ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 March, 2012

ಶುಭ ಘಳಿಗೆ ಬರಲಿ ಬೇಗ!

ತಾಯ ಗರ್ಭದಿಂದ ಹೊರಜಾರುವಾಗ 
ನನ್ನೊಂದಿಗೆ ಬೆಳಕ ಕುಡಿಯೊಂದಿತ್ತು.
ಅದರ ಕಾಂತಿಯ ಉಸಿರಲಿ ನನ
ಬಾಳು ದಿಗ್ವಿಜಯಗಳೊಂದಿಗೆ ಸಾಗಿತ್ತು..
ಇದರ ಅರಿವು ಮಾತ್ರ ನನಗಿರಲಿಲ್ಲ; 
ಪಯಣದ ಹಾದಿ ಬದಲಾಯಿತು. 
ಅಲಕ್ಷಿಸಿದ್ದೆನೋ ಇಲ್ಲ, ಮರೆತೆನೋ ತಿಳಿಯೆ;
ದೂರವಾಯಿತು ಬೆಳಕು.
ಕತ್ತಲ ಕೂಪದಲಿ ಹೇಗೋ ಬದುಕ ನೂಕುತ್ತಿದ್ದೆ;
ಬೇರೊಂದು ರೂಪದಲಿ ನನ ಸೇರಲೆಂದು
ಹವಣಿಸುತಿತ್ತಂತೆ ಬೆಳಕು;

ನನಗದರರಿವು ಹೇಗಾದಿತು?
ಕುರುಡಿಗೆ ಕಾಣುವುದಾದರೂ ಹೇಗೆ ಕತ್ತಲಲೋಕದಲಿ!
ಹಂಬಲಿಸುತ್ತಿದ್ದೆ, ಕಾಡುತ್ತಿದ್ದೆ ಒಡೆಯನ
ಆದರೋ ಅವನು ಬರೇ ನಸುನಗುತ್ತಿದ್ದ.
ಬಲ್ಲೆ,   ಆಟದ ಬಲಿಪಶು ನಾನಾದೆನೆಂದು,
 ಹಮ್ಮು ಇವಗೆ; 
ಇರಲಿ, ಇರದು ಅಗಲಿ ಜ್ಯೋತಿ 
ಮತ್ತೆ ಬರುವುದು; 
ಆಗಲೇ ಅದರ ತೇಜಸ್ಸು ಪ್ರಜ್ವಲಿಸುವುದಲ್ಲವೆ!

ಅರೆ, ಇದೇನಿದು ಹೊಸ ಶಕ್ತಿಯ ಸಂಚಾರ!
ಕಾರ್ಗತ್ತಲ ಲೋಕದಲಿ ಒಂದಿಷ್ಟು
ರಶ್ಮಿಯ ಕಣಗಳು ದಾರಿಯ ಬೆಳಗುತಿವೆ!
ಅಗಲಿದ ಬೆಳಕಿನ ಆಗಮನದ ಸೂಚನೆಯೋ
ಆಗಲೇ ಕನಸಿನ ರೆಕ್ಕೆಗಳು ಮೂಡುತ್ತಿವೆ!
ಗಾವುದ ದೂರವಿದೆ ಇನ್ನೂ
ತ್ವರೆ ಮಾಡಬೇಡ ಕಾದು ಬೆಂಡಾಗಿರುವೆ;
ಪುನರ್ಮಿಲನದ ಶುಭ ಘಳಿಗೆ 
ಬರಲಿ ಬೇಗ!


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...