ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 September, 2011

ನನ್ನ ಗ್ಯಾಲರಿ ಕಣ್ರೀ....


   ಅಂತರ್ಜಾಲವು ಕಲೆಯ ಅನೇಕ ಆಯಾಮಗಳನ್ನು ತೋರಿಸಿತು. ವಾಹ್! ಮನುಷ್ಯ ತನ್ನ ಪುಟ್ಟ ಮಿದುಳಿನಿಂದ ಏನೆಲ್ಲಾ ಸಾಧಿಸಿದ್ದಾನೆ, ದುರಾದೃಷ್ಟವಶಾತ್ ಹಾಗೆಯೇ ಎಲ್ಲಾ  ಪ್ರಾಣಿ ಸಂಕುಲಕ್ಕೂ, ಪ್ರಕೃತಿಗೂ ಅಷ್ಟೆ ಹಾನಿಮಾಡುತ್ತಿದ್ದಾನೆ. ಅಲ್ಲೊಂದೆಡೆ ಇಲ್ಲೊಂದೆಡೆ ಜನಜಾಗ್ರತಿ ಕೆಲಸ ಆಗುತ್ತಿದೆಯಾದರೂ ಅದು ಆಮೆಗತಿಯಲ್ಲಿ ಸಾಗುತ್ತಿದೆ ಹಾಗೂ ಜನ ಸಾಮಾನ್ಯರನ್ನು ಮುಟ್ಟಬೇಕಾದ ರೀತಿಯಲ್ಲಿ ಮುಟ್ಟುತ್ತಿಲ್ಲ.
       

               ಏನೋ ಹೇಳಲು ಹೊರಡಿ ಬೇರೇನೋ ಬರೆಯುತ್ತಿದ್ದೇನೆ...ಯಾಕೋ ಏನೋ ಇತ್ತೀಚಿಗಂತೂ ಹೆಚ್ಚೇ ಇರಿಟೇಟ್ ಆಗುತ್ತಿದ್ದೇನೆ...ಪ್ರತಿದಿನ ಬೆಳಿಗ್ಗೆ ೬ ಗಂಟೆಗೆ ಹಾಲು ತರಲು ಹೋಗುವಾಗ ಮಾರ್ಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸುಟ ಕಸವನ್ನು ನೋಡಿದಾಗ, ಸಾರ್ವಜನಿಕ ನಳ್ಳಿಯಿಂದ ನೀರು ಸುರಿದು ಹೋಗುತ್ತಿರುವಾಗ, ಎರ್ರಾಬಿರ್ರೀಯಾಗಿ ವಾಹನವನ್ನು ಹೆಲ್ಮೆಟ್ ಹಾಕದೇ ಚಲಾಯಿಸುವುದೆಲ್ಲಾ ನೋಡಿದಾಗ ಜೀವಕ್ಕೆ ಸಂಕಟವಾಗುತ್ತದೆ. ಇರಲಿ, ಇದೆಲ್ಲಾ ಸುಧಾರಿಸಲು ಸಾಧ್ಯವೇ?

       ಕಲೆಯ ಬಗ್ಗೆ ಹೇಳುತ್ತಿದ್ದೆನಲ್ಲವೆ! ಹಾಕಬೇಕೋ ಬೇಡವೋ ಎಂದು ಗೊಂದಲದಲ್ಲಿದ್ದೇನೆ...ಇಷ್ಟೆಲ್ಲ ಹೇಳ್ಕೊಂಡಿದ್ದೇನೆ...ಮತ್ತೇಕೆ ಈಗ ಸಂಕೋಚ ಎಂದು ಓದಿದವರು ಅಂದ್ಕೊಳ್ಳಬಹುದು. ಅದೂ ಹೌದು, ಆದರೆ ಹಿಂದೆ ಬ್ಲಾಗಿಗೆ ಭೇಟಿಯಾಗುವವರ ಸಂಖ್ಯೆಯೂ ಅಷ್ಟಿರಲಿಲ್ಲ..ಹಾಗಾಗಿ ಒಂದು ರೀತಿಯಲ್ಲಿ ಸ್ವಗತದಲ್ಲಿ ಮಾತನಾಡಿಕೊಳ್ಳುತ್ತಿದ್ದೆ ಎನ್ನಬಹುದು. ಈಗ ಹಾಗಲ್ಲ....ನಿಧಾನವಾಗಿ ನನ್ನ ಬ್ಲಾಗ್ ಗೆ ಭೇಟಿಯಾಗುವ ಬಂಧುಗಳ ಎಣಿಕೆ ಹೆಚ್ಚುತ್ತಿದೆ...  ಒಂದು ರೌಂಡು ಹಾಕೊಂಡು ಹೋಗ್ತಾರಪ್ಪ...ಏನನಿಸುತ್ತೋ ಗೊತ್ತಿಲ್ಲ!!!
             ಅಬ್ಬಾ! ಈ ಬ್ಲಾಗ್ ಲೋಕದಲ್ಲಿ ಪ್ರವೇಶಿಸಿದರೆ ಸಾಕು ತಲೆ ತಿರುಗಿದಂತಾಗುತ್ತದೆ..ಅದರಲ್ಲೂ ಕನ್ನಡದಲ್ಲೂ ಬರೆಯುವವರ ಬಳಗವೂ ದೊಡ್ಡದಾಗಿಯೇ ಇದೆ.( ಅದರೆ ತಮಿಳು, ತೆಲುಗು ಭಾಷೆಯಲ್ಲಿ ಬರೆಯುವವರಿಗಿಂತ ಕಡಿಮೆಯಿದೆಯೆಂದು ಓದಿದ ನೆನಪು.) ಅದರಲ್ಲೂ ವಿವಿಧತೆ...ಅಂತೂ ಈ ಬ್ಲಾಗ್ ಲೋಕದಲ್ಲಿ ಎಲ್ಲಾ ವಿಷಯದಲ್ಲಿ ಮಾಹಿತಿ ಒಂದು ಕ್ಲಿಕ್ ನಲ್ಲಿ ಲಭ್ಯ!

ವಾಸ್ತುವಿಗೋಸ್ಕರ ಈ ಗಾಜಿನ ( ಸುರತ್ಕಲಿನ ಎನ್ ಐ ಟಿ ಕೆಯ ಪ್ರಯೋಗಶಾಲೆಯಿಂದ ಪಡೆದದಂತೆ) ಭರಣಿಯನ್ನು ಮನೆಯಲ್ಲಿ ಇಡುವುದಕ್ಕೆ ಸಲಹೆ ಪಡೆದುಕೊಂಡ ಆಂಧ್ರದ ದಂಪತಿಗಳ ಬೇಡಿಕೆಯಂತ ಇದರಲ್ಲಿ ಫೆವಿಕ್ರಿಲ್ ಕಂಪನಿಯ ಶಿಲ್ಪಕಾರನಿಂದ ನನ್ನ ಕಲ್ಪನೆಯಂತೆ ಮಾಡಿದ್ದು! 

ಆವೆ ಮಣ್ಣಲ್ಲಿ ಮೂಡಿ ಬಂದ ಗಣಪ. ಇದೇ ಮೊದಲ ಬಾರಿಗೆ ಆವೆ ಮಣ್ಣನಿಂದ ರಚಿಸಿದ್ದು.

ಗಾಜಿನ ಬಾಟ್ಲಿಯಲ್ಲಿ ಮೂಡಿ ಬಂದ ಲಿಲ್ಲಿ ಹೂವುಗಳು. ಇಂಟರ್ನೆಟನಿಂದ ಎರವಲು ಪಡಕೊಂಡ ಐಡಿಯ!

ಆವೆ ಮಣ್ಣಿನ ಗಣ್ಣು!! ನನ್ನ ಮಗಳು ವಿನಾಯಕನನ್ನು ಹಾಗೆಯೆ ಸಂಭೋದಿಸುವುದು...ಗಣಪ ಅವಳ ಗೆಳೆಯನಂತೆ!

ಇದೆಲ್ಲಾ ನನ್ನ ಕ್ಯಾಂಪಿನ ಮಕ್ಕಳಿಗೋಸ್ಕರ ಮಾಡಿದ್ದ ಮೊಡೆಲ್ ಗಳು!!

ಅ ಒಂಟೆಯ ರಚನೆ ಮಗನದು...ಅದೂ ಸಹ ಮೊದಲನೆಯ ಕೃತಿ! ಬಹಳ ಏಕಾಗ್ರತಿಯಿಂದ ಮಾಡಿದ್ದ...ಎಷ್ಟು ಸಲ ಸಲ ಬಿರುಕು ಬಿಟ್ಟರೂ ಮತ್ತೆ ಮತ್ತೆ ತಾಳ್ಮೆಯಿಂದ ಅದಕ್ಕೆ ನೀರಿನ ಪಸೆಹಾಕಿ ಮಾಡುತ್ತಿದ್ದ....ಬಹುಶಃ ಇಂಜಿನಿಯರಿಂಗ್ ಕಲಿಯಲು ಹೋಗದಿದ್ದರೆ ಖಂಡಿತ ಒಂದು ಉತ್ತಮ ಕಲಾವಿದನಾಗುತ್ತಿದ್ದ.( ಕಲೆಯ ಅ ಆ ಇ ಕಲಿತದ್ದನ್ನು ಅವನು ತನ್ನ ಈಗಿನ ವಿದ್ಯಾಭ್ಯಾಸದಲ್ಲಿ ಸಂಪೂರ್ಣವಾಗಿ ಉಪಯೋಗಿಸುತ್ತಿದ್ದಾನೆ. ಕಾಲೇಜಿನ ವೆಬ್ ಸೈಟ್ ತಯಾರಿಸುವ ಹೊಣೆ ಹೊತ್ತು ಅದನ್ನು ಸಮರ್ಥವಾಗಿ ನೆರವೇರಿದ್ದಾನೆ...ಅದರಲ್ಲೂ ಅವನು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರೋನ್ ವಿದ್ಯಾರ್ಥಿ.)


ಗ್ಲಾಸ್ ಪೈಂಟಿಂಗ್! ಹಿಂಬದಿಯಿಂದ ಬಣ್ಣ ಹಾಕಿರುವ ಕೃಷ್ಣ! ಚಿತ್ತಚೋರನ ಚಿತ್ರ ಪುಸ್ತಕದಿಂದ ನೋಡಿ ಕಾಪಿ ಮಾಡಿದ್ದು!

ಮೊದಲ ಮಣ್ಣಿನ ಕೃತಿಗೆ ಬಣ್ಣ ಹಾಕಿ ಮೆರುಗು ಕೊಟ್ಟಿದೆ.

ಶಿಲ್ಪಕಾರನಿಂದ ಮಾಡಿದ ಗಿಡ್ಡಮರದ ಒಂದು ಮಾದರಿ...ಇದಕ್ಕೆ ಒಳಗಿನಿಂದ ಒಂದು ಸರಿಗೆಯನ್ನು ಕೊಟ್ಟು ಭಾರವನ್ನು ಹಿಡಿಯುವಂತೆ ಮಾಡಿದ್ದೇನೆ. ಇದು ಸಹ ಮೊದಲ ಪ್ರಯೋಗ.





ಇವು ಸಹ ಶಿಲ್ಪಕಾರನಿಂದ ಮಾಡಿದ ಕೃತಿಗಳು...ಪುಸ್ತಕ ನೋಡಿ ತಯಾರಾದದ್ದು.


ಮತ್ತೆ ಶಿಲ್ಪಕಾರನಲ್ಲಿ ರಚಿಸಿದ್ದು....ಮಣ್ಣಿಗಿಂತ ಇವು ಮಾಡಲು ಸುಲಭ....ಬಿರುಕು ಬೀಳುವುದಿಲ್ಲ....ಆದರೆ ಬೇಗ ಗಟ್ಟಿಯಾಗುತ್ತದೆ....ಮತ್ತು ಬಹಳ ತಾಳ್ಮೆ ಬೇಡುತ್ತದೆ...

















ಗಾಜಿನ ಭರಣಿಯ ಮೇಲೆ ಮಾಡಿದ್ದ ಕಾಡುಹೂಗಳು...ಬಹಳ ಸಮಯ ಬೇಡಿತು....ಆದರೆ ಕೃತಿ ಮನಸ್ಸಿಗೆ ಬಹಳ ಮುದ ನೀಡಿತು....ಇದರಿಂದ ಅಗಲು ಬಹಳ ಕಷ್ಟವಾಯಿತಪ್ಪ!!!


ಅಂತರ್ಜಾಲದಿಂದ ಕಲಿತು ಮಾಡಿದ ಐಸ್ ಕ್ಯಾಂಡಲ್!





ಪೊಪ್ ಅಪ್ ಕಾರ್ಡ್ಸ್.....ಚಿಣ್ಣರಿಗೂ, ಹಿರಿಯರಿಗೂ ಮಾಡಲು ಸುಲಭ...ಹಾಗೂ ಖುಶಿಕೊಡುತ್ತದೆ...



ಗ್ಲಾಸ್ ಎಚ್ಚಿಂಗ್!!! ಇದೊಂದು ಬಹಳ ನಾಜೂಕಾದ...ಆದರೆ ಬಹಳ ಸುಂದರ ಕಲೆ....ಸಾಂಪಲ್ ಪೀಸ್ ಇದು...
    ಇದೇ ಲೋಕದಿಂದ ಕಲಿತು...ನನ್ನ ಅಸ್ತಿತ್ವವನ್ನು ಈ ಮೂಲಕ ಸಾರಲು,(ಪ್ರಚಾರ ಪಡೆಯಲು) ಕೆಲವು ಕಲಾಕೃತಿಗಳ ಚಿತ್ರ ಹಾಕಿದ್ದೇನೆ! ಸಹೃಯದರ ಪ್ರೋತ್ಸಾಹದ ನುಡಿಗಳಿಗೆ ಸದಾ ಸ್ವಾಗತ ಕೋರುತ್ತೇನೆ!  ಇದನ್ನೇ ಕಲಿಸುತ್ತ ಕಲಿಯುವುದೆನ್ನುವುದು....ಜನ್ಮ ಪೂರ್ತಿ ಕಲಿತರೂ ಮುಗಿಯುವುದಿಲ್ಲವಾದುದರಿಂದ ಮತ್ತೊಂದು ಜನ್ಮಕ್ಕೂ ಆಡ್ವಾನ್ಸಾಗಿ ಈಗಲೇ ಜಗನ್ಮೋಹನನಲ್ಲಿ ನನ್ನ ಬೇಡಿಕೆಯಿಟ್ಟಿದ್ದೇನೆ!!!!!

          ಹಾಂ ಮರೆತಿದ್ದೆ...ನಿಮಗೆ ಇಂತಹದೇನಾದ್ರು ಮಾಡಿಸ್ಬೇಕೆನಿಸಿದ್ರೆ.... ಅಭಿಪ್ರಾಯದಲ್ಲಿ ಹೇಳ್ಬಿಡ್ರಿ....ನಿಮ್ಮ ಇಮೈಲ್ ಐಡಿ ಕೊಟ್ರೆ ನಾನೇ ನಿಮ್ಮನ್ನು ಸಂಪರ್ಕಿಸುತ್ತೇನೆ..ಮತ್ತೆ ಸಿಗೋಣ!!!

18 September, 2011

ಕಲಿಸುತ್ತಾ ಕಲಿಯುವುದು -ಕ್ರಿಯೆ ಪ್ರಕ್ರಿಯೆ!!!



       ಮಕ್ಕಳಿಗೆ ಚಿತ್ರ ಕಲಿಸುವುದು ಕೂಡ ಒಂದು ಕಲೆಯೆಂದು ಈ ನಾಲ್ಕು ವರ್ಷಗಳ ಹಿಂದೆ ನನ್ನ ಅನುಭವಕ್ಕೆ ಬಂದಿತು. ಚಿತ್ರಕಲೆ ಅಪಾರ ತಾಳ್ಮೆ ಬೇಡುತ್ತದೆ... ಅದರಲ್ಲಿಯೂ ಮಕ್ಕಳಲ್ಲಿ ಆ ತಾಳ್ಮೆಯನ್ನು ನಿರೀಕ್ಷಿಸುವುದು ಬಹಳ ಕಷ್ಟ. ಅಷ್ಟಲ್ಲದೆ ಹೆಚ್ಚಿನ ಮಕ್ಕಳು ಮತ್ತವರ ಹೆತ್ತವರು ಬರುವಾಗಲೇ ಅಪಾರ ನಿರೀಕ್ಷೆಯನ್ನಿಟ್ಟುಕೊಂಡು ಬರುತ್ತಾರೆ. ಇನ್ನು ಕೆಲವರು ತಮ್ಮನ್ನು ಆರ್ಟಿಸ್ಟ್ ಎಂದೇ ಕರೆದುಕೊಳ್ಳುತ್ತಾರೆ. ಕೆಲವರಿಗೆ ಬಣ್ಣಹಚ್ಚಲು ಕೂಡ ಬರುತ್ತಿರಲಿಲ್ಲ, ಇನ್ನು ಕೆಲವರು ನಮಗೆ ವಾಟರ್ ಕಲರ್ ಮಾಡಲು ಕೊಡಿ ಎಂದೇ ಬೇಡಿಕೆ ಇಡುತ್ತಾರೆ, ಅಬ್ಬಬ್ಬ ಈ ಚಿಣ್ಣರ ಬೇಡಿಕೆಗಳ ಪಟ್ಟಿ ನೋಡಬೇಕು.... ಒಂದು ಪುಟಾಣಿ, ಕೇವಲ ೬ ವರ್ಷದವಳು....ಅವಳಂತೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಅಮ್ಮ ನನಗೆ ಕಪ್ಪೆ, ರಾಬಿಟ್(ಮೊಲ), ಹಾಗೂ ೪,೫ ಚಿತ್ರ ಮಾಡಲು ಹೇಳಿದ್ದಾರೆಂದಿತು... ವಿಚಾರಿಸಲಾಗಿ ಹೆತ್ತಮ್ಮ ತಾನೇನು ಹಾಗೆ ಹೇಳಿಲ್ಲ. ಅದೆಲ್ಲಾ ಅವಳದೇ ಯೋಜನೆ ಎಂದರು. ತಾಯಿ ಹೇಳಿದ್ದಾರೆಂದರೆ ನಾನು ಚಿತ್ರಮಾಡಿಕೊಡುತ್ತೇನಲ್ಲವೇ! ಕೆಲ ಹೆತ್ತವರು ಮಕ್ಕಳಿಗೆ ಮೊದಲೇ ತಾಕೀತು ಮಾಡಿರುತ್ತಾರೆ.. ಕಡಿಮೆ ಪಕ್ಷ ೨ ಚಿತ್ರವಾದರೂ ಮಾಡಬೇಕೆಂದು. ಏನು ಮೈಂಡ್ ಸೆಟ್? ಅಲ್ಲಾ ಪುಸ್ತಕ ತುಂಬಲು ಮಾಡುವುದಾ ಇಲ್ಲಾ,   ತಮ್ಮ ಕಲೆಯ ಗುಣ ಮಟ್ಟ ಹೆಚ್ಚಿಸುವುದಲಿಕ್ಕೆ ಕಲಿಯುವುದಾ!  ಅಂತು ಇವರಿಗೆ ಕಲಿಸುತ್ತ ನಾನು ಕಲಿಯುತ್ತಿದ್ದೇನೆ..

  ಬಿ. ಜಿ ಮೊಹಮ್ಮದರ ನೆನಪಾಗುತ್ತಿದೆ... ನನ್ನ ಗುರುಗಳು. ಕಲಿತದ್ದು ಕೇವಲ ೮,೯ ತಿಂಗಳು. ಆದರೆ ಅವರು ತೋರಿಸುತ್ತಿದ್ದ ತಾಳ್ಮೆ, ಅವರ  ಹಸನ್ಮುಖ ಈಗಲೂ ಕಣ್ಣೆದುರಿಗೆ ಕಾಣುತ್ತಿದೆ. ೨೦ ವರ್ಷಗಳಿಂದ ಮುಟ್ಟದೇ ಇದ್ದ ಬಣ್ಣ, ಕುಂಚ ಮತ್ತೆ ಕೈಗೆತ್ತಿಕೊಳ್ಳುತ್ತೇನೆಂದು ಅಂದುಕೊಂಡಿರಲಿಲ್ಲ... ಇದೊಂದು ನನ್ನ ಪಾಲಿಗೆ ಪವಾಡವೇಸರಿ. ಮತ್ತೆ ಬಣ್ಣದ ಬದುಕು ಪ್ರಾರಂಭ ಮಾಡಿದುದಲ್ಲದೆ, ಅದನ್ನು ಕಲಿಸುವ ಸೌಭಾಗ್ಯವೂ ನನ್ನ ಪಾಲಿಗೆ ಬಂದಿದೆ. ನನ್ನ ಮಗನು ಅವನ ೮ನೇ ವಯಸ್ಸಿನಿಂದ ಅನೇಕ ಚಿತ್ರ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು.. ಅವನ ಚಿತ್ರಗಳನ್ನು ನೋಡಿದ ಅನೇಕ ಹೆತ್ತವರು ಅವನ ಗುರುಗಳ ಬಗ್ಗೆ ವಿಚಾರಿಸಿ, ನಾನೆ ಕಲಿಸುವುದೆಂದು ತಿಳಿದು ನಾನು ತರಗತಿ ನಡೆಸುವೆನೋ ಎಂದು ವಿಚಾರಿಸುತ್ತಿದ್ದರಾದರೂ ನಾನು ಒಪ್ಪಿರಲಿಲ್ಲ... ನನಗೆ ನನ್ನ ಕಲೆಯ ಬಗ್ಗೆ ಭರವಸೆ ಇರಲಿಲ್ಲ. ಈ ಮಾತು ಸಾಧಾರಣ ೧೦, ೧೨ ವರ್ಷಗಳ ಹಿಂದಿನ ಮಾತು. ಆದರೆ ಈಗ ನನ್ನ ಮನೆ ಪಾಠತರಗತಿಯ ಮಕ್ಕಳು, ಹೆತ್ತವರು ಮನೆಯಲ್ಲಿದ್ದ ನನ್ನ, ನನ್ನ ಮಕ್ಕಳ ಪೈಂಟಿಂಗ್ ಗಳನ್ನು ನೋಡಿ ತರಗತಿ ನಡೆಸುವಂತೆ ಒತ್ತಡ ತಂದರು. ಕೊನೆಗೂ ಧೈರ್ಯ ಮಾಡಿಬಿಟ್ಟೆ.. ಕೇವಲ ೨ ಮಕ್ಕಳಿಂದ ಪ್ರಾರಂಭಗೊಂಡ ತರಗತಿ ಇಂದು ೨೦ ಮಕ್ಕಳಿಂದ ತುಂಬಿದೆ... ಇದರಿಂದ ಸ್ಫೂರ್ತಿ ಗೊಂಡು ಈಗ್ಗೆ ನಾಲ್ಕು ವರ್ಷಗಳಿಂದ ವರ್ಷಕ್ಕೆ ಎರಡು ಶಿಬಿರಗಳನ್ನು ನಡೆಸುತ್ತಿದ್ದೇನೆ..( ದಸರ ಮತ್ತು ಬೇಸಿಗೆ) ಬರಿ ಚಿತ್ರ ಮಾತ್ರವಲ್ಲದೆ  ಕರಕುಶಲ ಕಲೆಗಳ ಕೂಡ  ಉತ್ತಮವಾಗಿ ಹೆತ್ತವರ, ಮಕ್ಕಳ ಉತ್ತೇಜನದಿಂದ ನಡೆಯುತ್ತಿದೆ. ಅಲ್ಲದೆ ಹೊರಗಿನ ಕ್ಯಾಂಪ್ ನಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಕರೆಗಳು ಬರುತ್ತಿದೆ.  ಕೆಲವೊಂದು ಮಕ್ಕಳ ಚಿತ್ರಗಳನ್ನು ನನ್ನ ಬ್ಲಾಗ್ ನಲ್ಲಿ ಹಾಕಿ ಇದರ ಮೂಲಕ ನನಗೆ ಮಾರ್ಗದರ್ಶನ ಮಾಡಿದ ನನ್ನ ಗುರುಗಳಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ!






























ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...