ಮಗನನ್ನು ಸುಟ್ಟು ಬಿಸಾಡಿದ ಬಿಸಿಯಾಗಿದ್ದ ನಕ್ಷತ್ರ ಕಡ್ಡಿಯ ಮೇಲೆ ನಿಲ್ಲಿಸಿದ್ದರು. ರಾತ್ರಿನೇ ಅಪ್ಪನಿಗೆ ನನ್ನ ಫೋನು..ಯಾಕಪ್ಪಾ ಇಷ್ಟು ಕೇರ್ಲೆಸ್? ಕೇಳಿದ ಇವನು ಫೋನು ಕಿತ್ಕೊಂಡು, ಪರವಾಗಿಲ್ಲ ಅಜ್ಜ, ನಾಳೆನೂ ನನಗೆ ಪಟಾಕಿ ತಾ, ಬಿಡೋಣ ಅನ್ನುವುದೇ! ಬೆರಗಿನಿಂದ ನೋಡಿದೆ..ಭಲೇ ನೋವು ಸಹಿಸುವುದರಲ್ಲಿ ಅಮ್ಮನನ್ನು ಮೀರಿಸಿದೆಯಲ್ಲವೇ ನನ್ನ ಪಿಕಾಸು!
**************************************************

         ಆಗ ನನ್ನ ಪಿಕಾಸು ಎಲ್ ಕೆ ಜಿ. ಬಂದವನೇ ಡಿಕ್ಟೇಶನ್ ಬುಕ್ ತೋರಿಸಿದ. ನೋಡಿ ನನಗೆ ಶಾಕ್...ಹತ್ತರಲ್ಲಿ ಒಂದು..ಬರೆದದೆಷ್ಟು ಚೆನ್ನಾಗಿಯಿತ್ತೆಂದರೆ ದೃಷ್ಟಿ ತೆಗೆಯಬೇಕಂತ ಅನಿಸಿದ್ದು ಸುಳ್ಳಲ್ಲ.  ಇಲೆವೆನ್ ಮಾತ್ರ ಸರಿ.. ಉಳಿದ ಎಲ್ಲಾ ಶಬ್ದಗಳಲ್ಲಿರುವ ಟಿಗೆ ಅಡ್ಡ ಗೆರೆನೇ ಇಲ್ಲಾ!!! ಯಾಕೆ ಅಂತ ಕೇಳಿದ್ರೆ. ಆಗಲೇ ಉತ್ತರ ಸಿದ್ಧಮಾಡಿ ಬಂದಿರುವ ಅವನು ತಟ್ಟನೆ ಹೇಳಿದ,...." ನಾನು ಎಲ್ಲಕ್ಕೂ ಗೆರೆ ಹಾಕಿದ್ದೆ..ನಂತರ ಎಲ್ಲಾ ರಬ್ ಮಾಡಿಬಿಟ್ಟೆ....." ಕೇಳಿ ಕೆರಳಿದ ನಾನು ಸೀದ ಹಿಡಿಸೂಡಿ ತೆಗೆದುಕೊಂಡು ಅವನನ್ನು ಕೋಣೆಗೆ ಕರೆದುಕೊಂಡು ಹೋದೆ..ಎಲ್ಲೆಂದರಲ್ಲಿ ಬಾರಿಸಿದೆ..ಬಾರಿಸಿ ಬಾರಿಸಿ ನಾನು ಸೋತು ಹೋದೆ..ಅವನ ಕಣ್ಣಲ್ಲಿ ಅನೇಕ ಪ್ರಶ್ನೆಗಳು!! ನೋವಿನಿಂದ ಇಣುಕುತ್ತಿದ್ದ ಹನಿಗಳು..ಪಶ್ಚಾತ್ತಾಪಪಟ್ಟೆ. ಅದೇ ಕೊನೆ..ಮತ್ತೆಂದೂ ನಾನು ಮಕ್ಕಳ ಮೇಲೆ ಕೈಯೆತ್ತಲಿಲ್ಲ.. ಇದನ್ನು ಬರೆಯುತ್ತಿರುವಾಗ ನನ್ನ ಕಣ್ಣುಗಳಿಂದ ಮತ್ತೆ ಹನಿಗಳು ಉರುಳುತ್ತಿವೆ....
****************************************************

        ಯು ಕೆ ಜಿ ಆವಾಗ. ವಾರ್ಷಿಕ ಪರೀಕ್ಷೆಯ ಕೊನೆಯ ದಿನ...ಅಲ್ಲಲ್ಲ...ಮಧ್ಯವಾದಿ ಪರೀಕ್ಷೆಯ ಕೊನೆಯ ದಿನ..ಚಿತ್ರ ಬಿಡಿಸುವ ಪರೀಕ್ಷೆ...ಇದೇ ಚಿತ್ರವನ್ನು ಅವರು ಶಾಲಾ ವಾರ್ಷಿಕೋತ್ಸವ ವೇಳೆಯ ಸ್ಪರ್ಧೆಗೂ ಪರಿಗಣಿಸುತ್ತಾರೆ. ಹಾಗಾಗಿ ಚೆನ್ನಾಗಿ ತರಬೇತಿ ಕೊಟ್ಟಿದ್ದೆ..ಅವನು ಮೊದಲಿಂದಲೂ ನುರಿತ ಚಿತ್ರಗಾರ..ಹಾಗಾಗಿ ನಾನು  ಆ ದಿನ ಹೆಚ್ಚು ಹೇಳಲು ಹೋಗಿರಲಿಲ್ಲ...ಪರಿಗಣಿತವಾಗದ ಚಿತ್ರವನ್ನು ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತಿದ್ದರು. ಮನೆಗೆ ಬಂದು ಚಿತ್ರ ತೋರಿಸಿದ..ಯಾವ ಭಾವನೆನೂ ಇಲ್ಲ ಮುಖದಲ್ಲಿ...ಇವನು ಅದನ್ನು ಬಿಡಿಸಿದನೆಂದರೆ ನಂಬಲಿಕ್ಕಾಗದಷ್ಟು ಕೆಟ್ಟದಾಗಿತ್ತು...ಯಾಕೆ ಹೀಗೆ ಅಂತ ಕೇಳಿದರೆ..ಮೂಡಿರಲಿಲ್ಲ...ಅಂತ ನೇರ ಉತ್ತರ!!! ನನಗೇನು ಹೇಳಲು ಉಳಿದಿರಲಿಲ್ಲ.
***************************************************

        ಪಿಕಾಸು ಆವಾಗ ಐದನೆಯ ತರಗತಿ. ಯಾಕೋ ಏನೋ ಪ್ರತಿಸಲ ೧,೨ ಮಾರ್ಕಿಗೆ ಅವನ ಮೊದಲನೆಯ ಸ್ಥಾನ ತಪ್ಪುತ್ತಿತ್ತು. ಶಾಲೆಯಲ್ಲೂ, ಹೊರಗೆ ಕಳುಹಿಸಿದ ಕಡೆನೂ ಅನೇಕ ಬಹುಮಾನ ಗಳಿಸಿದ್ದನು. ಹಾಗಾಗಿ ನನಗಂತೂ ಇವನು ಅಥವಾ ಇವನ ನಿಕಟ ಗೆಳೆಯ ಇಬ್ಬರಲ್ಲಿ ಒಬ್ಬರಿಗೆ ಬೆಸ್ಟ್ ಔಟ ಗೊಯಿಂಗ್ ಸ್ಟುಡೆಂಟ್ ಅವಾರ್ಡ್ ಸಿಗುವುದಂತ ಖಂಡಿತವಿತ್ತು. ವಾರ್ಷಿಕೋತ್ಸವ ಸಮಾರಂಭದಲ್ಲಿ ಕಿವಿನಿಮಿರಿ ಮಗನ ಹೆಸರು ಕರೆಯುವುದನ್ನು ಕೇಳಲು ಕಾತುರಳಾಗಿದ್ದೆ. ಬೆಸ್ಟ್ ಔಟ್ ಗೋಯಿಂಗ್ ಸ್ಟುಡೆಂಟ್ ಆಫ್ ದ ಯಿಯರ್ ಗೊಸ್ ಟು........ ಕೇಳಿ ನನಗೆ ಶಾಕ್. ಅತೀಕಡಿಮೆ ಬಹುಮಾನ ಗಳಿಸಿ, ತರಗತಿಯಲ್ಲಿ ೧,೨ ಮಾರ್ಕು ಮುಂದಿರುವ ಟೀಚರ್ ಮಗನ ಹೆಸರು. ಮರುದಿನ ಒಂದಿಷ್ಟು ಪ್ರತಿಭಟಿಸಿದೆ..ಪ್ರಯೋಜನವಾಗಲಿಲ್ಲ..ಅದರ ನಂತರ ನನ್ನ ಪಿಕಾಸೋ ಯಾವುದೇ ಸ್ಪರ್ಧೆಗೆ ಹೋಗಲು ಒಪ್ಪಲಿಲ್ಲ!

***********************************************


  ಇವತ್ತು ಬೆಳಿಗ್ಗೆ ಪಿಕಾಸು ಮತ್ತು ನನ್ನ ನಡುವೆ ನಡೆದ ಮಾತುಕತೆ-

ನಾನು-ಸರಿ  ಪುಟ್ಟು, ಇವತ್ತಿಗೆ ನಿನ್ನ ಪರೀಕ್ಷೆ ಮುಗಿತಲ್ಲ..ಪಾಸ್‍ಪೋರ್ಟ್ ಫಾರ್ಮ್ ಗತಿ ಏನಾಯ್ತು?

ಪಿಕಾಸು- {ಅನ್ಯಮಸ್ಕನಾಗಿ} ಅದು....ನಿನ್ನೆ ಮತ್ತೊಮ್ಮೆ ಪುನಃ ಫಿಲ್  ಮಾಡ್ಬೇಕಾಯ್ತು. ಅರ್ಧ ಆಗಿದೆ.

ನಾನು- ಅರೇ, ಎಲ್ಲಾ ಆಗಿತಲ್ವೋ? ಈಗೆನಾಯ್ತು?

ಪಿಕಾಸು- ಹಳೆ ಡಾಟಾ ಬೇಸ್‍ಯೆಲ್ಲಾ ಹಾಗೆ ಉಳಿಯುತ್ತಾ! ಟ್ರಾಶ್ ಬಿನ್ನಿಗೆ 
ಹೋಗಿರ್ಬೇಕು.

ನಾನು- ಹೋಗಲಿ, ನಿನ್ನ ಪ್ಲಾನು ಏನು? ಗೇಟ್, ಟೊಫೆಲ್, ಜಿಆರ್‌‍ಇ - ಬರೀತಿಯಲ್ವಾ?

ಪಿಕಾಸು- ನೋಡಮ್ಮ, ನಂಗೆ ನಮ್ಮ ದೇಶ ಬಿಟ್ಟು ಹೋಗುವ ಮನಸಿಲ್ಲ. ಅಲ್ಲದೆ ಎಮ್ ಟೆಕ್ ಸಹ ಮಾಡುವುದೋ..ಬೇಡ್ವೋ ಅಂತ ಆಲೋಚನೆ ಮಾಡ್ತಿದ್ದೇನೆ..ಈ ಎಲ್ಲಾ ಡಿಗ್ರಿಗಳಿಂದ ಏನೂ ಪ್ರಯೋಜನವಿಲ್ಲ ಅಂತ ನಿಂಗೂ ಗೊತ್ತು. ಆದರೂ ಹೀಗೆ ತಮಾಷೆಗೆ ಗೇಟ್  ಬರಿತೇನೆ.

ನಾನು- ಅಲ್ಲವೋ, ನಿನಗೆ ಇಷ್ಟ ಇದ್ರೆ, ಯಾವುದು ಬೇಕೋ ಕಲಿಯೋ..ನನಗೆ ದುಡ್ಡಿನ ಪ್ರಾಬ್ಲೆಮ್ ಆಗುತ್ತೆ ಅಂತ ಹೆದರಬೇಡ. ಲೋನ್ ತಗೊಂಡರಾಯಿತು.

ಪಿಕಾಸು-ನಿನಗೆ ಎಲ್ಲಾ ಗೊತ್ತು ತಾನೆ ಅಮ್ಮ. ಕಾಲೇಜಿಗೆ ಬರೇ ಹೆಸರಿಗೆ ತಾನೆ ಹೋಗೋದು...ಎಲ್ಲಾ ನನ್ನಷ್ಟಕ್ಕೆ ನಾನೇ ತಾನೆ ಕಲ್ತದ್ದು...ಅಂದ ಮೇಲೆ ಮುಂದೆನೂ ಹಾಗೆನೇ ಕಲಿತೇನೆ..ಈಗಂತೂ ನನಗೆ ಈ ಮೈಸೂರಿನ ಕೆಲಸ ಮುಖ್ಯ..ನನ್ನ ಪ್ರೊಜೆಕ್ಟ್ ಇಂಪೊರ್ಟೆಂಟ್.. ನಾನು ಮೈಸೂರಿನಿಂದ ಬರ್ತೇನಲ್ವಾ ಆವಾಗ ಆಲೋಚನೆ ಮಾಡುವಾ. ನಾನಿನ್ನು ಬರ್ತೇನೆ. ರಾಮ್ ರಾಮ್!

*****************************************************

ಪಿಕಾಸು ತಯಾರಿಸಿದ ಲೊಗೋ!

ಪಿಕಾಸುಗೆ ಬಹುಶಃ ೩ವರ್ಷವಿರಬೇಕು ಆವಾಗ- ಮಧ್ಯದಲ್ಲಿರುವವನು ಪಿಕಾಸು!
   
ಹೀಗೆ ಹೇಳಿ ನಡೆದೇ ಬಿಟ್ಟ ನನ್ನ ಸುಪುತ್ರ. ಅಂದ ಹಾಗೆ ಅವನು ನಿಟ್ಟೆ ಕಾಲೇಜಿನ ಇಲೆಕ್‍ಟ್ರಿಕಲ್ ಮತ್ತು ಇಲೆಕ್‌ಟ್ರಾನಿಕ್ ಮೂರನೆಯ ವರ್ಷದ ವಿದ್ಯಾರ್ಥಿ. ಮೂರನೆಯ ವರ್ಷ ಇಂದಿಗೆ ಮುಗಿಯಿತು:-)  ಬಹಳ ಪ್ರತಿಭಾವಂತನು. ತನ್ನ ಕೋರ್ ಸಬ್ಜೆಕ್ಟ್ ಮಾತ್ರವಲ್ಲದೆ ಇತರ ನೆಟ್‍ವರ್ಕಿಂಗ್, ಎತಿಕಲ್ ಹ್ಯಾಕಿಂಗ್, ಅಲ್ಲದೆ ಗಣಕ ಯಂತ್ರದಲ್ಲಿ ಅಡೊಬ್, ಮ್ಯಾಕ್ಸ್, ಫೊಟೋ ಶಾಪ್  ಉಪಯೋಗಿಸಿ ಚಿತ್ರ ಬಿಡಿಸುವುದರಲ್ಲಿಯೂ ಪರಿಣಿತ. ಎಲ್ಲವನ್ನೂ ಯಾರ ಸಹಾಯವಿಲ್ಲದೆ ಕೇವಲ ಟುಟೋರಿಯಲ್ ನೋಡಿ ಕಲಿತ. ಅಲ್ಲದೆ ಇತ್ತೀಚಿನ ಟೆಕ್‍ಫೆಸ್ಟ್‌ಗಳಲ್ಲಿ ಅವನು ಮತ್ತು ಸ್ನೇಹಿತರು ಮಾಡಿದ ಅನೇಕ ಪ್ರೊಜೆಕ್ಟ್‌‌ಗಳಿಗೆ ಪ್ರಥಮ ಬಹುಮಾನ ಬಂದಿದೆ... ಅವನಿಗೆ ಮೈಸೂರಿನಲ್ಲಿ ಇಂಟರ್ನ್‍ಶಿಪ್ ಸಿಕ್ಕಿದೆ, ಎಕ್ಸ್ ಮೋಟೊ ಕಂಪನಿಯ ಹೆಸರು. ಬಹುಶಃ ಇವನಂತಹುದೇ ಉತ್ಸಾಹಿ ಹುಡುಗರು ಇತ್ತೀಚೆಗೆ ಪ್ರಾರಂಭಿಸಿದ್ದಾರೆ. ಇದೇ ಮೊದಲ ಬಾರಿಗೆ ಮಗನನ್ನು ನನ್ನಿಂದ ದೂರ ಕಳುಹಿಸುತ್ತಿದ್ದೇನೆ. ಆ ಆಲೋಚನೆಯೇ ಕಷ್ಟ..ಮುಂದೆ ಹೇಗೋ ಏನೋ...ಇಲ್ಲಿಯ ತನಕ ಅವನ ಕನಸುಗಳು ನನ್ನದೇ ಎಂಬಂತೆ ಅದನ್ನು ನನಸು ಮಾಡಲು ನನ್ನಿಂದ ಸಾಧ್ಯವಾದಷ್ಟು ಯತ್ನಿಸಿದೆ. ನನ್ನ ಆಸೆಗೆ ತಕ್ಕಂತೆ ಪ್ರತಿಭಾವಂತ ಮಕ್ಕಳನ್ನು  ದಯಪಾಲಿಸಿದಕ್ಕೆ ಶ್ರೀರಾಮನಿಗೆ ಅನಂತಾನಂತ ವಂದನೆಗಳು.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...