ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

02 December, 2011

"ಅಣ್ಣಾ ಹಜಾರೆ ಏನಾಗಿದೆ ನಿಮಗೆ?"- ಒಂದು ಸಮರ್ಥನೆಯ ಯತ್ನ!



ಪ್ರಿಯ ಓದುಗರೇ,
   ಈ ಲೇಖನ ನನ್ನ <ಅಣ್ಣಾ ಹಜಾರೇ- ಏನಾಗಿದೆ ನಿಮಗೆ>  ಇದಕ್ಕೆ ಬಂದ ಪ್ರತಿಕ್ರಿಯೆಗಳಿಗಾಗಿ ತಯಾರಾದ ಬರಹ.  ಇದನ್ನು ಸಂಪದದಲ್ಲೂ ಹಾಕಿದ್ದೆ... ಬಹುಶಃ  ಹಜಾರೆಯ ಮೇಲೆ ಯಾವ ಅಪಾದನೆಯನ್ನು ಒಪ್ಪಲು ಹೆಚ್ಚಿನವರು ತಯಾರಿಲ್ಲ... ಆದರೆ ನನಗೆ ಹಜಾರೆ ಮೇಲೆ ಅಪಾರ ಗೌರವವಿದೆ.. ಅವರು ತಂದ ಬದಲಾವಣೆಗಳನ್ನು ಮೆಚ್ಚಿದ್ದೇನೆ ಕೂಡ.     ಆದರೂ ಕೆಲವೊಂದು ನಡವಳಿಕೆ ಸರಿಯೆಂದು ನನ್ನ ಮನ ಒಪ್ಪಲಿಲ್ಲ.. ಅದರ ಫಲ ಈ ಲೇಖನ.
                                
      ಮೊದಲಾಗಿ ಒಂದು ಮಾತನ್ನು ಸ್ಪಷ್ಟ ಪಡಿಸಲು ಬಯಸುತ್ತೇನೆ. ಇದು ಯಾವ ಕಾರಣಕ್ಕೂ ಯಾರನ್ನೂ ದೂಷಿಸಲು ಅಥವ ಯಾರ ತಪ್ಪನ್ನು ಎತ್ತಿ ತೋರಿಸಿ ಅವರನ್ನು ಅಪಮಾನ ಪಡಿಸಲು ಉದ್ದೇಶಿಸಿದ್ಧ ಪಡಿಸಿದಲ್ಲ... ಇದರಿಂದ ವೈಯುಕ್ತಿಕವಾಗಿ ನನಗೆ ಯಾವ ಲಾಭವೂ ಸಿಗಲಿಲ್ಲ, ಮುಂದೆ ಸಿಗುವುದೂ ಇಲ್ಲ... ಕೇವಲ ದೇಶದ, ನಮ್ಮ ಮುಂದಿನ ಜನಾಂಗದ ಏಳಿಗೆಯ ಬಗ್ಗೆ ಇರುವ ಕಳಕಳಿಯು ಹೀಗೆ, ಈ ವಿಷಯದ ಮೇಲೆ ಬರೆಯುವಂತೆ ಪ್ರೇರೇಪಿಸಿತು. ಹಾಗಾಗಿ ನಿಮ್ಮ ಭಾವನೆಗಳಿಗೆ ಎಲ್ಲಿಯಾದರೂ ನೋವಾದರೆ ಕ್ಷಮೆಯಿರಲಿ.  ಇಲ್ಲಿ ಕೆಲವರ ಹೇಳಿಕೆಯನ್ನು ಉಲ್ಲೇಖಿಸಬಹುದು... ಅದು ಯಾರನ್ನೂ ಹೀಯಾಳಿಸಲಲ್ಲ.. ಕೇವಲ ನನ್ನ ಬರಹವನ್ನು ಸಮರ್ಥಿಸಲು... ಅದಕ್ಕೂ ಮೊದಲೇ ಕ್ಷಮೆ ಕೋರುತ್ತೇನೆ.

      ಮೊದಲಾಗಿ ನನ್ನ ಸುತ್ತಮುತ್ತಲು ನಡೆಯುತ್ತಿರುವ ಘಟನೆಗಳಿಗೆ ಸ್ಪಂದಿಸುವುದು ನನ್ನ ಅಭ್ಯಾಸ... ಅದು ಸರಿಯೋ ತಪ್ಪೋ ಎಂದು ಗೊತ್ತಿಲ್ಲ... ಅದರಲ್ಲೂ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ವಿಶೇಷ ಆಸಕ್ತಿ... ಯಾಕೆಂದರೆ ಗೊತ್ತಿದ್ದೊ.. ಗೊತ್ತಿಲ್ಲದೆಯೋ ಜನರು ಇವರನ್ನು ಇವರ ನಡವಳಿಕೆಯನ್ನು ಕಣ್ಣು ಮುಚ್ಚಿ ಅನುಸರಿಸುತ್ತಾರೆ... ಬಹುಶಃ ಇತ್ತೀಚಿನವರೆಗೆ ಅಂದರೆ ಈ ಲೋಕಪಾಲ ಮಸೂದೆಯ ಜಾರಿಗೆಗಾಗಿ ಸತ್ಯಾಗ್ರಹ ನಡೆಯುವ ತನಕ ಹೆಚ್ಚಿನವರಿಗೆ ಹಜಾರೆಯ ಬಗ್ಗೆ ಏನೂ ಮಾಹಿತಿ ಇರಲಿಲ್ಲ... ನಾನು ಅವರ ಬಗ್ಗೆ   ಓದಿದ್ದೆನಾದರೂ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ಆದರೆ ರಾಮಲೀಲಾ ಮೈದಾನದಲ್ಲಿ ನಡೆದ ೧೨ದಿನದ ಉಪವಾಸ ಅವರನ್ನು ಬರೇ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲಿಯೂ ಪ್ರಸಿದ್ಧಿಗೆ ತಂದಿತು... ಒಂದು ದಿನ ಉಪವಾಸ ಮಾಡುವುದೇ ಕಷ್ಟ.. ಅದರಲ್ಲೂ ೭೪ರ ವಯೋವೃದ್ಧ... ಒಂದು ಸೋಜಿಗವೆಂದೆನಿಸಿತು. ಸರಕಾರಕ್ಕೆ ನಡುಕ ತಂದರು... ಜನಾನುರಾಗವನ್ನು ಕೆಲವೇ ದಿನಗಳಲ್ಲಿ ಪಡೆದರು.. ಇವರ ಕರೆಗೆ ಓಗೊಟ್ಟು ಜನ ಸಾಗರದಂತೆ ಬಂದು ಸೇರಿತು... ಅದರಲ್ಲೂ ಯಾವಾಗಲು ನಿರ್ಲಿಪ್ತ ಧೋರಣೆಯಿರುವ ಐ ಟಿ ಟೆಕ್ಕಿಗಳು... ತಮ್ಮ ವೀಕ್ ಎಂಡ್‌ನ್ನು ಅಣ್ಣನವರಿಗೆ ಮೀಸಲಾಗಿಟ್ಟರು... ಈ ಎಲ್ಲಾ ವಿದ್ಯಮಾನಗಳನೆಲ್ಲಾ  ಬಿಟ್ಟ ಕಣ್ಗಳಿಂದ , ಕುತೂಹಲದಿಂದ ಗಮನಿಸುತ್ತಿದ್ದ ನಾನು ಇದರ ಮೇಲೊಂದು ಬರಹ ಬರೆದೆನು... ನನ್ನಲ್ಲೊಂದು ಹೊಸ ಆಸೆ ಉದಯವಾಯಿತು... ಹೊಸ ಭಾರತದ ಉತ್ಥಾನದ ಸ್ವಾಗತಕ್ಕಾಗಿ ತಯಾರಾದೆ...

    ಆದರೆ ಇತ್ತೀಚಿನ ಹಜಾರೆ  ತಂಡದಲ್ಲಿ ನಡೆದಿರುವ ಬೆಳವಣಿಗೆ ನಿರಾಸೆ ತಂದಿತು.. ಮೊದಲಾಗಿ ತಂಡದವರು ಬೇಕಾಬಿಟ್ಟಿಯಾಗಿ   ಹೇಳಿಕೆ ಕೊಡಲಾರಂಭಿಸಿದರು... ಒಂದಿಷ್ಟೂ ಮುಲಾಜಿಲ್ಲದೆ ಅದನ್ನು ಸಮರ್ಥಿಸಲೂ ತೊಡಗಿದರು.

          ಮೊದಲಾಗಿ ನಾನು ಕಿರಣ್ ಬೇಡಿಯವರ ಬಗ್ಗೆ ಉಲ್ಲೇಖಿಸಲು ಬಯಸುತ್ತೇನೆ.  ಕಿರಣ್ ಬೇಡಿ ನನ್ನ ಅಚ್ಚುಮೆಚ್ಚಿನ ಮಹಿಳೆಯಾಗಿದ್ದರು. ತಮ್ಮ ಶಿಸ್ತಿನ ನಡವಳಿಕೆಯಿಂದ, ತಿಹಾರ್ ಜೈಲಿನಲ್ಲಿ ತಂದ ಮಾದರಿ ಬದಲಾವಣೆಗಳಿಂದ ಅವರು  ಜನ ಮನದಲ್ಲಿ ಒಂದು ಪ್ರಮುಖ  ಸ್ಥಾನ ಪಡೆಯುವಂತೆ ಮಾಡಿತು.  ಆದರೆ ಅವರ ರಾಜಿನಾಮೆ ಬಹಳ ಕೌತುಕಮಯವಾಗಿತ್ತು, ಸಹಜವಾಗಿಯೇ ಇದರ ಬಗ್ಗೆಯೂ ಕತೆ ಹುಟ್ಟಿತ್ತು ಕೂಡ! ನ್ಯಾಯವಾಗಿ ತಮಗೆ ಬರಬೇಕಾದ ಡೆಲ್ಲಿ ಕಮಿಷನರ್ ಪದವಿ ಸಿಗದೇ ಹೋದುದಕ್ಕಾಗಿ ಪ್ರತಿಭಟನೆ ತೋರಲು ಅವರು ತಮ್ಮ ಹುದ್ದೆಯಿಂದ ಹೊರನಡೆದರು ಎಂದು. ಈ ಕತೆ ಎಷ್ಟು ನಿಜವೋ ತಿಳಿಯದು. ಒಂದು ವೇಳೆ ಹೌದೆಂದಾರೂ ಅವರು ರಾಜಿನಾಮೆ ಕೊಟ್ಟು ಪ್ರತಿಭಟಿಸಿದ್ದು ಸರಿಯಾಗಿಯೇ ಇದೆ.  ಆದರೆ ಅದರಲ್ಲಿಯೂ ಒಂದು ಟ್ವಿಸ್ಟ್‌ಯಿದೆ... ಅವರಿಗೆ ಈ ಯು ಪಿ ಎ ಸರಕಾರದ ಮೇಲೆ ಈ ವಿಷಯಕ್ಕೆ ಕೋಪವಿದ್ದು ಪ್ರತಿಕಾರ ತೆಗೆದುಕೊಳ್ಳಲು ಅಣ್ಣಾ ಅವರು ಮತ್ತವರ ಚಳುವಳಿ ಮಾಧ್ಯಮವೆಂದಾದರೆ ಅದು   ಖಂಡನೀಯ. ಆದರೆ ಇದರ ಸತ್ಯಾಸತ್ಯೆಗಳನ್ನು ಕಂಡು ಹಿಡಿಯಲು ಸಾದ್ಯವೇ?     ಮಾನವನ ಸ್ವಭಾವ ಬಹಳ ನಿಗೂಢವಾದದ್ದು, ಯಾವಾಗ ಯಾರು ಬದಲಾಗುತ್ತಾರೆ ಎಂದು ಹೇಳುವುದು ಅಸಾಧ್ಯ.   ಅಲ್ಲದೆ ಇತ್ತೀಚಿನ ಸುದ್ದಿಯ ಪ್ರಕಾರ ಅವರು ತಮ್ಮ ಪ್ರಯಾಣದ ವೆಚ್ಚದ ನೆಪ ಮಾಡಿ ಹೆಚ್ಚು ಭತ್ಯ ವಸೂಲಿ ಮಾಡಿದ್ದು ನನ್ನೊಳಗಿನ  ತಳಮಳಕ್ಕೆ  ಕಾರಣವಾಯಿತು. ಅಷ್ಟೆ ಅಲ್ಲದೆ  ಈ ವಿಷಯ ಬಯಲಾದ ಕೂಡಲೇ ಅವರು ಆ ಹಣವನ್ನು ತಾವು ಟ್ರಸ್ಟ್‌ಗೆ ಸೇರಿಸಿದ ವಿಷಯವನ್ನು ಮಾಮುಲಾಗಿ ಘೋಷಿಸಿದರು. ಇದು ಸರಿಯೇ? ಸರಿ ಈ ವಿಷಯವು ಸ್ವಲ್ಪ ಸಮಯ ಚರ್ಚೆಗೆ ಗ್ರಾಸವಾಯಿತು.. ಈಗ ಕೆಲವೇ ಮಂದಿ ಅಣ್ಣಾ ಅಭಿಮಾನಿಗಳಿಗೆ ಸ್ವಲ್ಪ ಇಕ್ಕಟ್ಟೂ ಆಯಿತು.

    ಹೋಗಲಿ, ಅವರು ಹಣ ಹೆಚ್ಚು ತೆಗೆದುಕೊಂಡರೂ ಅದನ್ನು ಪ್ರಾಯೋಜಕರ ಗಮನಕ್ಕೆ ತಂದು ವಿಷಯವನ್ನು ಸ್ಪಷ್ಟ ಪಡಿಸಿ ತೆಗೆದು ಕೊಳ್ಳಬಹುದಾಗಿತ್ತು... ಆ ಹಣ ಜನರ ಸೇವೆಗೆ ಸಲ್ಲುವುದಾದರೆ ಬಹುಶಃ ಅವರಿಗೆ ಆಕ್ಷೇಪವಿರುತ್ತಿರಲಿಲ್ಲವೆಂದೆನಿಸುದು.  ಇಲ್ಲಿ ನನಗೆ ಪುನಃ ಗಾಂಧೀಜಿಯವರ ನೆನೆಪಾಯಿತು.  ಸುಳ್ಳು ಹೇಳಿ, ಅಥವಾ ಮೋಸ ಮಾಡಿ ಸಂಪಾದಿಸಿದ ಹಣದ ಸದುಪಯೋಗವಾಗುತ್ತದೆಯೇ? ಇದು ನಮ್ಮ ರಾಜಕಾರಣಿಗಳು, ಉದ್ಯಮಿಗಳು ತಿರುಪತಿ ( ಅಥವಾ ಬೇರೆ ಬಹಳ ವಿಖ್ಯಾತ ದೇವರ) ಹುಂಡಿ ತುಂಬುವುದರ ಹಾಗೆ ಅಲ್ಲವೇ? ಹೇಳಿ ಇಂತವರಿಗೆ ಬೇರೆಯವರ ಲೋಪ ದೋಷ ಎತ್ತಿ ತೋರಿಸುವ ಹಕ್ಕಿದೆಯೇ? ಇದರಲ್ಲಿ ಸೂಕ್ಷ್ಮವಾಗಿ ವ್ಯತ್ಯಾಸ ಖಂಡಿತವಾಗಿ ಇದೆ. ಸರಿ ಒಪ್ಪುತ್ತೇನೆ.. ರಾಜಕಾರಣಿಗಳು ಮಾಡುವುದು ಸ್ವಾರ್ಥಕ್ಕಾಗಿ ಮತ್ತು ಕಿರಣ್  ಬೇಡಿ ಜನರ ಏಳಿಗೆಗೆಗಾಗಿ... ಆದರೆ ನೀವು ಏನೇ ಹೇಳಿ ನಮ್ಮ ಒಳ್ಳೆಯ ಕೆಲಸಕ್ಕಾಗಿ ನಾವು ನೇರದಾರಿಯನ್ನೇ ಹಿಡಿಯಬೇಕು.. ಇದು ನಾವು ತಪ್ಪು ದಾರಿಯಲ್ಲಿ ಸಂಪಾದನೆ ಮಾಡಿ ಅದರ ಕರ್ಮ ಫಲದಿಂದ ಪಾರಾಗುವುದಕ್ಕೆ ಭಗವಂತನಿಗೆ ತರ ತರದ ಲಂಚ ಕೊಡುತ್ತೇವೆ ನೋಡಿ.. ಹಾಗೆಯೇ ಆಯಿತಲ್ಲವೆ?  ಆದರೂ ತಿಳಿದವರು ನನ್ನ ಅಭಿಪ್ರಾಯವನ್ನು ಸರಿಯಲ್ಲವೆಂದು ತಿಳಿದರೆ... ಯಾಕೆ ಎಂದು ನಿರೂಪಿಸಿದರೆ ಅದನ್ನು ಖಂಡಿತ ಸ್ವೀಕರಿಸಲು ಅಡ್ಡಿಯಿಲ್ಲ.

   ಈಗ ಭರತ್ ಭೂಷಣ್- ಅವರಂತೂ ತಮ್ಮ ಹದ್ದನ್ನೇ ಮೀರಿ ಕಾಶ್ಮೀರದ ಬಗ್ಗೆ ಮಾಧ್ಯಮದ ಎದುರು ಹೇಳಿಕೆ ಕೊಟ್ಟಾಗ ಸ್ವತಃ  ಅಣ್ಣಾ ಹಜಾರೆಯೇ ದಂಗಾದರು!  ನಾವೆಲ್ಲ ನೋಡಿದ ಕಪಾಳ ಮೋಕ್ಷದ ಪ್ರಹಸನ ಇಲ್ಲೂ ನಡೆದಿತ್ತು.. ( ಇಲ್ಲಿ ಕಪಾಳ ಮಾತ್ರವಲ್ಲದೆ ಒಟ್ಟಾರೆ ಹಿಗ್ಗು ಮುಗ್ಗು ಹೊಡೆದರಲ್ಲವೆ?) ನೋಡಿ ನಮ್ಮವರ ಮೈಂಡ್ ಸೆಟ್ ಉಂಟ್ಲವ ಅದು ಬಹಳ ವಿಚಿತ್ರವಾದದ್ದು.. ಕೆಲವೊಮ್ಮೆ ತಲೆಯೆತ್ತಿ ಕೂರಿಸುತ್ತಾರೆ.. ಮತ್ತೆ ಅವರನ್ನೇ ಯಾವಾಗ ಎತ್ತಿ ಬೀಸಿ ಹೊಡೆಯುತ್ತಾರೆಂದು ಹೇಳಲು ಅಸಾಧ್ಯ! ಹಾಗೊಂದು ಹೇಳಿಕೆ ಕೊಡುವ ಮೊದಲು ತಮ್ಮವರೊಂದಿಗೆ ಸಮಾಲೋಚನೆ ಕೂಡ ಮಾಡಿಲ್ಲ.. ಅಂದರೆ ಈ ತಂಡದವರು ತಮ್ಮೆಲ್ಲ ಆಲೋಚನೆ ಹಾಗು ಕೆಲಸಗಳು ಎಂದಿಗೂ ನ್ಯೂನತಾರಹಿತವಾದದ್ದು ಎಂದು ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆಯೆ? ಇನ್ನು ಅರವಿಂದ ಕೆಜ್ರಿವಾಲ ಅವರೂ ಸರಕಾರಿ ಸರ್ವಿಸ್‌ನಲ್ಲಿರುವಾಗ... ಈ ಕತೆಗಳೆಲ್ಲಾ ತಮಗೆ ತಿಳಿದೇ ಇದೆ.. ಅಂತೂ ಅದಕ್ಕೂ ಜನರ ಅನುಕಂಪ ಪಡೆಯುವುದಕ್ಕೋ,  ತಮ್ಮ ಮಿತ್ರ ಹಾಗು ತಂದೆಯವರಿಂದ ಹಣ ಪಡೆದು ಸರಕಾರಕ್ಕೆ ಕೊಡಬೇಕಾದ ಬಾಕಿ ಸಲ್ಲಿಸಿದರೆಂದು ಮಾಧ್ಯಮದ ಮುಂದೆ ಹೇಳಿಕೊಂಡರು. ( ಇಲ್ಲಿ ನಮ್ಮ ಸರಕಾರವು ಕೂಡ ಪ್ರತಿಕಾರಕ್ಕಾಗಿ ಹೀಗೆ ಮಾಡಿತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ. ) ಅವರ ಮೇಲು ಹಲ್ಲೆ ನಡೆಯಿತು, ಕಾಂಗ್ರೆಸ್  ಬೆಂಬಲಿಗನಿಂದ.  ಹಲ್ಲೆಕಾರ ಜಿತ್ರೇಂದ್ರ ಪಾತಕ್‌ನನ್ನು  ಕೆಲಸದಿಂದ ತೆಗೆದು ಹಾಕಬಾರದೆಂದು ಕೆಜ್ರಿವಾಲ ಕಂಪನಿಯನ್ನು ಕೇಳಿಕೊಂಡು ಪತ್ರ ಬರೆದರೆಂದು  ಮಾಧ್ಯಮದಲ್ಲಿ ಪ್ರಚಾರವಾಯಿತು.  ಹಿಂಸೆಯನ್ನು ಕೇವಲ ಅಹಿಂಸೆಯೊಂದಿಗೆ ಎದುರಿಸಬೇಕು ಹಾಗೂ ಪಾತಕ್‌ನನ್ನು ಕೆಲಸದಿಂದ ತೆಗೆದು ಹಾಕಿದರೆ ಅದು ಅವನ ಹಾಗು ಅವನ ಮನೆಯವರ ಮೇಲೆ ನಡೆಯುವ ಹಿಂಸಾಚಾರವಾದುತು... ಎಂಬ ಹೇಳಿಕೆಯೂ.

   ಅಣ್ಣಾನವರು ತಮ್ಮ ಕೆಲ ಹೇಳಿಕೆಗಳಿಂದ  ತಮ್ಮ ವ್ಯಕ್ತಿತ್ವಕ್ಕೆ ಒಂದಿಷ್ಟು ಕಪ್ಪು ಬಣ್ಣ ಮೆತ್ತಿಕೊಂಡರು. ಮತ- ಮದ್ಯ- ಹಿಂಸೆ...  ಹಿಸ್ಸಾರ್ ಉಪಚುನಾವಣೆಯಲ್ಲಿ ಅವರು ಕಾಂಗ್ರೆಸ್ಸಿಗೆ ಮತಹಾಕಬಾರದೆಂದು ಕರೆಕೊಟ್ಟರು... ಯಾಕಪ್ಪಾ? ನಿಮ್ಮ ಇಗೋಗೆ ಯು ಪಿ ಎಸರಕಾರ ಪೆಟ್ಟುಕೊಟ್ಟಿದೆಯೆಂದೆ! ಅಣ್ಣಾ ಸರಿಯಾಗಿ ಯೋಚಿಸಿ.. ನೀವು ಎದೆತಟ್ಟಿ ಹೇಳಿ ? ಯಾವ ಪಕ್ಷ ಜನಹಿತಕ್ಕೋಸ್ಕರ ಕೆಲಸ ಮಾಡಿದೆದೆಯೆಂದು? ಅಲ್ಲ ಈಗ ನಮ್ಮ ಕರ್ನಾಟಕದಲ್ಲೂ ಬಳ್ಳಾರಿ ಚುನಾವಣೆ ಆಯಿತಲ್ವ! ನೀವು ಯಾವ ಪಕ್ಷಕ್ಕೆ ಓಟು ಹಾಕಬಹುದೆಂದೋ... ಹಾಕಬಾರದೆಂದೋ ಹೇಳಿಲ್ಲಾ????? ಯಾಕಪ್ಪಾ! ಮೊನ್ನೆಯ ಉದಯವಾಣಿಯ ರಾಜಾಂಗಣ ಅಂಕಣದಲ್ಲಿ ಅರಕೆರೆ ಜಯರಾಮ್ ಇದನ್ನು ಪ್ರಸ್ತಾವಿಸಿದರು... ನನಗನ್ನಿಸುತ್ತೇ ಅವರಿಗೆ ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಬಾಜಪದ ಮತ್ತು ರೆಡ್ಡಿಗಳ ಕುಸ್ತಿಯ ಬಗ್ಗೆ ಏನೂ ಗೊತ್ತಿರಲಿಕ್ಕಿಲ್ಲವೆಂದು.. ಅವರ ಗಮನವನ್ನೆಲ್ಲಾ ಯು ಪಿ ಎ ಸರಕಾರವೇ ಸೆಳೆದಿದೆ.
ಮದ್ಯಪಾನ ಮಾಡುವವರನ್ನು ಹೊಡೆದು ತಿದ್ದಬೇಕೆಂದು ಕರೆಕೊಟ್ಟರು.. ಅಲ್ರಿ ಎಷ್ಟು ಜನರನ್ನಂತ ಹೊಡೆಯಬಹುದು? ಹೋಗಲಿ ಕುಡುಕ ಗಂಡನ್ನ ಅವನ ಹೆಂಡತಿಯೇ ಹೊಡೆದಳೆಂದು ಕೊಳ್ಳುವ... ಅವನು ಬಿಡುತ್ತಾನೆಯೇ! ಇಬ್ಬರೂ ಹೊಡಕೊಂಡು ಸತ್ತ ಮೇಲೆ ದುಃಖ ಮರೆಯಲು ಇವರ ಮಕ್ಕಳು ಕುಡಿದು ಜಗಳ ಮಾಡಿಕೊಂಡು ಯಮಲೋಕದ ಹಾದಿ ಹಿಡಿಯುತ್ತಾರಂತೆ! ಅಯ್ಯೋ ಇದೆಂತಹ ಕಲ್ಪನೆ! ಬಡಿ ಹೊಡಿ ಎನ್ನುವುದು ಎಂತಹ ಬಾಲಿಶ  ಹೇಳಿಕೆಯಲ್ಲವೆ? ಅದೂ  ನಮ್ಮ ಕಾಲದ ಗಾಂಧಿಯವರಿಂದ! ಮೂರನೆಯ ವಿಷಯವನ್ನು ಈಗಾಲೇ ಪ್ರಸ್ತಾವಿಸಿದ್ದೇನೆ.

    ಹೇಗೂ ಕಂಠಮಟ್ಟ ಚರ್ಚೆಯಲ್ಲಿ ಮುಳುಗಿದ್ದೇನೆ... ಇನ್ನೂ ಒಂದಿಷ್ಟು ನನ್ನ ಮನದಲ್ಲಿದ್ದುದನ್ನು ಹೇಳಿಕೊಂಡು ನಿರಾಳವಾಗಲು ಯತ್ನಿಸುತ್ತೇನೆ.  ಈ ಲೇಖನ ಬರೆದ ಮೇಲೆ ಸಂಪದದಲ್ಲಿ  ಸ್ವಲ್ಪ ಖಾರ ಪ್ರತಿಕ್ರಿಯೆ ಸಿಕ್ಕಿತು... ಹೆಚ್ಚಿನವರಿಗೆ ನಾನು ಅಣ್ಣಾ ಅವರ ವಿರುದ್ಧವಾಗಿ ಬರೆದದ್ದು ಹಿಡಿಸಲಿಲ್ಲ. ಹಾಗೆ ನೋಡಿದರೆ ಬಹುಶಃ ಹೆಚ್ಚಿನವರು ಶರದ್ ಪವಾರರ ಕಪಾಳ ಮೋಕ್ಷ ಪ್ರಸಂಗವನ್ನು ಬಹಳ ಆಸ್ವಾದಿಸಿದರು... ಫೇಸ್‌ಬುಕ್ಕಿನಲ್ಲಿ ಈ ವಿಷಯವನ್ನು ಮತ್ತಷ್ಟು ರೋಚಕವನ್ನಾಗಿ ಮಾಡಿ ಅದರ್ ವಿಡಿಯೋಗಳನ್ನು ಹಾಕಿ ಆನಂದ ಪಟ್ಟರು.  ರಾಜಕಾರಣಿಗಳು ಖಂಡಿತ ಶಿಕ್ಷಾರ್ಹರು ಅದರಲ್ಲೂ ಪವಾರರು ಕೃಷಿ ಮಂತ್ರಿಯಾಗಿ  ಮಾಡಿದ್ದೇನೆಂದು ಹುಡುಕಿದರೆ, ಅನೇಕ ಆತ್ಮಹತ್ಯೆಗಳ ಪಟ್ಟಿ ಮಾತ್ರ ಕೈಗೆ ಸಿಗುವುದು. ಆದರು ನಾವು ಮೂರ್ಖರು, ಇನ್ನೂ ಅವರನ್ನು ಪಟ್ಟದಿಂದ ಇಳಿಸುವ ಮನಸ್ಸು ಮಾಡಿಲ್ಲ ಅಂದಮೇಲೆ ನಡೆದಲ್ಲಾ ವಿದ್ಯಮಾನಗಳಿಗೆ ಕೇವಲ ರಾಜಕಾರಣಿಗಳನ್ನು ದೂರುವುದು ಸರಿಯೇ?  ಹೋಗಲಿ ಈ ನಿಟ್ಟಿನಲ್ಲಿ ಮಾಧ್ಯಮಗಳು ಹೇಗೆ ಜನರಿಗೆ ಮಾಹಿತಿ ನೀಡುತ್ತಿವೆ! ಅದರಲ್ಲಿ ಜೊಳ್ಳು ಎಷ್ಟು ಎಂದು ತಿಳಿಯುವುದು ಹೇಗೆ?  ಪ್ರತಿಯೊಂದಕ್ಕೂ ಸರ್ಕಾರವನ್ನು ಹೊಣೆ ಮಾಡುವ ಮೊದಲು ನಮ್ಮನ್ನು ತಿದ್ದಿಕೊಳ್ಳುವ ಕೆಲಸ ಆಗಬೇಕಾಗಿದೆ.

    ಕೆಲವೊಂದು ವಿಷಯವನ್ನು ನೀವೆಲ್ಲಾ ಗಮನಿಸಿದ್ದಿರೋ ಇಲ್ಲವೋ ಎಂದು ತಿಳಿಯದು... ಬೆಲೆ ಏರಿಕೆಯಾಗುತ್ತಿದೆ ಎಂದು ಎಲ್ಲರೂ ಲಭೋ ಲಭೋ ಎಂದು ಬಾಯಿ ಬಾಯಿ ಬಡಬಡಿಸುತ್ತಿದ್ದಾರೆ.. ಆದರೆ ಈ ದಿಕ್ಕಿನಲ್ಲಿ ತಾವೇನು ಮಾಡಿ ಪರಿಸ್ಥಿತಿಯನ್ನು ಸುಧಾರಿಸಬಹುದೆಂದು ಯಾರೂ ಯೋಚಿಸಿಲ್ಲವಾ? ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆಯಾದಷ್ಟು ವಾಹನಗಳನ್ನು ಕೊಳ್ಳುವವರ ಸಂಖ್ಯೆಯೂ ಏರುತ್ತಿಲ್ಲವಾ? ಇಗೀಗ ಪ್ರತಿಯೊಂದು ಮನೆಯಲ್ಲಿ ನಾವಿಬ್ಬರು ನಮಗಿಬ್ಬರು ಎಂಬಂತೆ ಪ್ರತಿಯೊಂದು ಸದಸ್ಯನಿಗೂ ಸ್ಕೂಟರ್, ಬೈಕ್.... ಮತ್ತೊಂದು ಎಲ್ಲರಿಗೂ ಒಟ್ಟಿಗೆ ತಿರುಗಲು ಕಾರ್... ಹಾಗೆಯೇ ಮುಂಚಿನ ಹಳೆಯ ಫ್ರಿಜ್ ಟೀವಿ ಗಳೆಲ್ಲಾ ಎಕ್ಸ್‌ಚೇಂಜ್‌ನಲ್ಲಿ ಕೊಟ್ಟು ಬದಲಾಗಿ ಮತ್ತೊಂದಿಷ್ಟು ಕೊಟ್ಟು  ಹೊಸದಾಗಿ ಮನೆಯನ್ನು ಅಲಂಕರಿಸಿವೆ... ಇಷ್ಟೆಲ್ಲಾ ಇದ್ದು ಮನೆಯ ಉಳಿದ ಫರ್ನಿಚರ್ ಹಳೆಯದಿಡುವುದೇ... ಅದಕ್ಕೂ ಲಕ್ಷ ಸುರಿದು ತಂದಾಯಿತು... ಇದು ಅತ್ತ ಶ್ರೀಮಂತರೂ ಅಲ್ಲದ ಇತ್ತ ಬಡವರು ಎಂದು ಗುರುತಿಸಲಾಗದ ಮಧ್ಯಮ ವರ್ಗದ ಕತೆ. ಹಣ ಎಲ್ಲಿಂದ ಅಂತಿರಾ? ಇಲ್ವೆ ನಮ್ಮ ಬ್ಯಾಂಕುಗಳು... ಕಾಲು ಹಿಡಿದು ಡಿಬಿಟ್ ಕಾರ್ಡ್ ಕೊಡುತ್ತವೆ.. ಮತ್ತೆ ವಸೂಲಿ ಮಾಡಲು ರೌಡಿಗಳನ್ನು ಕಳಿಸುತ್ತವೆ.  ಮತ್ತು ಕೆಲವರು ಲಂಚ ಪಡಕೊಂಡು ಸಂಸಾರದ ಗಮ್ಮತ್ತಿಗೆ ಹಣ ಸುರಿಸುತ್ತಾರೆ. ಮೊದಮೊದಲು ಸ್ವಲ್ಪ ದಾಕ್ಷಿಣ್ಯ ಮಾಡಿಕೊಂಡರೂ ಕಾಲಕ್ರಮೇಣ ಅದು ಅಭ್ಯಾಸವಾಗಿ ಹೋಗುತ್ತದೆ.  ಇದೊಂದು ಕತೆಯಾದರೆ ಮತ್ತೊಂದು ಲಾಟರಿ ಹಾಗು ಶೇರ್ ಮೇಲೆ ಹಣಹಾಕುತ್ತಿರುವ ಗುಂಪಿನವರದು. ಇವರ ಮನೆಯವರ ಗತಿ ಗೋವಿಂದ... ಸಾಲದ ಮೇಲೆ ಮತ್ತಿಷ್ಟು ಸಾಲ.... ಇನ್ನು ಸಮಾರಂಭಗಳ ವೈಭೋಗ.. ಒಬ್ಬರು ಮಾಡಿದರೆಂದು ಮತ್ತೊಬ್ಬರು.. ನನಗೆ ಹುಟ್ಟು ಹಬ್ಬಗಳನ್ನು ಆಚರಿಸಿದ ನೆನಪೇ ಇಲ್ಲ. ಆದರೆ  ಈ ಬರ್ತಡೆ ಪಾರ್ಟಿಗಳ ವೈಭವ ನೋಡಿ ದಂಗಾಗಿ ಹೋಗಿದ್ದೇನೆ.. ಕಡಿಮೆಯಂದರೂ ೨೫,೦೦೦. ಅಯ್ಯಪ್ಪಾ ಏನು ಶೃಂಗಾರ...

     ಪಶ್ಚಿಮ ದೇಶದ ಕೊಳ್ಳುಬಾಕತನವನ್ನು ಅನುಸರಿಸುತ್ತಿದ್ದೇವೆ... ಮಾಲ್‌ಗಳಲ್ಲಿ ನಡೆಯುತ್ತಿರುವ ವ್ಯಾಪಾರ ನೋಡಿದವರು ನಮ್ಮ ದೇಶದಲ್ಲಿ ಹೊಟ್ಟೆ ಬಟ್ಟೆಗಿಲ್ಲದೆ ಸಾಯುವವರೂ ಇದ್ದಾರೆಂದು ನಂಬುವ ಹಾಗಿಲ್ಲ.. ಹಾಗೆ ನೋಡಿದರೆ  ಇಷ್ಟರ ವರೆಗೆ ನನಗೆ ಅಂತಹ ಕಡು ಬಡವನ ಭೇಟಿಯಾಗಿಲ್ಲ... ಬರೇ ಪತ್ರಿಕೆಗಳ ಅಂಕೆ ಸಂಖ್ಯೆ ನೋಡಿಯೇ ಇದರ ಬಗ್ಗೆ ಅರಿವು ಇರುವುದು.


                       ಯಾವುದೇ ವಸ್ತುವಿಗೆ ಬೆಲೆ ಬರುವುದು ಅದರ ಬೇಡಿಕೆಯ ಮೇಲೆ ಹೊಂದಿಕೊಂಡು.  ಅಲ್ಲದೇ ಆ ವಸ್ತು ಮಾರುಕಟ್ಟೆಯಲ್ಲಿ ಸರಿಯಾಗಿ ಸಿಗದೇ ಹೋದರೆ ಅದರ ಬೆಲೆ ಮತ್ತಷ್ಟು ಏರುವುದು. ನಾವೆಲ್ಲಾ ನೋಡಿದ ಈರುಳ್ಳಿ, ಟೊಮೆಟೋಗಳ ಬೆಲೆ ಏರಿಕೆಯ ಹಾರಾಟ ಯಾಕಾಯಿತು ಎಂದು ಯಾರಾದರೂ ಆಲೋಚನೆ ಮಾಡಿದ್ದಿರಾ? ಸ್ವಲ್ಪ ಸಮಯ ಇವೆಲ್ಲಾ ಇಲ್ಲದೆ ಹೊಟ್ಟೆಗೆ ಏನೂ ಸೇರುವುದಿಲ್ಲವಾ!  ಅಂತಸ್ತಿನ ಭೇದವಿಲ್ಲದೆ ಜನರು ಮುಗಿಲು ಬಿದ್ದು ಈ ವಸ್ತುಗಳ ವ್ಯಾಪಾರ ಮಾಡಿದರು.. ಬೆಲೆ ಏರುತ್ತಲೇ ಹೋಯಿತು...ಜನ ಸರಕಾರಕ್ಕೆ ಶಾಪ ಹಾಕುತ್ತಲೇ ಮಾರ್ಕೆಟಿಗೆ ಓಡಿದರು... ಮತ್ತೆ ಟೊಮೆಟೋ ತರುವುದಕ್ಕೆ.. ನಗೆ ಬರುತ್ತಿತ್ತು ಎನಗೆ. ಪೆಟ್ರೋಲ್ ಬೆಲೆ ಏರುತ್ತಲೇ ಇದೆ ( ಈ ಮಧ್ಯ ೧, ೨ ಕಮ್ಮಿ ಮಾಡಿದೆ ಇಂದು ಸುದ್ದಿ ಓದಿದೆ)  ಸರಕಾರಕ್ಕೆ ಸಹಸ್ರನಾಮ ಮಾಡುತ್ತಲೇ ಜನ ವಾಹನಗಳನ್ನು ಕೊಳ್ಳುತ್ತಲೇ ಇದ್ದಾರೆ!  ವಾಹನಗಳನ್ನು ಓಡಿಸಿ ರಾಲಿ ಮಾಡಿ ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ!! ಎಂತಹ ವಿಪರ್ಯಾಸ!!!!
  ಎಲ್ಲಿಂದ ಎಲ್ಲಿಗೆ ಸಂಬಂಧ ಅನ್ನು ಕೊಳ್ಳಬೇಡಿ... ಇವೆಲ್ಲಕ್ಕೂ ಸೂಕ್ಷ್ಮವಾಗಿ ಹೊಂದಿಕೊಂಡಿವೆ. ನಾನೇನೂ ರಾಜಕಾರಣಿಗಳು ಒಳ್ಳೆಯವರು ಎಂದು ಸಮರ್ಥಿಸುವುದಿಲ್ಲ... 
  ಅದರೆ  ಪ್ರತಿಯೊಂದಕ್ಕೂ ರಾಜಕಾರಣಿಯೇ ಕಾರಣ ಎಂದು ಬೆರಳು ತೋರುವುದಕ್ಕಿಂತ ಮೊದಲು  ಆತ್ಮ ವಿಮರ್ಶೆ ಮಾಡಿಕೊಳ್ಳುವ ಅಗತ್ಯ ಎದ್ದು ಕಾಣುವುದಿಲ್ಲವೇ? ಈ ರಾಜಕಾರಣಿಗಳು ಯಾರು? ನಮ್ಮ ಪ್ರತಿನಿಧಿಗಳಲ್ಲವೆ? ನಾವೇ ಇವರನ್ನು ಆಯ್ಕೆ ಮಾಡಿ  ಪಟ್ಟದ ಮೇಲೆ ಕೂರಿಸಿದ್ದೇವೆ. ಅವರು ತಪ್ಪು ಮಾಡಿದಾಗ ಅವರನ್ನು ಹಿಂದಕೆ ಕರೆಸಿಕೊಳ್ಳುವ ಅಧಿಕಾರವೂ ನಮಗಿರುವುದು. ಆದರೂ ಅವರ ತಪ್ಪು ಹುಡುಕುತ್ತಲೇ ಮತ್ತೆ ಮತ್ತೆ ಅವರನ್ನೇ ಏಕೆ ಆರಿಸುತ್ತೇವೆ...
    ಲಂಚ ಕೊಟ್ಟು ಅದರ ರುಚಿ ತೋರಿಸಿದ್ದು ನಾವೇ ತಾನೆ...ನಮ್ಮಿಂದ ಅನೇಕ ತಪ್ಪುಗಳಾಗಿವೆ...ಆಗುತ್ತಲೇ ಇವೆ. ಯಾರು ಯಾರನ್ನು  ತಿದ್ದುವುದು?  
         ಆದರೆ ನಮ್ಮಲ್ಲಿರುವ ಹುಳುಕನ್ನು ನಾವು ತಿದ್ದಿಕೊಳ್ಳುವುದು ಯಾವಾಗ... ಅಲ್ಲದೆ ಈ ಭ್ರಷ್ಟಾಚಾರಕ್ಕೆ ನಮ್ಮ ಸಾವಿರಾರು ಕೋಟಿಗಳ ಒಡೆಯರಾದ ಉದ್ಯಮಪತಿಗಳು ಕುಮ್ಮುಕ್ಕು ಕೊಡುವುದು ಈಗೇನೂ ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ.. ಅಲ್ಲದೇ ಆಪಾದನೆ ಹೊತ್ತ, ಜೈಲಿನಲ್ಲಿರುವ ಕ್ರಿಮಿನಲ್‍ಗಳು ಚುನಾವಣೆಗೆ  ನಿಂತು ಗೆದ್ದು ಬರುತ್ತಾರಲ್ಲ! ಯಾರು ಹೊಣೆ ಇದಕ್ಕೆ!  ಬಳ್ಳಾರಿಯಲ್ಲಿ ರಾಮುಲು ಕೇವಲ ಪಾರ್ಟಿ ಬದಲಿಸಿ ಆರಾಮವಾಗಿ ಗೆದ್ದು ಬಂದರು. ಎಲ್ಲಿಯ ತನಕ ಜನರು ವಿಚಾರ ಹೀನರಾಗಿರುತ್ತಾರೋ  ಅಲ್ಲಿಯ ತನಕ ಯಾವ ತಪರಾಕಿಯೂ ನಮ್ಮ ರಾಜಕಾರಣಿಗಳನ್ನು ಬದಲಾಯಿಸುವುದಿಲ್ಲ.. ನಮ್ಮ ಮಾಧ್ಯಮಗಳು, ಬುದ್ಧಿಜೀವಿಗಳು ಜನರನ್ನು ಚಿಂತನೆ ಹಚ್ಚುವ ಕೆಲಸ ತೊಡಗಬೇಕು. ಕೈ ಕೈ ಮಿಲಾಯಿಸಿ, ಬಡೆದು ಹೊಡೆದು ತಿದ್ದುವುದಕ್ಕಿಂತ ನಮ್ಮ  ಗಾಂಧಿ ತಾತನ ಅಹಿಂಸಾ ಮಾರ್ಗ ನಮ್ಮ ಆಯ್ಕೆಯಾಗಬೇಕು... ಹಜಾರೆಯವರೇ,  ನೀವು ಈ ನಿಟ್ಟಿನಲ್ಲಿ ನಮ್ಮ ದೇಶದ ಯುವ ಜನತೆಗೆ ದಾರಿ ತೋರಿ.    ನಿಮ್ಮ ಕೆಲ ಹೇಳಿಕೆ ಹೊರತು ಈಗಲೂ ನೀವು ನನ್ನ ಮೆಚ್ಚಿನ ನಾಯಕರು. ನಮ್ಮ ದೇಶಕ್ಕೆ, ಯುವಕರಿಗೆ ಹೊಸ ಬೆಳಕು ತೋರಿಸಿದಿರಿ, ಬೇಸತ್ತ ಜನರಿಗೆ ಬದಲಾವಣೆಯ ರುಚಿ ತೋರಿಸಿದಿರಿ. ಆದರೆ ಅಹಿಂಸೆಯೇ ನಿಮ್ಮ ಆಯುಧವಾಗಿರಬೇಕು ಎಂಬುದು ನನ್ನ ಆಶಯ. 

       

       

               ನನ್ನ ಬರಹವನ್ನು ಮುಕ್ತಾಯಗೊಳಿಸುವ ಮೊದಲು ಎರಡು ವಿಷಯಗಳುನ್ನು ಪ್ರಸ್ತಾವಿಸಲು ಬಯಸುತ್ತೇನೆ. ಒಂದು ರೋಚಕ- ರೋಚರ, ಮತ್ತೊಂದು ಸುಬ್ರಹ್ಮಣ್ಯದಲ್ಲಿ ನಡೆದ ಮಡೆ ಸ್ನಾನ. ಕನ್ನಡ ಪ್ರಭ ಪತ್ರಿಕೆಯ  ಮುದ್ರಾ ರಾಕ್ಷಸನ ಕಾರಬಾರದಿಂದ ಆದ ತಪ್ಪು ಈಗಾಗಲೇ ಎಲ್ಲರ ಅರಿವಿಗೆ ಬಂದಿರುವುದು. ಅದರ ಬಗ್ಗೆ ಫೇಸ್ ಬುಕ್ಕಿನಲ್ಲಿ ಭಾರಿ ಚರ್ಚೆಯೂ ನಡೆದಿತ್ತು. ವಿಶ್ವೇಶ ಭಟ್ಟರು ಕ್ಷಮೆ ಕೇಳಿದ ಮೇಲೂ ಅದರ ಬಗ್ಗೆ ಸ್ವಲ್ಪ ಖಾರವಾಗಿ ಮಾತುಕತೆ ಆಗಿತ್ತು... ತಪ್ಪು ಆಗುವುದು ಸಹ. ನಾವೆಲ್ಲರೂ ಬಹುಶಃ ಪ್ರತಿದಿನ ತಪ್ಪು ಮಾಡುವರೇ! ಅಷ್ಟೇ ಅಲ್ಲ ಬೇರೆಯವರ ತಪ್ಪನ್ನು ಎತ್ತಿ ತೋರಿಸುವುದು ಎಲ್ಲರಿಗೂ ಸುಲಭ ಸಹ. ಆದರೆ ನಾನು ಹಜಾರೆಯವರ ತಪ್ಪು ಎತ್ತಿ ಹಿಡಿದದ್ದು ಕೇವಲ ದೇಶದ, ಯುವ ಜನತೆಯ ಹಿತಕ್ಕೋಸ್ಕರ ಹೊರತು ಬೇರೆ ಮತ್ತ್ಯಾಕೂ ಅಲ್ಲ.   ವಿಶ್ವೇಶರ ಭಟ್ ಸಹ ವಿಜಯಕರ್ನಾಟಕದ ಏಳಿಗೆಗೆ ಕಾರಣರಾದ ಸಂಗತಿ ಎಲ್ಲರಿಗೂ ಅರಿವಿರುವುದು. ಆದರೂ ಅವರ ನಾಯಕತ್ವದಲ್ಲಿ ನಡೆಯುವ ಪತ್ರಿಕೆಯ  ಕಣ್ತಪ್ಪಿ ನಡೆದ ಮುದ್ರಣ ದೋಷ ಹೇಗೆ ರೋಚಕ ಸಂಗತಿಯಾಗಿ ಬದಲಾಯ್ತು ಅಲ್ಲ.  
    
           ಮತ್ತೊಂದು ಸುಬ್ರಮಣ್ಯದಲ್ಲಿ ನಡೆದ ಮಡೆ ಸ್ನಾನ... ಇದೂ ಹೇಗೂ ಅನೇಕ ಲೇಖನಗಳಿಗೆ ಪ್ರೇರಕವಾಯಿತು... ಕೆಲವರಿಗೆ ಇದು ಬ್ರಾಹ್ಮಣರ ಮೇಲೆ ಗೂಬೆ ಕೂರಿಸಲು ಒಂದು ನೆಪವಾಯಿತು. ಮತ್ತೆ ಕೆಲವರು ಮೂಢನಂಬಿಕೆ ಎಂದು ಜರಿದರು.  ಹೆಗ್ಗಡೆಯವರ ಪತ್ರಿಕಾ ಹೇಳಿಕೆ ನೋಡಿ ಆಶ್ಚರ್ಯವಾಯಿತು.  ದೊಡ್ಡವರೆಂದು ತಿಳಿದು ಕೊಳ್ಳುವ ಜನ ಕೆಲವೊಮ್ಮೆ ಎಷ್ಟು ಸಣ್ಣವರಾಗುತ್ತಾರಲ್ಲ?  
      ಈ ಲೇಖನದ ಆಶಯ ತಮಗೆಲ್ಲರಿಗೂ ಅರ್ಥವಾದಿತೆಂಬ ಹಾರೈಕೆಯಿಂದ ಬರಹ ಮುಗಿಸುತ್ತೇನೆ!.
   












3 comments:

Diyen said...

On a recommendation from a friend of mine, I read this blog. There is no doubt a lot many things you have mentioned are very acceptable. But then politics itself is of scoundrels. And less said about democracy is better. Just one one simple example: You have mentioned that the elected members are ours; WE elected them. Whom do you refer this WE and OUR in a democracy practiced in this country? It is well known that hardly 20 to 25 percent of the total population elect the representative for the entire 100 percent And in that 20 to 25% a great majority vote for momentary meterial gain. Whom do you blame for this system of governance?

If you go deep into it, the very basis of a society, any existing society in the world, you will find that it is based on faulty system. This forum may not be appropreate for a lengthy discussion. So I stop here with a note that name and fame is more powerful evil to corrupt the mind than any material corruption.

Diyen said...

Maybe, I will write more in comments if and after I read some, if not all your articles

Diyen

Sheela Nayak said...

Diyen,
I gladly welcome ur comments.There is answer in ur Q itself. I still think same. We can not blame anyone when, we, the citizens of a democratic country always end up by electing the tainted persons...As per the saying once bitten twice shy- we never learned from history. So I argue that unless u change ur self u cannot change the society nor u can blame any one. The cleaning process should begin from the lower stage i.e from each home.

I think blogs can mirror our attitudes and this forum is too good for people like me who otherwise find it hard to express views.
My blog is a greatest platform for me where I display my art works, express my emotions when I come across certain things which excite my mind.
Thanks.
Sheela

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...