ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 March, 2012

ಪ್ರೇಮಾಯಣ- ಅಮರ ಪ್ರೇಮಿಗಳ ವಿಶ್ಲೇಷಣೆ!!!-2



              ಉಷಾ, ಅವರು ಪ್ರೇಮವು ದಾಸ್ಯದ ಹೊದಿಕೆಯನ್ನು ಹೊದ್ದುಕೊಂಡಿದೆ ಅನ್ನುತ್ತಾರೆ. ಹೌದು, ಇದು ದಾಸ್ಯವೆಂದು ಹೆಸರಿಸಲ್ಪಟ್ಟರೂ ಇದು ಸರ್ವ ಸಮರ್ಪಣಾ ಭಾವ ಎಂದು ತಿಳಿದವರು ಹೇಳುತ್ತಾರೆ. ಪ್ರೀತಿಯ ಬಲೆಯಲ್ಲಿ ಸಿಕ್ಕಿ ಬಿದ್ದ ಗಾಢವಾಗಿ ಅನುರಕ್ತರಾದವರು ಪ್ರೇಮಿಗಳು ಕುಂದು ಕೊರತೆಗಳಿಗೆ ಜಾಣಕುರುಡು ತೋರುವರು. ಶಬ್ದದಲ್ಲಿ ವ್ಯಕ್ತವಾಗುವ ಮೊದಲೇ ಒಬ್ಬರು ಇನ್ನೊಬ್ಬರ ಭಾವವನ್ನು ಅರ್ಥಮಾಡಿಕೊಳ್ಳುವರು. ಕಣ್ಣಿನಿಂದಲೇ ತಮ್ಮ ಭಾವ ವಿನಿಮಯಮಾಡಿಕೊಳ್ಳುವರು. ಜಗವೊಡ್ಡುವ ಪರೀಕ್ಷೆಗಳನೆಲ್ಲಾ ತಮ್ಮ ಪ್ರೀತಿಯ ಬಲದಿಂದ ಗೆಲುವ ಛಲ  ತೋರುವರು. ಎಲ್ಲಾ ರೀತಿಯಿಂದಲೂ ಪ್ರೀತಿಗಾಗಿ ಅರ್ಪಿಸಿಕೊಂಡರೆ ಮಾತ್ರ ಅದನ್ನು ನಿಜವಾದ ಪ್ರೇಮವೆಂದೆನ್ನಬಹುದು.   ಇದು ಪ್ರಕೃತಿ ಕೊಟ್ಟವರವೋ ಅಥವಾ ಶಾಪವೋ, ಅಂತೂ ಹೆಣ್ಣು ತನ್ನ ಐಡೆಂಟಿಟಿಯನ್ನು ಕಳಕೊಳ್ಳುವುದು ಸಹಜ ಪ್ರಕ್ರಿಯೇ ಆಗಿಹೋಗಿದೆ. ಹೆಣ್ಣಿಗೆ ಮತ್ತೊಂದು ಹೆಸರೇ ತ್ಯಾಗ..ಅಥವಾ ತ್ಯಾಗಕ್ಕೆ ಹೆಣ್ಣು!  ರಾಮನು ಕಾಡಿಗೆ ಹೊರಟಾಗ ಸುಕೋಮಲೆ ಸೀತೆಗೆ ಅವನನ್ನು ಅನುಕರಿಸಿದಳು..೧೪ ವರ್ಷಗಳ ಕಾಲ ಕ್ರೂರ ಮೃಗಗಳಿಂದ ಕೂಡಿದ ದಟ್ಟ ಕಾಡಿನಲ್ಲಿ ವಾಸ ಮಾಡುವುದೆಂದರೆ ಅದೊಂದು ಗಂಭೀರ ವಿಷಯ! ಯಾಕೆ ಆಕೆ ಅಂತಹ ನಿರ್ಧಾರ ತೆಗೆದುಕೊಂಡಳು! ಕೇವಲ ತನ್ನಿಯನನ್ನು ಅಗಲಿ ಇರಲಾದ ಕಾರಣ. ರಾಮನೂ ಆಕೆಯನ್ನು ತಡೆಯಲಿಲ್ಲ ..ಇದೇ ಕಾರಣವಲ್ಲವಾ!  ಸುಖಭೋಗಗಳಿಂದ ಜೀವನ ನಡೆಸಿದ ರಾಜ ದಂಪತಿಗಳು ಕೇವಲ ಪ್ರೀತಿಯ ಬಲದಿಂದ ಕಷ್ಟಗಳನ್ನು ಲೆಕ್ಕಿಸದೇ ಬದುಕಲು ನಿರ್ಧರಿಸಿದರು. ಆದರೆ ವಿಧಿ...ಅವರನ್ನು ಅಗಲಿಸಿತು. ಇಬ್ಬರ ಮನ ಮೂಕವಾಗಿ ರೋಧಿಸಿದವು...ನೆನಪಿನ ಆಸರೆಯಿಂದ ಬದುಕಿದರು.




             ಮಹಿಳಾವಾದಿಗಳು ರಾಮನ ಮೇಲೆ ಆಪಾದನೆಯ ಪಟ್ಟಿಗಳನ್ನು ಹೊರಿಸಬಹುದು. ಆದರೆ ಒಂದಿಷ್ಟು ಚಿಂತನೆ ಮಾಡಿದರೆ ರಾಮನ ತಪ್ಪುಗಳಲ್ಲಿ ಒಪ್ಪುಗಳನ್ನು ಕಾಣುತ್ತೇವೆ. ರಾಜಧರ್ಮ ಪಾಲಿಸುವುದು ಮೊದಲ ಆದ್ಯತೆ ಸಹಜವಾಗಿ ರಾಮನ ಕರ್ತವ್ಯ..ಮತ್ತು ಅದನ್ನು ಪಾಲಿಸುವಾಗ ಸೀತೆಗೆ ಅನ್ಯಾಯವಾಗುವುದು ಕೂಡ  ಸಹಜವೇ ಆಗಿದೆ. ರಾಜ ಜನಕನ ಅಂಗಳದಲಿ ಬೆಳೆದ ಮೈಥೇಲಿಗೆ ಅದೆಲ್ಲಾ ಖಂಡಿತ ತಿಳಿದಿತ್ತು....ಆದುದರಿಂದ ಅವಳು ಪ್ರತಿಭಟಿಸಿಲ್ಲ. ಅಗಸನ ಮಾತು ಕೇಳಿ ಕಾಡಿಗೆ ಕಳುಹಿಸುವಾಗಲೂ ಹೊಟ್ಟೆಯಲ್ಲಿ ಅಯೋಧ್ಯೆಯ ರಾಜವಂಶದ  ಕುಡಿಗಳನ್ನು ಹೊತ್ತುಕೊಂಡಿದ್ದಳು...ಆದರೂ ರಾಮ ತನ್ನ ಸಹಧರ್ಮಿಣಿಯನ್ನು ತ್ಯಜಿಸಿ ರಾಜಧರ್ಮಕ್ಕೆ ಪ್ರಾಮುಖ್ಯ ಕೊಟ್ಟ...ಅಂದಿನ ಕಾಲದಲ್ಲಿ ಅನೇಕ ಉಪಪತ್ನಿಯರಿರುವುದು ಸಹಜವಾಗಿದ್ದರೂ ರಾಮ ಏಕಪತ್ನಿ ವೃತವನ್ನು ಪಾಲಿಸಿದ. ರಾವಣ ಸೀತೆಯನ್ನು ಅಪಹರಿಸಿದನಾದರೂ ಅವನಿಗೆ ಅವಳ ಮೈಯ ಒಂದು ಕೂದಲನ್ನು ಕೊಂಕಲು ಸಾಧ್ಯವಾಗಲಿಲ್ಲ ಯಾಕೆ!  ಜಾನಕಿಯ ಮನಸ್ಸಿನಲ್ಲಿ, ಹೃದಯದಲ್ಲಿ ರಾಮನ ಮೂರುತಿ ಭದ್ರವಾಗಿ ಬೇರೂರಿತ್ತು..ರಾವಣನೂ ಸುಂದರನಾಗಿದ್ದ, ಅಪ್ರತಿಮ ಬಲಶಾಲಿಯಾಗಿದ್ದ. ಪರಶಿವನನ್ನೇ ಒಲಿಸಿ ಅವನ ಆತ್ಮ ಲಿಂಗವ ವಶಮಾಡಿಕೊಂಡವನು ಅಂತವನಿಗೂ ಸೀತೆ ಒಲಿಯಲಿಲ್ಲ. ಅವಳ ಪಾತಿವೃತ್ಯ ಮತ್ತು  ನಿಷ್ಕಳಂಕ ಪ್ರೇಮದ ಫಲವಾಗಿ ರಾವಣನಿಗೆ ಅವಳ ಮೇಲೆ ಬಲಪ್ರಯೋಗ ಮಾಡಲಿಕ್ಕಾಗಲಿಲ್ಲ.


            ಮಾಯಾಮೃಗದ ರೂಪ ಹೊತ್ತ ಮಾರೀಚನನ್ನು ಕೊಂದು ರಾಮನು ಕುಟೀರಕ್ಕೆ ಹಿಂದಿರಿಗಿದಾಗ ಸೀತೆಯನ್ನು ಕಾಣದೆ ಅದೆಷ್ಟು ವಿಲಾಪಿಸಿದ,,ಲೆಕ್ಕವಿಟ್ಟವರಾರು? ಕಾಡಿನ ಪ್ರತಿ ಮರ ಗಿಡ ಬಳ್ಳಿಗಳು , ಮೃಗ ಪಕ್ಷಿಗಳು ಅವನ ದುಃಖಕ್ಕೆ ಸಾಕ್ಷಿಯಾದವು...ಅವನ ರೋಧನವನ್ನು ಕೇಳಿ ಕ್ರೂರ ಮೃಗಳ ಹೃದಯವೂ ಮರುಗಿತ್ತು...ವಿಷ್ಣುವಿನ ಪೂರ್ಣಾವತಾರವೆಂದು ಬಿಂಬಿಸಲ್ಪಟ್ಟ ರಾಮನಿಗೆ ಅದೇ ಕ್ಷಣ ಸೀತೆಯನ್ನು ಪಡೆಯುವುದು ಸಾಧ್ಯವೂ ಇತ್ತು..ಇಲ್ಲ ಅವನು ಹಾಗೆ ಮಾಡಲಿಲ್ಲ...ಸಾಮಾನ್ಯ ಮಾನವನಂತೆ ವಿಲಾಪಿಸಿದ..ಕರುಳು ಕರಗುವಂತೆ ರೋಧಿಸಿದ.. ಕಪಿಗಳ ಸ್ನೇಹಕ್ಕೆ ಹಸ್ತ ಚಾಚಿ  ವಾನರ ಸೈನ್ಯದ ಸಹಾಯದಿಂದ ರಾವಣನನ್ನು ಕುಲಸಮೇತ ಸಂಹರಿಸಿ ಮನು ಕುಲಕ್ಕೆ ಮಾದರಿಯಾದ. ಪರಪುರುಷನ ವಶದಲ್ಲಿದ್ದ ಪತ್ನಿಯನ್ನು ಪರೀಕ್ಷೆಗೆ ಒಡ್ಡಿದ; ಯಾಕೆ ಅವನಿಗೆ  ಲೋಕಕ್ಕೆ ತೋರಿಸಬೇಕಿತ್ತು ಸೀತೆಯ ಪಾತಿವೃತ್ಯವನ್ನು.  ಮುಂದೆ ಯಾರು ಆಕೆಯ ಮೇಲೆ ಆರೋಪ ಮಾಡಬಾರದು ಎಂದು ಮುಂಜಾಗರೂತೆಗಾಗಿ ಆ ದಾರಿಯನ್ನು ಆಯ್ದ ನಮ್ಮ ರಾಮ.  ಆದರೆ ವಿಧಿ ಬಿಡುವುದೇ!  ಜಾನಕಿ ಕೇವಲ ಕೆಲವೇ ಕಾಲ ಪತಿಗೃಹದ ಸುಖವನ್ನು ಕಂಡಳು..ಮತ್ತಿನ್ನೊಮ್ಮೆ ಕಾಡಿನ ವಾಸ. ಆಕೆ ತನ್ನ ತವರು ಮನೆಗೆ ಹಿಂದಿರುಗಬಹುದಿತ್ತು..ಇಲ್ಲ ಪತಿಯ ಮೇಲಿನ ಪ್ರೇಮದಿಂದ ಆತನ ಆತ್ಮ ಗೌರವ ರಕ್ಷಿಸುವುದು ಮುಖ್ಯವೆಂದು ಸೀತೆಗೆ ಅನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ. ನಿಜವಾದ ಪ್ರೇಮ ತ್ಯಾಗವನ್ನು ಬೇಡುತ್ತದೆ. ರಾಮ ಸೀತೆಯರು ಎಷ್ಟೊಂದು ಪ್ರೇಮ ಪರೀಕ್ಷೆಯನ್ನು ಎದುರಿಸಿದರು! ಅದರಿಂದಾಗಿಯೇ ಅವರ ಹೆಸರು ಪ್ರೇಮಿಗಳ ಪಟ್ಟಿಯಲ್ಲಿ ಶಾಶ್ವತವಾಗಿ ಉಳಿಯಿತು.










          ನಮ್ಮ ಎರಡನೆಯ ಜೋಡಿ ನಳ ದಮಯಂತಿ. ಕಾಳಿದಾಸನ ತನ್ನ ಕಾವ್ಯದಲ್ಲಿ ಅವರ ಪ್ರೇಮದ ವರ್ಣನೆಯನ್ನು ತನ್ನದೇ ಶೈಲಿಯಲ್ಲಿ  ರೂಪಿಸಿದ್ದಾನೆ. ಅದರ ಬಗ್ಗೆ ನಾನೇನು ಹೆಚ್ಚಿಗೆ ಹೇಳಬೇಕಾಗಿಲ್ಲ...ಇಲ್ಲಿ ಉಷಾ ಅವರು ನಳನು ದಮಯಂತಿಯನ್ನು ಕಾಡಿನಲ್ಲಿ ಬಿಟ್ಟು ಆಕೆಯ ಸೀರೆಯ ಅರ್ಧಬಾಗದೊಂದಿಗೆ ಪಾರಾದ ಬಗ್ಗೆ ಬರೆದಿದ್ದಾರೆ. ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಪತ್ನಿಯನ್ನು ಹಾಗೆ ಬಿಟ್ಟು ಹೋಗುವ ನಿರ್ಧಾರ ಯಾಕೆ ಮಾಡಬೇಕಾಯಿತು! ಉಟ್ಟ ಬಟ್ಟೆಯನ್ನು ಕಳಕೊಂಡ ನಳನಿಗೆ ಮುಂಬರುವ ಕಷ್ಟದ ದಿನಗಳ ಕಲ್ಪನೆಯಿತ್ತು. ಕಲಿಯ ಆಟ ಭಗವಂತನ ಅನುಗೃಹಕ್ಕಿಂತಲೂ ಬಲವಾಗಿದೆ ಎಂಬುದು ಆತನಿಗೆ ಮನದಟ್ಟಾಗಿತ್ತು. ಆದುದರಿಂದ ಆತ ಅಂತಹ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಯಿತು. ತನಗೆ ಬರುವ ಕಷ್ಟಗಳನ್ನು  ಮುದ್ದಿನ ಮಡದಿ ಅನುಭವಿಸುವುದು ನಳನಿಂದ ನೋಡಲಾಗಲಿಲ್ಲ. ಆತನ ಇಚ್ಛೆಯಂತೆ ತವರು ಮನೆ ಸೇರಿದ ದಮಯಂತಿ ನಳನ ವಿರಹದ ಬೇಗೆ ಎಷ್ಟೊಂದು ಅನುಭವಿಸಿರಬಹುದೆಂದು ಉಹಿಸಲೂ ಸಾಧ್ಯವಾಗಲಿಕ್ಕಿಲ್ಲ. ಅವಳ ಉತ್ಕಟ ಪ್ರೀತಿಯಿಂದಲೇ ಕುರೂಪಿ ನಳನನ್ನು ಗುರುತಿಸಲು ಅನುವಾಯಿತು.






        ದುಶ್ಯಂತ- ಶಕುಂತಲೆಯ ಜೀವನದಲ್ಲಿ ದುರ್ವಾಸ ಋಷಿಗಳ ಶಾಪವು ದುಶ್ಯಂತನ ಮರೆವಿಗೆ ಕಾರಣವಾಯಿತು ಹೊರತು ಅವರ ಪ್ರೀತಿ ವಿಫಲಗೊಂಡುದರಿಂದ ಅಲ್ಲ.  ಹಾಗೇನಾಗಿದ್ದರೆ ಆತ ಉಂಗುರ ದೊರೆತ ಕೂಡಲೇ ಪತ್ನಿಯನ್ನು ಹುಡುಕಲು ಹೊರಡುತ್ತಿರಲಿಲ್ಲ. ಹೆಚ್ಚಿನ ಪ್ರ‍ೆಮ ಕಥೆಗಳಲ್ಲಿ ಹೆಣ್ಣು ಹೆಚ್ಚಿನ ನೋವನ್ನು ಸಂಕಷ್ಟವನ್ನು ಅನುಭವಿಸುತ್ತಾಳೆ. ಇದು ಪ್ರತಿಯೊಂದು ಯುಗದಲ್ಲೂ ನಿರೂಪಿತವಾಗಿದೆ. ಭಾವುಕಳು, ದೈಹಿಕವಾಗಿಯೂ ಮಾನಸಿಕವಾಗಿಯೂ ಕೋಮಲೆಯಾದ ಹೆಣ್ಣಿಗೆ ಕಷ್ಟಗಳು ಭಗವಂತನಿಂದಲೇ ಬಳುವಳಿಯಾಗಿ ಬಂದಿದೆ.  ವೇದ ಕಾಲದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಮಾನಗಳಿದ್ದವು ಎಂದು ತಿಳಿದು ಬರುತ್ತದೆ ಆದರೆ ಯುಗಗಳು ಉರುಳಿದಂತೆ ಹೆಣ್ಣು ತನ್ನ ಬೆಲೆಯನ್ನು ಕಳಕೊಳ್ಳುತ್ತಲೇ ಹೋಗಿದ್ದಾಳೆ...  ಬಲಶಾಲಿ ಪಂಚ ಪತಿಗಳಿದ್ದೂ ಅವಮಾನಕ್ಕೊಳಗಾದ ದ್ರೌಪದಿಯ ಅವಸ್ಠೆ ಹೇಗಿತ್ತು! ಕಲಿಯುಗದಲ್ಲಂತೂ ಮಹಿಳೆಯ ಅಧೋಗತಿಯು ಹೇಳಿಕೊಳ್ಳಲಾಗಷ್ಟು ಇವೆ. ಅದರಲ್ಲಿಯೂ ಅನೇಕ ಸಲ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುತ್ತಾಳೆ. ಯಾಕೆ ಹೀಗೆ? ಬಹುಶಃ ಯಾರಲ್ಲೂ ಉತ್ತರವಿರಲಿಕ್ಕಿಲ್ಲ!!!






3 comments:

kiran said...

ಇನ್ನೊಂದು ನೀಲು - ಹೌದಾ ?
ಮದುವೆಯ ನಂತರ ಮಗುವಿನ ಹೆಸರೇನಿರಬೇಕೆಂದು ಆ ಪ್ರೇಮಿಗಳು ಪ್ರೀತಿಯಿಂದ ಜಗಳವಾಡಿಕೊಂಡಿದ್ದರು,
ಮದುವೆಯ ನಂತರ ಆತ ತನ್ನ ಮಗುವಿಗೆ ಆಕೆಯ ಹೆಸರನ್ನೇ ಇಟ್ಟನು

Sheela Nayak said...

Good try...:-)

kiran said...

(ಪಾರ್ಟಿಯಲ್ಲಿ - ನೀಲು)
ಕೇಳುತ್ತಿದ್ದಳೊಬ್ಬಳು ನಾರಿ
ಹೇಗಿದೆ ನನ್ನ saree
ಎಂದು ಎಲ್ಲರನ್ನು..!
ಏಕೋ ಏನೋ ದೂರ ಸರಿಯುತ್ತಿದ್ದಾರೆಲ್ಲರೂ,
ಮರೆತಿರಬಹುದೇ ಇಂದು ಅವಳು
ಹಲ್ಲುಜ್ಜುವುದನ್ನು?

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...