ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 March, 2012

ಹೊಯ್ದಾಟ


ಸಖಿಯ ಎದೆಯ ಬಡಿತ,
ದೂರದಲ್ಲಿರುವ ಸಖನ ಹೃದಯಲ್ಲದರ ಮಿಡಿತ,
ಬಡಿತ ಮಿಡಿತಗಳಿಗಾಟ,
ಹೃದಯಗಳಿಗೆ ಹೊಸ ಪರಿಯ ಹೊಯ್ದಾಟ!

30 March, 2012

ಹೃದಯ ಗೀತೆ!


ಇಲ್ಲೊಂದು ಹೃದಯವು,
ಸಖನ ಆಗಮನಕ್ಕಾಗಿ ಕಾದಿತ್ತು.
ಅದರರಿವಿಲ್ಲದ ಕವಿಯ ಹೃದಯವು,
ಸಖಿಯ ಮೇಲಣ ಗೀತೆಯ ಹಾಡಿತ್ತು!

ವಸಂತ ಮಾಸ ಆಗಮಿಸಿತ್ತು;
ಕೋಗಿಲೆಯ ಗಾನ ಮೇಳೈಸಿತ್ತು;
ತಕಲಾಟದಲ್ಲಿದ್ದ  ಹೃದಯಗಳ ಪರಸ್ಪರ ಭೇಟಿ ಸಾಗಿತ್ತು;
ಭಾವನೆಗಳ ನಿವೇದನೆ ನಡೆದಿತ್ತು;
ಜನುಮ ಜನುಮಗಳ ಹುಡುಕಾಟ ಮುಗಿದಿತ್ತು!


*************

27 March, 2012

ಪ್ರೇಮಮಯ ಹೃದಯಗಳ ಕಾವ್ಯಮಯ ಸಲ್ಲಾಪ!


                                   
                                   
                                   
                       
  ಜೀವನದಲ್ಲಿ ಮಾಗಿದ, ಪ್ರೀತಿಗಾಗಿ ಪರಿತಪಿಸುವ ಎರಡು ಪ್ರೌಢ ಜೀವಿಗಳ ಮಧ್ಯದಲ್ಲಿ ನಡೆಯುವ ಒಂದು ಕಾವ್ಯಮಯ ಸಂವಾದ...ಇದು ಒಂದು ಕಲ್ಪನೆ..ಆದರೆ ಒಂದು ವೇಳೆ ಇದರಂತೆ ಯಾರಾದರೂ ಮಾತನಾಡಿಕೊಂಡ ಹೋಲಿಕೆಯಿದ್ದಲ್ಲಿ ನಾ ಅದಕ್ಕೆ ಹೊಣೆಯಲ್ಲ..:-)


ನಲ್ಲೆ:-
ನಿಶಾ ದೇವಿಯ ಮಡಿಲಲ್ಲಿ
ನನ್ನೆಲ್ಲ ದುಃಖ ದುಮ್ಮಾನಗಳ 
ಮರೆತು ಹಾಯಾಗಿ ಪವಡಿಸಿದ್ದೆ;
ತನು ಮನವೆರಡೂ ತಮ್ಮ
ದಿನದ ಭಾರವ 
ಕಳಚಿ ವಿರಮಿಸುತಿರೆ,
ಎಬ್ಬಿಸಿದೆಯಲ್ಲವೆ ಗೆಳೆಯ ನೀ;
ಖಾಲಿ ಹಾಳೆಯ ಕೈಗಿತ್ತು,
ಲೇಖನಿ ಹಸ್ತದಲಿರಿಸಿ,
ನನ್ನೊಳಗಿಂದ ಚಿಮ್ಮುತ್ತಿದ್ದ ಭಾವನೆಗಳಿಗೆ;
ಅಕ್ಷರರೂಪ ಕೊಡಲು ಸೂಚಿಸಿದೆ!
ನಿಶೆಯ ಮತ್ತಲ್ಲಿದ್ದ ನಾ,
ಮುನಿಸು ತೋರಿದೆ ನಿನ್ನಲ್ಲಿ!
ಏನು ಈ ಪರಿಪಾಟ;
ಹೊತ್ತು ಗೊತ್ತು ಇಲ್ಲದೆ,
ಕೊಡುವಿಯೇಕೆ ಕಾಟ!
ಸಿಟ್ಟಿಗೆದ್ದ ಗೆಳತಿಯ ತಾಪಕೆ ಬೆದರಿ;
ಅದೃಶ್ಯವಾದೆ ನೀ, 
ಜೊತೆಗೆ ನನ್ನ ನಿದ್ದೆಯೂ!
*********************

ನಲ್ಲ:-
ಕಾಟವೆನ್ನದಿರು ಕಾಟವಲ್ಲದು ಬರಿಯ ಹೃದಯಗಳ ನಡುವಿನಾಟ
ಆತ್ಮ-ಆತ್ಮಗಳ ನಡುವೆ ನಿರಂತರವಾಗಿ ನಡೆವ ಹುಡುಕಾಟ
ಎಲ್ಲೋ ಎಂದೋ ಮರೆತ ಭಾಂಧ ಇಂದಿಲ್ಲಿ ಒಂದುಗೂಡಿರಬಹುದು
ನಿನ್ನೊಳಗಿನ ಪ್ರತಿಭೆಯ ಹೊರತರಲೆನೆನ್ನನು ಕಾರಣವಾಗಿಸಿರಬಹುದು
********************

ನಲ್ಲೆ:-
ಹೇಳೇ ಹುಚ್ಚು ಹುಡುಗಿ, ಇತ್ತಲ್ಲವೆ ನಿನಗೆ ಹಮ್ಮು
ನೀನಾವ ಸೆಳೆತಕೆ ಸಿಲುಕಲೊಲ್ಲೆಯೆಂದು.
ಹೃದಯ ಮಂದಿರದ ಭದ್ರ ಕೋಟೆಯ
ಕದಕ್ಕಿತ್ತ ಚುಟುಕು ದನಿಗೆ ತೆರೆದಿಯಲ್ಲವೆ ಅಗಣಿ!
********************

ನಲ್ಲೆ:- 
ಮನದೊಳ ತಕಲಾಟ 
ಯಾಕೆ ಈ ಹಾರಾಟ
ಉಂಟೆ ಉತ್ತರ ನಿನ್ನಲ್ಲಿ
ಹೇಳಿ ನನ್ನನ್ನು ಉದ್ಧರಿಸು!
*****************
ನಲ್ಲ;-
ಪ್ರಶ್ನೆಯನ್ನು ಸ್ವಲ್ಪ ವಿವರಿಸಿದರೆ 
ಸಿಗಬಹುದು ಉದ್ಧರಿಸುವವನ ಉತ್ತರ;
ಪ್ರಶ್ನೆಯೇ ಗೊಂದಲಮಯವಾದರೆ, 
ಹೇಗೆ ನೀಡಬಹುದು ನಾ ಉತ್ತರ?
********************

ನಲ್ಲೆ:-
ಪ್ರಶ್ನೆಯೇ ತಿಳಿದಿಲ್ಲ ಎನಗೆ
ಆದರೂ ಉತ್ತರ ನಿನ್ನ ಬಳಿ
ಇರಬಹುದೆಂಬ ಭರವಸೆಯೆನಗೆ!
*******************
ನಲ್ಲ:-
ಆತ್ಮ ಆತ್ಮಗಳಾ ಸ್ನೇಹಬಂಧವಿದು
ಕಡೆಗಣಿಸದಿರು ದೇವನಿಚ್ಛೆಯನು
ಒಂದೆರಡು ದಿನಗಳಿಗೆ ಸೀಮಿತಗೊಳಿಸಿ
ತೊರೆಯದಿರು ಸ್ನೇಹವನು
ಜೀವನದುದ್ದಕ್ಕೂ ಜೀವನದಾಚೆಗೂ 
ಇರುವಂತೆ ನಮ್ಮೀ ಸ್ನೇಹ ಶಾಶ್ವತ
ಆ ಭಗವಂತನಲಿ ಬೇಡೋಣ ಹೇಳು
ಇದಕ್ಕೀಗ ನಿನ್ನದೇನು ಅಭಿಮತ?
************************
ನಲ್ಲ:-
ನಿನ್ನ ಮನಸ್ಥಿತಿಯ ಅರಿವು 
ನನಗಾಗುತ್ತಿದೆ ಇಲ್ಲ ಅನ್ನಲಾರೆ;
ಆದರೆ ಎಲ್ಲವನ್ನೂ ಬಿಡಿ ಬಿಡಿಸಿ ಹೇಳಿದರೆ, ಏನು ಚೆನ್ನ:
ಕೆಲವು ಉತ್ತರವಿಲ್ಲದ ಪ್ರಶ್ನೆಗಳು,
ಕೆಲವು ಪ್ರಶ್ನೆಯೇ ಕೇಳದೇ ಸಿಗುವ ಉತ್ತರಗಳು;
ಪರಮಾತ್ಮನು ಹಾಗೆಯೇ ನಾವು ಯಾವ ಪ್ರಶ್ನೆ ಕೇಳದೇ
ಕಳುಹಿಸಿಬಿಡುತ್ತಾನೆ ನಮ್ಮ ಜೀವನಕ್ಕೆ ಉತ್ತರಗಳನು ಸದ್ದಿಲ್ಲದೆ!
ಆತ್ಮ-ಪರಮಾತ್ಮಗಳ ನಡುವಿನ ಸೆಳೆತ ಪರಮಾತ್ಮನಿಗಷ್ಟೇ ಗೊತ್ತು!
ಕಾರಣ ಹುಡುಕುವುದು ಮೂರ್ಖತನ;
ಹುಡುಕಿದರೂ ಸಿಗದು ಕಾರಣ ನಮಗೆ!
***************************
ನಲ್ಲೆ:-
ನಿನ ಬಳಿಯೂ ನನ ಬಳಿಯೂ
ಉತ್ತರವಿಲವಿದಕೆ;
ಒಡೆಯನ ನಿಯಮಕೆ 
ತಲೆಬಾಗಿ ನಿಂತೆ;
ಅವನಾಡಿಸುವ ಪಾತ್ರಧಾರಿ ನಾ!
*************************
ನಲ್ಲ:-
ಆತ್ಮ ಆತ್ಮಗಳಾ ಸ್ನೇಹ ಸಂಬಂಧವಿದು
ಕಡೆಗಣಿಸದಿರು ದೇವಯಿಚ್ಛೆಯನು;
ಒಂದೆರಡು ದಿನಗಳಿಗೆ ಸೀಮಿತಗೊಳಿಸಿ
ತೊರೆಯದಿರು ಸ್ನೇಹವನು; 
ಜೀವನದುದ್ದಕ್ಕೂ ಜೀವನದಾಚೆಗೂ
ಇರುವಂತೆ ನಮ್ಮೀ ಸ್ನೇಹ ಶಾಶ್ವತ;
ಆ ಭಗವಂತನಲಿ ಬೇಡೋಣ ಹೇಳು
ಇದಕ್ಕೀಗ ನಿನ್ನದೇನು ಅಭಿಮತ?
**************************

ನಲ್ಲೆ:-
ನಿನ್ನ ಮತವೇ 
ನನ್ನ ಅಭಿಮತ!
************
ನಲ್ಲ:-
ಹೃದಯದಲಿ ಮನೆಮಾಡಿದವರು 
ದೂರವಾದರೆ ಮರಣದ ಮೆಟ್ಟಲೇರುವಂತೆ
ನಿಧಾನವಾಗಿ ಒಳಗೊಳಗೆ ಸುಡುತ್ತದೆ ಈ
ಹೃದಯವನು ಮತ್ತೆ ಸ್ಪಂದಿಸದಂತೆ!
ಹೃದಯವೇ ಉರಿದು ಹೋದ ಮೇಲೆ
ಸ್ಪಂದಿಸುವುದು ಎಲ್ಲಿಂದ....
ಬೇಕೆ ಮತ್ತೆ ಏನೂ....
ಕಗ್ಗತ್ತಲಾಗುವುದು ಬಾಳು!

ಕುಂತಲ್ಲಿ, ನಿಂತಲ್ಲಿ, ನಡೆವಲ್ಲಿ, ಸದಾಕಾಲ 
ನಡೆಯುತ್ತಲೇ ಇರುತ್ತದೆ ಮಾತುಕತೆ
ಹೃದಯದೊಳಗಿದ್ದರೆ ಸಾಕು, ಅನುಭವ 
ಮಾತ್ರ ಸದಾ ಜೊತೆಯಲೇ ಇರುವಂತೆ!
ನಿಜ ಹೇಳು ಈ ಅನಿಸಿಕೆಗಳೆಲ್ಲಾ
ನನ್ನದಷ್ಟೇಯಾ
ಅಲ್ಲ ನಿನ್ನ ಮನದೊಳಗೂ
ಮನೆಮಾಡಿವೆಯಾ?
*********************
ನಲ್ಲೆ:-
ಕೇಳಬೇಡ ಏನೂ ನಲ್ಲ
ನಾ ಏನೂ ಹೇಳಲಾರೆಯಲ್ಲ!
**************
ನಲ್ಲ:-
ಯಾಕೆ ಹಾಗೆ...
ಹೇಳದೇ ನಾ ಅರಿಯಬೇಕೆಂದೇ....
ಹೇಳಿದರೆ ನಾ ಮುನಿಯುವೆನೆಂದೇ?
********************
ನಲ್ಲೆ:-
ನೀ ಏನಬೇಕಾದರೆ ತಿಳಿದುಕೋ
ಮನವ ತಿಳಿದವನು ಮುನಿಯುವನೇ?
ಎಲ್ಲ ಬಿಚ್ಚಿ ಹೇಳಿದರೇನು ಚೆನ್ನವೇ!
*******************
ನಲ್ಲ:-
ಏನಿದು ತುಮುಲ,
ಏನಿದು ತಾಕಲಾಟ,
ಏಕೆ ಹೀಗೆ?
ಆಗಿತ್ತೆ ಹಿಂದೆಂದಾದರೂ 
ನಿನಗೆ ಹೀಗೆ?
**********************
ನಲ್ಲೆ:-
ಕೇಳಿದೆ ನನ್ನೊಳಗಿನ ಆತ್ಮವ
ಎಂದೆಂದಾದರೂ ನೀ ಈ
ರೀತಿಯ ಹುಚ್ಚುತನದ 
ಅನುಭವ ಪಡೆದಿದ್ದಿಯಾ ಎಂದು.
ಮೌನವಾಗಿದೆ... 
ಗೊತ್ತು ನನಗೆ ಚಕಿತವಾಗಿದೆಯೆಂದು...
ಉತ್ತರ ನೀಡಲು ಸೋತಿದೆಯೆಂದು!
************
ನಲ್ಲ:-
ಆ ಪರಮಾತ್ಮನಿಗಿದೋ ನನ್ನ 
ಸಾಷ್ಟಾಂಗ ನಮಸ್ಕಾರಗಳು!
ಜೀವನದ ಈ ಪಯಣದಲ್ಲಿ ನಮಗೀಗ 
ಹೊಸ ಅನುಭವಗಳು!
ಮನಕೆ ಮುದನೀಡಿ ರೋಮಾಂಚನಗೊಳಿಸಿ
ಕಾಡುವ ಕ್ಷಣಗಳು!
ಮುಂದಡಿಯಿಡಲು ಅಳುಕಿಲ್ಲ,
ಅನುಮಾನವಿಲ್ಲ ಪ್ರತಿ ಹೆಜ್ಜೆಯಲೂ!
*******************

22 March, 2012

ಯುಗಾದಿಗೊಂದು ಶುಭಾಶಯ! [ ಚಿತ್ರ ಅಂತರ್ಜಾಲ ಕೃಪೆ!
ಎಂದಿನಂತೆ ಮತ್ತೆ ಯುಗಾದಿ ಬಂದು ಹೊಸ್ತಿಲಲ್ಲಿ ನಿಂತಿದೆ.
ಕಳೆದ ವರುಷದ ಕಹಿಯ ನೆನಪ  ಮರೆತು; 
ಸುಖದ ಸಿಹಿ ನೆನಪಲಿ; 
ತುಂಬು ಮನದ ಸ್ವಾಗತ ಕೋರೋಣ!
ಪರರ ಕಷ್ಟಕೆ  ಮರುಗಿ ತಾಪ ತಗ್ಗಿಸೋಣ!
ಸುಖಕೆ ಸ್ಪಂದಿಸಿ ಇಮ್ಮಡಿ ಮಾಡೋಣ!
ಹೊಸ ವರುಷದಲಿ ಹೊಸ ಚಿಂತನೆ ನಡೆಸೋಣ!
ಮಾನವ ಧರ್ಮವ ಮೆರೆಸೋಣ!
ಸರಳ ಜೀವನದೆಡೆ ಹೆಜ್ಜೆ ಹಾಕೋಣ!
ಹಸಿರ ಹುಲುಸಾಗಿ ಬೆಳೆಸೋಣ! 
ಜನನ ಮರಣದ ಗಾಲಿಯಿಂದ ಬಿಡುಗಡೆ 
ಪಡೆಯುವೆಡೆ ನಡೆಯೋಣ!

ಶಿಶಿರನ ನಿರ್ಗಮನ-ವಸಂತನ ಆಗಮನ!!ಶಿಶಿರನ ನಿರ್ಗಮನದ
ಕುರುಹೋ ಎಂಬಂತೆ
ಹರಡಿದ ಪೀತವರ್ಣದ
ಹಾಸುಗೆಯಲಿ ಮೆಲ್ಲನೆ
ಹೆಜ್ಜೆಯೂರುತ  ಸಾಗುತ್ತಿದ್ದಳು!

ತಂಗಾಳಿಯೊಂದು ಬಳಿ ಸಾರಿ,
ಮುಂಗುರುಳ ಸರಿಸಿ,
ಕಿವಿಯಲಿ ಪಿಸುನುಡಿಯ
ಉಸುರಿ ಕಪೋಲವ
ರಾಗರಂಜಿತ ಮಾಡಿತು!

ನಭದಲಿ ಝಗಮಗಿಸುತ್ತಿದ್ದ
ರವಿಯು ಕೋಮಲಾಂಗಿಯ
ಕ್ರಶಕಾಯ ನೋಡಿ ಮರುಗಿ
ಒಂದಿಷ್ಟು ಮರೆಯಾದ
ಜಲಧರನ ತೆರೆಗೆ!

ಕುಸುಮಗಳ ವಾಸನೆಯ
 ಆಘ್ರಾಣಿಸಿದ ಕನ್ಯೆಗೆ
ನಶೆಯ ಮತ್ತೇರಿತು!
ಬಿರಿದ ಅಧರಗಳು ಕರೆದವು,
ಅರಳಿದ ನಯನಗಳು ಅರಸಿದವು!

ವಸಂತನ ಆಗಮನ ಸಾರಿದ
ಪರಪುಟ್ಟ ಹಕ್ಕಿಯ ಗಾನ,
ಮತ್ತೇರಿದ ದುಂಬಿಗಳ ಝೇಂಕಾರ,
ಸಖಿಯ ಹೃದಯದಲಿ
ಮಧುರ ಕಂಪನ ಎಬ್ಬಿಸಿತು!

ಬಳಿ ಸಾರಿದ ಮನ್ಮಥ
ಬರಸೆಳೆದು ಬಿಗಿದಪ್ಪಿದ.
ವರುಷದ ವಿರಹದ
ತಾಪ ತಣಿಸಿದ
ಶಾಪಕೆ ಗತಿ ಕಾಣಿಸಿದ!

ಹಸಿರರಿವೆ ಧರಿಸಿ,
ನಿಸರ್ಗ ಓಕುಳಿ ಚೆಲ್ಲಿತು,
ಖಗಗಳ ವೃಂದದ ಓಲಗ,
ರತಿ-ಮದನರ ಮಿಲನದ
ಸಂಭ್ರಮ ಎಲ್ಲೆಡೆ!

18 March, 2012

ಶುಭ ಘಳಿಗೆ ಬರಲಿ ಬೇಗ!

ತಾಯ ಗರ್ಭದಿಂದ ಹೊರಜಾರುವಾಗ 
ನನ್ನೊಂದಿಗೆ ಬೆಳಕ ಕುಡಿಯೊಂದಿತ್ತು.
ಅದರ ಕಾಂತಿಯ ಉಸಿರಲಿ ನನ
ಬಾಳು ದಿಗ್ವಿಜಯಗಳೊಂದಿಗೆ ಸಾಗಿತ್ತು..
ಇದರ ಅರಿವು ಮಾತ್ರ ನನಗಿರಲಿಲ್ಲ; 
ಪಯಣದ ಹಾದಿ ಬದಲಾಯಿತು. 
ಅಲಕ್ಷಿಸಿದ್ದೆನೋ ಇಲ್ಲ, ಮರೆತೆನೋ ತಿಳಿಯೆ;
ದೂರವಾಯಿತು ಬೆಳಕು.
ಕತ್ತಲ ಕೂಪದಲಿ ಹೇಗೋ ಬದುಕ ನೂಕುತ್ತಿದ್ದೆ;
ಬೇರೊಂದು ರೂಪದಲಿ ನನ ಸೇರಲೆಂದು
ಹವಣಿಸುತಿತ್ತಂತೆ ಬೆಳಕು;

ನನಗದರರಿವು ಹೇಗಾದಿತು?
ಕುರುಡಿಗೆ ಕಾಣುವುದಾದರೂ ಹೇಗೆ ಕತ್ತಲಲೋಕದಲಿ!
ಹಂಬಲಿಸುತ್ತಿದ್ದೆ, ಕಾಡುತ್ತಿದ್ದೆ ಒಡೆಯನ
ಆದರೋ ಅವನು ಬರೇ ನಸುನಗುತ್ತಿದ್ದ.
ಬಲ್ಲೆ,   ಆಟದ ಬಲಿಪಶು ನಾನಾದೆನೆಂದು,
 ಹಮ್ಮು ಇವಗೆ; 
ಇರಲಿ, ಇರದು ಅಗಲಿ ಜ್ಯೋತಿ 
ಮತ್ತೆ ಬರುವುದು; 
ಆಗಲೇ ಅದರ ತೇಜಸ್ಸು ಪ್ರಜ್ವಲಿಸುವುದಲ್ಲವೆ!

ಅರೆ, ಇದೇನಿದು ಹೊಸ ಶಕ್ತಿಯ ಸಂಚಾರ!
ಕಾರ್ಗತ್ತಲ ಲೋಕದಲಿ ಒಂದಿಷ್ಟು
ರಶ್ಮಿಯ ಕಣಗಳು ದಾರಿಯ ಬೆಳಗುತಿವೆ!
ಅಗಲಿದ ಬೆಳಕಿನ ಆಗಮನದ ಸೂಚನೆಯೋ
ಆಗಲೇ ಕನಸಿನ ರೆಕ್ಕೆಗಳು ಮೂಡುತ್ತಿವೆ!
ಗಾವುದ ದೂರವಿದೆ ಇನ್ನೂ
ತ್ವರೆ ಮಾಡಬೇಡ ಕಾದು ಬೆಂಡಾಗಿರುವೆ;
ಪುನರ್ಮಿಲನದ ಶುಭ ಘಳಿಗೆ 
ಬರಲಿ ಬೇಗ!


17 March, 2012

ದೃಷ್ಟಿಯಿಂದ ಸೃಷ್ಟಿಯ ಸೆರೆ!!!

ಎಷ್ಟೊಂದು ವಿಸ್ಮಯ,
ಎಷ್ಟೊಂದು ಜಾದುಮಯ,
ಎಷ್ಟೊಂದು ಸೌಂದರ್ಯ, 
ನೋಡಿದಷ್ಟು, ತಿಳಿದಷ್ಟು, ಅನುಭವಿಸಿದಷ್ಟು ನಿಗೂಢವಾಗಿದೆ!
ಸೆರೆ ಹಿಡಿದಷ್ಟು ಉಳಿಯುತ್ತದೆ;
ಮತ್ತಿಷ್ಟು ಕಾಡುತ್ತದೆ,
ಎಲ್ಲವನ್ನೂ ತನ್ನೊಡಲಲ್ಲಿ ಬಚ್ಚಿಡುತ್ತದೆ;
ಒಂದಿಷ್ಟು ಬಿಚ್ಚಿಡುತ್ತದೆ;
ಸವಿದಷ್ಟು ಕ್ಷುಧೆ ಹೆಚ್ಚುತ್ತದೆ,
ಜೊತೆಗೆ ಗ್ಲಾನಿಯ ಹೃದಯಕ್ಕೀಯುತ್ತದೆ
ಒಂದಿಷ್ಟು ತಂಪು;
ಅದಕೆ ನೋಡಯ್ಯ ಬಂಧಿಸಿದೆ  ನಾ ಸೃಷ್ಟಿಯ 
ನನ್ನಯ ದೃಷ್ಟಿಯಲಿ! 


15 March, 2012

ಪ್ರೇಮಾಯಣ- ಅಮರ ಪ್ರೇಮಿಗಳ ವಿಶ್ಲೇಷಣೆ!!!-3     <<<ಅದರೆ ಪ್ರೇಮದಲ್ಲಿ ಸೋಲೇ ಗೆಲುವು. ಅದನ್ನು ಚೆನ್ನಾಗಿ ಅರಿತುಕೊಂಡವರು ನಮ್ಮ ಪುರಾಣಗಳಲ್ಲಿ ರಾಕ್ಷಸರೆಂದು ಬಿಂಬಿತರಾದ ರಾವಣ, ಭಸ್ಮಾಸುರ, ಕೀಚಕ, ಶರ್ಮಿಸ್ಠೆ, ಶೂರ್ಪನಖಿ,ಹಿಡಿಂಬೆ…ಮುಂತಾದವರು. ಪ್ರೇಮಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ಇಂತವರ ಮುಂದೆ ರಾಮ, ದುಷ್ಯಂತರದ್ದು ಪೇಲವ ವ್ಯಕ್ತಿತ್ವವೇ.
ರಾಕ್ಷಸರೆಲ್ಲಾ ಹಾಗೆಯೇ. ಅವರು ಅತ್ಯಂತ ಮೋಹಿತರು. ಅವರು ಮೆಚ್ಚಿದವರನ್ನು ಜೀವದುಂಬಿ ಪ್ರೀತಿಸಬಲ್ಲರು. ಹಾಗೆಯೇ ಪೋಷಿಸಬಲ್ಲರು ಕೂಡಾ. ಅವರಿಗೆ ನಗರ ಸಂಸ್ಕೃತಿಯ ನಯ -ನಾಜೂಕು, ಕಪಟ-ಮೋಸಗಳು ತಿಳಿಯುತ್ತಿರಲಿಲ್ಲ. ರಾಕ್ಷಸರ ಪ್ರೇಮದ ತೀವ್ರತೆಯನ್ನು, ಆ ಉತ್ಕಟತೆಯನ್ನು ನೆನೆಸಿಕೊಂಡಾಗಲೆಲ್ಲಾ ನನಗೆ ಅಕ್ಕ ಮಹಾದೇವಿಯ ’ಅಪ್ಪಿದರೆ ಅಸ್ತಿಗಳು ನುಗ್ಗಿ ನುರಿಯಾಗಬೇಕು…ಮಚ್ಚು ಅಚ್ಚುಗವಾಗಿ ಗರಿದೊರದಂತಿರಬೇಕು’ ಎಂಬ ವಚನವೇ ನೆನಪಿಗೆ ಬರುತ್ತದೆ.. ಆ ಕ್ಷಣದ ಬದುಕನ್ನು ಅನುಭವಿಸುವಲ್ಲಿ ರಾಕ್ಷಸರೇ ಮುಂದು.>>>      ರಾಕ್ಷಸರು ಮತ್ತು ಪ್ರೇಮ- ಯಾಕಿಲ್ಲ...ಮನೋಕಾಮನೆಗಳನ್ನು ನಿಗ್ರಹಿಸಬಲ್ಲವರಾದ ದೇವತೆಗಳೇ ಪ್ರೇಮದ ಬಲೆಗೆ ಬೀಳುತ್ತಾರೆ/ತ್ತಿದ್ದರು ಅಂದ ಮೇಲೆ ರಾಕ್ಷಸರು ಏಕೆ ಹಿಂದೆ ಬೀಳುತ್ತಾರೆ.  ವ್ಯತ್ಯಾಸವೆಂದರೆ ಅವರಿಗೆ ಪ್ರೇಮ ಮತ್ತು ಕಾಮದ ನಡುವಿನ ಭೇದ ತಿಳಿದಿರಲಿಲ್ಲ.  ಅವರ ರಕ್ತದಲ್ಲಿ ಹರಿಯುವ ತಾಮಸ ಗುಣಕ್ಕೆ ಅನುಸಾರವಾಗಿಯೇ ಪ್ರೀತಿಯನ್ನು ಮಾಡುತ್ತಿದ್ದರು ಇಲ್ಲಾ ಹೇರುತ್ತಿದ್ದರು. ದೇವತೆಗಳು ಸಾತ್ವಿಕ ಪ್ರವೃತ್ತಿಯವರಾಗಿದ್ದರೆ ರಾಕ್ಷಸರು ತಾಮಸ ಗುಣಗಳಿಂದ ಲೋಕಕ್ಕೆ ಕಂಟಕ ತರುತ್ತಿದ್ದರು. ಆದರೆ ಮಾನವರು ಮಾತ್ರ ಸಾತ್ವಿಕ, ತಾಮಸಿಕ ಮತ್ತು ರಾಜಸಿಕ ಗುಣಗಳನ್ನು ಹೊಂದಿದ್ದಾರೆ. ಶೇಖಡಾವಾರು ವ್ಯತ್ಯಾಸ ಅವರನ್ನು ಒಂದೊಂದು ಗುಂಪಿಗೆ ಸೇರಿಸುತ್ತವೆ. ಅಲ್ಲದೆ ಜೀವನದಲ್ಲಿ ನಡೆಯುವ ಘಟನೆಗಳು ಅವರ ಸ್ವಭಾವ ಬದಲಾಗಲು ಕಾರಣವಾಗುತ್ತದೆ.


   ಉಷಾ ಅವರು ರಾಕ್ಷಸರ ಬಗ್ಗೆ ಒಂದಿಷ್ಟು ಮೆದುವಾಗಿ ಬರೆದಿದ್ದಾರೆ. ಅವರದೇ ಅಕ್ಷರಗಳಲ್ಲಿ ಹೇಳುವುದಾದರೆ-<<ಪುರಾಣಗಳಲ್ಲಿ ಚಿತ್ರಿತರಾದ ರಾಕ್ಷಸರೆಲ್ಲಾ ಈ ನೆಲದ ಮೂಲನಿವಾಸಿಗಳಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು. ಕಾಡಿನಲ್ಲಿ ವಾಸಿಸುತ್ತಿದ್ದ ಅವರ ಮೇಲೆ ನಗರ ಸಂಸ್ಕೃತಿಯ ಜನತೆ ಆಗಾಗ ದಾಳಿ ನಡೆಸುತ್ತಿದ್ದಿರಬಹುದು. ಅದಕ್ಕಾಗಿ ರಾಕ್ಷಸರು ಕೂಡಾ ಪ್ರತಿ ದಾಳಿ ಕೈಗೊಂಡಿರಬಹುದು. ಆದರೆ ಅಕ್ಷರ ಒಡೆತನ ಹೊಂದಿದ ಪುರಾಣಗಳ ಸೃಷ್ಟಿಕರ್ತರು, ತಮ್ಮ ಕೃತಿಗಳಲ್ಲಿ ಅವರನ್ನು ರಾಕ್ಷಸರೆಂದು ಅಮಾನುಷವಾಗಿ ಚಿತ್ರಿಸಿರಬಹುದು.>>  ಉಷಾ, ನನಗೆ ಗೊತ್ತಿದ್ದ ಹಾಗೆ ರಾಕ್ಷಸರು ಕಾಡುಗಳಿಂದ ನಗರಕ್ಕೆ ಬಂದು ಜನ ಸಾಮಾನ್ಯರಿಗೆ, ಋಷಿ ಮುನಿಗಳಿಗೆ ಉಪಟಲ ಕೊಡುತ್ತಿದ್ದರಲ್ಲ. ಬಕಾಸುರನ ಕಥೆ ಗೊತ್ತಿರಬಹುದು; ನಿಮಗೆ ಅಂತೆಯೇ ದಶರಥನು ಅನೇಕ ವರುಷಗಳ ಕಾಲ ದೇವತೆಗಳಿಗೆ ಸಹಾಯ ಮಾಡಲೆಂದೇ  ರಾಕ್ಷಸರ ವಿರುದ್ಧ ಹೋರಾಡುತ್ತಾ ರಾಜ್ಯಭಾರ ಒಂದಿಷ್ಟು ನಿರ್ಲಕ್ಷಿದನೆಂದು ತಿಳಿದುಬರುತ್ತದೆ.  


    [ಇಲ್ಲಿ ರಾವಣನ ಬಗ್ಗೆ, ರಾಮ ಸೀತೆಯರ ಬಗ್ಗೆ ಬರೆದಿರುವುದು ನೋಡಿದರೆ ಜನಸಾಮಾನ್ಯರಿಗೆ ಗೊಂದಲವಾಗುವುದು....ತಿಳಿದವರು ನಿಜ ಏನೆಂದು ಬರೆಯುವುದು ಒಳ್ಳೆಯದು.http://www.doccentre.net/docsweb/adivasis_&_forests/intel_ravana.htm]


    ಮೊದಲಾಗಿ ಉಷಾ ಉಲ್ಲೇಖಿಸಿದ ಕೀಚಕನ ಬಗ್ಗೆ ತಿಳಿಯೋಣ..ಅರೇ ಅವನು ದ್ರೌಪದಿಯನ್ನು ಪ್ರೀತಿಸಿದ್ದನೆ! ಸುರಸುಂದರಿ, ಒಂಟಿಹೆಣ್ಣು, ಅಸಹಾಯಕಿ ಕಣ್ಣೆದುರು ಓಡಾಡುತ್ತಿದ್ದರೆ ಕೀಚಕನಂತ ಕಾಮುಕನಿಗೆ ಈ ದ್ರೌಪದಿಯನ್ನು ವಶಮಾಡಿಕೊಳ್ಳುವುದು ಬಲು ಸುಲಭ ಅನ್ನಿಸಿರಬೇಕು. ಮೊದಲೇ ಮುಖ ಮರೆಸಿಕೊಂಡು ಪತಿಗಳೊಂದಿಗೆ ಅಲೆಯುತ್ತಿದ್ದ ದ್ರೌಪದಿಗೆ ಈ ಕಾಮುಕ ಕಾಟಕೊಟ್ಟರೆ ಹೇಗಾಗಿರಬಹುದು! ಕೀಚಕನನ್ನು ನೀವು ಒಬ್ಬ ಪ್ರೇಮಿಯಂತೆ ಬಿಂಬಿಸಿರುವುದು ನನಗೆ ಬಹಳ ಆಶ್ಚರ್ಯ ತಂದಿತು ಉಷಾ...ಅವನೊಬ್ಬ ಕಾಮಿ..ತನ್ನನ್ನು ಅಸಹಾಯಕ ಹೆಣ್ಣಿನ ಮೇಲೆ ಹೇರಲು ಪ್ರಯತ್ನಿಸುತ್ತಿದ್ದ...ದ್ರೌಪದಿಯ ಮೇಲೆ ಕಣ್ಣು ಹಾಕಿ ಅವನ ಅವನತಿಗೆ ಅವನೇ ಕಾರಣನಾದ.
    ಉಷಾ, ರಾವಣನ ಬಗ್ಗೆ ನೀವು ಹೇಳಿದ ಉಳಿದ ಮಾತುಗಳನ್ನು ಒಪ್ಪುತ್ತೇನೆ. ಅದರಲ್ಲೂ ಅವನು ಕೈಕೆಸಿಯೆಂಬ ರಾಕ್ಷಸಿಯ ಪುತ್ರನಾದರೂ, ತನ್ನ ಬ್ರಾಹ್ಮಣ ತಂದೆ ವಿಶ್ರವನಂತೆ ಸಂಧ್ಯಾವಂದನೆಗಳು ಮೊದಲಾದ ಬ್ರಾಹ್ಮಣರ ಸಂಪ್ರದಾಯಗಳನ್ನು ಪಾಲಿಸುತ್ತಿದ್ದನೆಂದು ತಿಳಿದು ಬರುತ್ತದೆ. ಆಂತೆಯೇ ಸುಂದರನು ಬಲಶಾಲಿಯು ಮಹಾಶಿವ ಭಕ್ತನೂ ಆಗಿದ್ದನು ಎಂಬುದನ್ನು ನಾವೆಲ್ಲಾ ತಿಳಿದಿರುತ್ತೇವೆ. ಸೀತೆಯ ಸ್ವಯಂವರದಲ್ಲಿ ಪರಾಭವಗೊಂಡ ರಾವಣನು ತನ್ನ ಅವಮಾನದ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ...ಅದಕ್ಕೆ ಸರಿಯಾಗಿ ಶೂರ್ಪಖರ್ಣಿ ರಾಮ ಲಕ್ಷ್ಮಣರ ದೂರು ತಂದಳು. ಅರೇ ನೆನಪಾಯಿತು..ನೀವು ನಿಮ್ಮ ಆದರ್ಶ ಪ್ರೇಮಿಗಳಲ್ಲಿ ಶೂರ್ಪಖರ್ಣಿಯನ್ನೂ ಉಲ್ಲೇಖಿಸಿದರಲ್ಲವೆ? ಸುರಸುಂದರ ರಾಮನ ಮನೋಹರ ರೂಪಕ್ಕೆ ಮನಸೋತ ಅವಳು ರಾಮ ನಿರಾಕರಿಸಿದನೆಂದು ಲಕ್ಷ್ಮಣನನ್ನು ಕಾಡುತ್ತಾಳೆ...ಮೊದಲೇ ತಿಳಿಸಿದಂತೆ ಇಲ್ಲಿ ಅವಳು ರಾಮ ಲಕ್ಷ್ಮಣರ ಮೇಲೆ ತನ್ನನ್ನು ಬಲವಂತವಾಗಿ ಹೇರಲು ಯತ್ನಿಸುವುದು ಸರಿಯೇ. ಅದು ಸಹ ನಿಜ ರೂಪವನ್ನು ಮುಚ್ಚಿ! ಸರಿ, ಮತ್ತೆ ರಾವಣನ ವಿಚಾರಕ್ಕೆ ಹಿಂದಿರುಗೋಣ. ಸೌಂದರ್ಯದ ಖನಿ ಸೀತೆಯನ್ನು ಪಡೆಯಲಾಗದ ದುಃಖವಿತ್ತು ರಾವಣನಿಗೆ.  ಅಲ್ಲದೆ ಅಪಮಾನದ ವಿಷಯವೂ ಕೂಡ ಕೊರೆಯುತ್ತಿತ್ತು. ಎಲ್ಲವೂ ಮೇಳೈಸಿ ಸೀತೆಯ ಅಪಹರಣಕ್ಕೆ ಕಾರಣವಾಯಿತು. ಒಬ್ಬ ವಿವಾಹಿತ ಸ್ತ್ರೀಯನ್ನು ಪ್ರೀತಿಯ ಹೆಸರಲ್ಲಿ ಅಪಹರಿಸುವುದು ಸರಿಯೇ? ನನಗಿಲ್ಲಿ ಅನಿಸುವುದೇನೆಂದರೆ ಆಗಿನ ಕಾಲಕ್ಕೆ ಬಹುಶಃ ರಾವಣನಿಗೆ ಈ ಆಸಿಡ್‌ (ಆಮ್ಲ) ಬಗ್ಗೆ ಗೊತ್ತಿಲ್ಲವಿರಬಹುದು..ಈಗಿನ ಕಾಲದ ರಾವಣರು ಪ್ರೀತಿ ಮಾಡದಿದ್ದರೆ ಈ ದ್ರಾವಣವನ್ನು ಸುರಿದು ಜೀವನಮಾನ ಪರ್ಯಂತ ನರಳುವಂತೆ ಕಾಡುತ್ತಾರಲ್ಲವ!   ಮಂಡೋದರಿಯಂತಹ ಸುಂದರಿ, ಗುಣವಂತೆ ಪತ್ನಿಯಿದ್ದರೂ ಪರಸತಿಯನ್ನು ಪ್ರೀತಿಸುವುದು ( ಕಾಮಿಸುವುದು) ಸರಿಯೆನ್ನುತ್ತಿರಾ? ಸೀತೆಯ ನಿಷ್ಕಲ್ಮಷ ಪ್ರೇಮ ಅವಳನ್ನು ರಕ್ಷಿಸಿತು. ಒಟ್ಟರೆ ಪ್ರೇಮವಿರುವಲ್ಲಿ ಕಾಮವಿರಬಹುದು..ಆದರೆ ಕಾಮವಿರುವಲ್ಲಿ ಪ್ರೇಮವಿರಬೇಕೇನೆಂದಿಲ್ಲ!


        ಆದರೆ ಶರ್ಮಿಷ್ಠೆ ರಾಕ್ಷಸ ವಂಶದಲ್ಲಿ ಹುಟ್ಟಿದರೂ ಯಯಾತಿಯನ್ನು ಮನಃಪೂರ್ವಕವಾಗಿ ಆರಾಧಿಸುತ್ತಿದ್ದಳು..ತ್ರಿಕೋಣ ಪ್ರೇಮದಲ್ಲಿ ಅವಳಿಗೆ ದೇವಯಾನಿ ಅನ್ಯಾಯ ಮಾಡುತ್ತಿದ್ದಳಾದರೂ ಅದನ್ನು ಅವಳ ಸ್ವಭಾವಕ್ಕೆ ವಿರುದ್ಧವಾಗಿ ಸಹಿಸಿಕೊಂಡಿದ್ದಳು. ನಿಮ್ಮ ಮಾತಿಗೆ ನನ್ನ ಸಹಮತವಿದೆ.


   ಕೊನೆಯ ಘಟ್ಟಕ್ಕೆ ಬಂದಿದ್ದೇವೆ. ಪ್ರೀತಿಗೆ ರಾಧಾ- ಕೃಷ್ಣ : ಶಿವ - ಶಂಕರಿಯರು ಪರ್ಯಾಯವೆಂದರೆ ತಪ್ಪಾಗೊಲ್ಲ ಅಲ್ಲವೆ!  ನಿಷ್ಕಂಳಕ, ನಿಷ್ಕಲ್ಮಶ ಪ್ರೀತಿಗೆ ಹೆಸರಾದವಳು ರಾಧಾ! ಗೋಪಾಲನನ್ನು ಕೊನೆಯ ಉಸಿರಿರುವ ತನಕ ಆರಾಧಿಸಿದಳು. ಗೋಕುಲಕ್ಕೆ ಬೆನ್ನು ಹಾಕಿ ಮಥುರೆಗೆ ಹೊರಟ ಮುರಳಿ ಮತ್ತೆ ತನ್ನ ಪ್ರಿಯತಮೆಯ/ರನ್ನು ಭೇಟಿಯಾಗಲಿಲ್ಲ. ಗೋಕುಲಕ್ಕೆ ಬಂದ ವಿಧುರನನ್ನು ಮುತ್ತಿಗೆ ಹಾಕಿ ಆ ಗೋಪಿಯರು ಮುಗ್ಧ ಭಾವದಿಂದ ತಮ್ಮ ಪ್ರಾಣ ಸಖನ ವಿಚಾರ ಕೇಳುವುದು ಓದಿದರೆ ಎಂಥಹ ಕಠಿಣ ಹೃದಯವೂ ಕೂಡ ಕರಗುವುದರಲ್ಲಿ ಸಂದೇಹವಿಲ್ಲ. ಅಷ್ಟೊಂದು ಪ್ರೇಮ ಭಾವತುಂಬಿದ್ದರೂ ಅವರೆಂದು ಕೃಷ್ಣನನ್ನು ದೂರುವುದಿಲ್ಲ..ಯಾಕೆಂದರೆ ಆ ಒಲವಿನಲ್ಲಿ ಸ್ವಾರ್ಥವಿರಲಿಲ್ಲ....ತಮ್ಮ ಹೃದಯದಲ್ಲಿಟ್ಟು ಆರಾಧಿಸುತ್ತಿದ್ದರು ರಾಧಾ ಮತ್ತು ಗೋಪಿಯರು. ಅದರಿಂದಾಗಿಯೇ ದಾಸರು ಗೋಪಿಯರ ಭಕುತಿಗೆ ಸಾಟಿಯಿಲ್ಲವೆನ್ನುವರು. ಮೀರಾಳು ಬಾಲ್ಯದಲ್ಲಿಯೇ ಗಿರಿಧರನನ್ನು ತನ್ನ ಹೃದಯ ಮಂದಿರದಲ್ಲಿ ಪ್ರತಿಷ್ಟಾಪಿಸಿದ್ದಳು...ಉತ್ಕಟ ಪ್ರೇಮವೇ ಅವಳನ್ನು ಕವಯತ್ರಿಯನ್ನಾಗಿ ರೂಪಿಸಿತೆಂದರೆ ಹೇಗೆ? ತನ್ನ ದೇಹದ ಅರ್ಧಭಾಗದಲ್ಲಿ ಸತಿಯನ್ನು ಪ್ರತಿಷ್ಟಾಪಿಸಿ ಪ್ರೇಮಿಗಳಿಗೆ ಮಾದರಿಯಾಗುವನು ನಮ್ಮ ಗೌರೀಶ! ಅಲ್ಲದೆ ತನ್ನ ನಾರಿಮಣಿಯಿಂದ ಅನೇಕ ಅವತಾರಗಳನ್ನು ಎತ್ತಿಸಿ ನಿಜ ಅರ್ಥದಲ್ಲಿ ಅವಳಿಗೆ ತನ್ನ ಸರಿಸಮಾನಳನ್ನಾಗಿ ಮಾಡಿದ್ದಾನೆ ಪರಶಿವ!
   वागर्थाविव संपृक्तौ वागर्थप्रतिपत्तये|
जगतः पितरौ वन्दे पार्वतीपरमेश्वरौ||
ಈ ಶ್ಲೋಕವು ನನ್ನ  ಸಂಸ್ಕೃತ ಪಠ್ಯದ ಮೊದಲ ಪಾಠದಲ್ಲಿ ಬಂದಿತ್ತು..ಇವತ್ತಿನವರೆಗೂ ನನಗೆ ಅತೀಪ್ರಿಯವಾಗಿದೆ. ರಘುವಂಶದಲ್ಲಿ ಬರುವುದಿದು. ಅಂದರೆ ಹೇಗೆ ಮಾತು ಮತ್ತು ಅರ್ಥಗಳನ್ನು ಬೇರೆಮಾಡಲಾಗುವುದಿಲ್ಲವೋ ಅಂತೆಯೇ ಇರುವ  ಜಗತ್ತಿನ ತಂದೆ ತಾಯಿಗಳಾದ ಪಾರ್ವತಿ ಪರಮೇಶ್ವರರಿಗೆ ನನ್ನ ನಮಸ್ಕಾರ! ಕಾಳಿದಾಸನು ಕೆಲವೇ ಶಬ್ದಗಳಲ್ಲಿ ಶಿವ ಶಿವೆಯರ ಪ್ರೇಮವನ್ನು ಅರ್ಥಪೂರ್ಣವಾಗಿ ವರ್ಣಿಸಿದ್ದಾನೆ.
   
     


   

14 March, 2012

ಪ್ರೇಮಾಯಣ- ಅಮರ ಪ್ರೇಮಿಗಳ ವಿಶ್ಲೇಷಣೆ!!!-2              ಉಷಾ, ಅವರು ಪ್ರೇಮವು ದಾಸ್ಯದ ಹೊದಿಕೆಯನ್ನು ಹೊದ್ದುಕೊಂಡಿದೆ ಅನ್ನುತ್ತಾರೆ. ಹೌದು, ಇದು ದಾಸ್ಯವೆಂದು ಹೆಸರಿಸಲ್ಪಟ್ಟರೂ ಇದು ಸರ್ವ ಸಮರ್ಪಣಾ ಭಾವ ಎಂದು ತಿಳಿದವರು ಹೇಳುತ್ತಾರೆ. ಪ್ರೀತಿಯ ಬಲೆಯಲ್ಲಿ ಸಿಕ್ಕಿ ಬಿದ್ದ ಗಾಢವಾಗಿ ಅನುರಕ್ತರಾದವರು ಪ್ರೇಮಿಗಳು ಕುಂದು ಕೊರತೆಗಳಿಗೆ ಜಾಣಕುರುಡು ತೋರುವರು. ಶಬ್ದದಲ್ಲಿ ವ್ಯಕ್ತವಾಗುವ ಮೊದಲೇ ಒಬ್ಬರು ಇನ್ನೊಬ್ಬರ ಭಾವವನ್ನು ಅರ್ಥಮಾಡಿಕೊಳ್ಳುವರು. ಕಣ್ಣಿನಿಂದಲೇ ತಮ್ಮ ಭಾವ ವಿನಿಮಯಮಾಡಿಕೊಳ್ಳುವರು. ಜಗವೊಡ್ಡುವ ಪರೀಕ್ಷೆಗಳನೆಲ್ಲಾ ತಮ್ಮ ಪ್ರೀತಿಯ ಬಲದಿಂದ ಗೆಲುವ ಛಲ  ತೋರುವರು. ಎಲ್ಲಾ ರೀತಿಯಿಂದಲೂ ಪ್ರೀತಿಗಾಗಿ ಅರ್ಪಿಸಿಕೊಂಡರೆ ಮಾತ್ರ ಅದನ್ನು ನಿಜವಾದ ಪ್ರೇಮವೆಂದೆನ್ನಬಹುದು.   ಇದು ಪ್ರಕೃತಿ ಕೊಟ್ಟವರವೋ ಅಥವಾ ಶಾಪವೋ, ಅಂತೂ ಹೆಣ್ಣು ತನ್ನ ಐಡೆಂಟಿಟಿಯನ್ನು ಕಳಕೊಳ್ಳುವುದು ಸಹಜ ಪ್ರಕ್ರಿಯೇ ಆಗಿಹೋಗಿದೆ. ಹೆಣ್ಣಿಗೆ ಮತ್ತೊಂದು ಹೆಸರೇ ತ್ಯಾಗ..ಅಥವಾ ತ್ಯಾಗಕ್ಕೆ ಹೆಣ್ಣು!  ರಾಮನು ಕಾಡಿಗೆ ಹೊರಟಾಗ ಸುಕೋಮಲೆ ಸೀತೆಗೆ ಅವನನ್ನು ಅನುಕರಿಸಿದಳು..೧೪ ವರ್ಷಗಳ ಕಾಲ ಕ್ರೂರ ಮೃಗಗಳಿಂದ ಕೂಡಿದ ದಟ್ಟ ಕಾಡಿನಲ್ಲಿ ವಾಸ ಮಾಡುವುದೆಂದರೆ ಅದೊಂದು ಗಂಭೀರ ವಿಷಯ! ಯಾಕೆ ಆಕೆ ಅಂತಹ ನಿರ್ಧಾರ ತೆಗೆದುಕೊಂಡಳು! ಕೇವಲ ತನ್ನಿಯನನ್ನು ಅಗಲಿ ಇರಲಾದ ಕಾರಣ. ರಾಮನೂ ಆಕೆಯನ್ನು ತಡೆಯಲಿಲ್ಲ ..ಇದೇ ಕಾರಣವಲ್ಲವಾ!  ಸುಖಭೋಗಗಳಿಂದ ಜೀವನ ನಡೆಸಿದ ರಾಜ ದಂಪತಿಗಳು ಕೇವಲ ಪ್ರೀತಿಯ ಬಲದಿಂದ ಕಷ್ಟಗಳನ್ನು ಲೆಕ್ಕಿಸದೇ ಬದುಕಲು ನಿರ್ಧರಿಸಿದರು. ಆದರೆ ವಿಧಿ...ಅವರನ್ನು ಅಗಲಿಸಿತು. ಇಬ್ಬರ ಮನ ಮೂಕವಾಗಿ ರೋಧಿಸಿದವು...ನೆನಪಿನ ಆಸರೆಯಿಂದ ಬದುಕಿದರು.
             ಮಹಿಳಾವಾದಿಗಳು ರಾಮನ ಮೇಲೆ ಆಪಾದನೆಯ ಪಟ್ಟಿಗಳನ್ನು ಹೊರಿಸಬಹುದು. ಆದರೆ ಒಂದಿಷ್ಟು ಚಿಂತನೆ ಮಾಡಿದರೆ ರಾಮನ ತಪ್ಪುಗಳಲ್ಲಿ ಒಪ್ಪುಗಳನ್ನು ಕಾಣುತ್ತೇವೆ. ರಾಜಧರ್ಮ ಪಾಲಿಸುವುದು ಮೊದಲ ಆದ್ಯತೆ ಸಹಜವಾಗಿ ರಾಮನ ಕರ್ತವ್ಯ..ಮತ್ತು ಅದನ್ನು ಪಾಲಿಸುವಾಗ ಸೀತೆಗೆ ಅನ್ಯಾಯವಾಗುವುದು ಕೂಡ  ಸಹಜವೇ ಆಗಿದೆ. ರಾಜ ಜನಕನ ಅಂಗಳದಲಿ ಬೆಳೆದ ಮೈಥೇಲಿಗೆ ಅದೆಲ್ಲಾ ಖಂಡಿತ ತಿಳಿದಿತ್ತು....ಆದುದರಿಂದ ಅವಳು ಪ್ರತಿಭಟಿಸಿಲ್ಲ. ಅಗಸನ ಮಾತು ಕೇಳಿ ಕಾಡಿಗೆ ಕಳುಹಿಸುವಾಗಲೂ ಹೊಟ್ಟೆಯಲ್ಲಿ ಅಯೋಧ್ಯೆಯ ರಾಜವಂಶದ  ಕುಡಿಗಳನ್ನು ಹೊತ್ತುಕೊಂಡಿದ್ದಳು...ಆದರೂ ರಾಮ ತನ್ನ ಸಹಧರ್ಮಿಣಿಯನ್ನು ತ್ಯಜಿಸಿ ರಾಜಧರ್ಮಕ್ಕೆ ಪ್ರಾಮುಖ್ಯ ಕೊಟ್ಟ...ಅಂದಿನ ಕಾಲದಲ್ಲಿ ಅನೇಕ ಉಪಪತ್ನಿಯರಿರುವುದು ಸಹಜವಾಗಿದ್ದರೂ ರಾಮ ಏಕಪತ್ನಿ ವೃತವನ್ನು ಪಾಲಿಸಿದ. ರಾವಣ ಸೀತೆಯನ್ನು ಅಪಹರಿಸಿದನಾದರೂ ಅವನಿಗೆ ಅವಳ ಮೈಯ ಒಂದು ಕೂದಲನ್ನು ಕೊಂಕಲು ಸಾಧ್ಯವಾಗಲಿಲ್ಲ ಯಾಕೆ!  ಜಾನಕಿಯ ಮನಸ್ಸಿನಲ್ಲಿ, ಹೃದಯದಲ್ಲಿ ರಾಮನ ಮೂರುತಿ ಭದ್ರವಾಗಿ ಬೇರೂರಿತ್ತು..ರಾವಣನೂ ಸುಂದರನಾಗಿದ್ದ, ಅಪ್ರತಿಮ ಬಲಶಾಲಿಯಾಗಿದ್ದ. ಪರಶಿವನನ್ನೇ ಒಲಿಸಿ ಅವನ ಆತ್ಮ ಲಿಂಗವ ವಶಮಾಡಿಕೊಂಡವನು ಅಂತವನಿಗೂ ಸೀತೆ ಒಲಿಯಲಿಲ್ಲ. ಅವಳ ಪಾತಿವೃತ್ಯ ಮತ್ತು  ನಿಷ್ಕಳಂಕ ಪ್ರೇಮದ ಫಲವಾಗಿ ರಾವಣನಿಗೆ ಅವಳ ಮೇಲೆ ಬಲಪ್ರಯೋಗ ಮಾಡಲಿಕ್ಕಾಗಲಿಲ್ಲ.


            ಮಾಯಾಮೃಗದ ರೂಪ ಹೊತ್ತ ಮಾರೀಚನನ್ನು ಕೊಂದು ರಾಮನು ಕುಟೀರಕ್ಕೆ ಹಿಂದಿರಿಗಿದಾಗ ಸೀತೆಯನ್ನು ಕಾಣದೆ ಅದೆಷ್ಟು ವಿಲಾಪಿಸಿದ,,ಲೆಕ್ಕವಿಟ್ಟವರಾರು? ಕಾಡಿನ ಪ್ರತಿ ಮರ ಗಿಡ ಬಳ್ಳಿಗಳು , ಮೃಗ ಪಕ್ಷಿಗಳು ಅವನ ದುಃಖಕ್ಕೆ ಸಾಕ್ಷಿಯಾದವು...ಅವನ ರೋಧನವನ್ನು ಕೇಳಿ ಕ್ರೂರ ಮೃಗಳ ಹೃದಯವೂ ಮರುಗಿತ್ತು...ವಿಷ್ಣುವಿನ ಪೂರ್ಣಾವತಾರವೆಂದು ಬಿಂಬಿಸಲ್ಪಟ್ಟ ರಾಮನಿಗೆ ಅದೇ ಕ್ಷಣ ಸೀತೆಯನ್ನು ಪಡೆಯುವುದು ಸಾಧ್ಯವೂ ಇತ್ತು..ಇಲ್ಲ ಅವನು ಹಾಗೆ ಮಾಡಲಿಲ್ಲ...ಸಾಮಾನ್ಯ ಮಾನವನಂತೆ ವಿಲಾಪಿಸಿದ..ಕರುಳು ಕರಗುವಂತೆ ರೋಧಿಸಿದ.. ಕಪಿಗಳ ಸ್ನೇಹಕ್ಕೆ ಹಸ್ತ ಚಾಚಿ  ವಾನರ ಸೈನ್ಯದ ಸಹಾಯದಿಂದ ರಾವಣನನ್ನು ಕುಲಸಮೇತ ಸಂಹರಿಸಿ ಮನು ಕುಲಕ್ಕೆ ಮಾದರಿಯಾದ. ಪರಪುರುಷನ ವಶದಲ್ಲಿದ್ದ ಪತ್ನಿಯನ್ನು ಪರೀಕ್ಷೆಗೆ ಒಡ್ಡಿದ; ಯಾಕೆ ಅವನಿಗೆ  ಲೋಕಕ್ಕೆ ತೋರಿಸಬೇಕಿತ್ತು ಸೀತೆಯ ಪಾತಿವೃತ್ಯವನ್ನು.  ಮುಂದೆ ಯಾರು ಆಕೆಯ ಮೇಲೆ ಆರೋಪ ಮಾಡಬಾರದು ಎಂದು ಮುಂಜಾಗರೂತೆಗಾಗಿ ಆ ದಾರಿಯನ್ನು ಆಯ್ದ ನಮ್ಮ ರಾಮ.  ಆದರೆ ವಿಧಿ ಬಿಡುವುದೇ!  ಜಾನಕಿ ಕೇವಲ ಕೆಲವೇ ಕಾಲ ಪತಿಗೃಹದ ಸುಖವನ್ನು ಕಂಡಳು..ಮತ್ತಿನ್ನೊಮ್ಮೆ ಕಾಡಿನ ವಾಸ. ಆಕೆ ತನ್ನ ತವರು ಮನೆಗೆ ಹಿಂದಿರುಗಬಹುದಿತ್ತು..ಇಲ್ಲ ಪತಿಯ ಮೇಲಿನ ಪ್ರೇಮದಿಂದ ಆತನ ಆತ್ಮ ಗೌರವ ರಕ್ಷಿಸುವುದು ಮುಖ್ಯವೆಂದು ಸೀತೆಗೆ ಅನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ. ನಿಜವಾದ ಪ್ರೇಮ ತ್ಯಾಗವನ್ನು ಬೇಡುತ್ತದೆ. ರಾಮ ಸೀತೆಯರು ಎಷ್ಟೊಂದು ಪ್ರೇಮ ಪರೀಕ್ಷೆಯನ್ನು ಎದುರಿಸಿದರು! ಅದರಿಂದಾಗಿಯೇ ಅವರ ಹೆಸರು ಪ್ರೇಮಿಗಳ ಪಟ್ಟಿಯಲ್ಲಿ ಶಾಶ್ವತವಾಗಿ ಉಳಿಯಿತು.


          ನಮ್ಮ ಎರಡನೆಯ ಜೋಡಿ ನಳ ದಮಯಂತಿ. ಕಾಳಿದಾಸನ ತನ್ನ ಕಾವ್ಯದಲ್ಲಿ ಅವರ ಪ್ರೇಮದ ವರ್ಣನೆಯನ್ನು ತನ್ನದೇ ಶೈಲಿಯಲ್ಲಿ  ರೂಪಿಸಿದ್ದಾನೆ. ಅದರ ಬಗ್ಗೆ ನಾನೇನು ಹೆಚ್ಚಿಗೆ ಹೇಳಬೇಕಾಗಿಲ್ಲ...ಇಲ್ಲಿ ಉಷಾ ಅವರು ನಳನು ದಮಯಂತಿಯನ್ನು ಕಾಡಿನಲ್ಲಿ ಬಿಟ್ಟು ಆಕೆಯ ಸೀರೆಯ ಅರ್ಧಬಾಗದೊಂದಿಗೆ ಪಾರಾದ ಬಗ್ಗೆ ಬರೆದಿದ್ದಾರೆ. ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಪತ್ನಿಯನ್ನು ಹಾಗೆ ಬಿಟ್ಟು ಹೋಗುವ ನಿರ್ಧಾರ ಯಾಕೆ ಮಾಡಬೇಕಾಯಿತು! ಉಟ್ಟ ಬಟ್ಟೆಯನ್ನು ಕಳಕೊಂಡ ನಳನಿಗೆ ಮುಂಬರುವ ಕಷ್ಟದ ದಿನಗಳ ಕಲ್ಪನೆಯಿತ್ತು. ಕಲಿಯ ಆಟ ಭಗವಂತನ ಅನುಗೃಹಕ್ಕಿಂತಲೂ ಬಲವಾಗಿದೆ ಎಂಬುದು ಆತನಿಗೆ ಮನದಟ್ಟಾಗಿತ್ತು. ಆದುದರಿಂದ ಆತ ಅಂತಹ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಯಿತು. ತನಗೆ ಬರುವ ಕಷ್ಟಗಳನ್ನು  ಮುದ್ದಿನ ಮಡದಿ ಅನುಭವಿಸುವುದು ನಳನಿಂದ ನೋಡಲಾಗಲಿಲ್ಲ. ಆತನ ಇಚ್ಛೆಯಂತೆ ತವರು ಮನೆ ಸೇರಿದ ದಮಯಂತಿ ನಳನ ವಿರಹದ ಬೇಗೆ ಎಷ್ಟೊಂದು ಅನುಭವಿಸಿರಬಹುದೆಂದು ಉಹಿಸಲೂ ಸಾಧ್ಯವಾಗಲಿಕ್ಕಿಲ್ಲ. ಅವಳ ಉತ್ಕಟ ಪ್ರೀತಿಯಿಂದಲೇ ಕುರೂಪಿ ನಳನನ್ನು ಗುರುತಿಸಲು ಅನುವಾಯಿತು.


        ದುಶ್ಯಂತ- ಶಕುಂತಲೆಯ ಜೀವನದಲ್ಲಿ ದುರ್ವಾಸ ಋಷಿಗಳ ಶಾಪವು ದುಶ್ಯಂತನ ಮರೆವಿಗೆ ಕಾರಣವಾಯಿತು ಹೊರತು ಅವರ ಪ್ರೀತಿ ವಿಫಲಗೊಂಡುದರಿಂದ ಅಲ್ಲ.  ಹಾಗೇನಾಗಿದ್ದರೆ ಆತ ಉಂಗುರ ದೊರೆತ ಕೂಡಲೇ ಪತ್ನಿಯನ್ನು ಹುಡುಕಲು ಹೊರಡುತ್ತಿರಲಿಲ್ಲ. ಹೆಚ್ಚಿನ ಪ್ರ‍ೆಮ ಕಥೆಗಳಲ್ಲಿ ಹೆಣ್ಣು ಹೆಚ್ಚಿನ ನೋವನ್ನು ಸಂಕಷ್ಟವನ್ನು ಅನುಭವಿಸುತ್ತಾಳೆ. ಇದು ಪ್ರತಿಯೊಂದು ಯುಗದಲ್ಲೂ ನಿರೂಪಿತವಾಗಿದೆ. ಭಾವುಕಳು, ದೈಹಿಕವಾಗಿಯೂ ಮಾನಸಿಕವಾಗಿಯೂ ಕೋಮಲೆಯಾದ ಹೆಣ್ಣಿಗೆ ಕಷ್ಟಗಳು ಭಗವಂತನಿಂದಲೇ ಬಳುವಳಿಯಾಗಿ ಬಂದಿದೆ.  ವೇದ ಕಾಲದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಮಾನಗಳಿದ್ದವು ಎಂದು ತಿಳಿದು ಬರುತ್ತದೆ ಆದರೆ ಯುಗಗಳು ಉರುಳಿದಂತೆ ಹೆಣ್ಣು ತನ್ನ ಬೆಲೆಯನ್ನು ಕಳಕೊಳ್ಳುತ್ತಲೇ ಹೋಗಿದ್ದಾಳೆ...  ಬಲಶಾಲಿ ಪಂಚ ಪತಿಗಳಿದ್ದೂ ಅವಮಾನಕ್ಕೊಳಗಾದ ದ್ರೌಪದಿಯ ಅವಸ್ಠೆ ಹೇಗಿತ್ತು! ಕಲಿಯುಗದಲ್ಲಂತೂ ಮಹಿಳೆಯ ಅಧೋಗತಿಯು ಹೇಳಿಕೊಳ್ಳಲಾಗಷ್ಟು ಇವೆ. ಅದರಲ್ಲಿಯೂ ಅನೇಕ ಸಲ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುತ್ತಾಳೆ. ಯಾಕೆ ಹೀಗೆ? ಬಹುಶಃ ಯಾರಲ್ಲೂ ಉತ್ತರವಿರಲಿಕ್ಕಿಲ್ಲ!!!


13 March, 2012

ಪ್ರೇಮಾಯಣ- ಅಮರ ಪ್ರೇಮಿಗಳ ವಿಶ್ಲೇಷಣೆ!!!-1


      ಎರಡು ತಿಂಗಳ ಹಿಂದೆ ಉಷಾ ಕಟ್ಟೆಮನೆಯವರ ಬ್ಲಾಗಿನಲ್ಲಿ ಪ್ರೇಮದ ಬಗ್ಗೆ ಓದಿದ ಲೇಖನ ನನ್ನಲ್ಲಿ ಹೊಸ ವಿಚಾರಗಳನ್ನು ಅಲ್ಲಲ್ಲ, ಹಳೆ ವಿಚಾರಗಳನ್ನು ಹೊಸ ದೃಷ್ಟಿ ಕೋನದಿಂದ ನೋಡುವಂತೆ ಪ್ರೇರೇಪಿಸಿದವು.  ಅವರ ಬಳಿ ಅನುಮತಿಯನ್ನೇನು ಪಡೆದಾಯ್ತು...ಆದರೆ ಬಹುಶಃ ಒಳ್ಳೆಯ ಘಳಿಗೆ ಕೂಡಿಬರಲಿಲ್ಲವೆಂದು ಕಾಣುತ್ತದೆ...ಹಾಗಾಗಿ ಬರೆಯಲೇ ಆಗಿಲ್ಲ. ಈ ದಿನ ಸುದಿನವೆಂದು ಕಾಣುತ್ತದೆ ಹಾಗಾಗಿ ಶುರು ಮಾಡಿದ್ದೇನೆ...ಕೇಳುವಂತರಾಗಿ. 


     "ಪ್ರೇಮ"- ಈ ಎರಡಕ್ಷರದಲ್ಲಿ ಅದ್ಯಾವುದೋ ಶಕ್ತಿ, ಮೋಡಿಯಿದೆಯಲ್ಲವೆ! ಪ್ರೇಮದ ಪರಿಭಾಷೆಗೆ ಎಲ್ಲೆಯಿದೆಯೆ...ಇದನಿಮಿತ್ತಂ ಎಂದು ಗುರುತಿಸಲಾದ ಶಬ್ದವಿದು. ವ್ಯಾಖ್ಯಾನಿಸಲು ತೊಡಗಿದರೆ ಮಹಾ ಕಾವ್ಯವೇ ಆಗುವುದು. ಪ್ರೀತಿಯಲ್ಲಿ ಎಷ್ಟೊಂದು ರೀತಿ ನೀತಿ ಅಡಗಿದೆ. ಸಧ್ಯಕ್ಕೆ ಮೌನ ಕಣಿವೆಯ ಉಷಾ  ಬರೆದಿರುವ  " ಪ್ರೀತಿಸಿದರೆ ರಾಕ್ಷಸರಂತೆ ಪ್ರೀತಿಸಬೇಕು" ಬ್ಲಾಗ್ ಬರಹವನ್ನು ವಿಶ್ಲೇಷಿಸಲು ಇಷ್ಟೆಲ್ಲ ಪೀಠಿಕೆ ಹಾಕಬೇಕಾಯ್ತು.  


    ಲೇಖನವನ್ನು ಓದದವರಿಗಾಗಿ ಈ ಕೊಂಡಿ!
              http://www.mounakanive.blogspot.in/


 ಅಲ್ಲಲ್ಲಿ ಅವರ ಬರಹವನ್ನು ಉದ್ಘರಿಸಿ ಬರೆಯುತ್ತಿದ್ದೇನೆ. 


<<ಆಧ್ಯಾತ್ಮ ಸಾಧನೆಗೆ ಸಂಬಂಧಪಟ್ಟಂತೆ ಭಾರತೀಯರು ಏರಿದ ಎತ್ತರಕ್ಕೆ ಎತ್ತರಕ್ಕೆ ಸರಿಸಾಟಿಯಿಲ್ಲ. ಅವರ ಸಾಧನೆಯ ಫಲಶ್ರುತಿಯಲ್ಲಿ ಸದಾ ಆನಂದದ ಪ್ರೇಮರಸ. ಆದರೆ ಗಂಡು-ಹೆಣ್ಣಿನ ಪ್ರೇಮಕ್ಕೆ ಸಂಬಂಧಪಟ್ಟಂತೆ ಭಾರತೀಯರ ದೃಷ್ಟಿಕೋನ ವಿಶಾಲವಾಗಿಲ್ಲ.. ನಮಗೆ ಪ್ರೇಮದ ಉತ್ಕಟತೆಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲವೇನೋ ಎಂಬ ಗುಮಾನಿ ಬಹಳ ಹಿಂದಿನಿಂದಲೂ ನನಗಿದೆ. ಇಲ್ಲಿ ಪ್ರೇಮವೆಂಬುದು ದಾಸ್ಯದ ಹೊದಿಕೆಯಡಿ ಅಡಗಿ ಕುಳಿತಿದೆ.>> 


   - ಭಾರತೀಯರು ಕೇವಲ  ಅಧ್ಯಾತ್ಮ ಮಾತ್ರವಲ್ಲದೆ ಪ್ರೇಮಿಗಳಾಗಿಯೂ ಜಗತ್ತಿನಲ್ಲಿ ಅತ್ಯಂತ ಎತ್ತರ ಸ್ಥಾನವನ್ನು ಪಡೆದಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಉದಾರಣೆಗಳ ಎದುರು ರೋಮಿಯೋ ಜೂಲಿಯೆಟ್‌ರನ್ನು ನಿವಾಳಿಸಿ ಒಗೆಯಬೇಕು.   ಬಹುಶಃ ತಾಯಿ ಮಕ್ಕಳ ನಡುವೆ ಇರುವ ಆ ಪ್ರೀತಿ, ವಾತ್ಸಲ್ಯ ಶ್ರೇಷ್ಟವಾದರೂ ಅದರಲ್ಲಿಯೂ ವರುಷ ಕಳೆದಂತೆ ನಮ್ಮ ಜೀವನದಲ್ಲಿ ಪ್ರವೇಶಿಸುವ ಇತರ ಸಂಬಂಧಗಳಿಂದ  ಒಂದಿಷ್ಟು ತನ್ನ ಹೊಳಪು ಕಳೆದುಕೊಳ್ಳುತ್ತದೆ.. ಆದರೆ ಈ ಗಂಡು ಮತ್ತು ಹೆಣ್ಣಿನ ಈ ಸಂಬಂಧವು  ಎರಡು ಆತ್ಮಗಳ   ಮಿಲನ... ತಮ್ಮ  ವ್ಯಕ್ತಿತ್ವಗಳನ್ನು ಕಳೆದುಕೊಂಡು ಒಂದಾಗುವ ಪ್ರಕ್ರಿಯೆ...ಆದರೆ ಇದರ ಬಗ್ಗೆ ಯಾವುದೇ ಆಕ್ಷೇಪವಿರುವುದಿಲ್ಲ..ಬದಲಾಗಿ ದಿವ್ಯ ಭಾವ ಹೊಮ್ಮುತ್ತದೆ!  ಇಲ್ಲಿ ನಾನು ಆಧ್ಯಾತ್ಮವನ್ನು ಎಳೆತರಲು ಬಯಸುತ್ತೇನೆ.  ನನ್ನ ಪ್ರಕಾರ ಭೌತಿಕತೆ ಮತ್ತು ಆಧ್ಯಾತ್ಮಿಕತೆ ಎರಡನ್ನು ಬೇರ್ಪಡಿಸಲಾಗುವುದಿಲ್ಲ.. ಕಲ್ಲು ಮುಳ್ಳುಗಳಿಂದ ಕೂಡಿದ ಈ ಮಾಯಾ ಲೋಕದಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗಬೇಕಾದರೆ ಪ್ರತಿಯೊಂದನ್ನು ನಾವು ಆಧ್ಯಾತ್ಮಿಕ ಚೌಕಟ್ಟಿನಲ್ಲಿ ಕಾಣಬೇಕಾಗುತ್ತದೆ.  ಹಾಗಾಗಿ ನನ್ನ ಲೇಖನದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪ್ರವೇಶವಾಗುತ್ತದೆ.  ರಾಮಕೃಷ್ಣರ ಉತ್ಕಟ ಭಕ್ತಿ...ದೇವಿಯನ್ನು ಪ್ರತ್ಯಕ್ಷ ಮಾಡಿಕೊಳ್ಳಲು ಅವರು ಮಾಡುವ ಹುಚ್ಚಾಟ...ಭಕ್ತಿಯ ಪರಾಕಷ್ಟೆಯನ್ನು ಸೂಚಿಸುವ ಅವರ ಸಮಾಧಿ...ಇವೆಲ್ಲಾ ನಾವೊಂದು ಪ್ರೇಮಿಯಲ್ಲೂ ಕಾಣಬಹುದಲ್ಲವೆ! ಹಾಗೆಯೇ ಪ್ರೇಮಕ್ಕೆ ಮೀರಾ ಬಾಯಿಯ ಉದಾಹರಣೆ ಕೊಡುವರಾದರೂ ನಾನದನ್ನು ಆಧ್ಯಾತ್ಮಿಕ ಭಕ್ತಿಯೆಂದೇ ವಾದಿಸುತ್ತೇನೆ. ಕೃಷ್ಣನೇ ತನ್ನ ಪತಿಯೆನ್ನುವಳಾದರೂ ಅದರಲ್ಲಿ ಮನುಷ್ಯರಿಗೆ ಸ್ವಾಭಾವಿಕವಾದ ಕಾಮದ ಲೇಪವಿರಲಿಲ್ಲ...ಅದನ್ನು ಕೇವಲ ಮುಕ್ತಿಯ ದಾಹವೆಂದು ಗುರುತಿಸಬಹುದೆಂದು ನನ್ನ ಅಭಿಮತ. ಅಂತೇಯೆ ಅಕ್ಕಮಹಾದೇವಿಯೂ ಕೂಡ. ಮಲ್ಲಿಕಾರ್ಜುನನಲ್ಲಿ ಐಕ್ಯತೆಯೇ ಆಕೆಯ ಪರಮ ಗುರಿಯಾಗಿತ್ತು. 
       
       <<ಪ್ರೇಮದ ಉತ್ಕಟತೆ ಎಂದರೆ ಎರಡು ದೇಹಗಳು, ಎರಡು ಮನಸುಗಳು ಒಂದಾಗಿ ಕರಗಿ ಹೋಗುವುದು; ಐಕ್ಯವಾಗುವುದು; ತನ್ನತನವನ್ನು ಕಳೆದುಕೊಳ್ಳುವುದು; ಶೂನ್ಯ ಸ್ಥಿತಿಯನ್ನು ತಲುಪುವುದು. ಅಂದರೆ ವರ್ತಮಾನವನ್ನು ಸಂಪೂರ್ಣವಾಗಿ ಮರೆಯುವುದು.
ಇಂತಹ ಮರೆಯುವಿಕೆ ನಮ್ಮ ಪುರಾಣ, ಇತಿಹಾಸಗಳಲ್ಲಿ ಎಲ್ಲಿಯಾದರೂ ದಾಖಲಾಗಿದೆಯೇ? ಹಾಗೆ, ಪ್ರೇಮದ ದಾಖಲಾತಿಯೆಂದು ನಮಗೆ ಅಲ್ಲಿ ಇಲ್ಲಿ ಸಿಗುವ ಒಂದೆರಡು ಉದಾಹರಣೆಗಳು ಪ್ರೇಮದ ಗಾಢವಾದ ಅನುಭವವನ್ನು ನೀಡಬಲ್ಲಷ್ಟು ಶಕ್ತವಾದುದೇ?>>
      ಶೂನ್ಯ ಸ್ಥಿತಿ ಪಡೆಯುವಿಕೆ ಕೇವಲ ಬರೇ  ಸ್ವಲ್ಪ ಸಮಯ ಸೀಮಿತವಾಗುತ್ತದೆ...ಪ್ರೀತಿಯಿಂದಲೇ ಜೀವನ ಸಾಗುವುದೇ? ಅಲ್ಲದೆ ಉಳಿದ ಸಂಬಂಧಗಳಿಗೂ ಕೂಡಾ ಬೆಲೆ ಕೊಡಬೇಕಲ್ಲವೆ? ಎಲ್ಲವನ್ನು ತೂಗಿಸಿ ತೆಗೆದುಕೊಂಡು ನಡೆಯಬೇಕಾಗುತ್ತೆ..ತಪ್ಪಿ ನಡೆದರೆ ಅಪವಾದ ತಪ್ಪದು...ಅವಹೇಳನ, ಅವಮಾನ ಕಟ್ಟಿಟ್ಟ ಬುತ್ತಿ.  ಕೆಲವೊಂದು ಉದಾಹರಣೆಗಳು ದಾಖಲಾದರೂ ಹೆಚ್ಚಿನವು  ಇತಿಹಾಸದ ಕತ್ತಲಲ್ಲಿ ಶಾಶ್ವತವಾಗಿ ಹುಗಿದುಹೋಗಿದೆ...ಯಾಕೆಂದರೆ  ಪ್ರೀತಿಯ ಇನ್ನೊಂದು ಮುಖವಾದ ತ್ಯಾಗ ಕಾರಣವಾಗುತ್ತದೆ.  ಎಷ್ಟೋ ಪ್ರೇಮಿಗಳು ಕಾರಣಾಂತರಗಳಿಂದ  ಒಬ್ಬರಿಂದೊಬ್ಬರು ದೂರವಾಗುತ್ತಾರೆ...ಕೆಲವೊಮ್ಮೆ  ಅಲ್ಪಾವಧಿಗೆ ಮಾತ್ರ ಜೊತೆಗೂಡಿ ಮತ್ತೆ ಅಗಲುವಿಕೆಯ  ಪರಿತಾಪವನ್ನು ಭೋಗಿಸುತ್ತಾರೆ. 
{ಚಿತ್ರ ಕೃಪೆ ಅಂತರ್ಜಾಲ}

   ಇಲ್ಲಿ ಉಷಾ ಕೆಲವೊಂದು ಉದಾಹರಣೆಗಳನ್ನು ಕೊಟ್ಟಿದ್ದಾರೆ....ದುಶ್ಯಂತ- ಶಕುಂತಲ, ರಾಮ- ಸೀತಾ  ಮತ್ತು ನಳ- ದಮಯಂತಿ. ಅವರ ಆಪಾದನೆಯೇನೆಂದರೆ ರಾಮ ಮತ್ತು ದುಶ್ಯಂತ ತಮ್ಮ ಪ್ರಿಯತಮೆಗೆ ಮೋಸಮಾಡಿದ್ದಾರೆಂದು. ಮೇಲು ನೋಟಕ್ಕೆ ಹಾಗೆಂದು ಕಾಣುತ್ತದಾದರೂ ಪರಿಸ್ಥಿಯನ್ನು ವಿಶ್ಲೇಷಿದಾಗ ನಿಜಸ್ವರೂಪವನ್ನು ಕಾಣಬಹುದು.   ಈ ಮೂರು ಜೋಡಿ ಎಂದೆಂದೂ ಆದರ್ಶಪ್ರಾಯವಾದುದು. ತ್ಯಾಗ, ಪ್ರೀತಿ ಮತ್ತು ಶಾಪದ ಸಮ್ಮಿಳನಕ್ಕೆ ಇವರ ಕಥೆ ಮಾದರಿ. 
    

07 March, 2012

ನೀಲುಗಳು-2


        ಸತ್ಯಂ ವದ
         ಅಂದರೆ 
  ಕಡು ವರ್ಣದ ಸೀರೆಯುಟ್ಟ 
  ಕೃಷ್ಣ ಸುಂದರಿ ಸ್ನೇಹಿತೆಗೆ               
 ನಿನ್ನ ನೋಡಲಾಗುವುದಿಲ್ಲವಿಂದು ಎಂದು ಹೇಳುವುದೇ?

       *    *     *    *


      ಧರ್ಮಂ ಚರ
        ಅಂದರೆ
ವಂಶ ಪಾರಂಪರ್ಯವಾಗಿ ಮಾಂಸ 
   ಮಾರುವ ಗೆಳೆಯನಿಗೆ
ನೀನು ಅಧರ್ಮದ ಹಾದಿ ಬಿಡು ಎನ್ನುವುದೇ?

    *    *    *    *


ನಾನು ಕಪ್ಪು ಅವನು ಬಿಳಿ
ಹೀಗೆ ಸಾಗಿತ್ತು ನಮ್ಮ ಚರ್ಚೆ
’ಅಮ್ಮ’ ಕೂಗು ಕೇಳಿ ಹೊರ ಬಂದು ನೋಡಿದರೆ,
ಕೀಚೈನು ತಿರುಗಿಸುತ್ತ 
ಕೇಸರಿ ಸ್ಕೂಟಿಯ ಎದುರು ನಿಂತಿಹಳು ನಮ್ಮ ಕುವರಿ!

             *    *     *    *

 ಇಂಜಿನಿಯರ್, ಡಾಕ್ಟರ್ ಆಗಲಿ 
 ಎನ್ನ ಮುದ್ದು ಕಂದನೆಂದೆಣಿಸುತ್ತ
 ಮಧುರ ಕನಸು ಕಾಣುತ್ತ
 ಹೊರ ಬಂದು ನೋಡಿದರತ್ತ 
 ತನ್ನ ಬಣ್ಣದ ಲೋಕವ ಬಿಡಿಸುತ್ತ 
 ನಸುನಗು ಬೀರಿದ ಪುಟ್ಟ ಪಿಕಾಸು ನನ್ನತ್ತ!

        *    *     *     *

  ಕನಸು ಕಾಣು ಅಂದರು
  ಹೆತ್ತವರು, ಗುರುಗಳು
  ವಿಧೇಯಿ ನಾನು
  ಪಾಲಿಸಿದೆ ಅವರ ಮಾತನ್ನ
  ಕಟ್ಟುತ್ತಲೇ ಹೋದೆ ಕನಸಿನ ಗೋಪುರವನ್ನ;
  ಮಾಲುತ್ತಿತ್ತು ಅದು ಆಗಾಗ...ಆದರೂ
  ಅದಕ್ಕಿಷ್ಟು ಇಟ್ಟಿಗೆಯ ಪೇರಿಸುವುದು   ಬಿಡಲಿಲ್ಲ;
  ಆದರೆ ಅದೊಂದು ದಿನ 
  ಯಮನ ದರುಶನವಾದದ್ದೇ ತಡ
  ಕನಸಿನ ಗೋಪುರ ನುಚ್ಚು ನೂರಾಯಿತು!


06 March, 2012

ನೀಲುಗಳು!- ಹೌದಾ?-1


  ಕೇಳಲೇ ನಿನ್ನಲ್ಲಿ ಪ್ರಶ್ನೆಯೊಂದನ್ನು
  ಹಂಚಲು ಸಂಗಾತಿ ಕೊಡುವುದಿಲ್ಲವೆಂದಾದರೆ
  ಯಾಕಿಷ್ಟು ಪ್ರೀತಿ ನನ್ನೊಳ ತುಂಬಿಸಿದಿ?

        *   *    *   *

   ಬೆಳಕಿನ ಹುಡುಕಾಟದಲ್ಲಿದ್ದ 
   ನನಗೆ ಕಾಣದೇ ಹೋಯಿತೇ
   ನನ್ನೊಳಗಡಗಿದ್ದ ಅಗ್ನಿಯ ಕಾಂತಿ!

     *    *    *    *


ಸೋತೆ ನಾ ಸೋತೆ
ನಿನ್ನ ಓಲೆಯ ದಾರಿ ಕಾಯ್ದು
ಇಷ್ಟಾದರೂ ನಾ ನಿನಗೆ 
ಪ್ರತ್ಯುತ್ತರ ಬರೆಯದೇ
ಹುಣ್ಣಿಮೆಗಳೆರಡು ಕಳೆದು ಹೋದವು
ಎಂದು ನನಗೆ ತಿಳಿಯಲೇ ಇಲ್ಲ!

     *    *    *   *

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...