ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 December, 2007

ಹರಕೆಯ ಕುರಿ- ಕಾಮಧೇನು!

ಈ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಪರಂಪರೆಗಳು, ನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ. ಒಂದುಕಡೆ ಬಹಳ ಮುಂದುವರೆದ ಆಧುನಿಕ ಜನಾಂಗ ಇನ್ನೊಂದೆಡೆ ಮೂಡ ನಂಬಿಕೆಯೋ, ಮತ್ತೇನೋ ಅಥವಾ ಪವಾಡಗಳೋ ಎನ್ನುವಂತಹ ಉತ್ಸವಗಳು. ಹಳೆಯ ತರಂಗವನ್ನು ತಿರುವುತ್ತಿದ್ದಾಗ ಈ ಲೇಖನವು ನನ್ನನ್ನು ಸೆಳೆಯಿತು. ನನ್ನ ಬ್ಲಾಗಿನ ಹೆಸರೇ ತಿಳಿಸುವಂತೆ ನನ್ನ ಚಿತ್ತವನ್ನು ಕದಡುವ ಅಥವಾ ಪ್ರಸನ್ನಗೊಳಿಸುವ ಯಾವುದೇ ಸಂಗತಿಯನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಹಾಗಾಗಿ ಈ ಲೇಖನ. ಇದೇ ೨೦೦೭ರ ಎಪ್ರಿಲ್ ತರಂಗದಲ್ಲಿ ಕಿಶನ್ ರಾವ್ ಕುಲಕರ್ಣಿ ಕುಪ್ಪಗಿಯವರ ಲೇಖನಿಯಿಂದ ಮೂಡಿ ಬಂದ ಈ ಲೇಖನದಿಂದ ಸಂಕ್ಷಿಪ್ತವಾಗಿ ಆಯ್ದು ಪ್ರಸ್ತುತ ಪಡಿಸಿದ್ದೇನೆ.ಬೈಲಕೂರ ಎಂಬ ಊರು,. ಬಹುಶಃ ಉತ್ತರ ಕರ್ನಾಟಕದ ಒಂದು ಹಳ್ಳಿ. ಎಲ್ಲಾ ಊರಿನಲ್ಲಿ ನಡೆಯಿವಂತೆ ಈ ಊರಿನಲ್ಲೂ ಒಂದು ಜಾತ್ರೆ ನಡೆಯುತ್ತದೆ. ಆದರೆ ಈ ಜಾತ್ರೆಯು ಎಲ್ಲಾ ಕಡೆಯಲ್ಲಿ ಇರುವಂತೆ ರಥೋತ್ಸವವೋ ಅಥವಾ ದೀಪಾರಾಧನೆಯಿಂದಲೋ ಕಳೆಕಟ್ಟುವುದಿಲ್ಲ.......ಆದರೆ ಪೊರಕೆ ಏಟಿನಿಂದ, ಅದೂ ಖುಷಿಯಿಂದ ತಿನ್ನುವ ಏಟುಗಳಿಂದ ಕಳೆಕಟ್ಟುತ್ತದೆ. ಆದರೆ ನನ್ನನ್ನು ಸೆಳೆದದ್ದು ಇದಲ್ಲ. ಇಲ್ಲಿಯೇ ಪಾದುಕೆ ಸೇವೆ ಎಂದು ಮತ್ತೊಂದು ಹರಕೆಯ ಸೇವೆಯನ್ನು ಭಕ್ತರು ಹೊತ್ತುತ್ತಾರೆ. ಅದೂ ಯಾವ ದೇವರಿಗೆ ಅಂತಿರಾ....ಪವನಪುತ್ರ ಹನುಮಾನನಿಗೆ! ಇದರಲ್ಲೇನು ವಿಚಿತ್ರ ಎಂದುಕೊಳ್ತಿರಾ? ಸರಿ ಬಿಡಿ, ಇಂತಹ ಹರಕೆಗಳು ಭಾರತದ ಉದ್ದಗಲಕ್ಕೂ ನಡೆಯುತ್ತಿರುವುದರಿಂದ ಅದರಲ್ಲೇನೂ ಆಶ್ಚರ್ಯವೂ ಇಲ್ಲ ವಿಚಿತ್ರವೂ ಇಲ್ಲ. ವಿಪರ್ಯಾಸವಿರುವುದು ಭಕ್ತರು ಹರಕೆಯೆಂದು ಒಪ್ಪಿಸುವ ಪಾದುಕೆಯಲ್ಲಿ.

ಈ ಪಾದುಕೆಗಳು ಸುಮಾರು ಒಂದು ಅಡಿಅಗಲ ಮತ್ತು ಎರಡು ಅಡಿ ಉದ್ದವಾಗಿದ್ದು ಮುತ್ತು, ಹವಳ, ಬಣ್ಣ ಬಣ್ಣದಬಟ್ಟೆ, ಗೆಜ್ಜೆ, ಮಿರಿಮಿರಿ ಮಿಂಚುವ ಕಾಗದಗಳಿಂದ ಅಲಂಕೃತಗೊಂಡಿರುತ್ತದೆ. ಹರಕೆಹೊತ್ತವರು ಮಾರುತಿಯ ಗುಡಿಗೆ ತಮ್ಮ ತಲೆಯ ಮೇಲೆ ಈ ಪಾದುಕೆಗಳನ್ನು ಹೊತ್ತು ತರುತ್ತಾರೆ. ಇಲ್ಲಿ ಹರಕೆಯ ಕಥೆ ಮುಗಿಯುವುದಿಲ್ಲ. ಈ ಪಾದುಕೆಗಳಿಂದ ಮೈಯಲ್ಲ ಹೊಡಕೊಳ್ಳುತ್ತಾರೆ. ಹೀಗೆ ಮಾಡಿದರೆ ಮೈ- ಕೈ ನೋವು, ಕೆಮ್ಮು, ದಮ್ಮು, ನೆಗಡಿಯಂತಹ ಕಾಯಿಗಳು ವಾಸಿಯಾಗುತ್ತದೆ ಅಲ್ಲದೆ ಭೂತ- ದೆವ್ವಗಳ ಕಾಟವೂ ಮಾಯವಾಗುತ್ತದೆ ಎಂದು ನಂಬುತ್ತಾರೆ.
ನಾ ಓದಿದಂತೆ ಕ್ರೂರತನವಿರುವುದು ಪಾದುಕೆಯಲ್ಲಿ. ಈ ಪಾದುಕೆಗಳನ್ನು ತಯಾರಿಸಲು ಕೊಂಬು, ಕಿವಿ, ಬಾಲ, ಹಲ್ಲು ಮುಕ್ಕಾಗಿರದ ಆರೋಗ್ಯವಂತ ಕಪಿಲೆ ಇಲ್ಲವೇ ಬಿಳಿ ಆಕಳಿನ ಚರ್ಮವೇ ಬೇಕು. ಈ ಮೆಟ್ಟನ್ನು ಗುಡಿಗೆ ಒಪ್ಪಿಸುವಾಗ ಅದನ್ನು ತಯಾರಿಸಿದ ಚಮ್ಮಾರನಿಗೆ ಕಬ್ಬು, ಐದು ಬಗೆಯ ಧಾನ್ಯ, ದಕ್ಷಿಣೆ, ಹೋಳಿಗೆಯ ಉಲ್ಪಿ ಕೊಡುವುದು ಮಾತ್ರವಲ್ಲದೆ ಒಂದು ಪ್ರಾಣಿಯನ್ನು ಬಲಿ ನೀಡಿ ಪ್ರಸ್ಥ ಮಾಡಿಸಬೇಕು. ಇದಕ್ಕೆಲ್ಲಾ ಸುಮಾರು ಹದಿನೈದು ಸಾವಿರ ರೂಪಾಯಿ ಖರ್ಚು ಆಗುವುದೆಂದು ಲೇಖನ ಬರೆದ "ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ" ಬರೆದಿದ್ದಾರೆ.
ಬೇಸರವೆಂದರೆ ಈ ಹರಕೆಯನ್ನು ಪೂರೈಸಲು ಒಂದು ಆರೋಗ್ಯವಂತ ದನವು ಬಲಿಯಾಗಬೇಕಾಗುತ್ತದೆ. ಇಂತಹ ಪರಂಪರೆಯ ಅಗತ್ಯ ನಮಗಿದೆಯೇ? ಎಂಬುದುದು ನನ್ನ ಪ್ರಶ್ನೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಕಳುಗಳನ್ನು, ಅಪರೂಪದ ತಳಿಗಳನ್ನು ರಕ್ಷಿಸುವಂತಹ ಕಾರ್ಯಗಳು ನಡೆಯುತ್ತಿವೆ. ಗೋಮೂತ್ರದಿಂದ ಔಷಧ ಮಾತ್ರವಲ್ಲದೆ ಕೀಟನಾಶಕಗಳನ್ನೂ ತಯಾರಿಸುತ್ತಿದ್ದಾರೆ ಮತ್ತು ಅದರ ಪ್ರಚಾರವೂ ಆಗಿ ಜನರು ಇದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ. ಈ ಬೈಲಕೂರಿನ ಜನತೆಗೆ ತಿಳಿ ಹೇಳಿ ಆರೋಗ್ಯವಂತ ದನದ ಹತ್ಯೆಯ ಪರಂಪರೆಯನ್ನು ದೂರಮಾಡಿಸುವ ಪ್ರಯತ್ನಗಳು ನಡೆಯಬೇಕು.
ಕಾಮಧೇನುವನ್ನು ಪೂಜಿಸುವಂತ ಹಿರಿಮೆಯನ್ನು ಹೊತ್ತಿದ ಹಿಂದೂ ನಾಡಿನಲ್ಲೇ ಹರಕೆಯ ಹೆಸರಿನಲ್ಲಿ ಹಸುವಿನ ಕ್ರೂರ ಹತ್ಯೆ......ಎಂತಹ ವಿಪರ್ಯಾಸ.
ಅಂದ ಹಾಗೆ ಇದೇ ಊರಿನಲ್ಲಿ ನಡೆಯುವ ಪೊರಕೆ ಜಾತ್ರೆಯೂ ಏನೂ ಕಡಿಮೆ ವಿಚಿತ್ರದಲ್ಲ. ಒಂದು ಸಮಾಧಾನವೆಂದರೆ ಇದರಲ್ಲಿಯಾವುದೇ ಪ್ರಾಣಿಯನ್ನು ಬಲಿ ಕೊಡುವುದಿಲ್ಲ. ಆ ವರ್ಣನೆ ಇನ್ನೊಂದು ಕಂತಿನಲ್ಲಿ.

06 December, 2007

ದೇವರಿದ್ದಾನೆಯೇ?-2

ಅಂದ ಹಾಗೆ ಇಷ್ಟೆಲ್ಲಾ ಮಕ್ಕಳಿಗೆ ಹೇಳಿದ ವಿಷಯ ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ ಇದು ನನ್ನ ಅನುಭವವನ್ನು ದಾಖಲಿಸುವ ಪ್ರಯತ್ನ.... ಮತ್ತು ಮುಂದೆ ಯಾರಿಗಾದರೂ ಉಪಯೋಗವೂ ಆಗಬಹುದೆಂಬ ದೂರಾಲೋಚನೆ. ಪಾಪ ಪುಣ್ಯಗಳ ಬಗ್ಗೆ ಅಷ್ಟೆಲ್ಲಾ ಹೇಳಿದ ಮೇಲೆ ಮಕ್ಕಳ ಮೇಲೆ ಅದರ ಯಾವುದೇ ರೀತಿಯ ದುಷ್ಪರಿಣಾಮವಾಗಬಾರೆಂದೆಂದು, ನಾವು ತಿಳಿಯದೇ ಅಥವಾ ಬೇರೆ ಉಪಾಯವಿಲ್ಲದೇ ಸುಳ್ಳು ಹೇಳಿದಾಗ ನಮಗೆ ಬರುವ ಪಾಪವನ್ನು ನಿವಾರಿಸಿಕೊಳ್ಳಲು ಸುಲಭೋಪಾಯವನ್ನೂ ತಿಳಿಸಿದೆ. ಅದೇನಂದರೆ ಪಶ್ಚಾತ್ತಾಪ ಪಡುವುದು ಮತ್ತು ನಮ್ಮಿಂದಾದಷ್ಟು ಬೇರೆಯವರಿಗೆ ಸಹಾಯ ಮಾಡುವುದು.


ಸರಿ, ಈಗ ವಿಷಯಕ್ಕೆ ಬರೋಣ. ಸುಪ್ತದೀಪ್ತಿಯವರು ನಮ್ಮ ಅನುಭವವನ್ನು ತಿಳಿಸಲು ಹೇಳಿದ್ದಾರೆ. (ದೇವರ) ಪ್ರತಿಯೊಬ್ಬರಿಗೂ ದೇವರ ಅಥವಾ ವಿಶೇಷ ಶಕ್ತಿಯ ಅನುಭವಂತೂ ಖಂಡಿತವಾಗುವುದು. (ಇಲ್ಲಿ ನಾನು ದೇವರನ್ನು ವಿಶೇಷ ಶಕ್ತಿಯೆಂದೂ ಗುರುತಿಸಲು ಇಷ್ಟಪಡುತ್ತೇನೆ.) ಕೆಲವೇಮಂದಿಗೆ ಅದನ್ನು ಗುರುತಿಸಲು ಶಕ್ಯವಾಗುವುದು. ಇಲ್ಲಿ ಇಂತಹ ಅನುಭವವಾಗಲು ಅವರೇನು ದೈವಭಕ್ತರಾಗಬೇಕೆಂದಿಲ್ಲ. ನಮ್ಮ ಪೂರ್ವಜನ್ಮದ ವಾಸನೆಯಿಂದ ನಮಗೆ ದೈವಿಕ ಅನುಭೂತಿಯನ್ನು ಅನುಭವಿಸುವ ಆನಂದವು ಲಭಿಸುವುದು. ಆದರೆ ಕೆಲವರು ಮಾತ್ರ ಇದನ್ನು ನಿಜ ಆನಂದದಿಂದ ಸೇವಿಸಲು ಯೋಗ್ಯರಾಗುತ್ತಾರೆ. ಯಾಕೆಂದರೆ ಇಂತಹ ಭಾವನೆಯನ್ನು ಅನುಭವಿಸಲು ಅವರು ಮಾನಸಿಕವಾಗಿ ಧ್ರಡವಾಗಿರಬೇಕು, ಅಲ್ಲದೇ ಸುಪ್ತವಾಗಿರುವ ಆರನೇ ಇಂದ್ರಿಯ ಜಾಗೃತವಾಗಿರಬೇಕು

ಪ್ರತಿದಿನ ನಿಜ ಭಕ್ತಿಯಿಲ್ಲದೆ ಮಂತ್ರಗಳನ್ನು, ಭಜನೆಗಳನ್ನು ಪೂಜೆಗಳನ್ನು ಮಾಡುವುದರಿಂದ ನಮಗೆ ದೇವರ ಇರುವಿಕೆಯ ಅನುಭವವಾಗುವುದಿಲ್ಲ. ದೇವರು ನಮ್ಮಒಳಗೆ ಇರುತ್ತನಾದರೂ ಅವನನ್ನು ನಾವು ತೀರ್ಥಕ್ಷೇತ್ರಗಳಲ್ಲಿ, ದೇವಸ್ಥಾನಗಳಲ್ಲಿ ಹುಡುಕುತ್ತೇವೆ. ಭೀತಿಯಿಲ್ಲದೆ ಪಾಪಕಾರ್ಯಗಳನ್ನು ಮಾಡಿ ಅದನ್ನು ನಿವಾರಿಸಲು ದೇವರ ಮೂರ್ತಿಗೆ ವಜ್ರ ವೈಡೂರ್ಯಗಳನ್ನು ತೊಡಿಸುತ್ತೇವೆ. ಶಿಥಿಲವಾದ ನಮ್ಮ ಸಮಾಜಿಕ, ಮಾನವೀಯ, ನೈತಿಕ ಮೌಲ್ಯಗಳ ಉದ್ಧಾರ ಮಾಡದೇ ಕೋಟಿಗಟ್ಟಲೆ ಹಣ ಸುರಿಸಿ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಿದ್ದೇವೆ. ಒಂದು ಕಡೆ ತಲೆಯ ಮೇಲೆ ಸೂರು ಇಲ್ಲದೆ, ಹೊಟ್ಟೆಗೆ ಗತಿಯಿಲ್ಲದೆ ಒದ್ದಾಡುತ್ತಿರುವವರಿದ್ದರೆ ಇನ್ನೊಂದೆಡೆ ಬಂಗಾರದ ದೇವಸ್ಥಾನಗಳು--- ಎಂತಹ ವಿಪರ್ಯಾಸ! ಇದೇನು ಕಲಿಯುಗಕ್ಕೆ ಮಾತ್ರ ಸಂಬಂಧಿಸಿದಲ್ಲ, ಪ್ರತಿಯೊಂದು ಯುಗದಿಂದಲೂ ನಡೆಯುತ್ತಲೇ ಇರುವ ಕತೆಗಳು. ದೇವರ ಹುಡುಕಾಟವೂ ಹಾಗೆಯೇ ನಡೆಯುತ್ತಿದೆ. ಇದರಲ್ಲಿ ಜಯಪಡೆದ ಯೋಗಿಗಳು ತಮ್ಮ ಅನುಭವವನ್ನು ಜನಸಾಮಾನ್ಯನಿಗೆ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಲೌಕಿಕ ಭೋಗದಲ್ಲಿ ಮುಳುಗಿರುವ ನಮ್ಮ ಮಿದುಳಿಗೆಟುಕುವುದೇ ಈ  ಬೋಧನೆಗಳು!
ನಮ್ಮ ಒಳಗಿರುವ ಪರಮಾತ್ಮನನ್ನು ಕಾಣುವ ಆನಂದವು.

ನಾನೂ ನನ್ನಲಿರುವ ಆನಂದ ಸ್ವರೂಪ ಶಕ್ತಿಯನ್ನು ಹುಡುಕುವ ಪ್ರಯತ್ನದಲ್ಲೇ ಇದ್ದೇನೆ. ಸಂಸಾರವೆಂಬ ಸಾಗರದಲ್ಲಿ ಈಜಾಡುತ್ತಲೇ ಮೋಹ ಮಾಯೆಗಳೆಂಬ ದೈತ್ಯ ಶಾರ್ಕಗಳಿಂದ ಸುತ್ತುವರೆದಿರುವಾಗ ಭಗವಂತನ ಪೂರ್ಣರೂಪದ ದರ್ಶನ ನಮಗೆ ಲಭಿಸುದೆಂದೆಣಿಸುವುದಿಲ್ಲ. ಮತ್ತು ಆಶೆಯೂ ಪಡುವುದಿಲ್ಲ. ಯಾಕೆಂದರೆ ನಮ್ಮ ಸುತ್ತಲಿನ ಪ್ರಕೃತಿಯಲ್ಲೇ ಅಡಗಿರುವ ಪರಮಾತ್ಮನು ನಿತ್ಯವೂ ತನ್ನ ದರುಶನ ಕೊಡುತ್ತಿರುವಾಗ ಇಲ್ಲ ಸಲ್ಲದ ಹುಡುಕಾಟ ಬೇಕೇ? ಈ ಪರಮಾತ್ಮನನ್ನು ಕಾಣಲು ನಮ್ಮ ಇಂದ್ರಿಯ ಬುದ್ಧಿಗಳನ್ನು ತೆರೆದಿಟ್ಟರೆ ಸಾಕು


ನಾನಂತೂ ಪ್ರತೀದಿನ ಬೆಳಿಗ್ಗೆ ಕಾಣುವ ಸೂರ್ಯನಿಂದ ಹಿಡಿದು ನಾನು ಮಾಡುವ ಎಲ್ಲಾ ಕಾರ್ಯಗಳನ್ನು ಬಲು ಆನಂದದಿಂದ ಮಾಡುತ್ತೇನೆ. ಕಸ ಗುಡಿಸುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ಅಡುಗೆ ಮಾಡುವ ಇಂತಹ ಕೆಲಸಗಳು ಯಾರಿಗೆ ತಾನೆ ಇಷ್ಟ? ನಾನು ಇದರ ಹೊರತಾಗಿರಲಿಲ್ಲ.... ಬೇಸರದಿಂದಲೇ ಮಾಡುತ್ತಿದೆ. ಇದರ ಪರಿಣಾಮ ನನ್ನ ಜೀವನದಲ್ಲಿ ಸುಖವೆಂದರೆ ಮರೀಚಿಕೆಯಾಗಿತ್ತು... ಯಾವಾಗಲೂ ಸಿಡಿಮಿಡಿ, ಕೋಪ, ತಾಪ, ಅನಾರೋಗ್ಯ.. ಮೊದಲಾದವುಗಳು ನನ್ನಲ್ಲಿ ಹಾಯಾಗಿ ಮನೆ ಮಾಡಿಕೊಂಡಿದ್ದವು. ಹಾ.... ಇದರ ಮಧ್ಯೆ ನನ್ನ ಮಂತ್ರ, ಸ್ತೋತ್ರಗಳ ಪಠನವೂ ಸಾಂಗವಾಗಿ ನಡೆದಿತ್ತು. ಇಷ್ಟೆಲ್ಲ ನಿನಗಾಗಿ ಮಾಡುವಾಗ ಯಾಕೆ ನೀನು ಕಣ್ಣು ಮುಚ್ಚಿ ಕುಳಿತಿರುವೆ? ನಿನ್ನನ್ನು ಭಕ್ತ ವತ್ಸಲನೆಂದು ಯಾಕಾಗಿ ದಾಸರು ಕರೆದರೋ? ಎಂದೆಲ್ಲಾ ಪ್ರಶ್ನೆಗಳನ್ನು ದೇವರಲ್ಲಿ ಕೇಳುತ್ತಿದ್ದೆ.

ಇಂತಹ ಸಮಯದಲ್ಲೇ ನನ್ನಲ್ಲಿ ಜಿಜ್ಞಾಸೆಗಳು ಮೂಡಲು ಪ್ರಾರಂಭವಾಯಿತು.....ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಬರಲು ಪ್ರಾರಂಭವಾಯಿತು. ಹಾಗೆಯೇ ಉತ್ತರಗಳ ಹುಡುಕಾಟವೂ...... ಇಂತಹ ಹುಡುಕಾಟದಲ್ಲೇ ನನಗೆ ನನ್ನ ಒಳಗೇ ಇರುವಿಕೆಯ ಆನಂದದ ಅರಿವಾಯಿತು. ಇದನ್ನು ಪಡೆಯಬೇಕಾದರೆ ನಾವು ಎಲ್ಲದರಲ್ಲಿಯೂ ಭಗವಂತನನ್ನೇ ಕಾಣಬೇಕೆಂಬ ಜ್ಞಾನೋದಯವಾಯಿತು.

05 December, 2007

ದೇವರಿದ್ದಾನೆಯೇ?-1

ದೇವರಿದ್ದಾನೆಯೇ?

ದೇವರು ಇದ್ದಾನೆ ಅಥವಾ ಇಲ್ಲವೇ ಇಂದು ಅವರವರ ನಂಬಿಕೆಗೆ ಸಂಬಂಧ ಪಟ್ಟದ್ದು. ಕೆಲವರಿಗೆ ದೇವರು ಅವರವರ ಭಾವಕ್ಕೆ ತಕ್ಕಂತೆ ಬದಲಾಗುತ್ತಾರೆ. ಕೆಲವರಿಗೆ ಕಷ್ಟದಲ್ಲಿ ಸಹಾಯ ಮಾಡಿದವರೇ ದೇವರು, ಅಂದರೆ ಅವರಿಗೆ ಪರಮಾತ್ಮ ಮಾನವ ರೂಪದಲ್ಲೇ ಗೋಚರಿಸುತ್ತಾನೆ. ಕೆಲವರಿಗೆ ಪ್ರಕೃತಿಯೇ ದೇವರು, ತಮ್ಮಸುತ್ತಲಿನ ವಾತಾವರಣದಲ್ಲಿರುವ ಎಲ್ಲಾ ಭೌತಿಕ ವಸ್ತುಗಳಲ್ಲಿ ದೇವರು ಗೋಚರನಾಗುತ್ತಾನೆ. ಮತ್ತೂ ಕೆಲವರಿಗೆ ಕಾಯಕವೇ ದೇವರು, ತಮ್ಮ ಕರ್ತವ್ಯ, ಕೆಲಸದಲ್ಲೇ ಮಗ್ನರಾಗಿ ಭಗವಂತನ ಸಾನಿಧ್ಯವನ್ನು ಆನಂದಿಸುತ್ತಾರೆ.

ಮೇಲೆ ತಿಳಿಸಿರುವಂತೆ ದೇವರು ಭಕ್ತರಿಗೆ ಅವರವರ ಭಾವಕ್ಕೆ, ಭಕ್ತಿಗೆ ಅನುಗುಣವಾಗಿಕಾಣಿಸುತ್ತಾನೆ. ಮತ್ತು ಅದು ಸರಿಯೂ ಹೌದು ಎಂದು ಹೇಳಬಹುದು. ಯಾಕೆಂದರೆ ಇದಕ್ಕೆಲ್ಲಾ ನಾವು ನಮ್ಮ ಪುರಾಣದಲ್ಲಿ ಉದಾಹರಣೆಯನ್ನು ಕಾಣಬಹುದು. ಸಂತರಾದ ಸಖೂಬಾಯಿ, ತುಕಾರಾಮ, ಜ್ಞಾನದೇವ, ಮುಕ್ತಾಬಾಯಿ, ಪುರಂದರದಾಸ, ರಾಮಕೃಷ್ನ ಪರಮಹಂಸ, ಶಾರದಾ ದೇವಿ ಮೊದಲಾದವರೆಲ್ಲಾ ಸಂಸಾರವನ್ನು ತ್ಯಜಿಸದೇ ದೇವರ ಇರುವಿಕೆಯನ್ನು ಅನುಭವಿಸಿಲ್ಲವೇ?

ಈ ವಿಷಯ ಯಾಕೆ ಬಂತೆಂದರೆ, ಸುಪ್ತದೀಪ್ತಿಯವರು ತಮ್ಮ ಬ್ಲಾಗಿನಲ್ಲಿ ದೇವರು ಇದ್ದಾನೆಯೇ ಎಂದು ಓದುಗರನ್ನು ಪ್ರಶ್ನಿಸಿದ್ದಾರೆ ಅಲ್ಲದೇ ನನ್ನ ವಿದ್ಯಾರ್ಥಿಗಳು ನನ್ನನ್ನೂ ಇದೇ ಪ್ರಶ್ನೆಯನ್ನು ಕೇಳಿದ್ದರು.( ನನ್ನಲ್ಲಿ ಮನೆ ಪಾಠಕ್ಕೆಂದು ಬರುವ ಮಕ್ಕಳಿಗೆ ಪಾಠವಾದ ನಂತರ ನಾನು ನೀತಿ ಮತ್ತು ಪ್ರಕೃತಿಯ ರಕ್ಷಣೆಯ ವಿಷಯಗಳನ್ನು ಕತೆಯ ರೂಪದಲ್ಲಿ ಹೇಳುತ್ತಿದ್ದೇನೆ) ಮಕ್ಕಳಿಗೆ ಅವರ ಅರ್ಥವಾಗುವ ಸಾಮರ್ಥ್ಯಕ್ಕೆ ಅನುಗುಣವಾಗಿ ದೇವರು ಮೇಲೆ ಸ್ವರ್ಗದಲ್ಲಿದ್ದಾನೆ ಮತ್ತು ನಾವು ಮಾಡುವ ಕರ್ಮಗಳನ್ನು ಪ್ರತಿಯೊಂದು ಗಳಿಗೆಗೂ ಬರೆಯುತ್ತಿದ್ದಾನೆ ಎಂದೂ , ಅದಕ್ಕೆ ಅನುಗುಣವಾಗಿ ನಮಗೆ ಪುಣ್ಯ ಪಾಪದ ಫಲಗಳು ದೊರೆಯುವುದೆಂದು ಹೇಳಿದ್ದೇನೆ. ಹೀಗೆ ಯಾಕೆ ಹೇಳಬೇಕಾಯಿತೆಂದರೆ ಆ ಮಕ್ಕಳು ಒಳ್ಳೆಯ ಮನೆತನದವರಾದರೂ, ದೇವರ ಸ್ತೋತ್ರ, ಭಜನೆ ಹೇಳುವ ತಂದೆ , ತಾಯಿಯರ ಕುಡಿಯಾದರೂ ಮನೆಯ ಹೊರಗೆ ಅವರು ಮಾಡುವ ಕೆಲಸಗಳನ್ನು ನೋಡಿದರೆ ಇಂತವರ ಕೈಯಲ್ಲಿ ನಮ್ಮ ದೇಶದ ಭವಿಷ್ಯ ಏನಾಗುವುದೋ ಎಂದು ಹೆದರಿಕೆ ಹುಟ್ಟಿಸಿರುವಂತಿತ್ತು. ಹೀಗಾಗಿ ನಾನು ನನ್ನ ಪಾಠ ಹೇಳುವ ಕೆಲಸದ ಜೊತೆ ಅವರನ್ನು ನೀತಿವಂತರನ್ನಾಗಿ ಮಾಡುವ ಪ್ರಯತ್ನದಲ್ಲಿ ನಮ್ಮ ಪುರಾಣದ ಕತೆಗಳನ್ನು ಹೇಳುವ ಕಾಯಕ ಪ್ರಾರಂಭಿಸಿದ್ದೇನೆ.

ಪುಸ್ತಕಗಳಲ್ಲಿ ಸರಸ್ವತಿಯ ವಾಸವಿರುವುದರಿಂದ ನಾವು ಯಾವಾಗಲೂ ಅವಳನ್ನು ಚೆನ್ನಾಗಿಡಬೇಕು ಹಾಗು ನಮ್ಮ ಅಕ್ಷರ ಚೆನ್ನಾಗಿದ್ದರೆ ಸರಸ್ವತಿಯು ನಮಗೆ ಬಲುಬೇಗ ಒಲಿಯುತ್ತಾಳೆ.( ಅಂದರೆ ಬಾಯಿಪಾಠವಾಗುತ್ತದೆ) ಹೀಗೆಲ್ಲಾ ಹೇಳಿದ ಮೇಲೆ ಒಂದಿಷ್ಟು ಸುಧಾರಿಸಿದ್ದಾರೆ. ಸತ್ಯವಾನ್ ಹರಿಶ್ಚಂದ್ರನ ಕತೆ ಹೇಳಿ ಆ ನಾಟಕ ನೋಡಿದ ಗಾಂಧೀಜಿ ತಮ್ಮ ಕೆಟ್ಟಚಟಗಳ್ಳನ್ನು ಬಿಟ್ಟು ಸತ್ಯವನ್ನೇ ಹೇಳುವ ಪ್ರತಿಜ್ಞೆಯನ್ನು ಮಾಡಿದ ಕತೆ ಹಾಗು ಬಾಲಕರಾದ ಪ್ರಹ್ಲಾದ, ದ್ರುವರ ಕತೆಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರಿತು. ಇಂದಿಗೂ ಮಕ್ಕಳು ದೇವರು ನಾವು ಕೋಣೆಯಲ್ಲಿದ್ದಾನೆಯೇ, ನಮ್ಮನ್ನು ನೋಡುತ್ತಿದ್ದಾನೆಯೇ ಎಂದು ಕೇಳುತ್ತಿದ್ದಾರೆ..... ನಾನು ಅವರಿಗೆ ಹೌದೆಂದು ಹೇಳುವಾಗ ನನ್ನ ಆತ್ಮ ನನ್ನನ್ನು " ನೀನು ನಿಜವನ್ನೇ ಹೇಳುತ್ತಿದ್ದಿಯೇ" ಎಂದು ಕೇಳುವ ಹಾಗೆ ನನಗೆ ಅನಿಸಿತು.

ನಾನು ಈ ಬಾಲಕರಿಗೆ ಹೇಳಿದ ಹಾಗೆ ಬಾಲ್ಯದಲ್ಲಿ ಪಾಪ ಪುಣ್ಯಗಳ ಪ್ರಭಾವವನ್ನು ನಂಬಿದ್ದೆ.... ಹಾಗಾಗಿ ತಪ್ಪು ಮಾಡುವಾಗ ನನ್ನ ಮನಸ್ಸು ಚುಚ್ಚುತ್ತಿದ್ದರಿಂದ ನನ್ನಿಂದ ನಡೆಯುವ ಕರ್ಮಗಳಲ್ಲಿ ತಪ್ಪುಗಳ ಸಂಖ್ಯೆ ಕಡಿಮೆಯಿರುತ್ತಿತ್ತು. ಅಲ್ಲದೆ ನನ್ನ ಮಕ್ಕಳಿಗೂ ನಾನು ಹಾಗೆಯೇ ಉಪದೇಶಿಸಿದೆ. ದೇವರು ನಮ್ಮ ಕರ್ಮಗಳ ಅನುಸಾರವಾಗಿ ನಮಗೆ ಮುಂದಿನ ಜನ್ಮ ಕೊಡುತ್ತಾನೆ..... ಅಂದರೆ ನಾವು ಅನಾವಶ್ಯಕವಾಗಿ ಮತ್ತೊಂದು ಜೀವಿಗೆ ತೊಂದರೆ ಕೊಟ್ಟರೆ ಮುಂದಿನ ಜನ್ಮದಲ್ಲಿ ನಾವು ಕೆಟ್ಟ ಜನ್ಮ ( ಏನಾದರು ಪ್ರಾಣಿಯಾಗಿ---- ನಾಯಿ , ಬೆಕ್ಕುಹಾವು...ಇತ್ಯಾದಿ. ) ಪಡೆಯುತ್ತೇವೆ. ನಮಗೆಲ್ಲಾ ತಿಳಿದೇ ಇದೆ ಮನುಜ ಜನ್ಮ ಶ್ರೇಷ್ಠವೆಂದು. ಇಂತಹ ಹೆದರಿಕೆ ನಮ್ಮನ್ನು ಕೆಟ್ಟ ಕಾರ್ಯ ಮಾಡದಂತೆ ತಡೆಯುತ್ತದೆ. ಅಥವಾ ಕಡಿಮೆ ಮಾಡುತ್ತದೆ.

...........ಇನ್ನೂ ಇದೆ........

20 November, 2007

ಅಧ್ಯಾತ್ಮ ಲೋಕದಲ್ಲಿ ಕಂಡ ಅನುಭೂತಿ!

ಅಧ್ಯಾತ್ಮ ಲೋಕದಲ್ಲಿ ಕಂಡ ಅನುಭೂತಿ!

              ನಾನು ಬೆಳೆದ ವಾತಾವರಣವು ತುಂಬಾ ಭಕ್ತಿಮಯ ಅಥವಾ ಸಂಪ್ರದಾಯಮಯವಾಗಿತ್ತೆಂದೇ ಹೇಳಬಹುದು. ಹಾಗಾಗಿ ಪ್ರತಿದಿನ ಕೆಲವೊಂದು ಸ್ತೋತ್ರಗಳು ಮತ್ತು ಪ್ರಾರ್ಥನೆ, ಭಜನೆಗಳು ಕಡ್ಡಾಯವಾಗಿದ್ದವು. ಎಷ್ಟು ಅಭ್ಯಾಸವಾಗಿದೆಯೆಂದರೆ ಈಗಲೂ ಶ್ಲೋಕಗಳನ್ನು ಹೇಳಲಾಗದ ದಿನಗಳು ಅಪೂರ್ಣವೆನಿಸುತ್ತದೆ. ಆದರೆ ನಾವು ದೊಡ್ಡವರು ಹೇಳಿದಕ್ಕೆ ಎಲ್ಲವನ್ನೂ ಭಯದಿಂದ ಮಾಡುತ್ತಿದೆವು ಹೊರತು.... ಅದರಲ್ಲಿ ಯಾವುದೇ ರೀತಿಯ ಭಕ್ತಿ ಭಾವವಿರುತ್ತಿರಲಿಲ್ಲ. ದಿನಕಳೆದ ಹಾಗೆ ನಮ್ಮ ದಿನನಿತ್ಯ ಮಾಡುವ ಕೆಲಸದ ಜೊತೆ ಇದೂ ಒಂದು ಕೆಲಸದ ಹಾಗೆ ಆಗಿಹೋಯ್ತು.


              ನನ್ನ ತಾಯಿಗೆ ಪ್ರವಚನಕ್ಕೆ ಹೋಗುವ ಅಭ್ಯಾಸವಿತ್ತು. ಅವರ ಜೊತೆ ನಾವೂ ಹೋಗುತ್ತಿದ್ದೆವು; ಹರಿಕತೆ ಕೇಳಲು ಸಂತೋಷದಿಂದಲೇ ಹೋಗುತ್ತಿದ್ದೆವು. ಹಾಗೆ ಒಂದು ದಿನ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಕೇಳುವ ಭಾಗ್ಯ ದೊರೆಯಿತು. ಇಲ್ಲಿಂದ ಪರಮಾತ್ಮನ ಬಗ್ಗೆ ನನ್ನ ದೃಷ್ಟಿಕೋನವು ಬದಲಾಗಿ ಹೋಯಿತು. ಅಲ್ಲಿಂದ ರಾಮ, ಕೃಷ್ಣರು ನನ್ನ ಗೆಳೆಯರಾದರು. ಭಯವು ದೂರವಾಯಿತು. ಅಲ್ಲಿಂದ ಮುಂದೆ ನನಗೆ ಅನೇಕ ಆಧುನಿಕ ಅಧ್ಯಾತ್ಮಿಕ ಗುರುಗಳ ಬೋಧನೆ ಕೇಳುವ, ಓದುವ ಅವಕಾಶ ದೊರೆಯಿತು. ಇವರ ಮೂಲಕ ಭಗವಂತ ನಿಜ ರೂಪದ ದರ್ಶನವಾಯಿತು. ಪರಮಾತ್ಮನ ಅಸ್ತಿತ್ವದ ಅಲೌಕಿಕ ಅನುಭೂತಿ ದೊರೆಯಿತು. ಈ ಲೋಕವನ್ನು ಯಾವುದೋ ಒಂದು ಶಕ್ತಿ ನಿಯಂತ್ರಿಸುತ್ತದೆ. ಆ ಶಕ್ತಿಯನ್ನು ಅರಿಯುವುದೆಂದರೆ ನಮ್ಮನ್ನು ನಾವೇ ಸರಿಯಾಗಿ ತಿಳಿಯುವುದೆಂದೇ ನನ್ನ ಅನಿಸಿಕೆ.
   
              ಈ ಹುಡುಕಾಟದಲ್ಲಿ ನನಗೆ ದಾರಿದೀಪವಾಗಿ ಕಂಡಂತಹ ಕೆಲವು ಗುರುಗಳ ಮಾತನ್ನು ಯಥಾವತ್ತಾಗಿ ಇಲ್ಲಿ ಮೂಡಿಸಿದ್ದೇನೆ. ಸ್ವಾಮಿ ಸುಖಬೋಧಾನಂದ, ಶ್ರೀಶ್ರೀಶ್ರೀ ರವಿಶಂಕರ, ಇಶೋನವರು ಕಂಡ ಸತ್ಯಗಳು ನನ್ನನ್ನು ಬಲುವಾಗಿ ಸೆಳೆದಿದೆ. ಪ್ರಾಪಂಚಿಕ ಸುಖದ ಸಮುದ್ರದ ಲೋಕದಲ್ಲಿ ಮುಳುಗಿರುವ ನಮಗೆ ಜೀವನದ ನಿಜವಾದ ದರ್ಶನ ಈ ಗುರುಗಳ ಬೋಧನೆಯಲ್ಲಿ ಕಾಣಬರುವುದು. ನನಗೆ ತಿಳಿದುದನ್ನು ಲೋಕಕ್ಕೆ ಹಂಚಬೇಕೆಂಬ ತುಡಿತದಿಂದ ಈ ದಿವ್ಯ ರತ್ನಗಳನ್ನು ನನ್ನ ಬ್ಲಾಗ್ ಮೂಲಕ ಹರಡಿದ್ದೇನೆ. ದಾರಿ ತಪ್ಪಿ ಇಲ್ಲಿ ಬಂದವರು ಆರಿಸಿಕೊಳ್ಳಬಹುದು ಹಾಗು ತಮ್ಮ ಅಭಿಪ್ರಾಯವನ್ನೂ ಬಿಟ್ಟುಹೋಗಬಹುದು.

* * * * *


ಸ್ವಾಮಿ ಸುಖಬೋಧಾನಂದರ " ಓ ಜೀವನವೇ ರಿಲ್ಯಾಕ್ಸ್ ಪ್ಲೀಸ್" -----ಇದನ್ನು ಸುಧಾ ಪತ್ರಿಕೆಯಿಂದ ಆರಿಸಲಾಗಿದೆ.

* ನಾವೇಕೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ?


ನಮ್ಮ ಮನಸ್ಸು ಇದ್ದುದರಲ್ಲಿ ತೃಪ್ತವಾಗಿಲ್ಲದಿರುವುದರಿಂದ ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ನಮ್ಮ ದುರಾಸೆ ವರ್ತಮಾನಕ್ಕಿಂತ ಮುಂದಿನ ಭವಿಷ್ಯ ಚೆನ್ನಾಗಿರುವುದೆಂಬ ಭ್ರಮೆ ಹುಟ್ಟಿಸುತ್ತದೆ. ಅದೇ ರೀತಿ ನಮ್ಮ ಭೂತಕಾಲ ಹೀಗಿರಬೇಕಾಗಿತ್ತು ಎಂಬ ಭ್ರಮೆ ಹುಟ್ಟಿಸಿ ನಮ್ಮನ್ನು ಅಪೂರ್ಣರಾಗಿ ಮಾಡುತ್ತದೆ.
ಅದರಿಂದ ಇಂಥ ಮನಸ್ಸಿದ್ದರೆ ನಾವು ಭಿನ್ನವಾಗಿರಲು ಸಾಧ್ಯವಿಲ್ಲ. ಕಾಲಿನಲ್ಲಿ ಕೊಳಕಾದ ಕಾಲುಚೀಲಗಳನ್ನು ಧರಿಸಿಕೊಂಡಿದ್ದರೆ, ಗುಲಾಬಿಯ ಪರಿಮಳ ಬೀರಲು ಸಾಧ್ಯವಿಲ್ಲ.
ಸ್ವೀಕಾರದ ಆನಂದವನ್ನು ಅನುಭವಿಸಲು ನಮ್ಮ ಮನಸ್ಸು ಇನ್ನೂ ಕಲಿತಿಲ್ಲ. ಇಂಥ ಅಸ್ವೀಕಾರದ ಮನಸ್ಸಿರುವಾಗ ಒಂದು ಬಿಳಿ ಕೂದಲು, ಮುಖದ ಮೇಲಿನ ಒಂದು ಸಣ್ಣ ಸುಕ್ಕು ಸಹ ನಮ್ಮ ಪಾಲಿಗೆ ದುಃಖದ ಸಂಗತಿಯಾಗುತ್ತದೆ. ಇಂಥ ಮನಸ್ಸನ್ನು ಬದಲಾಯಿಸಬೇಕಾಗಿದೆ.
* * * * *

31 October, 2007

ಕರ್ನಾಟಕದ ಹಣೆಬರಹ!ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ ಮತ್ತು ದೆಹಲಿಯಿಂದ ಒಪ್ಪಿಗೆ ಮಾತ್ರ ಬರುವುದು ಬಾಕಿ! ದೆಹಲಿ ಒಡೆಯರು ಒಪ್ಪಿಗೆ ಕೊಡುವುದು ಮಾತ್ರ ಸಂಶಯ.

ಕುಮಾರಸ್ವಾಮಿಯ ಸಂಧಾನ ಕಾರ್ಯ ಯಶಸ್ವಿಯಾಯಿತೆಂದು ತೋರುತ್ತದೆ. ಸ್ವಲ್ಪವೇ ದಿನಗಳ ಹಿಂದೆ ಒಬ್ಬರ ಮೇಲೊಬ್ಬರು ವಾಗ್ಭಾಣವನ್ನು ಬಿಡುತ್ತಿದ್ದವರು ಈಗ ಮತ್ತೊಮ್ಮೆ ಒಂದಾಗಿದ್ದಾರೆ.. ಎಷ್ಟು ವಿಚಿತ್ರ! ರಾಜಕಾರಣದಲ್ಲಿ ಯಾವಾಗ ದೋಸ್ತಿಗಳಾಗುತ್ತಾರೆ, ಯಾವಾಗ ವೈರಿಗಳಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ..ಒಂದಂತೂ ಸತ್ಯ ... ಬಿ.ಜೆ.ಪಿಗೆ ಇನ್ನೂ ಬುದ್ಧಿ ಬಂದಿಲ್ಲ. ಈ ಜೆಡಿ(ಯೆಸ್) ನವರು ಯಾವಾಗ ಕಾಲೆಳೆಯುತ್ತಾರೆಂದು ಹೇಳಲು ಸಾಧ್ಯವಿಲ್ಲ. ಆದರೂ ಗದ್ದುಗೆಯ ಅಸೆ!
ಗೌಡನವರ ಆಲೋಚನೆಯೇನೋ? ಇಲ್ಲದ್ದಿದ್ದರೆ ಬಿ.ಜೆ. ಪಿಗೆ ಅಧಿಕಾರ ಕೊಡುತ್ತಿರಲ್ಲಿಲ್ಲ!
ಧರ್ಮಯುದ್ಧ, ನ್ಯಾಯಯುದ್ಧ ಎಲ್ಲಾ ಬದಿಗೆ ಸರೆಯಿತು... ಈಗ ಹೊಸ ಆಟ!

ಕೆಲವು ದಿನಗಳ ಹಿಂದೆ ಪೇಪರ್ ನಲ್ಲಿಯೆಡ್ಯೂರಪ್ಪ ನವರಿಗೆ ಮುಖ್ಯ ಮಂತ್ರಿಯಾಗುವ ಯೋಗವಿಲ್ಲವೆಂದು ಒಬ್ಬ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು.. ಯಡ್ಯೂರಪ್ಪರ ಪಟ್ಟಾಭಿಷೇಕವಾಗುತ್ತದೆಯೋ ಎಂದು ಕಾದು ನೋಡಬೇಕು!
ಪ್ರೇಮಾ ಕಾರಂತರಿಗೆ ಶೃದ್ಧಾಂಜಲಿ!

ರಂಗಭೂಮಿಯ ಹಿರಿಯ ತಾರೆ ಪ್ರೇಮಾ ಕಾರಂತ ತೆರೆಮರೆಗೆ ಸರಿದರು. ಅವರಿಗಿದೋ ಭಾವಪೂರ್ಣ ಶೃದ್ಧಾಂಜಲಿ! ಪತಿ ದಿವಂಗತ ಬಿ.ವಿ. ಕಾರಂತರ ಜತೆ ರಂಗಭೂಮಿಗೆ ೪೦ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಮಗೆ ಅನೇಕ ನಾಟಕಗಳ ಸವಿಯುಣ್ಣಿಸಿದರು. " ಬೆನಕ ಮಕ್ಕಳ ಕೇಂದ್ರ" ಸ್ಥಾಪಿಸಿ ಮಕ್ಕಳ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದ ಇವರು ಫಣಿಯಮ್ಮ, ಹಂಸಗೀತೆ, ಗೋಧೂಳಿ, ಕುದುರೆ ಮೊಟ್ಟೆ ಮೊದಲದ ಚಲನ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿ ಪ್ರಸಿದ್ಧರಾಗಿದ್ದಾರೆ.
ಸ್ವಲ್ಪ ಸಮಯದ ಹಿಂದೆ ನಾವು ತೇಜಸ್ವಿಯವರನ್ನು ಕಳೆದುಕೊಂಡೆವು. ಈಗ ಮತ್ತೊಂದು ಭರಿಸಲಾಗದ ನಷ್ಟ. ಇಂತವರು ಕನ್ನಡ ನಾಡಿನಲ್ಲೇ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸೋಣ!
******************************************************

29 September, 2007

ಕುಂಚ ಬೆರಳುಗಳ ಆಟ ಓಟ!

ಆತ್ಮ ತೃಪ್ತಿ ಕೊಟ್ಟ

‌ <------ಮುಗಿಸದಚಿತ್ರ


<-------ಮೊದಲ ಚಾರ್ ಕೋಲ್ ಚಿತನನ್ನ ಮೊದಲನೇ ಮತ್ತು ಕೊನೆಯ ತೈಲ ಚಿತ್ರ!---->

03 September, 2007

ನಂದ ಕಿಶೋರನ ಹುಟ್ಟುಹಬ್ಬ!

     

                        ಅನಿಕೇತ, ಬ್ರ್ಹಹ್ಮಜ್ಞಾನಿ, ಗೋಪಿ ವಲ್ಲಭ, ಮುರಲಿಮನೋಹರನಾದ ಶ್ರೀಕೃಷ್ಣನ ಜನ್ಮದಿನದ ಶುಭಾಶಯಗಳು! ಮಹಾವಿಷ್ಣುವಿನ ಪರಿಪೂರ್ಣಾವತಾರವಾದ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಎಲ್ಲಾ ರೀತಿಯ ಮಾನವರಿಗೆ ಹೊಂದುವಂತೆ ವಿವಿದ ರೀತಿಯಲ್ಲಿ ಜ್ಞಾನೋಪದೇಶ ಮಾಡುತ್ತಾನೆ. ಭಕ್ತಿ, ಜ್ಞಾನ, ವಿಜ್ಞಾನ, ಧ್ಯಾನ, ಕರ್ಮ ಯೋಗಗಳ ಮುಲಕ ಅರ್ಜುನನೊಂದಿಗೆ ಎಲ್ಲಾ ಮಾನವ ಕುಲಕ್ಕೂ ವಿಶ್ವ ದರ್ಶನ ಮಾಡಿಸುತ್ತಾನೆ. ಮೋಕ್ಷ ಪ್ರಾಪ್ತಿಗೆ ಸುಲಭವಾದ ಭಕ್ತಿ ಮತ್ತು ಕರ್ಮದ ಮಾರ್ಗ ತೋರಿಸಿದ್ದಾನೆ.
ನಮ್ಮ ಪ್ರತಿಯೊಂದು ಕೆಲಸದಲ್ಲಿ ಪ್ರಾಮಾಣಿಕತನ, ಪ್ರೀತಿ ಮತ್ತು ಭಕ್ತಿಯಿರಲಿ ಎಂದು ಉಪದೇಶಿಸುತ್ತಾನೆ. ನೂರಾರು ಹರಕೆ ಹೊತ್ತು ಎಲ್ಲಾ ದೇವಸ್ಥಾನದ ಭೇಟಿ ಮಾಡಿ ತೋರಿಕೆಯ ಭಕ್ತಿಗಿಂತ ಒಂದೇ ತುಲಸೀ ದಳದ ಅರ್ಪಣೆ ಮೇಲು ಎನ್ನುತ್ತಾನೆ! ತಾಳ ಜಾಗಟೆ ಶಂಖ ಘಂಟೆ ಮೊದಲಾದ ವಾದ್ಯಗಳಿಗಿಂತ ನಿಷ್ಕಳಂಕಿತ ಪ್ರೀತಿ ತೋರಿಸಿ ಎನ್ನುತ್ತಾನೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಮಾಡಿ, ಫಲಾಫಲಗಳನ್ನು ಹರಿಯ ಇಚ್ಛೆಗೆ ಬಿಡಿ, ಎಲ್ಲವೂ ಸರಿಯಾಗುತ್ತದೆ ಎಂದು ಭರವಸೆ ಕೊಡುತ್ತಾನೆ.

ಪ್ರಕೃತಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಯನ್ನು ಪ್ರೀತಿಸಿ, ಮಾನವೀಯತೆ ತೋರಿಸಿದರೆ ನಾವು ಭಗವಂತನನ್ನೇ ಆರಾಧಿಸಿದಂತಾಗುತ್ತದೆ. ಎಲ್ಲರಿಗೂ ಸನ್ಮಂಗಳವಾಗಲಿ. ವಿಶ್ವ ಶಾಂತಿ ನೆಲೆಸಲಿ. ಎಲ್ಲಾ ಧರ್ಮ, ಜಾತಿಯನ್ನು ಮೀರಿ ಮಾನವ ಜಾತಿಯೊಂದೇ ಮುಖ್ಯವಾಗಲಿ! ಮಾನವೀಯತೆಯೇ ಮುಖ್ಯ ಗುಣವಾಗಲಿ, ಭಗವಂತನ ಆರಾಧನೆಯ ರೂಪವಾಗಲಿ.

16 August, 2007

ನಾಲ್ಕು ಮುದ್ರೆಗಳು!

                ನಿನ್ನೆ "The Times of India"ದಲ್ಲಿ, ಮಾತನಾಡುವ ಮರದಲ್ಲಿ ಬರುವ ಓಶೋನವರ ಬರಹ ಓದಿದೆ. ನಮ್ಮ ಆಧುನಿಕ ಜೀವನ ಶೈಲಿಗೆ ಹೇಳಿಸಿದ ಬರಹ ಎಂದು ಅನಿಸಿತು. ಆ ನಾಲ್ಕು ಮುದ್ರೆಗಳು ನಮ್ಮ ಹುಚ್ಚು ಮನಸಿಗೆ ಓಟಕ್ಕೆ ಕಡಿವಾಣ ಹಾಕಿತು ಎಂದು ಅನಿಸಿ, ಎಲ್ಲರಿಗೂ ತಿಳಿಸುವ ಎಂದು ಈ ನನ್ನ ಮೊದಲ ಬ್ಲಾಗ್ ಪ್ರಾರಂಭಿಸುತಿದ್ದೇನೆ.


                     ಅಂತಿಮವಾಗಿ ಮುಕ್ತಿ ಪಡೆಯಲು ಮಾನವನು ತನ್ನ ಒಳಗಿರುವ ನಾಲ್ಕು ದ್ವಾರಗಳ  ಬೀಗಗಳನ್ನು ಮುರಿದು ದಾಟಬೇಕು. ಮೊದಲನೇ ಮುದ್ರೆ ಕರ್ಮ ಮುದ್ರೆ, ನಮ್ಮ ಹೊರ ಕವಚ. ನಾವು ಯಾವ ಕೆಲಸ ಮಾಡುತ್ತಿದ್ದೇವೆಯೋ ಅದು ನಮಗೆ ಚೆನ್ನಾಗಿ ತಿಳಿದಿರಬೇಕು. ಕೋಪವೋ , ತಾಪವೋ, ಸುಖವೋ, ದುಃಖವೋ ಆದನ್ನು ಸರಿಯಾಗಿ ತಿಳಿದು ತಪಸ್ಸಿನಂತೆ ಮಾಡಬೇಕು.   ನಮಗೆ ಚೆನ್ನಾಗಿ ತಿಳಿಯದ ವಿಷಯಗಳು ನಮ್ಮ ಸುತ್ತಲೇ ತಿರುಗುತ್ತದೆ. ಅತೃಪ್ತಿಯನ್ನು ಹುಟ್ಟಿಸುತ್ತದೆ.
         
              ಎರಡನೇದು ಜ್ಞಾನ ಮುದ್ರೆ, ಸ್ವಲ್ಪ ಕೆಳಭಾಗದಲ್ಲಿರುವುದು. ನಾವು ಮಾಡುವ ಕರ್ಮ ಎಲ್ಲರ ಕಣ್ಣಿಗೆ ಕಾಣುತ್ತದೆ. ಆದರೆ ನಮ್ಮ ಭಾವನೆ ಯಾರಿಗೂ ಕಾಣುವುದಿಲ್ಲ! ನಾವು ಯಾವಾಗಲೂ ನಮಗೆ ಅನುಭವಕ್ಕೆ ಬಂದದನ್ನೇ ನಂಬಬೇಕು. ಉದಾಹರೆಣೆಗೆ ಯಾರಾದರು ನಮಗೆ ದೇವರಿರುವನೇ ಎಂದು ಕೇಳಿದರೆ ನಾವು ನಮಗೆ ನಿಜವಾಗಿ ಗೊತ್ತಿದ್ದ ವಿಷಯ ಹೇಳಬೇಕು. ನಮ್ಮ ಉತ್ತರದಲ್ಲಿ ಯಾವಾಗಲು ಪ್ರಾಮಾಣಿಕತನವಿರಬೇಕು. ಈ ಭಾವನೆ ಬೆಳೆಸಿಕೊಂಡಾಗ , ನಮಗೆ ನಿಜವಾದ ಸ್ವಾತಂತ್ರ್ಯದ ಅನುಭವವಾಗುವುದು.
             
        ಮೂರನೆಯ ಮುದ್ರೆ ಸಮಯ ಮುದ್ರೆ. ನಾವು ಈಗ ಕಾಲದಲ್ಲಿದ್ದೇವೆ. ಭೂತ ಕಾಲ ಕಳೆದಿದೆ, ಭವಿಷ್ಯದ ಕಾಲ ನಮಗೆ ತಿಳಿದಿಲ್ಲ. ಭೂತ, ಭವಿಷ್ಯಯದ ಬಗ್ಗೆ ನಾವು ಚಿಂತಿಸಿದರೆ, ಇಲ್ಲಾ ನಾವು ನೆನಪಿನಲ್ಲಿರುತ್ತೇವೆ ಅಥವಾ ಸ್ವಪ್ನದಲ್ಲಿರುತ್ತೇವೆ. ಇವೆರಡರನ್ನು ಒಡೆದರೆ ನಾವು ಮೂರನೆಯ ಕದ ತೆರದ ಹಾಗೆ. ಅಂದರೆ ನಾವು ವರ್ತಮಾನ ಕಾಲವನ್ನು ಪೂರ್ತಿಯಾಗಿ ಅನುಭವಿಸಬೇಕು. ಅಂದ ಮಾತ್ರಕ್ಕೆ ಇಷ್ಟ ಬಂದ ಹಾಗೆ ಮಾಡುವುದಲ್ಲ..ನಮ್ಮ ಇಂದಿನ ಕಾರ್ಯ ನಮ್ಮ ಭೂತ ಕಾಲದ ಅನುಭವದ ಆಧಾರ ಹೊಂದಿರಬೇಕು   ಹಾಗು ಮುಂದಿನ ಭವಿಷ್ಯಕಾಲದಲ್ಲಿ ಅದು ಬೀರುವ ಪರಿಣಾಮದ ಅರಿವಿರಬೇಕು.

             ನಾಲ್ಕನೇ ಬಾಗಿಲು, ಮಹಾಮುದ್ರೆ. ಪವಿತ್ರವಾದ ನಮ್ಮ  ಒಳಗಿನ ಭಾಗ. ಚಂಡಮಾರುತದ ಕೇಂದ್ರ. ಆಕಾಶದ ಹಾಗೆ ಖಾಲಿ ಜಾಗವಿದೆ ಈ ಒಳಭಾಗದಲ್ಲಿ. ಇದಕ್ಕೆ ಕಾಲ, ಜ್ಞಾನ, ಕರ್ಮದ ಪದರಗಳು. ಈ  ಮೂರು ದ್ವಾರಗಳನ್ನು ಮುರಿದು ಬಂದು ಇಲ್ಲಿ ತಲುಪಿದ ನಂತರ ಎಲ್ಲಾ ಬಂಧಗಳಿಂದ ಬಿಡುಗಡೆ. ಆತ್ಮವು ಪರಮಾತ್ಮನಲ್ಲಿ ಲೀನವಾಗುವುದು.  ಹುಟ್ಟು, ಸಾವುಗಳ ಬಂಧಗಳಿಂದ ಶಾಶ್ವತ ಬಿಡುಗಡೆ.   

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...