ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

13 March, 2012

ಪ್ರೇಮಾಯಣ- ಅಮರ ಪ್ರೇಮಿಗಳ ವಿಶ್ಲೇಷಣೆ!!!-1


      ಎರಡು ತಿಂಗಳ ಹಿಂದೆ ಉಷಾ ಕಟ್ಟೆಮನೆಯವರ ಬ್ಲಾಗಿನಲ್ಲಿ ಪ್ರೇಮದ ಬಗ್ಗೆ ಓದಿದ ಲೇಖನ ನನ್ನಲ್ಲಿ ಹೊಸ ವಿಚಾರಗಳನ್ನು ಅಲ್ಲಲ್ಲ, ಹಳೆ ವಿಚಾರಗಳನ್ನು ಹೊಸ ದೃಷ್ಟಿ ಕೋನದಿಂದ ನೋಡುವಂತೆ ಪ್ರೇರೇಪಿಸಿದವು.  ಅವರ ಬಳಿ ಅನುಮತಿಯನ್ನೇನು ಪಡೆದಾಯ್ತು...ಆದರೆ ಬಹುಶಃ ಒಳ್ಳೆಯ ಘಳಿಗೆ ಕೂಡಿಬರಲಿಲ್ಲವೆಂದು ಕಾಣುತ್ತದೆ...ಹಾಗಾಗಿ ಬರೆಯಲೇ ಆಗಿಲ್ಲ. ಈ ದಿನ ಸುದಿನವೆಂದು ಕಾಣುತ್ತದೆ ಹಾಗಾಗಿ ಶುರು ಮಾಡಿದ್ದೇನೆ...ಕೇಳುವಂತರಾಗಿ. 


     "ಪ್ರೇಮ"- ಈ ಎರಡಕ್ಷರದಲ್ಲಿ ಅದ್ಯಾವುದೋ ಶಕ್ತಿ, ಮೋಡಿಯಿದೆಯಲ್ಲವೆ! ಪ್ರೇಮದ ಪರಿಭಾಷೆಗೆ ಎಲ್ಲೆಯಿದೆಯೆ...ಇದನಿಮಿತ್ತಂ ಎಂದು ಗುರುತಿಸಲಾದ ಶಬ್ದವಿದು. ವ್ಯಾಖ್ಯಾನಿಸಲು ತೊಡಗಿದರೆ ಮಹಾ ಕಾವ್ಯವೇ ಆಗುವುದು. ಪ್ರೀತಿಯಲ್ಲಿ ಎಷ್ಟೊಂದು ರೀತಿ ನೀತಿ ಅಡಗಿದೆ. ಸಧ್ಯಕ್ಕೆ ಮೌನ ಕಣಿವೆಯ ಉಷಾ  ಬರೆದಿರುವ  " ಪ್ರೀತಿಸಿದರೆ ರಾಕ್ಷಸರಂತೆ ಪ್ರೀತಿಸಬೇಕು" ಬ್ಲಾಗ್ ಬರಹವನ್ನು ವಿಶ್ಲೇಷಿಸಲು ಇಷ್ಟೆಲ್ಲ ಪೀಠಿಕೆ ಹಾಕಬೇಕಾಯ್ತು.  


    ಲೇಖನವನ್ನು ಓದದವರಿಗಾಗಿ ಈ ಕೊಂಡಿ!
              http://www.mounakanive.blogspot.in/


 ಅಲ್ಲಲ್ಲಿ ಅವರ ಬರಹವನ್ನು ಉದ್ಘರಿಸಿ ಬರೆಯುತ್ತಿದ್ದೇನೆ. 


<<ಆಧ್ಯಾತ್ಮ ಸಾಧನೆಗೆ ಸಂಬಂಧಪಟ್ಟಂತೆ ಭಾರತೀಯರು ಏರಿದ ಎತ್ತರಕ್ಕೆ ಎತ್ತರಕ್ಕೆ ಸರಿಸಾಟಿಯಿಲ್ಲ. ಅವರ ಸಾಧನೆಯ ಫಲಶ್ರುತಿಯಲ್ಲಿ ಸದಾ ಆನಂದದ ಪ್ರೇಮರಸ. ಆದರೆ ಗಂಡು-ಹೆಣ್ಣಿನ ಪ್ರೇಮಕ್ಕೆ ಸಂಬಂಧಪಟ್ಟಂತೆ ಭಾರತೀಯರ ದೃಷ್ಟಿಕೋನ ವಿಶಾಲವಾಗಿಲ್ಲ.. ನಮಗೆ ಪ್ರೇಮದ ಉತ್ಕಟತೆಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲವೇನೋ ಎಂಬ ಗುಮಾನಿ ಬಹಳ ಹಿಂದಿನಿಂದಲೂ ನನಗಿದೆ. ಇಲ್ಲಿ ಪ್ರೇಮವೆಂಬುದು ದಾಸ್ಯದ ಹೊದಿಕೆಯಡಿ ಅಡಗಿ ಕುಳಿತಿದೆ.>> 


   - ಭಾರತೀಯರು ಕೇವಲ  ಅಧ್ಯಾತ್ಮ ಮಾತ್ರವಲ್ಲದೆ ಪ್ರೇಮಿಗಳಾಗಿಯೂ ಜಗತ್ತಿನಲ್ಲಿ ಅತ್ಯಂತ ಎತ್ತರ ಸ್ಥಾನವನ್ನು ಪಡೆದಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಉದಾರಣೆಗಳ ಎದುರು ರೋಮಿಯೋ ಜೂಲಿಯೆಟ್‌ರನ್ನು ನಿವಾಳಿಸಿ ಒಗೆಯಬೇಕು.   ಬಹುಶಃ ತಾಯಿ ಮಕ್ಕಳ ನಡುವೆ ಇರುವ ಆ ಪ್ರೀತಿ, ವಾತ್ಸಲ್ಯ ಶ್ರೇಷ್ಟವಾದರೂ ಅದರಲ್ಲಿಯೂ ವರುಷ ಕಳೆದಂತೆ ನಮ್ಮ ಜೀವನದಲ್ಲಿ ಪ್ರವೇಶಿಸುವ ಇತರ ಸಂಬಂಧಗಳಿಂದ  ಒಂದಿಷ್ಟು ತನ್ನ ಹೊಳಪು ಕಳೆದುಕೊಳ್ಳುತ್ತದೆ.. ಆದರೆ ಈ ಗಂಡು ಮತ್ತು ಹೆಣ್ಣಿನ ಈ ಸಂಬಂಧವು  ಎರಡು ಆತ್ಮಗಳ   ಮಿಲನ... ತಮ್ಮ  ವ್ಯಕ್ತಿತ್ವಗಳನ್ನು ಕಳೆದುಕೊಂಡು ಒಂದಾಗುವ ಪ್ರಕ್ರಿಯೆ...ಆದರೆ ಇದರ ಬಗ್ಗೆ ಯಾವುದೇ ಆಕ್ಷೇಪವಿರುವುದಿಲ್ಲ..ಬದಲಾಗಿ ದಿವ್ಯ ಭಾವ ಹೊಮ್ಮುತ್ತದೆ!  ಇಲ್ಲಿ ನಾನು ಆಧ್ಯಾತ್ಮವನ್ನು ಎಳೆತರಲು ಬಯಸುತ್ತೇನೆ.  ನನ್ನ ಪ್ರಕಾರ ಭೌತಿಕತೆ ಮತ್ತು ಆಧ್ಯಾತ್ಮಿಕತೆ ಎರಡನ್ನು ಬೇರ್ಪಡಿಸಲಾಗುವುದಿಲ್ಲ.. ಕಲ್ಲು ಮುಳ್ಳುಗಳಿಂದ ಕೂಡಿದ ಈ ಮಾಯಾ ಲೋಕದಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗಬೇಕಾದರೆ ಪ್ರತಿಯೊಂದನ್ನು ನಾವು ಆಧ್ಯಾತ್ಮಿಕ ಚೌಕಟ್ಟಿನಲ್ಲಿ ಕಾಣಬೇಕಾಗುತ್ತದೆ.  ಹಾಗಾಗಿ ನನ್ನ ಲೇಖನದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪ್ರವೇಶವಾಗುತ್ತದೆ.  ರಾಮಕೃಷ್ಣರ ಉತ್ಕಟ ಭಕ್ತಿ...ದೇವಿಯನ್ನು ಪ್ರತ್ಯಕ್ಷ ಮಾಡಿಕೊಳ್ಳಲು ಅವರು ಮಾಡುವ ಹುಚ್ಚಾಟ...ಭಕ್ತಿಯ ಪರಾಕಷ್ಟೆಯನ್ನು ಸೂಚಿಸುವ ಅವರ ಸಮಾಧಿ...ಇವೆಲ್ಲಾ ನಾವೊಂದು ಪ್ರೇಮಿಯಲ್ಲೂ ಕಾಣಬಹುದಲ್ಲವೆ! ಹಾಗೆಯೇ ಪ್ರೇಮಕ್ಕೆ ಮೀರಾ ಬಾಯಿಯ ಉದಾಹರಣೆ ಕೊಡುವರಾದರೂ ನಾನದನ್ನು ಆಧ್ಯಾತ್ಮಿಕ ಭಕ್ತಿಯೆಂದೇ ವಾದಿಸುತ್ತೇನೆ. ಕೃಷ್ಣನೇ ತನ್ನ ಪತಿಯೆನ್ನುವಳಾದರೂ ಅದರಲ್ಲಿ ಮನುಷ್ಯರಿಗೆ ಸ್ವಾಭಾವಿಕವಾದ ಕಾಮದ ಲೇಪವಿರಲಿಲ್ಲ...ಅದನ್ನು ಕೇವಲ ಮುಕ್ತಿಯ ದಾಹವೆಂದು ಗುರುತಿಸಬಹುದೆಂದು ನನ್ನ ಅಭಿಮತ. ಅಂತೇಯೆ ಅಕ್ಕಮಹಾದೇವಿಯೂ ಕೂಡ. ಮಲ್ಲಿಕಾರ್ಜುನನಲ್ಲಿ ಐಕ್ಯತೆಯೇ ಆಕೆಯ ಪರಮ ಗುರಿಯಾಗಿತ್ತು. 
       
       <<ಪ್ರೇಮದ ಉತ್ಕಟತೆ ಎಂದರೆ ಎರಡು ದೇಹಗಳು, ಎರಡು ಮನಸುಗಳು ಒಂದಾಗಿ ಕರಗಿ ಹೋಗುವುದು; ಐಕ್ಯವಾಗುವುದು; ತನ್ನತನವನ್ನು ಕಳೆದುಕೊಳ್ಳುವುದು; ಶೂನ್ಯ ಸ್ಥಿತಿಯನ್ನು ತಲುಪುವುದು. ಅಂದರೆ ವರ್ತಮಾನವನ್ನು ಸಂಪೂರ್ಣವಾಗಿ ಮರೆಯುವುದು.
ಇಂತಹ ಮರೆಯುವಿಕೆ ನಮ್ಮ ಪುರಾಣ, ಇತಿಹಾಸಗಳಲ್ಲಿ ಎಲ್ಲಿಯಾದರೂ ದಾಖಲಾಗಿದೆಯೇ? ಹಾಗೆ, ಪ್ರೇಮದ ದಾಖಲಾತಿಯೆಂದು ನಮಗೆ ಅಲ್ಲಿ ಇಲ್ಲಿ ಸಿಗುವ ಒಂದೆರಡು ಉದಾಹರಣೆಗಳು ಪ್ರೇಮದ ಗಾಢವಾದ ಅನುಭವವನ್ನು ನೀಡಬಲ್ಲಷ್ಟು ಶಕ್ತವಾದುದೇ?>>
      ಶೂನ್ಯ ಸ್ಥಿತಿ ಪಡೆಯುವಿಕೆ ಕೇವಲ ಬರೇ  ಸ್ವಲ್ಪ ಸಮಯ ಸೀಮಿತವಾಗುತ್ತದೆ...ಪ್ರೀತಿಯಿಂದಲೇ ಜೀವನ ಸಾಗುವುದೇ? ಅಲ್ಲದೆ ಉಳಿದ ಸಂಬಂಧಗಳಿಗೂ ಕೂಡಾ ಬೆಲೆ ಕೊಡಬೇಕಲ್ಲವೆ? ಎಲ್ಲವನ್ನು ತೂಗಿಸಿ ತೆಗೆದುಕೊಂಡು ನಡೆಯಬೇಕಾಗುತ್ತೆ..ತಪ್ಪಿ ನಡೆದರೆ ಅಪವಾದ ತಪ್ಪದು...ಅವಹೇಳನ, ಅವಮಾನ ಕಟ್ಟಿಟ್ಟ ಬುತ್ತಿ.  ಕೆಲವೊಂದು ಉದಾಹರಣೆಗಳು ದಾಖಲಾದರೂ ಹೆಚ್ಚಿನವು  ಇತಿಹಾಸದ ಕತ್ತಲಲ್ಲಿ ಶಾಶ್ವತವಾಗಿ ಹುಗಿದುಹೋಗಿದೆ...ಯಾಕೆಂದರೆ  ಪ್ರೀತಿಯ ಇನ್ನೊಂದು ಮುಖವಾದ ತ್ಯಾಗ ಕಾರಣವಾಗುತ್ತದೆ.  ಎಷ್ಟೋ ಪ್ರೇಮಿಗಳು ಕಾರಣಾಂತರಗಳಿಂದ  ಒಬ್ಬರಿಂದೊಬ್ಬರು ದೂರವಾಗುತ್ತಾರೆ...ಕೆಲವೊಮ್ಮೆ  ಅಲ್ಪಾವಧಿಗೆ ಮಾತ್ರ ಜೊತೆಗೂಡಿ ಮತ್ತೆ ಅಗಲುವಿಕೆಯ  ಪರಿತಾಪವನ್ನು ಭೋಗಿಸುತ್ತಾರೆ. 
{ಚಿತ್ರ ಕೃಪೆ ಅಂತರ್ಜಾಲ}

   ಇಲ್ಲಿ ಉಷಾ ಕೆಲವೊಂದು ಉದಾಹರಣೆಗಳನ್ನು ಕೊಟ್ಟಿದ್ದಾರೆ....ದುಶ್ಯಂತ- ಶಕುಂತಲ, ರಾಮ- ಸೀತಾ  ಮತ್ತು ನಳ- ದಮಯಂತಿ. ಅವರ ಆಪಾದನೆಯೇನೆಂದರೆ ರಾಮ ಮತ್ತು ದುಶ್ಯಂತ ತಮ್ಮ ಪ್ರಿಯತಮೆಗೆ ಮೋಸಮಾಡಿದ್ದಾರೆಂದು. ಮೇಲು ನೋಟಕ್ಕೆ ಹಾಗೆಂದು ಕಾಣುತ್ತದಾದರೂ ಪರಿಸ್ಥಿಯನ್ನು ವಿಶ್ಲೇಷಿದಾಗ ನಿಜಸ್ವರೂಪವನ್ನು ಕಾಣಬಹುದು.   ಈ ಮೂರು ಜೋಡಿ ಎಂದೆಂದೂ ಆದರ್ಶಪ್ರಾಯವಾದುದು. ತ್ಯಾಗ, ಪ್ರೀತಿ ಮತ್ತು ಶಾಪದ ಸಮ್ಮಿಳನಕ್ಕೆ ಇವರ ಕಥೆ ಮಾದರಿ. 
    

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...