ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 November, 2007

ಅಧ್ಯಾತ್ಮ ಲೋಕದಲ್ಲಿ ಕಂಡ ಅನುಭೂತಿ!

ಅಧ್ಯಾತ್ಮ ಲೋಕದಲ್ಲಿ ಕಂಡ ಅನುಭೂತಿ!

              ನಾನು ಬೆಳೆದ ವಾತಾವರಣವು ತುಂಬಾ ಭಕ್ತಿಮಯ ಅಥವಾ ಸಂಪ್ರದಾಯಮಯವಾಗಿತ್ತೆಂದೇ ಹೇಳಬಹುದು. ಹಾಗಾಗಿ ಪ್ರತಿದಿನ ಕೆಲವೊಂದು ಸ್ತೋತ್ರಗಳು ಮತ್ತು ಪ್ರಾರ್ಥನೆ, ಭಜನೆಗಳು ಕಡ್ಡಾಯವಾಗಿದ್ದವು. ಎಷ್ಟು ಅಭ್ಯಾಸವಾಗಿದೆಯೆಂದರೆ ಈಗಲೂ ಶ್ಲೋಕಗಳನ್ನು ಹೇಳಲಾಗದ ದಿನಗಳು ಅಪೂರ್ಣವೆನಿಸುತ್ತದೆ. ಆದರೆ ನಾವು ದೊಡ್ಡವರು ಹೇಳಿದಕ್ಕೆ ಎಲ್ಲವನ್ನೂ ಭಯದಿಂದ ಮಾಡುತ್ತಿದೆವು ಹೊರತು.... ಅದರಲ್ಲಿ ಯಾವುದೇ ರೀತಿಯ ಭಕ್ತಿ ಭಾವವಿರುತ್ತಿರಲಿಲ್ಲ. ದಿನಕಳೆದ ಹಾಗೆ ನಮ್ಮ ದಿನನಿತ್ಯ ಮಾಡುವ ಕೆಲಸದ ಜೊತೆ ಇದೂ ಒಂದು ಕೆಲಸದ ಹಾಗೆ ಆಗಿಹೋಯ್ತು.


              ನನ್ನ ತಾಯಿಗೆ ಪ್ರವಚನಕ್ಕೆ ಹೋಗುವ ಅಭ್ಯಾಸವಿತ್ತು. ಅವರ ಜೊತೆ ನಾವೂ ಹೋಗುತ್ತಿದ್ದೆವು; ಹರಿಕತೆ ಕೇಳಲು ಸಂತೋಷದಿಂದಲೇ ಹೋಗುತ್ತಿದ್ದೆವು. ಹಾಗೆ ಒಂದು ದಿನ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಕೇಳುವ ಭಾಗ್ಯ ದೊರೆಯಿತು. ಇಲ್ಲಿಂದ ಪರಮಾತ್ಮನ ಬಗ್ಗೆ ನನ್ನ ದೃಷ್ಟಿಕೋನವು ಬದಲಾಗಿ ಹೋಯಿತು. ಅಲ್ಲಿಂದ ರಾಮ, ಕೃಷ್ಣರು ನನ್ನ ಗೆಳೆಯರಾದರು. ಭಯವು ದೂರವಾಯಿತು. ಅಲ್ಲಿಂದ ಮುಂದೆ ನನಗೆ ಅನೇಕ ಆಧುನಿಕ ಅಧ್ಯಾತ್ಮಿಕ ಗುರುಗಳ ಬೋಧನೆ ಕೇಳುವ, ಓದುವ ಅವಕಾಶ ದೊರೆಯಿತು. ಇವರ ಮೂಲಕ ಭಗವಂತ ನಿಜ ರೂಪದ ದರ್ಶನವಾಯಿತು. ಪರಮಾತ್ಮನ ಅಸ್ತಿತ್ವದ ಅಲೌಕಿಕ ಅನುಭೂತಿ ದೊರೆಯಿತು. ಈ ಲೋಕವನ್ನು ಯಾವುದೋ ಒಂದು ಶಕ್ತಿ ನಿಯಂತ್ರಿಸುತ್ತದೆ. ಆ ಶಕ್ತಿಯನ್ನು ಅರಿಯುವುದೆಂದರೆ ನಮ್ಮನ್ನು ನಾವೇ ಸರಿಯಾಗಿ ತಿಳಿಯುವುದೆಂದೇ ನನ್ನ ಅನಿಸಿಕೆ.
   
              ಈ ಹುಡುಕಾಟದಲ್ಲಿ ನನಗೆ ದಾರಿದೀಪವಾಗಿ ಕಂಡಂತಹ ಕೆಲವು ಗುರುಗಳ ಮಾತನ್ನು ಯಥಾವತ್ತಾಗಿ ಇಲ್ಲಿ ಮೂಡಿಸಿದ್ದೇನೆ. ಸ್ವಾಮಿ ಸುಖಬೋಧಾನಂದ, ಶ್ರೀಶ್ರೀಶ್ರೀ ರವಿಶಂಕರ, ಇಶೋನವರು ಕಂಡ ಸತ್ಯಗಳು ನನ್ನನ್ನು ಬಲುವಾಗಿ ಸೆಳೆದಿದೆ. ಪ್ರಾಪಂಚಿಕ ಸುಖದ ಸಮುದ್ರದ ಲೋಕದಲ್ಲಿ ಮುಳುಗಿರುವ ನಮಗೆ ಜೀವನದ ನಿಜವಾದ ದರ್ಶನ ಈ ಗುರುಗಳ ಬೋಧನೆಯಲ್ಲಿ ಕಾಣಬರುವುದು. ನನಗೆ ತಿಳಿದುದನ್ನು ಲೋಕಕ್ಕೆ ಹಂಚಬೇಕೆಂಬ ತುಡಿತದಿಂದ ಈ ದಿವ್ಯ ರತ್ನಗಳನ್ನು ನನ್ನ ಬ್ಲಾಗ್ ಮೂಲಕ ಹರಡಿದ್ದೇನೆ. ದಾರಿ ತಪ್ಪಿ ಇಲ್ಲಿ ಬಂದವರು ಆರಿಸಿಕೊಳ್ಳಬಹುದು ಹಾಗು ತಮ್ಮ ಅಭಿಪ್ರಾಯವನ್ನೂ ಬಿಟ್ಟುಹೋಗಬಹುದು.

* * * * *


ಸ್ವಾಮಿ ಸುಖಬೋಧಾನಂದರ " ಓ ಜೀವನವೇ ರಿಲ್ಯಾಕ್ಸ್ ಪ್ಲೀಸ್" -----ಇದನ್ನು ಸುಧಾ ಪತ್ರಿಕೆಯಿಂದ ಆರಿಸಲಾಗಿದೆ.

* ನಾವೇಕೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ?


ನಮ್ಮ ಮನಸ್ಸು ಇದ್ದುದರಲ್ಲಿ ತೃಪ್ತವಾಗಿಲ್ಲದಿರುವುದರಿಂದ ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ನಮ್ಮ ದುರಾಸೆ ವರ್ತಮಾನಕ್ಕಿಂತ ಮುಂದಿನ ಭವಿಷ್ಯ ಚೆನ್ನಾಗಿರುವುದೆಂಬ ಭ್ರಮೆ ಹುಟ್ಟಿಸುತ್ತದೆ. ಅದೇ ರೀತಿ ನಮ್ಮ ಭೂತಕಾಲ ಹೀಗಿರಬೇಕಾಗಿತ್ತು ಎಂಬ ಭ್ರಮೆ ಹುಟ್ಟಿಸಿ ನಮ್ಮನ್ನು ಅಪೂರ್ಣರಾಗಿ ಮಾಡುತ್ತದೆ.
ಅದರಿಂದ ಇಂಥ ಮನಸ್ಸಿದ್ದರೆ ನಾವು ಭಿನ್ನವಾಗಿರಲು ಸಾಧ್ಯವಿಲ್ಲ. ಕಾಲಿನಲ್ಲಿ ಕೊಳಕಾದ ಕಾಲುಚೀಲಗಳನ್ನು ಧರಿಸಿಕೊಂಡಿದ್ದರೆ, ಗುಲಾಬಿಯ ಪರಿಮಳ ಬೀರಲು ಸಾಧ್ಯವಿಲ್ಲ.
ಸ್ವೀಕಾರದ ಆನಂದವನ್ನು ಅನುಭವಿಸಲು ನಮ್ಮ ಮನಸ್ಸು ಇನ್ನೂ ಕಲಿತಿಲ್ಲ. ಇಂಥ ಅಸ್ವೀಕಾರದ ಮನಸ್ಸಿರುವಾಗ ಒಂದು ಬಿಳಿ ಕೂದಲು, ಮುಖದ ಮೇಲಿನ ಒಂದು ಸಣ್ಣ ಸುಕ್ಕು ಸಹ ನಮ್ಮ ಪಾಲಿಗೆ ದುಃಖದ ಸಂಗತಿಯಾಗುತ್ತದೆ. ಇಂಥ ಮನಸ್ಸನ್ನು ಬದಲಾಯಿಸಬೇಕಾಗಿದೆ.
* * * * *

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...